ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಕಾರ್ಯಕ್ರಮ ಹುಬ್ಬಳ್ಳಿಯ ಅಂಬೇಡ್ಕರ್ ಪ್ರತಿಮೆ ಬಳಿ ನಡೆಯಿತು. ನಗರದಲ್ಲಿ ಎಲ್ಲೆಲ್ಲೂ ಅಂಬೇಡ್ಕರ್ ಸಂಭ್ರಮ ಎದ್ದು ಕಾಣುತ್ತಿತ್ತು. ಅಂಬೇಡ್ಕರ್ ಘೋಷಣೆಗಳು ಕೇಳುತ್ತಿದ್ದವು. ನಂತರ ಅಂಬೇಡ್ಕರ್ ದ್ವಜದೊಂದಿಗೆ ಬೈಕ್ ರ್ಯಾಲಿ ನಡೆಯಿತು. ನಗರದೆಲ್ಲೆಡೆ ನೀಲಿ ಧ್ವಜಗಳು ರಾರಾಜಿಸುತ್ತಿದ್ದವು.
ಇದೇ ಸಂದರ್ಭದಲ್ಲಿ ಈದಿನ.ಕಾಂ ಹೊರತಂದಿರುವ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಮಹತ್ವದ ಕೃತಿಗಳ ಸಾರ ಸಂಗ್ರಹ ವಿಶೇಷ ಸಂಚಿಕೆಯನ್ನು ಚಿಂತಕ ತಮ್ಮಣ್ಣ ಮಾದರ ನೇತೃತ್ವ, ಕುಮಾರಣ್ಣ ಪಾಟೀಲ್ ಮತ್ತು ವಿವಿಧ ಸಂಘಟಕರು ಹಾಗೂ ಅಂಬೇಡ್ಕರ್ ಅನುಯಾಯಿಗಳ ಸಹಭಾಗಿತ್ವದಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಶಮೀಮ್ ಮುಲ್ಲಾ, ಗಂಗಾಧರ ಪೆರೂರ, ಶಂಕರ್ ಅಜಮನಿ, ಹನಿಫ್ ಹಿರೂರ್, ಲೋಕೆಶ್ ಚಲವಾದಿ ಇದ್ದರು.
ನಂತರ ಕಾರ್ಯಕ್ರಮದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಭೇಟಿನೀಡಿ, ವಿಶ್ವದ ಜ್ಞಾನ ಭಂಡಾರ ಪಡೆಯುವ ಮೂಲಕ ತತ್ವಜ್ಞಾನಿ, ವಿಶ್ವಜ್ಞಾನಿ ಆಗಿದ್ದಾರೆ. ಬಾಬಾಸಾಹೇಬರು ಇವತ್ತು ಮನುವಾದಿಗಳಿಗೆ ಅನಿವಾರ್ಯವಾಗಿದ್ದಾರೆ. ಜಾತಿವಾದಿ ಪಕ್ಷಗಳು ಡೊಂಗಿತನದಿಂದ ಅಂಬೇಡ್ಕರ ಅವರನ್ನು ತಲೆಮೇಲೆ ಹೊರುವ ನಾಟಕವಾಡುತ್ತಿದ್ದಾರೆ ಎಂದರು.
ತದನಂತರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಬಾಬಾಸಾಹೇಬರ ದೂರದೃಷ್ಟಿ ಕಾರಣದಿಂದ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿದೆ. ಆದರೆ ಅವರಿಗೆ ಸಿಗಬೇಕಾದ ಸರಿಯಾದ ಮನ್ನಣೆ ಇಂದಿಗೂ ಸಿಗದಿರುವುದು ನೋವಿನ ಸಂಗತಿ ಎಂದರು.
ಮಹಾಪೌರ ರಾಮಪ್ಪ ಬಡಿಗೇರ ಮಾತನಾಡಿ, ಅಂಬೇಡ್ಕರ್ ಅವರು ಜನಿಸಿದ ದಿನವು ಸ್ವಾಭಿಮಾನದ ದಿನವಾಗಿದೆ. ತಾವು ಪಟ್ಟ ನೋವು ಮತ್ತೊಬ್ಬರು ಅನುಭವಿಸಬಾರದು ಎಂಬ ದೃಷ್ಠಿಯಿಂದ ಬಾಬಾಸಾಹೇಬರು ಸಂವಿಧಾನವನ್ನು ನೀಡಿದ್ದಾರೆ ಎಂದು ಹೇಳಿದರು.
ಆಟೋ ಚಾಲಕರ ಸಂಘದ ಅದ್ಯಕ್ಷ ಮಾತನಾಡಿ, ಮುಂಬರುವ ದಿನಗಳಲ್ಲಿ ಎಲ್ಲ ಜಾತಿ ಧರ್ಮಗಳನ್ನು ಒಳಗೊಂಡು ಅಂಬೇಡ್ಕರ್ ಜಯಂತಿ ಮಾಡೋಣ. ಭ್ರಷ್ಟರಾಜಕಾರಿಗಳನ್ನು ದೂರವಿಟ್ಟು ಬಾಬಾಸಾಹೇಬರ ತತ್ವಾದರ್ಶವನ್ನು ಅರಿತುಕೊಳ್ಳಬೇಕಿದೆ ಎಂದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | 5 ವರ್ಷದ ಬಾಲಕಿ ಕೊಲೆ; ಪೊಲೀಸ್ ಗುಂಡೇಟಿಗೆ ಆರೋಪಿ ಬಲಿ
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮತ್ತು ಪೊಲೀಸ್ ಇಲಾಖೆ, ಪೌರಕಾರ್ಮಿಕರು, ವಿವಿಧ ಪಕ್ಷದ ಮುಖಂಡರು, ನಾಯಕರು, ವಿವಿಧ ಸಂಘಟಕರು, ಅಭಿಮಾನಿಗಳು, ಅನುಯಾಯಿಗಳು, ವಿವಿಧ ಸಮುದಾಯದವರು, ಸರ್ಕಾರಿ ನೌಕರರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ, ಮಹಿಳೆಯರು, ಯುವಕರು, ಸಮುದಾಯದ ಮುಖಂಡರು ಜಯಂತಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.