- ಏಪ್ರಿಲ್ 1ರವರೆಗೆ ಲೋಕಾಯುಕ್ತ ವಶಕ್ಕೆ ನೀಡಿ ಆದೇಶ
- ನ್ಯಾಯಮೂರ್ತಿ ಬಿ ಜಯಂತ್ ಕುಮಾರ್ ಅವರಿದ್ದ ಪೀಠ
ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಬಂಧನವಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರನ್ನು 5 ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ನೀಡಿ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಸಂಸ್ಥೆಗೆ ಕೆಮಿಕಲ್ ಆಯಿಲ್ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡುವುದಕ್ಕೆ ಲಕ್ಷಾಂತರ ರೂಪಾಯಿ ಹಣ ಪಡೆಯುವಾಗ ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ ಸಿಕ್ಕಿಬಿದ್ದಿದ್ದರು.
ಇದೇ ವೇಳೆ ಮಾಡಾಳ್ ಮನೆಗೆ ದಾಳಿ ಮಾಡಿದ ಲೋಕಾಯುಕ್ತರು ಕೋಟ್ಯಾಂತರ ರೂಪಾಯಿ ದಾಖಲೆಯಿಲ್ಲದ ಹಣ ವಶಪಡಿಸಿಕೊಂಡಿದ್ದರು. ಶಾಸಕ, ಶಾಸಕರ ಪುತ್ರ ಸೇರಿದಂತೆ 6 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಬಂಧನದ ಭೀತಿಯಿಂದ ಶಾಸಕ ಮಾಡಾಳ್ ನಾಪತ್ತೆಯಾಗಿ ಅಜ್ಞಾತ ಸ್ಥಳದಲ್ಲಿದ್ದುಕೊಂಡು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? : ಮಾಡಾಳ್ ವಿರೂಪಾಕ್ಷಪ್ಪರನ್ನು ತನಿಖಾಧಿಕಾರಿ ಮುಂದೆ ಹಾಜರುಪಡಿಸಿದ ಲೋಕಾಯುಕ್ತ ಪೊಲೀಸ್
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರ ನ್ಯಾಯಪೀಠವು ಕೆಲವು ಷರತ್ತುಗಳೊಂದಿಗೆ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿತ್ತು. ಆದರೆ, ನಿನ್ನೆ (ಸೋಮವಾರ) ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ರದ್ದು ಮಾಡಿ, ಆದೇಶ ಹೊರಡಿಸಿತ್ತು.
ಈ ಬೆನ್ನಲ್ಲೇ, ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನ ಬಂಧಿಸಿದ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಮಾಡಾಳ್ ಅವರನ್ನು ಏಪ್ರಿಲ್ 1ರವರೆಗೆ ಲೋಕಾಯುಕ್ತ ವಶಕ್ಕೆ ನೀಡಿ ನ್ಯಾಯಮೂರ್ತಿ ಬಿ ಜಯಂತ್ ಕುಮಾರ್ ಆದೇಶ ಹೊರಡಿಸಿದ್ದಾರೆ.