ಏಪ್ರಿಲ್ ಒಂದನ್ನು ಮೂರ್ಖರ ದಿನವನ್ನಾಗಿ ಆಚರಿಸಲಾಗುತ್ತಿದ್ದು ತನ್ನ ಗ್ರಾಹಕರನ್ನು ಝೆಪ್ಟೊ ‘ಏಪ್ರಿಲ್ ಫೂಲ್’ ಮಾಡಿದೆ. ಅದಕ್ಕಾಗಿ ಸದ್ಯ ಹೇರಳವಾಗಿ ಲಭಿಸದ ತಿಂಡಿಗಳ ಚಿತ್ರವನ್ನು ಬಳಸಿಕೊಂಡಿದೆ. ಈ ಚಿತ್ರ ನೋಡಿ ಉತ್ಸುಕರಾಗಿ ಖರೀದಿಸಲು ಮುಂದಾದ ಗ್ರಾಹಕರು ಮುಖ್ಯರಾಗಿದ್ದಾರೆ.
ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ಝೆಪ್ಟೊದಲ್ಲಿ ಏಪ್ರಿಲ್ ಫೂಲ್‌ಗೆ ಒಳಗಾದ ಯುವತಿ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. “ನಾನು ಈ ಹಿಂದೆ ಯಾವುದಕ್ಕೂ ಇಷ್ಟೊಂದು ಉತ್ಸುಕಳಾಗಿರಲಿಲ್ಲ. ಝೆಪ್ಟೊ ನನಗೆ ತುಂಬಾ ನೋವುಂಟುಮಾಡಿತು” ಎಂದು ಯುವತಿ ಬರೆದುಕೊಂಡಿದ್ದಾಳೆ.
ಇದನ್ನು ಓದಿದ್ದೀರಾ? ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ | ಜನರನ್ನು ಬಿಜೆಪಿ `ಏಪ್ರಿಲ್ ಫೂಲ್’ ಮಾಡಲು ಹೊರಟಿದೆ : ಜೆಡಿಎಸ್
“ಇನ್ನು ಮುಂದೆ ಯಾವುದೂ ನನಗೆ ನೋವುಂಟು ಮಾಡಲಾರದು ಎಂದು ನಾನು ಭಾವಿಸಿದ್ದೆ. ಆದರೆ ಝೆಪ್ಟೊ ನನಗೆ ನೋವುಂಟು ಮಾಡಲು ನಿರ್ಧರಿಸಿದೆ” ಎಂದು ಉಲ್ಲೇಖಿಸುವ ಮೂಲಕ ವಿಡಿಯೋ ಪ್ರಾರಂಭವಾಗುತ್ತದೆ. ನಂತರ ‘ದಿ ಗ್ರ್ಯಾಂಡ್ ಕಮ್‌ಬ್ಯಾಕ್’ ಎಂಬ ಹೊಸ ವಿಭಾಗವನ್ನು ಹೊಂದಿರುವ ಝೆಪ್ಟೊ ವಿಡಿಯೋವನ್ನು ತೋರಿಸಿದ್ದಾರೆ.
‘ದಿ ಗ್ರ್ಯಾಂಡ್ ಕಮ್‌ಬ್ಯಾಕ್’ ಎಂಬ ವಿಭಾಗದಲ್ಲಿ ಕ್ಯಾಡ್‌ಬರಿ ಬೈಟ್ಸ್, ಹಿಪ್ಪೋ ಚಿಪ್ಸ್ ಮತ್ತು ಚೀಟೋಸ್ ಟಾಜೊ ಎಂಬ ಬಾಲ್ಯದಲ್ಲಿ ನಾವು ತಿನ್ನುತ್ತಿದ್ದ ತಿಂಡಿಗಳ ಪ್ಯಾಕೆಟ್ ಅನ್ನು ಪ್ರದರ್ಶಿಸಲಾಗಿದೆ. ಜನರು ಅವುಗಳನ್ನು ಮತ್ತೆ ಖರೀದಿಸಬಹುದು ಎಂಬ ಭಾವನೆ ಮೂಡುವಂತೆ ಮಾಡಿದೆ.
ಈ ತಿಂಡಿಗಳನ್ನು ಖರೀದಿಸಲು ಮುಂದಾದ ಯುವತಿ ಮೂರ್ಖಳಾಗಿದ್ದಾಳೆ. ಹಿಪ್ಪೋ ಚಿಪ್ಸ್ ಅನ್ನು ತನ್ನ ಕಾರ್ಟ್‌ಗೆ ಸೇರಿಸಲು ಕ್ಲಿಕ್ ಮಾಡಿದಾಗ “ನೀವು ಮೂರ್ಖರಾಗಿದ್ದೀರಿ” ಎಂದು ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡಿದೆ. “ಏಪ್ರಿಲ್ ಫೂಲ್ ದಿನದ ಶುಭಾಶಯಗಳು, ಈಗ ನಿಮ್ಮ ಸ್ನೇಹಿತರನ್ನು ಮೂರ್ಖರನ್ನಾಗಿಸಿ” ಎಂದೂ ಬರೆಯಲಾಗಿದೆ.
ಇದನ್ನು ಓದಿದ್ದೀರಾ? ಬದಲಾಯ್ತು ಟ್ವಿಟರ್ ಲೋಗೋ; ಮಸ್ಕ್ ಮಸ್ತಿಗೆ ಹಕ್ಕಿ ಬದಲಿಗೆ ನಾಯಿ ಬಂತು
ಸದ್ಯ ಈ ವಿಡಿಯೋ ಆನ್‌ಲೈನ್‌ನಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಹಲವು ಮಂದಿ ತಾವೂ ಮೂರ್ಖರಾಗಿರುವುದಾಗಿ ಹೇಳಿಕೊಂಡಿದ್ದಾರೆ. “ನಾನು ಚೀಟೋಸ್ ಅನ್ನು ಕ್ಲಿಕ್ ಮಾಡಿದೆ. ಅದನ್ನು ನಾನು ನನ್ನ ಬಾಲ್ಯದಲ್ಲಿ ತಿಂದಿದ್ದನ್ನು ನೆನಪಿಸಿಕೊಳ್ಳುತ್ತಿದ್ದೆ. ಆದ್ದರಿಂದಾಗಿ ಅದನ್ನು ಮತ್ತೆ ಖರೀದಿಸಿ ತಿನ್ನುವ ಖುಷಿಯಲ್ಲಿದ್ದೆ. ಆದರೆ ಇದು ತಮಾಷೆಯಾಗಿತ್ತು” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
“ಝೆಪ್ಟೊವನ್ನು ಎಂದಿಗೂ ಕ್ಷಮಿಸುವುದಿಲ್ಲ. ನಾನು ಅಕ್ಷರಶಃ ಹಿಪ್ಪೋ ಚಿಪ್ಸ್ ತಿನ್ನಬಹುದು ಎಂದು ಸಂತಸಗೊಂಡಿದ್ದೆ” ಎಂದು ಇನ್ನೋರ್ವ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. “ಬಾಲ್ಯದಲ್ಲಿ ತಿಂದಿದ್ದ ಪ್ಯಾಕೆಟ್ ತಿಂಡಿ ತಿನ್ನುವ ಆಸೆಯಲ್ಲಿದ್ದ ನಾನು ಅಳುವಂತಾಯಿತು” ಎಂದೂ ನೆಟ್ಟಿಗರು ಹೇಳಿದ್ದಾರೆ.
ಒಂದು ಪ್ಲಾಟ್‌ಫಾರ್ಮ್ ಇಂತಹ ತಮಾಷೆಯನ್ನು ಮಾಡಿದ್ದು ಇದೇ ಮೊದಲಲ್ಲ. 2023ರಲ್ಲಿ, ಸ್ವಿಗ್ಗಿ ಏಪ್ರಿಲ್ ಒಂದರಂದು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕ್ಯಾಡ್‌ಬರಿ ಬೈಟ್‌ಗಳು ಲಭ್ಯವಿದೆ ಎಂದು ತೋರಿಸುವ ಮೂಲಕ ತನ್ನ ಗ್ರಾಹಕರನ್ನು ಮೂರ್ಖರನ್ನಾಗಿಸಿತ್ತು.
ಪಾರ್ಲೆ ಒಡೆತನದ ಹಿಪ್ಪೋ ಚಿಪ್ಸ್ ಅನ್ನು 2014ರಲ್ಲಿ ಕೊನೆಯದಾಗಿ ಉತ್ಪಾದಿಸಲಾಗಿದೆ. ಕ್ಯಾಡ್‌ಬರಿ ಬೈಟ್ಸ್ 2011ರಿಂದಲೇ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಚೀಟೋಸ್ ಟಾಜೊ ಎಡಿಷನ್ ಎಂಬ ಸೀಮಿತ ಆವೃತ್ತಿಯ ಚೀಟೋಸ್ ವರ್ಜನ್ 2000ರ ದಶಕದಲ್ಲೇ ಮಾರುಕಟ್ಟೆಯಿಂದ ಕಣ್ಮರೆಯಾಗಿದೆ.
