18ನೇ ಆವೃತ್ತಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿ ತವರಿನ ಆಚೆ ಅಬ್ಬರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಮೊದಲ ಗೆಲುವಿನ ಆಶಾಭಾವನೆಯಿಂದ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕೆ ಇಳಿಯಲಿದೆ. ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದ ಉತ್ಸಾಹದಲ್ಲಿ ಆರ್ಸಿಬಿ ಇದ್ದರೆ, ಪಂಜಾಬ್ ಕೆಕೆಆರ್ ವಿರುದ್ಧ ಕಡಿಮೆ ಸ್ಕೋರ್ ನಿಯಂತ್ರಿಸಿ ಗೆಲುವು ಕಂಡು ಹುಮ್ಮಸ್ಸಿನಿಂದ ಅಂಗಳಕ್ಕೆ ಇಳಿಯಲಿದೆ. ಆರ್ಸಿಬಿ ತವರು ನೆಲ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್ ಸೋಲಿನ ಮುಖಭಂಗವನ್ನು ತಪ್ಪಿಸಿಕೊಳ್ಳಲು ಹಲವು ತಂತ್ರಗಳನ್ನು ಹಣೆಯಲಿದೆ ಎನ್ನಲಾಗುತ್ತಿದೆ.
ಎರಡೂ ತಂಡಗಳು ಈಗಾಗಲೇ ಐಪಿಎಲ್ನಲ್ಲಿ 33 ಪಂದ್ಯಗಳಲ್ಲಿ ಆಗಿವೆ. ಆರ್ಸಿಬಿ 16 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಪಂಜಾಬ್ 17 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಉಭಯ ತಂಡಗಳ ನಡುವಿನ ಗರಿಷ್ಠ ಮೊತ್ತ 241 ರನ್ ಆಗಿದೆ. ಎಂ ಚಿನ್ನಸ್ವಾಮಿ ಮೈದಾನದಲ್ಲಿ ಈಗಾಗಲೇ 97 ಐಪಿಎಲ್ ಪಂದ್ಯಗಳು ನಡೆದಿದ್ದು, ಮೊದಲ ಬ್ಯಾಟ್ ಮಾಡಿದ ತಂಡ 41, ಗುರಿ ಬೆನ್ನಟ್ಟಿದ ತಂಡ 52 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಪಿಚ್ ಹೇಗಿದೆ?
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನವನ್ನು ಬ್ಯಾಟರ್ಗಳ ಸ್ವರ್ಗ ಎಂದೇ ಕರೆಯುತ್ತಾರೆ. ಈ ಪಿಚ್ ಬ್ಯಾಟರ್ಗಳಿಗೆ ಸಹಾಯಕವಾಗಲಿದೆ. ಆದರೆ ಈ ಮೈದಾನದಲ್ಲಿ ಪ್ರಸ್ತುತ ಆವೃತ್ತಿಯಲ್ಲಿ ಈಗಾಗಲೇ 2 ಪಂದ್ಯಗಳನ್ನು ಆಡಲಾಗಿದ್ದು, ಒಮ್ಮೆಯೂ 200 ರನ್ ದಾಖಲಾಗಿಲ್ಲ. ಈ ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ರನ್ ಕಲೆ ಹಾಕಲು ಪರದಾಟ ನಡೆಸಿತು. ಹೀಗಾಗಿ ಈ ಮೈದಾನದಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡು ನಿರ್ಧಾರವನ್ನು ಮಾಡುವ ಸಾಧ್ಯತೆಯಿದೆ. ಗೆದ್ದರೆ ಅಂಕ ಪಟ್ಟಿಯಲ್ಲಿ ಬಡ್ತಿ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಪ್ರಸಕ್ತ ಐಪಿಎಲ್ನಲ್ಲಿ ಆಡಿದ 6 ಪಂದ್ಯಗಳಲ್ಲಿ 4 ಜಯ ಸಾಧಿಸಿದ್ದು, 8 ಅಂಕಗಳನ್ನು ಕಲೆ ಹಾಕಿವೆ. ನೆಟ್ ರನ್ ರೇಟ್ ವಿಚಾರದಲ್ಲಿ ಆರ್ಸಿಬಿ ಪಂಜಾಬ್ಗಿಂತ ಬಲಿಷ್ಠವಾಗಿದ್ದು, ಮೂರನೇ ಸ್ಥಾನದಲ್ಲಿದೆ. ಪಂಜಾಬ್ ನಾಲ್ಕನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಲಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಮಾತ್ರ 10 ಅಂಕಗಳನ್ನು ಕಲೆ ಹಾಕಿದೆ. ಇದೇ ಸಾಲಿಗೆ ಸೇರಲು ಆರ್ಸಿಬಿ, ಪಂಜಾಬ್ ಹೋರಾಟ ನಡೆಸಲಿವೆ.
ಈ ಸುದ್ದಿ ಓದಿದ್ದೀರಾ? ಐಪಿಎಲ್ನಲ್ಲಿ ಮೋಸದಾಟದ ಘಾಟು: ಫ್ರಾಂಚೈಸಿ ತಂಡಗಳು, ಆಟಗಾರರಿಗೆ ಬಿಸಿಸಿಐ ಖಡಕ್ ಎಚ್ಚರಿಕೆ
ಸಂಘಟಿತ ಆಟವೇ ಆರ್ಸಿಬಿ ಬಲವಾಗಿದೆ. ಇಷ್ಟು ವರ್ಷಗಳ ಕಾಲ ಕೆಲವು ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಆದರೆ ಈ ಬಾರಿ ಹಾಗಿಲ್ಲ. ಎಲ್ಲ ಆಟಗಾರರು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಬ್ಯಾಟ್ ಮಾಡುತ್ತಿದ್ದಾರೆ. ತವರಿನ ಅಭಿಮಾನಿಗಳಿಗೆ ಹಬ್ಬದೂಟವನ್ನು ಬಡಿಸಲು ಆರ್ಸಿಬಿ ಯೋಜನೆ ಮಾಡಿಕೊಂಡಿದೆ. ಆರ್ಸಿಬಿ ತಂಡದ ಬ್ಯಾಟಿಂಗ್ ಆಧಾರ ಸ್ಥಂಬ ವಿರಾಟ್ ಕೊಹ್ಲಿ ಭರ್ಜರಿ ಲಯದಲ್ಲಿದ್ದಾರೆ. ಇವರು ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು.
ಇನ್ನು ಫಿಲ್ ಸಾಲ್ಟ್ ಸಹ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುತ್ತಿದ್ದಾರೆ. ಈ ಜೋಡಿ ಚಿನ್ನಸ್ವಾಮಿ ಅಂಗಳದಲ್ಲೂ ಇಂತಹದ್ದೇ ಬಿಗ್ ಇನಿಂಗ್ಸ್ ಆಡಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ದೇವದತ್ ಪಡಿಕ್ಕಲ್ ತಂಡ ತನ್ನ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಡಬೇಕಿದೆ. ತವರಿನ ಅಂಗಳದಲ್ಲಿ ದೇವದತ್ ಅಬ್ಬರಿಸಬೇಕಿದೆ. ಆರಂಭದಲ್ಲಿ ಇವರು ತಾಳ್ಮೆಯಿಂದ ಆಡಿದರೆ ಉತ್ತಮ. ಉಳಿದಂತೆ ರಜತ್ ಪಟಿದಾರ್, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ ತಂಡ ತಮಗೆ ನೀಡಿದ ಜವಾಬ್ದಾರಿಗೆ ಅನುಸಾರವಾಗಿ ಬ್ಯಾಟ್ ಮಾಡಿದರೆ ಬಿಗ್ ಸ್ಕೋರ್ ಕನಸು ನನಸಾಗುತ್ತದೆ.
ಪಂಜಾಬ್ನಲ್ಲೂ ಉತ್ತಮ ಆಟಗಾರರು
ಪಂಜಾಬ್ ಕಿಂಗ್ಸ್ ಈ ಹಿಂದಿನ ಐಪಿಎಲ್ಗಳಲ್ಲಿ ನೀಡರದ ಪ್ರದರ್ಶನವನ್ನು 18ನೇ ಆವೃತ್ತಿಯಲ್ಲಿ ನೀಡುತ್ತಿದೆ. ಈ ತಂಡದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಕಟ್ಟಿ ಹಾಕುವುದು ಆರ್ಸಿಬಿ ಅನಿವಾರ್ಯ. ಸದ್ಯ ಇವರ ಫಾರ್ಮ್ ಭರ್ಜರಿಯಾಗಿದೆ. ಇವರು ಒಮ್ಮೆ ತಳ ಊರಿ ನಿಂತಲ್ಲಿ ಬಿಗ್ ಸ್ಕೊರ್ ಫಿಕ್ಸ್. ಆರಂಭಿಕರಿಗೆ ಆರ್ಸಿಬಿ ಬಿಗ್ ಸ್ಕೊರ್ ಮಾಡದಂತೆ ತಡೆಯುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಮೊದಲ ಗೆಲುವಿನ ಕನಸು ನನಸಾಗುತ್ತದೆ. ಪಂಜಾಬ್ ಬ್ಯಾಟಿಂಗ್ ತನ್ನ ಟಾಪ್ ಆರ್ಡರ್ ಮೇಲೆ ಅಲಂಬಿತವಾಗಿದ್ದರಿಂದ ಇದಕ್ಕೆ ತಡೆ ನೀಡಿದರೆ ಉತ್ತಮ.
ಪಂಜಾಬ್ ಪರ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್ಮನ್ಸ್ ಶ್ರೇಯಸ್ ಅಯ್ಯರ್, 6 ಪಂದ್ಯಗಳಿಂದ 250 ರನ್ ಬಾರಿಸಿದ್ದಾರೆ. ಆರ್ಸಿಬಿ ಪವರ್ ಪ್ಲೇನಲ್ಲಿ ಪಂಜಾಬ್ ತಂಡದ ಬೌಲರ್ಗಳನ್ನು ಗುರಿ ಮಾಡಿ ರನ್ಗಳನ್ನು ಪೇರಿಸಬೇಕಿದೆ. ಏಕೆಂದರೆ ಮಧ್ಯದ ಓವರ್ಗಳಲ್ಲಿ ತನ್ನ ಸ್ಪಿನ್ ಮೋಡಿ ಮಾಡಲು ಯುಜುವೇಂದ್ರ ಚಹಾಲ್ ಬರಲಿದ್ದಾರೆ. ಇವರು ಕಳೆದ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ ಬಹುವಾಗಿ ಕಾಡಿದರು. ಸೋಲುವ ಪಂದ್ಯದಲ್ಲಿ ಪಂಜಾಬ್ ಗೆಲುವಿನ ನಗೆ ಬೀರಲು ಚಹಾಲ್ ಮಾಡಿದ ಸ್ಪಿನ್ ಮೋಡಿ ಕಾರಣ. ಹೀಗಾಗಿ ಆರ್ಸಿಬಿ ಬೌಲಿಂಗ್ಅನ್ನು ಎಚ್ಚರಿಕೆಯಿಂದ ಆಡಬೇಕಿದೆ.
ಮಳೆ ಭೀತಿ?
ಉದ್ಯಾನ ನಗರಿಯಲ್ಲಿ ಕಳೆದ ಕೆಲವು ದಿನಗಳಿಂದ ಧಾರಕಾರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ನಾಳಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಬಹುದು ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ. ಇದೀಗ ಹವಾಮಾನ ಇಲಾಖೆಯಿಂದ ನಾಳಿನ ಹವಾಮಾನ ವರದಿ ಹೊರಬಿದ್ದಿದ್ದು, ಏಪ್ರಿಲ್ 18 ರಂದು ಬೆಂಗಳೂರಿನಲ್ಲಿ ಹವಾಮಾನವು ಬಿಸಿಲಿನಿಂದ ಕೂಡಿದ್ದು, ಭಾಗಶಃ ಮೋಡ ಕವಿದಿರುತ್ತದೆ. ಈ ದಿನ ಲಘು ಮಳೆಯಾಗುವ ನಿರೀಕ್ಷೆಯಿದ್ದು, ದಿನವಿಡೀ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಇರುತ್ತದೆ. ಹವಾಮಾನ ಇಲಾಖೆಯ ಪ್ರಕಾರ, ಹಗಲಿನಲ್ಲಿ ಗರಿಷ್ಠ ತಾಪಮಾನವು ಸುಮಾರು 34 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ. ಸಂಜೆ ವೇಳೆಗೆ ತಾಪಮಾನ 22 ಡಿಗ್ರಿ ಸೆಲ್ಸಿಯಸ್ಗೆ ಇಳಿಯುವ ನಿರೀಕ್ಷೆಯಿದೆ.
ಉಭಯ ತಂಡಗಳ ಆಟಗಾರರು:
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ, ರಜತ್ ಪಾಟಿದಾರ್(ನಾಯಕ), ಯಶ್ ದಯಾಳ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್ಸ್ಟೋನ್, ಜೋಶ್ ಹೇಜಲ್ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಜೇಕಬ್ ಬೆಥೆಲ್, ಮನೋಜ್ ಭಾಂಡಗೆ, ದೇವದತ್ತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ, ಲುಂಗಿ ಎನ್ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.
ಪಂಜಾಬ್ ಕಿಂಗ್ಸ್:
ಶಶಾಂಕ್ ಸಿಂಗ್, ಪ್ರಭಾಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್(ನಾಯಕ), ನೆಹಾಲ್ ವಧೇರಾ, ವಿಷ್ಣು ವಿನೋದ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್, ಯುಜ್ವೇಂದ್ರ ಚಹಾಲ್, ಹರ್ಪ್ರೀತ್ ಬ್ರಾರ್, ಅರ್ಷ್ದೀಪ್ ಸಿಂಗ್, ವಿಜಯ್ಕುಮಾರ್ ವೈಶಾಕ್, ಯಶ್ ಠಾಕೂರ್, ಮಾರ್ಕೊ ಯಾನ್ಸೆನ್, ಪ್ರಿಯಾಂಶ್ ಆರ್ಯ, ಅಜ್ಮತುಲ್ಲಾ ಒಮರ್ಜಾಯ್, ಆರನ್ ಹಾರ್ಡಿ, ಕ್ಸೇವಿಯರ್ ಬಾರ್ಟ್ಲೆಟ್, ಕುಲದೀಪ್ ಸೇನ್, ಸೂರ್ಯಾಂಶ್ ಶೆಡ್ಜ್, ಮುಶೀರ್ ಖಾನ್, ಹರ್ನೂರ್ ಪನ್ನು, ಪೈಲಾ ಅವಿನಾಶ್, ಪ್ರವೀಣ್ ದುಬೆ.
ಪಂದ್ಯ ಆರಂಭವಾಗುವ ಸಮಯ: ಸಂಜೆ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಹಾಟ್ ಸ್ಟಾರ್