ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕೆಲವರಿಗೆ ಮದವೇರಿದೆ. ಹಲಾಲ್, ಹಿಜಾಬ್ ಬಗ್ಗೆ ಮಾತನಾಡಿದ ಜೈಲಿಗೆ ಹಾಕ್ತೀವಿ, ಹಿಂದು ಸಂಘಟನೆಗಳನ್ನ ಬ್ಯಾನ್ ಮಾಡ್ತಿವಿ ಅಂತ ಕೆಲವು ಸಚಿವರು ಹೇಳುತ್ತಿದ್ದಾರೆ. ಇದಕ್ಕೆಲ್ಲ ಹಿಂದು ಸಂಘಟನೆಗಳು ಹೆದರುವುದಿಲ್ಲ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, “ಜಾನುವಾರ ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದು ಬಿಜೆಪಿಗರು ನಾಟಕವಾಡಿದರು. ಅವರು ಯಾವುದೇ ಗೋವನ್ನೂ ರಕ್ಷಣೆ ಮಾಡಲಿಲ್ಲ. ಮಾಹಿತಿ ಕೊಟ್ಟರೂ ಗೋ ಸಾಗಾಣಿಕೆಯನ್ನು ತಡೆಯಲಿಲ್ಲ” ಎಂದು ಕಿಡಿಕಾರಿದ್ದಾರೆ.
“ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್‌ನ ಕೆಲವರು ಹಾರಾಡುತ್ತಿದ್ದಾರೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಜಾರಿಗೆ ತಂದಿದ್ದಾಗಲೇ ಹಿಂದು ಸಂಘಟನೆಗಳು ಹೆದರಲಿಲ್ಲ. ಈಗಲೂ ಹೆದರುವುದಿಲ್ಲ. ಕಾಂಗ್ರೆಸ್‌ನವರು ಕೇವಲ ಮುಸ್ಲಿಂ ಓಲೈಕೆಗೆ ಬಿದ್ದಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯದಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತೇವೆ” ಎಂದು ಹೇಳಿದ್ದಾರೆ.
ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಬೆಳಿಗ್ಗೆ 5 ಗಂಟೆಗೆ ಆಝಾನ್ ಕೂಗೋದಕ್ಕೆ ನಮ್ಮ ವಿರೋಧವಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಆಝಾನ್ ಶಬ್ದ ಹೆಚ್ಚಾಗಿದೆ” ಎಂದು ಆರೋಪಿಸಿದ್ದಾರೆ.