ಸನ್‌ರೈಸರ್ಸ್ ಹೈದರಾಬಾದ್ ತಂಡದ ಕ್ರಿಕೆಟಿಗ ಟ್ರಾವಿಸ್ ಹೆಡ್ ಅವರನ್ನು ಬಳಸಿಕೊಂಡು ಆರ್‌ಸಿಬಿ ವಿರುದ್ಧ ಯೂಟ್ಯೂಬ್ ಜಾಹೀರಾತನ್ನು ಅವಹೇಳನಕಾರಿಯಾಗಿ ಬಳಸಲಾಗಿದೆ ಎಂಬ ಆರೋಪದ ಮೇಲೆ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇಂದು ಸಾರ್ವಜನಿಕ ಸಾರಿಗೆ ಸೇವೆಗಳ ಆಪ್ ‘ಊಬರ್ ಮೋಟೋ’ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದೆ.
ಎರಡೂ ಕಡೆಯ ವಾದಗಳನ್ನು ಸುದೀರ್ಘವಾಗಿ ಆಲಿಸಿದ ನಂತರ, ಮಧ್ಯಂತರ ತಡೆಯಾಜ್ಞೆ ಕೋರಿ ಆರ್‌ಸಿಬಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಕಾಯ್ದಿರಿಸಿದರು.
‘ಬ್ಯಾಡೀಸ್ ಇನ್ ಬೆಂಗಳೂರು – ಟ್ರಾವಿಸ್ ಹೆಡ್” ಎಂಬ ಶೀರ್ಷಿಕೆಯ ಮೂಲಕ ಊಬರ್ ಮೋಟೋದ ಯೂಟ್ಯೂಬ್ ಜಾಹೀರಾತಿನ ವಿರುದ್ಧ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಈ ಮೊಕದ್ದಮೆ ಹೂಡಿದೆ. 0.59 ಸೆಕೆಂಡುಗಳ ಈ ವಿಡಿಯೋ ಪ್ರಸ್ತುತ 13 ಲಕ್ಷ ವೀಕ್ಷಣೆಗಳನ್ನು ಕಂಡಿದೆ.
ಆರ್‌ಸಿಬಿ ಪರ ಹಾಜರಾದ ವಕೀಲೆ ಶ್ವೇತಶ್ರೀ ಮಜುಂದಾರ್, ಜಾಹೀರಾತಿನ ವಿವರಣೆಯ ಬಗ್ಗೆ ಊಬರ್ ಮೋಟೋ ವಿರುದ್ಧ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದರು, ವಿಡಿಯೊದಲ್ಲಿ ಪಾತ್ರ ಮಾಡಿರುವ ಟ್ರಾವಿಸ್ ಹೆಡ್ ಅವರು ಆರ್‌ಸಿಬಿಯ ಟ್ರೇಡ್‌ಮಾರ್ಕ್ ಅನ್ನು ಅವಹೇಳನ ಮಾಡುತ್ತಾರೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಸ್ಟೇಡಿಯಂನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಲೀಕರ ಮೇಲೆ ದಾಳಿ
ವಿಡಿಯೋದಲ್ಲಿ, “ಬೆಂಗಳೂರು vs ಹೈದರಾಬಾದ್” ಎಂಬ ಫಲಕವನ್ನು ನಾಶಗೊಳಿಸುವ ಉದ್ದೇಶದಿಂದ ಹೆಡ್ ಅವರು ಬೆಂಗಳೂರು ಕ್ರಿಕೆಟ್ ಕ್ರೀಡಾಂಗಣದ ಕಡೆಗೆ ಓಡುತ್ತಿರುವುದು ಕಂಡುಬಂದಿದೆ. ಸ್ಪ್ರೇ ಪೇಂಟ್ ತೆಗೆದುಕೊಂಡು “ಬೆಂಗಳೂರು” ಬದಲಿಗೆ “ರಾಯಲಿ ಚಾಲೆಂಜಡ್” ಬೆಂಗಳೂರು ಎಂದು ಬರೆದಿದ್ದಾರೆ, ಇದು ಆರ್‌ಸಿಬಿಯ ಚಿಹ್ನೆಯನ್ನು ಅವಹೇಳನ ಮಾಡುತ್ತದೆ ಎಂದು ಅವರು ಹೇಳಿದರು.
ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ವಾಣಿಜ್ಯ ಪ್ರಾಯೋಜಕರಾಗಿರುವ ಊಬರ್ ಮೋಟೋ, ತನ್ನ ಉತ್ಪನ್ನವನ್ನು (ಬೈಕ್ ಬುಕಿಂಗ್) ಪ್ರಚಾರ ಮಾಡುವಾಗ, ಆರ್‌ಸಿಬಿಯ ಟ್ರೇಡ್‌ಮಾರ್ಕ್ ಅನ್ನು ಬಳಸಿಕೊಂಡು ಕೆಟ್ಟದಾಗಿ ಬಿಂಬಿಸಿದೆ. ಇದನ್ನು ಕಾನೂನಿನ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ. ಜಾಹೀರಾತು ಮಾಡಲು ನಿಮಗೆ ಲಕ್ಷಾಂತರ ಸೃಜನಶೀಲ ಮಾರ್ಗಗಳಿದ್ದವು. ನನ್ನ ಕಕ್ಷೀದಾರರ ಟ್ರೇಡ್‌ಮಾರ್ಕ್ ಬಳಸಿ ನೀವು ಕೆಟ್ಟದಾಗಿ ಮಾಡಬೇಕಿತ್ತೇ? ಎಂದು ಕೋರ್ಟ್‌ಗೆ ಈ ಸಂದರ್ಭದಲ್ಲಿ ಶ್ವೇತಶ್ರೀ ಮಜುಂದಾರ್ ಅವರು ತಿಳಿಸಿದರು.
ಊಬರ್ ಮೋಟೋ ಪರ ಹಾಜರಾದ ವಕೀಲರು, ಈ ಮೊಕದ್ದಮೆಯಲ್ಲಿ ಮೂಲಭೂತ ಸಮಸ್ಯೆ ಇದೆ. ಆರ್‌ಸಿಬಿಯನ್ನು ಯಾವುದೇ ರೀತಿ ನಮ್ಮ ಕಕ್ಷೀದಾರರು ಅವಹೇಳನ ಮಾಡಿಲ್ಲ. ಮೇ 13 ರಂದು ಬೆಂಗಳೂರು ಕ್ರಿಕೆಟ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ನಡೆಯಲಿದ್ದು, ಇದು ಸಂಚಾರಿ ದಟ್ಟಣೆ ನಗರವಾಗಿರುವುದರಿಂದ ಸಾರ್ವಜನಿಕರು ಊಬರ್ ಮೋಟೋ ಬಳಸಬೇಕು ಎಂಬುದು ಜಾಹೀರಾತಿನ ಸಾಮಾನ್ಯ ಸಂದೇಶವಾಗಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿದರು.