ವಿಚಾರಣೆಗೆ ಹಾಜರಾಗಿದ್ದ ವ್ಯಕ್ತಿ ಮೇಲೆ ಪೊಲೀಸರು ಹಲ್ಲೆ ಮಾಡಿದ್ದು, ಇದರಿಂದಲೇ ಆತ ಸಾವನ್ನಪ್ಪಿದ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯ ಸಿಪಿಐ ನಾಗರಾಜ ಮೆಕಾ, ಪಿಎಸ್ಐ ಮಂಜುನಾಥ ಅವರನ್ನು ಎಸ್ ಪಿ ಪುಟ್ಟಮಾದಯ್ಯ ಅಮಾನತುಗೊಳಿಸಿದ್ದಾರೆ.
ನಗರದ ಈಶ್ವರನಗರದ ನಿವಾಸಿ ವಿರೇಶ ಸಾವಿಗೆ ಪಶ್ಚಿಮ ಪೊಲೀಸ್ ಠಾಣೆಯ ಸಿಪಿಐ ನಾಗರಾಜ ಮೇಕಾ ಮತ್ತು ಪಿಎಸ್‌ಐ ಮಂಜುನಾಥ ಹಲ್ಲೆಯೇ ಕಾರಣ ಎಂದು ಮೃತನ ಸಹೋದರಿ ನಿನ್ನೆ ನೀಡಿದ ದೂರಿನ ಮೇರೆಗೆ ಇಬ್ಬರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಘಟನೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವಂತೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮೃತ ಕುಟುಂದರೊಂದಿಗೆ ಎಸ್‌ಪಿ ಕಚೇರಿ ಮುಂದೆ ಮಂಗಳವಾರ ರಾತ್ರಿ ಪ್ರತಿಭಟನೆ ಕೂಡ ನಡೆಸಿದ್ದರು. ಘಟನೆಯನ್ನು ತನಿಖೆಗೆ ಒಳಪಡಿಸಲಾಗಿದ್ದು ಅಧಿಕಾರಿಗಳು ಕೇಂದ್ರ ಸ್ಥಾನ ಬಿಡದಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ರಾಯಚೂರು | ಮೊಲ ಬೇಟೆ ಪ್ರಕರಣ; ಶಾಸಕನ ಪುತ್ರ, ಸಹೋದರನ ವಿರುದ್ಧ ದೂರು ದಾಖಲು
ಅಲ್ಲದೇ ಸಂತ್ರಸ್ತ ವ್ಯಕ್ತಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರಿಂದ ವಿಚಾರಣೆ ಮಾಡುವ ವೇಳೆ ಸಿಪಿಐ ನಾಗರಾಜ ಹಾಗೂ ಪಿಎಸ್ ಐ ಮಂಜುನಾಥ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಅಟ್ರಾಸಿಟಿ ಹಾಗೂ ಕೊಲೆ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.