ನೈಋತ್ಯ ರೈಲ್ವೆ 2024-25ರ ಆರ್ಥಿಕ ವರ್ಷದಲ್ಲಿ ಸ್ಕ್ರ್ಯಾಪ್ ಮಾರಾಟದ ಮೂಲಕ ₹188.07 ಕೋಟಿ ಆದಾಯ ಗಳಿಸಿ ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ನೈಋತ್ಯ ರೈಲ್ವೆಯ ಇತಿಹಾಸದಲ್ಲೇ ಅತ್ಯಧಿಕ ಸ್ಕ್ರ್ಯಾಪ್ ಮಾರಾಟವಾಗಿದೆ.
2022-23ರ ಹಣಕಾಸು ವರ್ಷದ ₹180.52 ಕೋಟಿಯ ದಾಖಲೆಯನ್ನು ಮೀರಿಸಿದ್ದು, ಈ ವರ್ಷ, ಹಿಂದಿನ ದಾಖಲೆಗಿಂತ ಶೇ.4.2ರಷ್ಟು ಆದಾಯ ಹೆಚ್ಚಿಸಿದೆ. ಆಸ್ತಿ ನಿರ್ವಹಣೆ ಮತ್ತು ಆದಾಯ ವೃದ್ಧಿಯಲ್ಲಿಯೂ ಸಾಧನೆ ಮಾಡಿದೆ.
“ನಿರುಪಯುಕ್ತ ವಸ್ತುಗಳ ಹರಾಜು, ಸ್ಕ್ರ್ಯಾಪ್ ಹರಾಜು ಮಾಡಲು ನೈರುತ್ಯ ರೈಲ್ವೆಗೆ ₹160 ಕೋಟಿ ರೂ ಟಾರ್ಗೆಟ್ ನೀಡಲಾಗಿತ್ತು. ನೈರುತ್ಯ ರೈಲ್ವೆಯ ಮೂರು ವಿಭಾಗಗಳಿಂದ ₹188 ಕೋಟಿಗೆ ಮಾರಾಟ ಮಾಡಿದೆ. ಇದು ಟಾರ್ಗೆಟ್ ಮೀರಿದ ಸಾಧನೆ. ಕಳೆದ ವರ್ಷ ₹180 ಕೋಟಿ ಮೌಲ್ಯದ ಸ್ಕ್ರ್ಯಾಪ್ ಮಾರಾಟ ಮಾಡಲಾಗಿತ್ತು. ಈ ವರ್ಷ ಹಿಂದಿನ ದಾಖಲೆಯನ್ನು ಮೀರಿಸಿದೆ” ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಸ್ಕ್ರ್ಯಾಪ್ ಮಾರಾಟದ ಬಗ್ಗೆ ಮಾಹಿತಿ ತಿಳಿಸಿದ್ದಾರೆ.
“ಸ್ಕ್ರ್ಯಾಪ್ ಅಂದ್ರೆ ರೈಲಿನ ಬಿಡಿಭಾಗಳು, ಹಳಿಗಳು, ಹಳಿಗೆ ಜೋಡಿಸಿದ ನಟ್ ಮತ್ತು ಬೋಲ್ಟ್ಗಳು, ಹಳೆಯದಾದ ವ್ಯಾಗನ್‌ಗಳು, ಜಖಂಗೊಂಡಿರುವ ಬೋಗಿಗಳು, ಸೀಟುಗಳು, ಸೀಟ್ ಕವರ್ಗಳೂ ಸೇರಿದಂತೆ ರೈಲ್ವೆ ನಿಲ್ದಾಣ, ಕಚೇರಿಗಳಲ್ಲಿ ನಿರುಪಯುಕ್ತವಾಗಿ ಬಿದ್ದು ಹಾಗೂ ಜಂಗು ಹಿಡಿದ ವಸ್ತುಗಳನ್ನು ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಸ್ಕ್ರ್ಯಾಪ್ ಮಾರಾಟವನ್ನು ಸಂಪೂರ್ಣ ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಸುವ ಸಲುವಾಗಿ, ಭಾರತೀಯ ರೈಲ್ವೆಯ ಆನ್ಲೈನ್ ಇ-ಹರಾಜು ವೇದಿಕೆ www.ireps.gov.in ಮೂಲಕ ಸಾರ್ವಜನಿಕ ಹರಾಜುಗಳು ನಡೆಸುತ್ತದೆ. ಯಾರು ಬೇಕಾದರೂ ಬಿಡ್ಡಿಂಗ್ನಲ್ಲಿ ಪಾಲ್ಗೊಳ್ಳಬಹುದು” ಎಂದರು.
“ಪ್ರಮುಖ ಮುಖ್ಯ ಸಾಮಗ್ರಿಗಳ ವ್ಯವಸ್ಥಾಪಕ ಮಾಮನ್ ಸಿಂಗ್ ಅವರ ನಿರಂತರ ಮಾರ್ಗದರ್ಶನದಡಿ, ನೈಋತ್ಯ ರೈಲ್ವೆ ತ್ರೈಮಾಸಿಕ ಆಧಾರದ ಮೇಲೆ ತೀವ್ರ ಸ್ಕ್ರ್ಯಾಪ್ ಮ್ಯಾಪಿಂಗ್ ಕಾರ್ಯಾಚರಣೆಯಲ್ಲಿ ಸುಮಾರು 19,745 ಮೆಟ್ರಿಕ್ ಟನ್ ಹಳಿಗಳು ಹಾಗೂ ಫಿಟ್ಟಿಂಗ್‌ಗಳು, 4 ಸೇವೆ ಸಾಧ್ಯವಿರುವ ಲೋಕೋಮೋಟಿವ್‌ಗಳು, 38 ವ್ಯಾಗನ್‌ಗಳು, 56 ಜಖಂಗೊಂಡಿರುವ ಬೋಗಿಗಳು, 11,532 ಮೆಟ್ರಿಕ್ ಟನ್ ಕಬ್ಬಿಣ ಸ್ಕ್ರ್ಯಾಪ್ ಮತ್ತು 1,500 ಮೆಟ್ರಿಕ್ ಟನ್ ಕಬ್ಬಿಣೇತರ ಸ್ಕ್ರ್ಯಾಪ್‌ಗಳನ್ನು ಗುರುತಿಸಿ ಮಾರಾಟ ಮಾಡಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ, ₹3 ಲಕ್ಷ ದಂಡ
“ನೈಋತ್ಯ ರೈಲ್ವೆಗೆ ಭಾರೀ ಆದಾಯ ಲಭಿಸುವುದರ ಜತೆಗೆ, ನಿಲ್ದಾಣಗಳು, ಹಳಿಗಳು, ಡಿಪೋಗಳು ಮತ್ತು ಶೆಡ್‌ಗಳಲ್ಲಿರುವ ಅನವಶ್ಯಕ ಸ್ಕ್ರ್ಯಾಪ್‌ಗಳನ್ನು ತೆರವುಗೊಳಿಸಿ ಸೌಂದರ್ಯವನ್ನು ಹೆಚ್ಚಿಸುವ ಮತ್ತು ಪರಿಸರಸ್ನೇಹಿ ಪರಿಸರವನ್ನು ಒದಗಿಸುವುದರಲ್ಲಿಯೂ ಕೂಡ ಸಹಾಯವಾಗಿದೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ʼಪ್ರಸಕ್ತ ವರ್ಷ ನೈರುತ್ಯ ರೈಲ್ವೆ ಭಾರತೀಯ ರೈಲ್ವೆಯಲ್ಲಿ ಅತೀ ಹೆಚ್ಚು ಸ್ಕ್ರ್ಯಾಪ್ ಮಾರಾಟದಿಂದ ಹೆಚ್ಚು ಆದಾಯ ಗಳಿಸಿದ ವಲಯʼವೆಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.