ದೇಶದಲ್ಲಿ ಸುಮಾರು 30,000ಕ್ಕೂ ಹೆಚ್ಚು ಪೋಷಕರು ದತ್ತು ಸ್ವೀಕಾರಕ್ಕಾಗಿ ಕಾಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರವು ಬುಧವಾರ ರಾಜ್ಯಸಭೆಗೆ ತಿಳಿಸಿದೆ. ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್ ಈ ಮಾಹಿತಿ ನೀಡಿದ್ದಾರೆ.
ಮಕ್ಕಳ ದತ್ತು ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ (CARINGS) ಪೋರ್ಟಲ್‌ನ ದತ್ತಾಂಶದ ಪ್ರಕಾರ, 32,856 ಭಾರತೀಯ ಪೋಷಕರು ಮತ್ತು 859 ವಿದೇಶಿ ಪೋಷಕರು ದತ್ತು ಸ್ವೀಕಾರಕ್ಕಾಗಿ ಕಾಯುತ್ತಿದ್ದಾರೆ ಎಂದು ಸಚಿವೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್ | ʻನನ್ನ ಪತ್ನಿ ಗರ್ಭಿಣಿʼ ಎಂದ ಅತ್ಯಾಚಾರ ಆರೋಪಿ; ಹೈಕೋರ್ಟ್ ಸಂಧಾನ ವಿಫಲ
ಆರೈಕೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳ ಸುರಕ್ಷತೆ, ಭದ್ರತೆ, ಘನತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ಅಡಿಯಲ್ಲಿ ಈ ದತ್ತು ಪ್ರಕ್ರಿಯೆ ನಡೆಯುತ್ತದೆ.
ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಜ್ಯ ದತ್ತು ಸ್ವೀಕಾರ ಸಂಪನ್ಮೂಲ ಸಂಸ್ಥೆಗಳು, ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿಗಳು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳಂತಹ ಸಂಸ್ಥೆಗಳ ಮೂಲಕ ಈ ಪ್ರಕ್ರಿಯೆ ನಡೆಸುತ್ತಾರೆ.
ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ತಿದ್ದುಪಡಿ ನಿಯಮಗಳು, 2022 ದತ್ತು ಸಂಬಂಧಿತ ವಿಷಯಗಳಲ್ಲಿ ನಿರ್ಧಾರ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಿದೆ. ಪ್ರಸ್ತುತ ಪೋರ್ಟಲ್ ಪ್ರಕಾರ ದೇಶದಲ್ಲಿ ಕೇವಲ 22 ದತ್ತು ಆದೇಶಗಳು ಬಾಕಿ ಉಳಿದಿವೆ ಎಂದು ಸಚಿವೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಉಗಾಂಡ ಮಗು ದತ್ತು | ಭಾರತೀಯ ದಂಪತಿಗೆ ಮಾನ್ಯತೆ ನೀಡಲು ಹೈಕೋರ್ಟ್ ಸೂಚನೆ
ದತ್ತು ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯುತ್ತದೆ. ಎಲ್ಲಾ ಮಾಹಿತಿ ಪೋರ್ಟಲ್‌ನಲ್ಲಿ ಪಾರದರ್ಶಕವಾಗಿದೆ. ಪೋರ್ಟಲ್‌ನಲ್ಲಿ ಅಕ್ರಮ ದತ್ತು ನೋಂದಾವಣೆಗೆ ಯಾವುದೇ ಅವಕಾಶ ಇಲ್ಲ ಎಂದಿದ್ದಾರೆ.
2024-25ರ ಆರ್ಥಿಕ ವರ್ಷದಲ್ಲಿ 4,515 ದತ್ತು ದಾಖಲಾಗಿದೆ. ಭಾರತವು ಮಕ್ಕಳ ದತ್ತು ಸ್ವೀಕಾರದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಕಳೆದ 12 ವರ್ಷಗಳಲ್ಲಿ ಇದು ಅತ್ಯಧಿಕ ಅಂಕಿ ಅಂಶವಾಗಿದೆ. ಒಟ್ಟು ದತ್ತು ಸ್ವೀಕಾರಗಳಲ್ಲಿ 3,950 ದೇಶೀಯವಾಗಿದ್ದರೆ, 565 ಅಂತಾರಾಷ್ಟ್ರೀಯವಾಗಿವೆ ಎಂದು ಸಚಿವಾಲಯ ಹೇಳಿದೆ.
