ಅಮೆರಿಕದ ವರ್ಜೀನಿಯಾದಲ್ಲಿರುವ ಡಿಪಾರ್ಟ್‌ಮೆಂಟಲ್ ಸ್ಟೋರ್ ಒಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ 56 ವರ್ಷದ ಭಾರತೀಯ ವ್ಯಕ್ತಿ ಮತ್ತು ಅವರ 24 ವರ್ಷದ ಪುತ್ರಿ ಸಾವನ್ನಪ್ಪಿದ್ದಾರೆ. ಅಕೋಮ್ಯಾಕ್ ಕೌಂಟಿಯಲ್ಲಿ ಸ್ಟೋರ್ ತೆರೆದ ಕೊಂಚ ಸಮಯದಲ್ಲೇ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಈ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಜಾರ್ಜ್ ಫ್ರೇಜಿಯರ್ ಡೆವೊನ್ ವಾರ್ಟನ್ (44) ಎಂಬವರನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ ಆರೋಪಿ ಗುರುವಾರ ಮುಂಜಾನೆ ಮದ್ಯ ಖರೀದಿಸಲೆಂದು ಅಂಗಡಿಗೆ ಬಂದಿದ್ದು, ರಾತ್ರಿ ಯಾಕೆ ಅಂಗಡಿ ಮುಚ್ಚಿತ್ತು ಎಂದು ಕೇಳಿದ್ದಾನೆ. ಬಳಿಕ ತಂದೆ-ಮಗಳ ಮೇಲೆ ಗುಂಡು ಹಾರಿಸಿದ್ದಾನೆ.
ಇದನ್ನು ಓದಿದ್ದೀರಾ? ಆಸ್ಟ್ರೇಲಿಯಾ| ಚಾಕುವಿನಿಂದ ಇರಿದು ಹತ್ಯೆ ಪ್ರಕರಣ, ಇಬ್ಬರು ಭಾರತೀಯರ ಬಂಧನ
ಗುಂಡಿನ ದಾಳಿಯಿಂದಾಗಿ ಪ್ರದೀಪ್ ಪಟೇಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪುತ್ರಿ ಉರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರದೀಪ್ ಪಟೇಲ್, ಅವರ ಪತ್ನಿ ಹಂಸಬೆನ್ ಮತ್ತು ಅವರ ಮಗಳು ಉರ್ಮಿ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯವರಾಗಿದ್ದು, ಆರು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ.
ಈ ಕುಟುಂಬವು ತಮ್ಮ ಸಂಬಂಧಿ ಪರೇಶ್ ಪಟೇಲ್ ಒಡೆತನದ ಅಂಗಡಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ವರ್ಜಿನಿಯಾದ ಮಾಧ್ಯಮಕ್ಕೆ ಮಾಹಿತಿ ನೀಡಿದ ಪರೇಶ್ ಪಟೇಲ್, “ನನ್ನ ಸೋದರಸಂಬಂಧಿಯ ಪತ್ನಿ ಮತ್ತು ಅವಳ ತಂದೆ ಇಂದು ಬೆಳಿಗ್ಗೆ ಕೆಲಸ ಮಾಡುತ್ತಿದ್ದರು. ಯಾರೋ ಇಲ್ಲಿಗೆ ಬಂದು ಗುಂಡು ಹಾರಿಸಿದ್ದಾರೆ. ಏನು ಮಾಡಬೇಕೆಂದು ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕುವೈತ್ ಅಗ್ನಿ ದುರಂತ| ಮೂವರು ಭಾರತೀಯರು, ನಾಲ್ವರು ಈಜಿಪ್ಟ್ ಪ್ರಜೆಗಳ ಬಂಧನ
ಪ್ರದೀಪ್ ಪಟೇಲ್ ಮತ್ತು ಹಂಸಬೆನ್ ಅವರಿಗೆ ಇನ್ನೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಬ್ಬರು ಕೆನಡಾದಲ್ಲಿ ವಾಸಿಸುತ್ತಿದ್ದಾರೆ, ಇನ್ನೊಬ್ಬರು ಅಹಮದಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ಆರೋಪಿ ವಾರ್ಟನ್ ವಿರುದ್ಧ ಕೊಲೆ, ಅಪರಾಧ, ಶಸ್ತ್ರಾಸ್ತ್ರ ಕಾನೂನು ಸೇರಿದಂತೆ ಹಲವು ವಿಭಾಗಗಳ ಪ್ರಕರಣಗಳನ್ನು ದಾಖಲಿಸಲಾಗಿದೆ.
“ವೈರಲ್ ವೀಡಿಯೊದಿಂದ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂಬ ಮಾಹಿತಿ ನಮಗೆ ತಿಳಿಯಿತು. ನಾವು ಅವರ ಮಗಳೊಂದಿಗೆ ಮಾತನಾಡಿದ್ದು, ಆಕೆ ಎಲ್ಲಾ ಮಾಹಿತಿ ನೀಡಿದಳು” ಎಂದು ಮೆಹ್ಸಾನಾದಲ್ಲಿರುವ ಪಟೇಲ್ ಕುಟುಂಬಸ್ಥರು ಹೇಳಿದ್ದಾರೆ.
