ಭಾರತೀಯ ಕ್ರಿಕೆಟ್ ತಂಡದ ಸಹಾಯಕ ಕೋಚ್ ಸ್ಥಾನದಿಂದ ಅಭಿಷೇಕ್ ನಾಯರ್ ಅವರನನ್ನು ಬಿಸಿಸಿಐ ಹೊರಹಾಕಿದೆ. ಇತ್ತೀಚೆಗೆ, ಭಾರತದಲ್ಲಿಯೇ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಸರಣಿ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಭಾರತ-ಅಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ ಭಾರತ ತಂಡ ಸೋಲುಂಡಿದ್ದ ಹಿನ್ನೆಲೆ ಅವರನ್ನು ಸಹಾಯಕ ಕೋಚ್ ಹುದ್ದೆಯಿಂದ ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಆಗಿರುವ ಅಭಿಷೇಕ್ ನಾಯರ್ ಅವರು 2024ರ ಜುಲೈನಲ್ಲಿ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದರು. ಅದೇ ಸಮಯದಲ್ಲಿ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಕೂಡ ಆಯ್ಕೆಯಾಗಿದ್ದರು.
ಆದರೆ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸೋಲಿಗೆ ಅಭಿಷೇಕ್ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ಜೊತೆಗೆ, ಟೀಮ್ ಇಂಡಿಯಾದ ಪ್ರಮುಖ ನೆರವು ಸಿಬ್ಬಂದಿ ಮತ್ತು ಕೆಲವು ಆಟಗಾರರೊಂದಿಗೆ ಅಭಿಷೇಕ್ ಹೊಂದಿದ್ದ ಭಿನ್ನಾಭಿಪ್ರಾಯವೂ ಕಾರಣವೆಂದು ಹೇಳಲಾಗಿದೆ.
ಗೌತಮ್ ಗಂಭೀರ್, ಆಯ್ಕೆಗಾರರ ಅಧ್ಯಕ್ಷ ಅಜಿತ್ ಅಗರ್ಕರ್ ಹಾಗೂ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರಿದ್ದ ಸಭೆಯಲ್ಲಿ ಅಭಿಷೇಕ್ ಅವರನ್ನು ಸಹಾಯಕ ಕೋಚ್ ಹುದ್ದೆಯಿಂದ ವಜಾಗೊಳಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.