ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ತುಂಬಿ ತುಂಬಿ
ಗಿಡುವಿನ ಮೇಲಣ ತುಂಬಿ
ಕೂಡೆ ವಿಕಸಿತವಾಯಿತ್ತು,
ತುಂಬಿ ನೋಡಾ!
ಆತುಮ ತುಂಬಿ ತುಂಬಿ,
ಪರಮಾತುಮ ತುಂಬಿ ತುಂಬಿ ನೋಡಾ! ಗುಹೇಶ್ವರನೆಂಬ ಲಿಂಗಕ್ಕೆ ಎರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ!
ಪದಾರ್ಥ:
ಗಿಡುವಿನ = ಗಿಡದ
ತುಂಬಿ = ದುಂಬಿ
ಆತುಮ = ಆತ್ಮ
ನಿಬ್ಬೆರಗು = ಒಂದಾಗು, ರೋಮಾಂಚಿತ
ವಚನಾರ್ಥ:
ಪದ ಚಮತ್ಕಾರವುಳ್ಳ ಈ ವಚನಕ್ಕೆ ಎರಡು ನೋಟಗಳಿವೆ. ಹೊರನೋಟ ಮತ್ತು ಒಳನೋಟ. ಹೊರನೋಟದಲ್ಲಿ ಒಂದು ಹೂ ಬಿಟ್ಟ ಗಿಡವಿದೆ. ಹೂವಿನ ಪರಿಮಳದಿಂದ ಆಕರ್ಷಿತವಾದ ದುಂಬಿಯೊಂದು ಆ ಗಿಡದ ಮೇಲೆ ಬಂದು ಕುಳಿತಿದೆ. ಪರಿಮಳದ ಪರಿಣಾಮದಿಂದ ದುಂಬಿ ಕೂಡ ವಿಕಸಿತಗೊಂಡಿದೆ. ರೋಮಾಂಚನಗೊಂಡಿದೆ. ಮತ್ತೆ ಮತ್ತೆ ಹೂಗಳ ಮೇಲೆ ಎರಗಿ ಮಧುವ ಹೀರಿ ನಿಬ್ಬೆರಗಾಗುತ್ತಿದೆ. ಒಳನೋಟದಲ್ಲಿ ಗಿಡವೆಂದರೆ ಮಾನವ ದೇಹ. ದೇಹದ ಒಳ ಹೊರಗೆ ಬುದ್ಧಿ ಮನಸ್ಸು ರೂಪ ಎಂಬ ಹೂ ಬಿಟ್ಟಿದೆ. ಆತ್ಮ ಎಂಬ ದುಂಬಿ ದೇಹವನ್ನು ಆವರಿಸಿ ತುಂಬಿಕೊಂಡಿದೆ. ದೇಹ ಮತ್ತು ಆತ್ಮ ಒಂದನ್ನೊಂದು ತಬ್ಬಿಕೊಂಡಿವೆ. ಪರಸ್ಪರ ತುಂಬಿಕೊಳ್ಳುತ್ತಿವೆ. ಹೀಗೆ ತುಂಬುವ ತುಂಬಿಕೊಳ್ಳುವ ಪ್ರಕ್ರಿಯೆಯಲ್ಲಿ ಪರಮಾತ್ಮನಿದ್ದಾನೆ. ಆ ಪರಮಾತುಮನನ್ನು ತುಂಬಿ ತುಂಬಿ ನೋಡಬೇಕು. ಪರಮಾತ್ಮನಲ್ಲಿ ಆತ್ಮ ಒಂದಾಗಬೇಕು. ಆಗ ಈ ದೇಹ ಅದನ್ನು ನಿಬ್ಬೆರಗಾಗಿ ನೋಡಬೇಕು. ತುಂಬಿ ನೋಡಾ! ತುಂಬಿ ತುಂಬಿ ನೋಡಾ! ತುಂ ತುಂ ತುಂ ತುಂ ತುಂಬಿ ನೋಡಾ!
ಪದಪ್ರಯೋಗಾರ್ಥ:
ತುಂಬಿ ಮತ್ತು ದುಂಬಿ ಎಂಬ ಎರಡು ಪದಗಳ ಅನನ್ಯವಾದ ಬಳಕೆ ಈ ವಚನದಲ್ಲಿದೆ. ತುಂಬಿ ಮತ್ತು ದುಂಬಿ ಪದಗಳನ್ನು ಅದಲು ಬದಲಾಗಿ ಉಪಯೋಗಿಸಿ ವಚನವನ್ನು ಓದುತ್ತಾ ಹೋದಂತೆಲ್ಲಾ ವಚನದ ಅರ್ಥ ಹೊರಳುತ್ತಾ ಹೋಗಿ ಅಚ್ಚರಿಗೊಳಿಸುತ್ತದೆ. ಈ ಬಗೆಯ ಪದ ಮಾಂತ್ರಿಕತೆಯನ್ನು ಬೇಂದ್ರೆಯವರ ಕವನದಲ್ಲಿ ಕಾಣಬಹುದು.
“ತುಂ ತುಂ ತುಂ ತುಂ ತುಂ ತುಂ ತುಂ ತುಂ ತುಂಬಿ ಬಂದಿತ್ತ ತಂಗೀ ತುಂಬಿ ಬಂದಿತ್ತ, ಹೂವಿಗಿರುವ ಕಂಪು ಇತ್ತ, ಹಾಡಿಗಿರುವ ಇಂಪು ಇತ್ತ, ಜೀವದ ಮಾತು ಕಟ್ಟಿಧಾಂಗ ಎದ್ಯಾಗ ನಟ್ಟಿತ್ತ, ವರ್ಮದ ಮಾತು ಆಡಿಧಾಂಗ ಮರ್ಮಕ ಮುಟ್ಟಿತ್ತ, ಬೆಳಕಿಗೆ ಮರಳಿ ಕಮಲವರಳಿ ಜೇನ ಬಿಟ್ಟಿತ್ತ ತಂಗೀ ತುಂಬಿ ಬಂದಿತ್ತ ತುಂ ತುಂ ತುಂಬಿ ಬಂದಿತ್ತ.”
ಬೇಂದ್ರೆಯವರು ಬರೆದಿರುವ ಬಸವಣ್ಣನ ಜೀವನಚರಿತ್ರೆಯ ನಾಟಕ “ತಲೆದಂಡ”ದಲ್ಲಿ ಈ ಅದ್ಭುತ ಕವಿತೆಯಿದೆ. ಗಿಡದ ಮೇಲಿನ ದುಂಬಿ ಕೂಡ ವಿಕಸಿತವಾಯಿತ್ತ ದುಂಬಿ ನೋಡಾ ಅಂತ ಅಲ್ಲಮ ಅಂದರೆ ಬೆಳಕಿಗೆ ಮರಳಿ ಕಮಲವರಳಿ ಜೇನ ಬಿಟ್ಟಿತ್ತ ತಂಗೀ ತುಂಬಿ ಬಂದಿತ್ತ ಅಂತ ಬೇಂದ್ರೆ ಅನ್ನುತ್ತಾರೆ.
ಈ ಇಬ್ಬರ ಪದಪ್ರಯೋಗದಲ್ಲಿರುವ ಧ್ವನಿ ಮತ್ತು ಭಾವ ಒಂದೇ. ಬೇಂದ್ರೆಯವರೇ ತಮ್ಮ ಕವನವನ್ನು ಸ್ವತಃ ವಾಚಿಸಿ ವಿಶ್ಲೇಷಿಸಿ ವಿಭಿನ್ನವಾಗಿ ಹಾಡಿದ್ದು ಯೂಟ್ಯೂಬ್‌ನಲ್ಲಿದೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ವಿಷಕ್ಕೆ ರುಚಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಇಲ್ಲದ ಇಲ್ಲವೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಸವೆಯಷ್ಟು ಸುಖ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.