ಈ ಹೊತ್ತಿನ ಕ್ರಿಕೆಟ್ ಅಭಿಮಾನಿಗಳು ಹೇಗಿದ್ದಾರೆಂದರೆ, ಸೋಷಿಯಲ್ ಮೀಡಿಯಾವನ್ನು ಯುದ್ಧಭೂಮಿ ಎಂದು ಭ್ರಮಿಸುತ್ತಾರೆ. ಟ್ರೋಲ್ ಮತ್ತು ಮೀಮ್ಸ್‌ಗಳನ್ನು ಮಿಸೈಲ್‌ಗಳಂತೆ ಬಳಸುತ್ತಾರೆ. ಎದುರಾಳಿಯನ್ನು ಕ್ಷಣಾರ್ಧದಲ್ಲಿ ಚಿತ್ ಮಾಡುತ್ತಾರೆ. ಇಲ್ಲ ಚಿಂದಿ ಉಡಾಯಿಸುತ್ತಾರೆ. ಅದೇನೂ ನಿರಂತರವಲ್ಲ, ಅವರ ಅಬ್ಬರ, ಆರ್ಭಟ, ಕುಣಿದಾಟವೆಲ್ಲ ಕ್ಷಣಿಕ...
ಐಪಿಎಲ್ ಶುರುವಾಗಿ ಹದಿನೇಳು ವರ್ಷಗಳು ಕಳೆದಿವೆ. ಈ ಹದಿನೇಳು ವರ್ಷಗಳಲ್ಲಿ ಟ್ರೋಫಿ ಎತ್ತಿ ಹಿಡಿಯದ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಕೂಡ ಒಂದು. ಈ ಹದಿನೆಂಟರ ಹೊಸ ಸೀಸನ್ನಲ್ಲಿ ಹೊಸ ಹುರುಪಿನೊಂದಿಗೆ ಕಣಕ್ಕಿಳಿದಿರುವ ಆರ್ಸಿಬಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ.
ಆ ನಿಟ್ಟಿನಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲೂ ಗೆದ್ದು ಭಾರೀ ಉತ್ಸಾಹದಲ್ಲಿದೆ. ಐಪಿಎಲ್ ಆರಂಭದ ದಿನ ಬಲಿಷ್ಠ ಕೆಕೆಆರ್ ತಂಡವನ್ನು ಮಣಿಸಿ ಮೆಚ್ಚುಗೆ ಪಡೆದಿದ್ದರೆ; ನಿನ್ನೆ ಶುಕ್ರವಾರ ಚನ್ನೈನಲ್ಲಿ ನಡೆದ ಸಿಎಸ್‌ಕೆ ವಿರುದ್ಧದ ಜಯ ಧೈರ್ಯವನ್ನು ದುಪ್ಪಟ್ಟುಗೊಳಿಸಿದೆ. ಅಭಿಮಾನಿಗಳು ಅಟ್ಟದಲ್ಲಿ ಕೂರುವಂತೆ ಮಾಡಿದೆ.
ಸಿಎಸ್‌ಕೆ ಮತ್ತು ಕೆಕೆಆರ್- ಎರಡೂ ಬಲಿಷ್ಠ ತಂಡಗಳು. ಅನುಭವಿ ಆಟಗಾರರನ್ನು ಹೊಂದಿರುವ, ಅತ್ಯುತ್ತಮ ಪ್ರದರ್ಶನ ನೀಡಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡ ತಂಡಗಳು. ಅಂತಹ ಬಲಿಷ್ಠ ತಂಡಗಳೊಂದಿಗೆ ಕಾದಾಟಕ್ಕಿಳಿದ ಆರ್ಸಿಬಿ, ಆರಂಭದಲ್ಲಿಯೇ ಎರಡು ಗೆಲುವಿನ ದಾಖಲೆ ಬರೆದು, ಬೆರಗುಟ್ಟಿಸಿದೆ.
ನಿನ್ನೆ ನಡೆದ ಆರ್ಸಿಬಿ ಮತ್ತು ಸಿಎಸ್‌ಕೆ ತಂಡಗಳ ನಡುವಿನ ಪಂದ್ಯ ರೋಚಕವಾಗಿತ್ತು. ಚೆನ್ನೈ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 8ನೇ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಟಾಸ್ ಸೋತರೂ, ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ ಬರೋಬ್ಬರಿ 196 ರನ್ ಕಲೆಹಾಕಿತು. 197 ರನ್ಗಳ ಗುರಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಪರಿಣಾಮ, 20 ಓವರ್ಗಳಲ್ಲಿ 146 ರನ್ ಗಳಿಸಿ ಸಿಎಸ್‌ಕೆ ತಂಡವು ತವರು ನೆಲದಲ್ಲಿ 50 ರನ್ಗಳಿಂದ ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡ, ಆರಂಭದ ಆರು ಓವರ್‍ಗಳ ಪವರ್ ಪ್ಲೇನಲ್ಲಿ ರನ್ ಪೇರಿಸಲು ತಿಣುಕಾಡಿತು. ಅದರಲ್ಲೂ ಅನುಭವಿ ಆಟಗಾರ ವಿರಾಟ್ ಕೊಹ್ಲಿಗೆ ಪ್ರತಿ ಬಾಲ್ ಕೂಡ ಸವಾಲಿನದಾಗಿತ್ತು. ಸುಮಾರು 15 ಬಾಲ್ ಆಡಿದ ಕೊಹ್ಲಿ, ನಾಲ್ಕೈದು ರನ್ ಕಲೆಹಾಕುವಷ್ಟರಲ್ಲಿ ಕಂಗಾಲಾಗಿದ್ದರು.
ಅದರಲ್ಲೂ ಶ್ರೀಲಂಕಾದ ಫಾಸ್ಟ್ ಬೌಲರ್ ಲಸಿತ್ ಮಲಿಂಗರವರ ಶೈಲಿಯನ್ನೇ ಹೋಲುವ ಮತೀಷಾ ಪತಿರಾಣಾರ ಬೌಲಿಂಗ್‌ನಲ್ಲಿ ಕೊಹ್ಲಿ ಅಕ್ಷರಶಃ ಗಲಿಬಿಲಿಗೊಳಗಾಗಿದ್ದರು. ಅದೇ ಸಂದರ್ಭದಲ್ಲಿ ಒಂದು ಬಾಲ್ ತಲೆಯ ಹೆಲ್ಮೆಟ್‌ಗೆ ಬಡಿದಾಗ, ಬೆಚ್ಚಿಬಿದ್ದರು. ಆನಂತರ, ಸುಧಾರಿಸಿಕೊಂಡ ಕೊಹ್ಲಿ, ನಂತರದ ಬಾಲನ್ನು ಸಿಕ್ಸರ್, ಮತ್ತೊಂದು ಬಾಲನ್ನು ಬೌಂಡರಿಗಟ್ಟಿ, ಮೈ ಕೊಡವಿ ಎದ್ದುನಿಂತರು. 31 ರನ್ ಗಳಿಸಿ, ತಂಡಕ್ಕೆ ತಳಪಾಯ ಹಾಕಿದರು.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಕೊಹ್ಲಿ ಬ್ಯಾಟ್ ಮಾಡುವಾಗ ಅವರ ಹಿಂದೆ- ವಿಕೆಟ್ ಕೀಪರ್ ಸ್ಥಾನದಲ್ಲಿದ್ದವರು ಅನುಭವಿ ಆಟಗಾರ ಧೋನಿ. ಕೊಹ್ಲಿ ಮತ್ತು ಧೋನಿ- ಇಬ್ಬರೂ ಜೊತೆಯಾಗಿ, ಒಂದೇ ತಂಡವಾಗಿ ಆಟವಾಡಿದವರು. ಇಬ್ಬರೂ ತಂತಮ್ಮ ಶಕ್ತಿ ಮತ್ತು ದೌರ್ಬಲ್ಯವನ್ನು ಅರಿತವರು. ಅರಿತಿದ್ದ ಧೋನಿ, ಬೌಲರ್ ಪತಿರಾಣಾಗೆ ಟಿಪ್ಸ್ ಕೊಟ್ಟಿದ್ದರು. ಅವರು ಹಾಕುತ್ತಿದ್ದ ಬಾಲ್‌ಗಳಿಗೆ ರನ್ ಗಳಿಸಲು ಕೊಹ್ಲಿ ತಿಣುಕಾಡುತ್ತಿದ್ದರು. ಜೊತೆಗೆ ಔಟ್ ಫೀಲ್ಡ್ ತುಂಬಾನೇ ಸ್ಲೋ ಇತ್ತು. ಗ್ರೌಂಡ್- ಬೇರೆಲ್ಲಾ ಗ್ರೌಂಡ್‌ಗಿಂತ ದೊಡ್ಡದಿತ್ತು.
ಇದನ್ನು ಓದಿದ್ದೀರಾ?: ಐಪಿಎಲ್ 2025 | ಏನಿರಲಿದೆ ಈ ಬಾರಿಯ ನಿರೀಕ್ಷೆಗಳು ಮತ್ತು ವಿಶೇಷತೆಗಳು
ಹಾಗಾಗಿ ಬ್ಯಾಟರ್‍ಗಳು ದಮ್ ಕಟ್ಟಿ ಹೊಡೆದರೂ, ಔಟ್ ಫೀಲ್ಡ್‌ನಲ್ಲಿ ನಿಂತು ಒಂದು ರನ್ ತರುತ್ತಿತ್ತು, ಇಲ್ಲ ಕ್ಯಾಚ್ ಆಗುತ್ತಿತ್ತು. ಈ ಸವಾಲನ್ನು ಸಲೀಸಾಗಿ ಎದುರಿಸಿದವರು ವಿದೇಶಿ ಆಟಗಾರರಾದ ಫಿಲ್ ಸಾಲ್ಟ್ ಮತ್ತು ಡೇವಿಡ್ ಮಾತ್ರ. ಆರಂಭದಲ್ಲಿ ಫಿಲ್ ಸಾಲ್ಟ್ ಹಿಂಜರಿಕೆ ಇಲ್ಲದೆ ಧೈರ್ಯವಾಗಿ ಆಡಿದರೆ, ಕೊನೆಯಲ್ಲಿ ಡೇವಿಡ್ ಬಾರಿಸಿದ ಸಿಕ್ಸರ್‍ಗಳು ತಂಡದ ಮೊತ್ತಕ್ಕೆ ಮರ್ಯಾದೆ ತಂದವು. ಹಾಗೆಯೇ ನಾಯಕ ರಜತ್ ಪಾಟೀದಾರ್ 51 ರನ್‌ಗಳು, ತಂಡಕ್ಕೆ ತೂಕ ತಂದುಕೊಟ್ಟವು.
ಆರ್ಸಿಬಿ ಮೊತ್ತವನ್ನು ಬೆನ್ನಟ್ಟಿದ ಸಿಎಸ್‌ಕೆ ತಂಡ, ಪವರ್ ಪ್ಲೇನ ಆರು ಓವರ್‍ಗಳಲ್ಲಿಯೇ ಮೂರು ಮಹತ್ವದ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅದರಲ್ಲೂ ಕರಾರುವಾಕ್ ದಾಳಿಯ ಹ್ಯಾಝಲ್‌ವುಡ್ ಮತ್ತು ಒಂದೇ ಓವರ್‍ನಲ್ಲಿ ಎರಡು ಬಲಿಷ್ಠ ವಿಕೆಟ್‌ಗಳನ್ನು ಕಿತ್ತ ದಯಾಳ್‌ರ ಮಾರಕ ಬೌಲಿಂಗಿಗೆ, ಸಿಎಸ್‌ಕೆ ದಾಂಡಿಗರು ದಂಗಾದರು.
ಕುತೂಹಲಕರ ವಿಷಯವೆಂದರೆ 6 ಅಥವಾ 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬರುತ್ತಿದ್ದ ಅನುಭವಿ ಹಿರಿಯ ಆಟಗಾರ ಧೋನಿ, ನಿನ್ನೆ 9ನೇ ಕ್ರಮಾಂಕದಲ್ಲಿ ಇಳಿದದ್ದು ಅಭಿಮಾನಿಗಳಲ್ಲಿ ಬೇಸರ ತರಿಸಿತ್ತು. ಕೋಪಗೊಂಡ ಅಭಿಮಾನಿಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಒಳಗಾಗುವಂತೆ ಮಾಡಿತು. ಜೊತೆಗೆ, ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೂಡ 9ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಧೋನಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ದೊಡ್ಡ ಸುದ್ದಿಯಾಯಿತು.
ಐಪಿಎಲ್ ಶುರುವಾದ ದಿನದಿಂದ ಸೋಷಿಯಲ್ ಮೀಡಿಯಾ ಸಿಕ್ಕಾಪಟ್ಟೆ ಆಕ್ಟಿವ್ ಆಗಿದೆ. ತಮ್ಮಿಷ್ಟದ ಆಟಗಾರ ಹಾಗೂ ತಂಡ ಗೆದ್ದಾಗ, ಸೋತಾಗ ಪ್ರತಿಕ್ರಿಯಿಸುವ ರೀತಿ- ಟ್ರೋಲ್, ಮೀಮ್ಸ್‌ಗಳು ಭಯ ಹುಟ್ಟಿಸುವಂತಿವೆ. ನಿನ್ನೆ ಆರ್ಸಿಬಿ ತಂಡ ಆಡುವಾಗ, ಹಳೆಯ ಪೋಸ್ಟ್‌ವೊಂದು ಮರುಕಳಿಸಿ, ದೊಡ್ಡ ಪ್ರಮಾದವೇ ನಡೆದುಹೋಯಿತು.
ಐಪಿಎಲ್ 2024ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಒಟ್ಟುಗೂಡಿದ ಸಿಎಸ್‌ಕೆ ಫ್ಯಾನ್ಸ್ ‘ಈ ಸಲ ಕಪ್ ಲಾಲಿಪಾಪ್’ ಎಂದು ಘೋಷಣೆ ಕೂಗುತ್ತಾ ಆರ್ಸಿಬಿಯನ್ನು ಟ್ರೋಲ್ ಮಾಡಿದ್ದರು. ಆ ಫೋಟೋ ತುಣುಕೊಂದನ್ನು ನಿನ್ನೆ ಎಐಗೆ ಅಪ್‌ಲೋಡ್ ಮಾಡಿದ ಕೆಲ ಕಿಡಿಗೇಡಿಗಳು, ಸ್ಟೇಡಿಯಂನಲ್ಲಿದ್ದ ಸಿಎಸ್‌ಕೆ ಅಭಿಮಾನಿಗಳ ಕೈಯಲ್ಲಿ ಲಾಲಿಪಾಪ್ ಇರುವ ಫೋಟೋದಂತೆ ಮಾರ್ಪಡಿಸಿದ್ದರು. ಅದು ವೈರಲ್ ಆಯಿತು. ಅದು ಆರ್ಸಿಬಿ ಫ್ಯಾನ್ಸ್‌ಗೆ ಗೇಲಿ ಮಾಡುವಂತಿತ್ತು. ಪರ-ವಿರೋಧ ಕೆಸರೆರಚಾಟಕ್ಕೆ ಸೋಷಿಯಲ್ ಮೀಡಿಯಾ ಕದನ ಕಣವಾಗಿತ್ತು. ಆ ನಂತರ ಅದು ಎಐ ಜನರೇಟೆಡ್ ಫೋಟೋ ಎಂದು ಗೊತ್ತಾಗಿ, ಎಲ್ಲವೂ ತಣ್ಣಗಾಯಿತು.

ಇದರ ನಡುವೆಯೇ ಸಿಎಸ್‌ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು, ‘ಈ ಸಲ ಆರ್ಸಿಬಿ ತಂಡ ಕಪ್ ಗೆಲ್ಲೋದು ನನಗೆ ಇಷ್ಟವಿಲ್ಲ. ಆರ್ಸಿಬಿ ತಂಡ ಆಡುತ್ತಿರಬೇಕು. ಏಕೆಂದರೆ ನಿರೀಕ್ಷೆಗಳನ್ನು ಹೆಚ್ಚಿಸಿ ಅದನ್ನು ಪೂರೈಸಲು ವಿಫಲವಾಗುವ ತಂಡ ಇದ್ದರೇನೇ ಮನರಂಜನೆ ಸಿಗೋದು. ಹೀಗಾಗಿ ಆರ್ಸಿಬಿಯಂತಹ ತಂಡ ಐಪಿಎಲ್‌ನಲ್ಲಿ ಇರಬೇಕು, ಆದರೆ ಕಪ್ ಗೆಲ್ಲಬಾರದು’ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟರು.
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರು ಬಾರಿ ಫೈನಲ್ಗೆ ಪ್ರವೇಶಿಸಿದೆ. 2009, 2011 ಮತ್ತು 2016ರಲ್ಲಿ ಫೈನಲ್ ಆಡಿದ್ದ ಆರ್ಸಿಬಿ ತಂಡವು ಮೂರು ಬಾರಿ ಕೂಡ ಟ್ರೋಫಿ ಎತ್ತಿ ಹಿಡಿಯುವಲ್ಲಿ ವಿಫಲವಾಗಿದೆ. ಇದೀಗ 18ನೇ ಸೀಸನ್ನಲ್ಲಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ. ಆದರೆ, ಎದುರಾಳಿ ತಂಡದ ಆಟಗಾರರು ಹಾಗೂ ಅಭಿಮಾನಿಗಳು ಆರ್ಸಿಬಿ ಆಡಲಿ, ಕಪ್ ಗೆಲ್ಲಬಾರದು ಎಂದು ಆಶಿಸುತ್ತಿದ್ದಾರೆ.
ಏತನ್ಮಧ್ಯೆ, ಸಿಎಸ್‌ಕೆ ತಂಡ ಸೋಲಿನ ಆಘಾತದಲ್ಲಿರುವಾಗಲೇ, ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿಯ ಫೋಟೋವೊಂದು ವೈರಲ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ‘2 ವರ್ಷ ಬ್ಯಾನ್ ಆಗಿದ್ದೀರಿ’ ಎಂದು ಕೊಹ್ಲಿ ಗೇಲಿ ಮಾಡಿದ್ದಾರೆ ಎಂಬ ಕ್ಯಾಪ್ಷನ್ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹರಿಬಿಡಲಾಗಿದೆ.
ಆಶ್ಚರ್ಯವೆಂದರೆ, ಆ ಫೋಟೋದಲ್ಲಿ ಕೊಹ್ಲಿಯ ಮುಖಭಾವ ಕೂಡ ಹಾಗೆಯೇ ಇದೆ. ಆದರೆ ಅದು ಕೊಹ್ಲಿಯು ಸಿಎಸ್‌ಕೆ ತಂಡವನ್ನು ಗೇಲಿ ಮಾಡಿದ್ದಲ್ಲ. ಬದಲಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬ್ಯಾಕ್ ಟು ಬ್ಯಾಕ್ ಎರಡು ಗೆಲುವು ದಾಖಲಿಸಿದೆ ಎಂಬುದನ್ನು ತೋರುವ ವಿಕ್ಟರಿ ಸಿಂಬಲ್.
ಅದನ್ನೇ ಕೆಲವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ವಿರಾಟ್ ಕೊಹ್ಲಿ 2 ವರ್ಷ ಬ್ಯಾನ್ ಆಗಿದ್ದೀರಿ ಎಂದು ಟ್ರೋಲ್ ಮಾಡಿದ್ದಾರೆ ಎಂದು ತಪ್ಪಾಗಿ ಅರ್ಥೈಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ವೈರಲ್ ಆಗಿದ್ದು, 2016 ಮತ್ತು 2017ರಲ್ಲಿ ಸಿಎಸ್‌ಕೆ ತಂಡ ಬ್ಯಾನ್ ಆಗಿದ್ದ ವಿಷಯವು ಮತ್ತೊಮ್ಮೆ ಚರ್ಚೆಗೀಡಾಗಿದೆ.
ಇದನ್ನು ಓದಿದ್ದೀರಾ?: ಐಪಿಎಲ್ | ‘ಈ ಸಲ ಕಪ್ ನಮ್ದೇ’ ಅಂತ ದಯವಿಟ್ಟು ಹೇಳ್ಬೇಡಿ; ಕೊಹ್ಲಿ ಹೀಗೆ ಹೇಳಿದ್ದೇಕೆ?
ಈ ಹೊತ್ತಿನ ಕ್ರಿಕೆಟ್ ಅಭಿಮಾನಿಗಳು ಹೇಗಿದ್ದಾರೆಂದರೆ, ಸೋಷಿಯಲ್ ಮೀಡಿಯಾವನ್ನು ಯುದ್ಧಭೂಮಿ ಎಂದು ಭ್ರಮಿಸುತ್ತಾರೆ. ಟ್ರೋಲ್ ಮತ್ತು ಮೀಮ್ಸ್‌ಗಳನ್ನು ಮಿಸೈಲ್‌ಗಳಂತೆ ಬಳಸುತ್ತಾರೆ. ಎದುರಾಳಿಯನ್ನು ಕ್ಷಣಾರ್ಧದಲ್ಲಿ ಚಿತ್ ಮಾಡುತ್ತಾರೆ. ಇಲ್ಲ ಚಿಂದಿ ಉಡಾಯಿಸುತ್ತಾರೆ. ತಮ್ಮೊಳಗಿನ ಆಸೆ-ಆಕಾಂಕ್ಷೆಗಳನ್ನು ಆಟಗಾರರ ಮೇಲೆ ಹೇರುತ್ತಾರೆ. ಗೆದ್ದರೆ ಕುಣಿದಾಡುತ್ತಾರೆ, ಸೋತರೆ ಸೊರಗುತ್ತಾರೆ. ಲೈಕ್‌ಗಳಿಗೆ ಉಬ್ಬಿಹೋಗುತ್ತಾರೆ. ಕಮೆಂಟ್ಸ್‌ಗಳಿಗೆ ಕಂಗಾಲಾಗುತ್ತಾರೆ. ಒಂದು ಪೋಸ್ಟನ್ನು ಎಷ್ಟು ಜನ ನೋಡಿದರು, ಹೇಗೇಗೆಲ್ಲ ವೈರಲ್ ಆಯಿತು, ಎಷ್ಟು ಓಡಿತು ಎಂಬುದರ ಮೇಲೆ ಅವತ್ತಿನ ಅವರ ಬದುಕು ನಿಂತಿರುತ್ತದೆ. ಅದೇನೂ ನಿರಂತರವಲ್ಲ, ಅವರ ಅಬ್ಬರ, ಆರ್ಭಟ, ಕುಣಿದಾಟವೆಲ್ಲ ಕ್ಷಣಿಕ. ಮೊಬೈಲ್‌ನಿಂದ ಬೆರಳು ಹೊರಬರುತ್ತಿದ್ದಂತೆ, ಚಿತ್ತ ಬೀದಿಯತ್ತ ಚೆಲ್ಲುತ್ತಿದ್ದಂತೆ ಎಲ್ಲವೂ ತಣ್ಣಗಾಗಿರುತ್ತದೆ. ಆದರೆ, ಮತ್ತೊಂದು ಮ್ಯಾಚ್‌ಗಾಗಿ- ಯುದ್ಧಕ್ಕಾಗಿ ಕಾಲಾಳುಗಳಂತೆ ಸಿದ್ಧರಾಗಿರುತ್ತಾರೆ.
ಸೋಷಿಯಲ್ ಮೀಡಿಯಾ ಎನ್ನುವುದು ಹೊಸಗಾಲದ ಕಿಂದರಿಜೋಗಿ. ನಾವೆಲ್ಲ ಆ ಕಿಂದರಿಜೋಗಿಯ ಹಿಂದೆ ಇಲಿಗಳಂತೆ ಓಡುತ್ತಿದ್ದೇವೆ… ಎಲ್ಲಿಗೆ ಎನ್ನುವುದು ಗೊತ್ತಿಲ್ಲ!

ಲೇಖಕ, ಪತ್ರಕರ್ತ