ಲಖನೌ ಸೂಪರ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡುವಾಗಲೇ ಧೋನಿ ದಾಖಲೆಯ ಪುಟಕ್ಕೆ ಸ್ಥಾನ ಪಡೆದಿದ್ದಾರೆ. ಇವರು ಪ್ರಸಕ್ತ ಸಾಲಿನ 7ನೇ ಪಂದ್ಯದಲ್ಲಿ ತಂಡಕ್ಕೆ 2ನೇ ಗೆಲುವಿನ ಮಾಲೆ ತೊಡಿಸಿದರು. ಈ ವೇಳೆ ಧೋನಿ ವಿಕೆಟ್ ಕೀಪರ್ ಆಗಿ ಈ ಪಂದ್ಯದಲ್ಲಿ ಎರಡು ಕ್ಯಾಚ್ ಹಾಗೂ ಒಂದು ಸ್ಟಂಪಿಂಗ್ ಮಾಡಿದರು. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ವಿಕೆಟ್ ಕೀಪರ್ ಆಗಿ 200 ವಿಕೆಟ್ ಪಡೆದ ಹಿರಿಮೆಯನ್ನು ಸಹ ತಮ್ಮದಾಗಿಸಿಕೊಂಡರು.
ಧೋನಿ ತಮ್ಮ 272 ಪಂದ್ಯಗಳಲ್ಲಿ 153 ಕ್ಯಾಚ್ ಹಾಗೂ 47 ಸ್ಟಂಪಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಕಿತ್ತ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬರೀ ವಿಕೆಟ್ ಕೀಪಿಂಗ್‌ನಲ್ಲಿ ಅಷ್ಟೇ ಅಲ್ಲ ಸೋಮವಾರ ಧೋನಿ, ಬ್ಯಾಟಿಂಗ್‌ನಲ್ಲೂ ಕಮಾಲ್ ಪ್ರದರ್ಶನ ನೀಡಿದರು. ಇವರು 15ನೇ ಓವರ್‌ನ ಕೊನೆಯ ಎಸೆತದಲ್ಲಿ ವಿಜಯ್ ಶಂಕರ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಇಳಿದರು. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಸಂಕಷ್ಟದ ಪರಿಸ್ಥಿತಿಯಲ್ಲಿತ್ತು. ಇವರು ಬ್ಯಾಟಿಂಗ್‌ಗೆ ಇಳಿದಾಗ 36 ಎಸೆತಗಳಲ್ಲಿ 56 ರನ್‌ಗಳ ಅವಶ್ಯಕತೆ ಇತ್ತು.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ಸಿಎಸ್‌ಕೆ ತಂಡದಿಂದ ರುತುರಾಜ್ ನಿರ್ಗಮನ; ಪೂರ್ಣ ಟೂರ್ನಿಗೆ ಧೋನಿ ನಾಯಕ
ಈ ವೇಳೆ ಧೋನಿ ಆಲ್‌ರೌಂಡರ್ ಶಿವಂ ದುಬೆ ಅವರೊಂದಿಗೆ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸಿದರು. ಲಕ್ನೋ ವಿರುದ್ಧದ ಪಂದ್ಯದಲ್ಲಿ ಮೈ ಚಳಿ ಬಿಟ್ಟು ಬ್ಯಾಟ್ ಮಾಡಿದ ಮಾಹಿ ಅಬ್ಬರಿಸಿದರು. ಇವರು 11 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 26 ರನ್ ಸಿಡಿಸಿದರು. ಈ ವೇಳೆ ಮಾಹಿ ಬ್ಯಾಟಿಂಗ್ ಸ್ಟ್ರೈಕ್ ರೇಟ್ 236 ಇತ್ತು. ತಮ್ಮ ಹಳೆಯ ಖದರ್‌ನಲ್ಲಿ ಕಾಣಿಸಿಕೊಂಡ ಮಾಹಿ ಅಭಿಮಾನಿಗಳಿಗೆ ಮನರಂಜನೆಯನ್ನು ಉಣಬಡಿಸಿದರು.
ಐದು ಪಂದ್ಯಗಳಲ್ಲಿ ಸೋಲು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಅಂತೂ ಇಂತು ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಧೋನಿ, ಜಯದಲ್ಲಿ ಮಿಂಚಿದ್ದಾರೆ. ಒತ್ತಡವನ್ನು ತಮ್ಮ ಮೇಲೆ ಎಳೆದುಕೊಳ್ಳದಂತೆ ಬ್ಯಾಟಿಂಗ್ ಮಾಡಿದ ಧೋನಿ ಅಬ್ಬರಿಸಿದ್ದಾರೆ. ಧೋನಿ ಅಮೋಘ ಪ್ರದರ್ಶನದಿಂದ ಇವರಿಗೆ 2175 ದಿನಗಳ ಬಳಿಕ ಐಪಿಎಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.
ಮಹೇಂದ್ರ ಸಿಂಗ್ ಧೋನಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರು. ವಿಕೆಟ್ ಕೀಪಿಂಗ್‌ನಲ್ಲಂತೂ ಇವರ ಸಾಧನೆ ಅಮೋಘ. ಎಲ್‌ಎಸ್‌ಜಿಯ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಬ್ಯಾಟಿಂಗ್ ಮಾಡುವಾಗ ಚೆನ್ನೈ ತಂಡದ ಅನ್ಶುಲ್ ಕಾಂಬೋಜ್ ಅವರಿಗೆ ಚೆಂಡನ್ನು ನೀಡಿ ಕೆಣಕಿದರು. ಈ ವೇಳೆ ಫೀಲ್ಡ್ ಅಂಪೈರ್ ನಾಟೌಟ್ ಎಂದು ತೀರ್ಪನ್ನು ನೀಡಿದರೂ, ಡಿಆರ್‌ಎಸ್ ಪಡೆದು ಮಿಂಚಿದರು. ಡಿಆರ್‌ಎಸ್‌ನಲ್ಲಿ ತಮ್ಮ ನಿರ್ಧಾರ ಸರಿಯಾಗಿಯೇ ಇರುತ್ತದೆ ಎಂದು ಮಾಹಿ ಮತ್ತೊಮ್ಮೆ ಸಾಬೀತು ಪಡಿಸಿದರು.