ಈ ದಿನ ಸಂಪಾದಕೀಯ | ವ್ಯಂಗ್ಯ ವಿನೋದಗಳ ಮೇಲೆ ಬುಲ್ಡೋಝರ್ ಹರಿಸುವ ಊಸರವಳ್ಳಿಗಳು!

Date:

Advertisements

ಕಾಮ್ರಾ ಕ್ಷಮೆ ಕೇಳಬೇಕೆಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಆಗ್ರಹಿಸಿದ್ದಾರೆ. ಶಿವಸೇನಾ ನಾಯಕರೊಬ್ಬರು ಕಾಮ್ರಾ ಹೋದ ಹೋದಲ್ಲೆಲ್ಲ ಬೆನ್ನಟ್ಟಿ ಕಡೆಗೆ ದೇಶ ಬಿಟ್ಟು ಓಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವಾಕ್ ಸ್ವಾಂತ್ರ್ಯವನ್ನು ಗೌರವಿಸುತ್ತೇನೆ. ಆದರೆ ಅದಕ್ಕೊಂದು ಮಿತಿಯಿದೆ ಎಂದು ಮಿತಿಯನ್ನು ನಿಗದಿ ಮಾಡುವ ಉಪಮುಖ್ಯಮಂತ್ರಿ ಶಿಂದೆಯವರ ಮಾತು ಹಾಸ್ಯಾಸ್ಪದ.

ಪಕ್ಷದಿಂದ ಪಕ್ಷಕ್ಕೆ ನೆಗೆಯುವ, ಪಕ್ಷವನ್ನೇ ಅಪಹರಿಸಿಕೊಂಡು ಹೋಗಿ ಮತ್ತೊಂದು ಪಕ್ಷದ ದಡದಲ್ಲಿ ಲಂಗರು ಹಾಕುವ ಅವಕಾಶವಾದಿ ರಾಜಕಾರಣ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಮಾಮೂಲು ವಿದ್ಯಮಾನ ಆಗಿ ಹೋಗಿದೆ. ಅದಕ್ಕೆ ತಕ್ಕಂತೆ ರಾಜಕಾರಣಿಗಳನ್ನು ಊಸರವಳ್ಳಿಗಳು ದ್ರೋಹಿಗಳು ಎಂದು ಜನತೆ ಕರೆಯುವುದೂ ಸ್ವಾಭಾವಿಕ ಎನಿಸಿದೆ.

ಪಕ್ಷಾಂತರ ಮಾಡುವಾಗ, ಪಕ್ಷವನ್ನೇ ಅಪಹರಿಸಿಕೊಂಡು ಮತ್ತೊಂದು ಪಕ್ಷದ ತೆಕ್ಕೆಗೆ ನೆಗೆದು ಅಧಿಕಾರ ಹಿಡಿಯುವ ನಡವಳಿಕೆ ಅನೈತಿಕವೇ ಹೌದು. ಅಂತಹ ಕೃತ್ಯವನ್ನು ಎಸಗಿದಾಗ ನಮ್ಮ ರಾಜಕಾರಣಿಗಳಿಗೆ ಮಾನಹಾನಿಯ ಅರಿವು ಇರುವುದೇ ಇಲ್ಲ. ಆದರೆ ಅದನ್ನು ಸಾರ್ವಜನಿಕವಾಗಿ ಟೀಕಿಸಿದಾಗ, ವಿಡಂಬನೆ ಮಾಡಿದಾಗ ಮಾನಹಾನಿ ಆಯಿತೆಂದು ಬೊಬ್ಬೆ ಹೊಡೆಯುತ್ತಾರೆ.

ಈಗಲೂ ಹಾಗೆಯೇ. ವ್ಯಂಗ್ಯಮಿಶ್ರತ ಹಾಸ್ಯ ಬಾಣವನ್ನು ಸಂಬಂಧಿಸಿದವರು ವಿನೋದವನ್ನಾಗಿ ತೆಗೆದುಕೊಳ್ಳದೆ ಮರ್ಮಸ್ಥಾನಕ್ಕೆ ಚುಚ್ಚಿಕೊಂಡು ನರಳಿದ್ದಾರೆ. ನರಳಿ ಅಲ್ಲಿಗೇ ನಿಲ್ಲದೆ ಕೆರಳಿದ್ದಾರೆ. ವಿನೋದ ಮಾಡಿದ ಕುಣಾಲ್ ಕಾಮ್ರಾ ಅವರ ಮೇಲೆ ಎಫ್.ಐ.ಆರ್. ಹಾಕಿಸಿದ್ದಾರೆ. ಸಾರ್ವಜನಿಕ ಕಿಡಿಗೇಡಿತನದ ಮತ್ತು ಮಾನಹಾನಿಯ ಕೇಸನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ತಮ್ಮ ಮಾನಕ್ಕೆ ಹಾನಿಯಾಗಿದೆ ಎಂದು ಭಾವಿಸಿದವರು ಮಾನಹಾನಿ ಕೇಸನ್ನು ಹೂಡುವುದು ರೂಢಿ. ಇಲ್ಲಿ ತಮ್ಮ ಮಾನಹಾನಿಯಾಗಿದೆ ಎಂದವರ ಪರವಾಗಿ ಪೊಲೀಸರೇ ಕಾಮ್ರಾ ವಿರುದ್ಧ ಮಾನಹಾನಿ ಕೇಸನ್ನು ಹೂಡಿರುವ ವಿಚಿತ್ರವನ್ನು ಕಾಣಬಹುದು. ಕಾಮ್ರಾ ಮಾತುಗಳಲ್ಲಿ ಇಲ್ಲದೆ ಇರುವುದನ್ನು ಅವರ ಮೇಲೆ ಆರೋಪಿಸಲಾಗಿದೆ. ಸಮಾಜವನ್ನು ಒಡೆಯುವ ದುರುದ್ದೇಶದ ಹುಸಿ ಆಪಾದನೆಯನ್ನು ಅವರ ಮೇಲೆ ಹೇರಲಾಗಿದೆ.

ಶಿವಸೇನಾ (ಶಿಂದೆ ಬಣ) ಬೆಂಬಲಿಗರನ್ನು ಛೂ ಬಿಟ್ಟಿದ್ದಾರೆ. ಜೀವ ಬೆದರಿಕೆ ಹಾಕಿಸಿದ್ದಾರೆ. ಹಗಲೂ ರಾತ್ರಿ ಅವರ ದೂರವಾಣಿಗೆ ಕರೆಗಳನ್ನು ಮಾಡಿಸಿ ಕೆಟ್ಟಾನುಕೆಟ್ಟ ಬೈಗುಳಗಳನ್ನು ಬೈಸಿದ್ದಾರೆ. ಕಾಮ್ರಾ ಅವರು ವಿನೋದ ಕಾರ್ಯಕ್ರಮವನ್ನು ಚಿತ್ರೀಕರಿಸಿದ ಸ್ಟುಡಿಯೋ ಮತ್ತು ಹೊಟೆಲನ್ನು ಧ್ವಂಸ ಮಾಡಿಸಿದ್ದಾರೆ. ಕಟ್ಟಡ ನಿಯಮಾವಳಿಯನ್ನು ಉಲ್ಲಂಘಿಸಿದೆಯೆಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆಯು ಈ ಸ್ಟುಡಿಯೋದ ಮೇಲೆ ಬುಲ್ಡೋಝರ್ ಹರಿಸಿ ನೆಲಸಮಗೊಳಿಸಿದೆ. ಬಿಜೆಪಿ ಅಧಿಕಾರದಲ್ಲಿರುವ ಎಲ್ಲ ರಾಜ್ಯಗಳಲ್ಲಿಯೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಆಪಾದಿತರ ಮನೆಗಳ ಮೇಲೆ, ರಾಜಕೀಯ ವಿರೋಧಿಗಳ ಮನೆಗಳ ಮೇಲೆ ಬುಲ್ಡೋಝರ್ ಬಾಬಾ, ಬುಲ್ಡೋಝರ್ ಮಾಮಾಗಳನ್ನು ವೈಭವೀಕರಿಸುತ್ತಿರುವುದು ಜನತಂತ್ರ ವ್ಯವಸ್ಥೆಗೆ ಗಂಡಾಂತರವಾಗಿ ಪರಿಣಮಿಸಬಲ್ಲದು. ಕಾಮ್ರಾ ಕ್ಷಮೆ ಕೇಳಬೇಕೆಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಆಗ್ರಹಿಸಿದ್ದಾರೆ. ಬುಲ್ಡೋಝರ್ ಬಾಬಾ- ಮಾಮಾಗಳ ಸಾಲಿಗೆ ಫಡಣವೀಸ್ ಕೂಡ ಸೇರಿದ್ದಾರೆ. ಈ ಪದಕವನ್ನು ಹೆಮ್ಮೆಯಿಂದ ಎದೆಯ ಮೇಲೆ ಧರಿಸಿರುವುದು ದುರಂತ ಎಂಬುದು ಅವರಿಗೆ ತಿಳಿದಿಲ್ಲ. ಅವರನ್ನು ಆರಿಸಿರುವ ಜನತೆಗೂ ತಿಳಿಯುತ್ತಿಲ್ಲ. ತಮ್ಮ ತಮ್ಮ ಬುಡಗಳಿಗೆ ಬಿಸಿನೀರು ಹರಿಯುವ ತನಕ ಯಾರಿಗೂ ತಿಳಿಯುವುದಿಲ್ಲ. ಶಿವಸೇನಾ ನಾಯಕರೊಬ್ಬರು ಕಾಮ್ರಾ ಹೋದ ಹೋದಲ್ಲೆಲ್ಲ ಬೆನ್ನಟ್ಟಿ ಕಡೆಗೆ ದೇಶ ಬಿಟ್ಟು ಓಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಮುಗಿಲು ಮುಟ್ಟುತ್ತಿರುವ ಅಸಹಿಷ್ಣುತೆಯ ಪ್ರತೀಕವಿದು. ಅಸಹನೆಯೆಂಬುದು ಪೊಲೀಸು ಕೇಸಿಗೆ ನಿಲ್ಲದೆ ಅದರ ಆಚೆಗೆ ಜೀವಬೆದರಿಕೆ, ವಿನಾಶ ವಿಧ್ವಂಸಕ ಕೃತ್ಯಗಳ ರೂಪದಲ್ಲಿ ತುಂಬಿ ತುಳುಕಿರುವುದು ಕಳವಳದ ಬೆಳವಣಿಗೆ. ಹುಸಿ ಆರೋಪ ಹೊರಿಸಿ ಕೇಸು ಹಾಕಿಸುವುದು, ಬುಲ್ಡೋಝರ್ ಹರಿಸುವುದು ಅಧಿಕಾರದ ಅಪ್ಪಟ ದುರುಪಯೋಗವಲ್ಲದೆ ಇನ್ನೇನೂ ಅಲ್ಲ.

ಆಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ನಮ್ಮ ರಾಜಕಾರಣಿಗಳ ತಿಳಿವಳಿಕೆ ಕೊರತೆ ಅದೆಷ್ಟು ಅಗಾಧ ಎಂಬುದನ್ನು ಈ ಪ್ರಕರಣ ಮತ್ತೊಮ್ಮೆ ರುಜುವಾತು ಮಾಡಿದೆ. ಜೋರು ಮಾಡಿ ಬಲವಂತದಿಂದ ಪಡೆಯುವುದನ್ನು ಗೌರವ ಆದರ ಎಂದು ಕರೆಯಲು ಬರುವುದಿಲ್ಲ. ಅದು ಅನಾದರ ಅಗೌವರಗಳನ್ನಷ್ಟೇ ಗಳಿಸಿಕೊಡಬಲ್ಲದು ಎಂಬ ಕಟುವಾಸ್ತವ ರಾಜಕಾರಣಿಗಳಿಗೆ ತಿಳಿಯಬೇಕಿದೆ.

“ಸ್ವಾತಂತ್ರ್ಯವು ಅನಿರ್ಬಂಧಿತವೇನೂ ಅಲ್ಲ. ಇಂತಹ ಕೆಳಮಟ್ಟದ ಕಾಮೆಡಿ ಮಾಡಿ, ಮುಖ್ಯಮಂತ್ರಿಯಾಗಿದ್ದವರನ್ನು, ಉಪಮುಖ್ಯಮಂತ್ರಿ ಆಗಿರುವವರು ಹಾಗೂ ರಾಜಕೀಯ ನಾಯಕರನ್ನು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ. ಇವರೆಲ್ಲ ಜನತೆಯ ಗೌರವಾದರ ಹೊಂದಿರುವವರು” ಎಂದಿದ್ದಾರೆ ಫಡಣವೀಸ್. ವಾಕ್ ಸ್ವಾತಂತ್ರ್ಯವನ್ನು ರಕ್ಷಿಸಬೇಕಾದ ಮುಖ್ಯಮಂತ್ರಿಯೇ, ವಿನೋದ ಮಾಡಿದ ಕಾಮ್ರಾ ಅವರಿಂದ ಕ್ಷಮಾಪಣೆ ಕೋರಿರುವುದು ವಿಡಂಬನೆಯೇ ಸರಿ. ವಾಕ್ ಸ್ವಾಂತ್ರ್ಯವನ್ನು ಗೌರವಿಸುತ್ತೇನೆ. ಆದರೆ ಅದಕ್ಕೊಂದು ಮಿತಿಯಿದೆ ಎಂದು ಮಿತಿಯನ್ನು ನಿಗದಿ ಮಾಡುವ ಉಪಮುಖ್ಯಮಂತ್ರಿ ಶಿಂದೆಯವರ ಮಾತು ಹಾಸ್ಯಾಸ್ಪದ. ತಮ್ಮನ್ನು ಲೇವಡಿ ಮಾಡಿದಾಗ ಮಾತ್ರವೇ ಮಿತಿಯ ನೆನಪಾಗುತ್ತದೆ ಇವರಿಗೆ. ವಿನೋದ ಮಾಡಿದ ವ್ಯಕ್ತಿಗೆ ಹಗಲಿರುಳು ಕಿರುಕುಳ ನೀಡಿ ಬೆಂಬತ್ತಿ ಬೇಟೆಯಾಡುವಾಗ ಮಿತಿಗಳು ಮೇರೆಗಳ ಗೆರೆಗಳನ್ನು ಮರೆತೇಬಿಡುತ್ತಾರೆ.

ರಾಜಕಾರಣಿಗಳು ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು. ಅಧಿಕಾರದ ಅಮಲು ಮೈನಸುಗಳಿಗೆ ಏರುತ್ತಿದ್ದಂತೆ ಸಾರ್ವಜನಿಕ ಟೀಕೆ ಟಿಪ್ಪಣಿ- ವ್ಯಂಗ್ಯ ವಿನೋದಗಳ ಕುರಿತು ಅಸಹನೆಯನ್ನು ಬೆಳೆಸಿಕೊಳ್ಳವುದು ಸರಿಯಲ್ಲ.

ದೇಶದಲ್ಲಿ ರಾಜಕಾರಣಿಗಳು ತಮ್ಮ ಸುತ್ತ ತಾವೇ ಸ್ವಪ್ರತಿಷ್ಠೆಯ ಪ್ರಭಾವಳಿಯನ್ನು ಕಟ್ಟಿಕೊಂಡು ಮೆರೆಯತೊಡಗಿದ್ದಾರೆ. ಜನಸಾಮಾನ್ಯರಿಗಿಂತ ತಾವು ಬಹು ಎತ್ತರದಿಲ್ಲಿದ್ದೇವೆಂಬ ಭ್ರಮೆಯಲ್ಲಿ ಬೀಗತೊಡಗಿದ್ದಾರೆ. ಚುನಾವಣೆಯ ಸಂದರ್ಭಗಳಲ್ಲಿ ಹುಸಿವಿನಯ ನಟಿಸಿ ಭಾರೀ ಜನಸಭೆಗಳಿಗೆ ಸಾಷ್ಟಾಂಗ ನಮಸ್ಕಾರದ ಹುಸಿ ವಿನಯ ನಟಿಸುತ್ತಿದ್ದಾರೆ. ತಮ್ಮ ಮುಖಕ್ಕೆ ಹಿಡಿಯಲಾಗುವ ವ್ಯಂಗ್ಯಚಿತ್ರಗಳು, ವಿನೋದದ ಕನ್ನಡಿಗಳಿಗೆ ಕಲ್ಲು ಹೊಡೆಯತೊಡಗಿದ್ದಾರೆ.

ಕ್ಷಮಾಪಣೆ ಕೇಳುವುದಿಲ್ಲವೆಂಬ ಕಾಮ್ರಾ ನಿಲುವು ಸಮರ್ಥನೀಯ. ಯಾವುದೇ ಕಾನೂನುಬದ್ಧ ತನಿಖೆಗೆ ತಾವು ಸಹಕರಿಸುವುದಾಗಿ ಸಾರಿದ್ದಾರೆ. ಅಧಿಕಾರದ ಕಣ್ಣುಗಳಲ್ಲಿ ಕಣ್ಣು ನೆಟ್ಟು ಸತ್ಯ ನುಡಿಯುವವರ ಸಂಖ್ಯೆ ಹೆಚ್ಚಬೇಕಿದೆ. ಇಂತಹ ನಿರಂತರ ಜಾಗೃತಿಯೇ ಜನತಂತ್ರಕ್ಕೆ ನಾವು ತೆರುವ ಬೆಲೆ.

Advertisements
ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X