ತವರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸತತ ಮೂರನೇ ಸೋಲಾಗಿದೆ. ಮಳೆಯ ಆಟದಲ್ಲಿ ಆರ್‌ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಜಿಗಿದಿದೆ.
ಮಳೆಯಿಂದಾಗಿ 7.30ಕ್ಕೆ ಆರಂಭವಾಗಿದ್ದ ಪಂದ್ಯ 2 ಗಂಟೆ ತಡವಾಗಿ 9.45ಕ್ಕೆ ಆರಂಭವಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. ಕೊನೆಯಲ್ಲಿ ಟಿಮ್ ಡೇವಿಡ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಆರ್‌ಸಿಬಿ 9 ವಿಕೆಟ್ ನಷ್ಟಕ್ಕೆ 95 ರನ್ ಪೇರಿಸಿತು.
ಸುಲಭದ ಸವಾಲನ್ನು ಬೆನ್ನಟ್ಟಿದ ಪಂಜಾಬ್ 12.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 98 ರನ್ ಹೊಡೆದು ಜಯಗಳಿಸಿತು. ಈ ಮೊದಲು ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯವನ್ನು ಸೋತಿತ್ತು. ಈಗ ಮತ್ತೆ ತವರಿನಲ್ಲಿ ಪಂಜಾಬ್ ವಿರುದ್ಧ ಪರಾಭವಗೊಂಡಿದೆ.
ಪಂಜಾಬ್ ಪರ ನೆಹಾಲ್ ವಧೇರಾ ಔಟಾಗದೇ 33 ರನ್ (19 ಎಸೆತ, 3 ಬೌಂಡರಿ, 3 ಸಿಕ್ಸ್) ಪ್ರಿಯಾಂಶ್ ಆರ್ಯ 16 ರನ್, ಪ್ರಭುಸಿಮ್ರಾನ್‌ಸಿಂಗ್ 13 ರನ್ ಹೊಡೆದು ಜಯವನ್ನು ತಂದುಕೊಟ್ಟರು.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ವಂಚಿಸಲು ಹೋಗಿ ಅಂಪೈರ್ ಕೈಗೆ ಸಿಕ್ಕಿಬಿದ್ದ ಸುನಿಲ್ ನರೈನ್, ಎನ್ರಿಕ್ ನೋಕಿಯಾ!
ಆರ್‌ಸಿಬಿ ಪರ ಸಾಲ್ಟ್ 4 ರನ್, ಕೊಹ್ಲಿ 1 ರನ್, ನಾಯಕ ಪಾಟೀದರ್ 23 ರನ್ (18 ಎಸೆತ, 1 ಬೌಂಡರಿ, 1 ಸಿಕ್ಸ್ ) ಹೊಡೆದು ಔಟಾದರು. 63 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿದ್ದರೂ ಕೊನೆಯಲ್ಲಿ ಡೇವಿಡ್ ಔಟಾಗದೇ ಸ್ಫೋಟಕ 50 ರನ್ (26 ಎಸೆತ, 5 ಬೌಂಡರಿ, 3 ಸಿಕ್ಸ್) ಹೊಡೆದು ತಂಡದ ಮೊತ್ತವನ್ನು 90 ರನ್‌ಗಳ ಗಡಿಯನ್ನು ದಾಟಿಸಿದರು. ಆರ್ಶ್‌ದೀಪ್ ಸಿಂಗ್, ಜಾನ್‌ಸೆನ್ ಚಹಲ್, ಹರ್‌ಪ್ರೀತ್ ಬಾರ್ ತಲಾ 2 ವಿಕೆಟ್ ಪಡೆದರು.
ಆರ್‌ಸಿಬಿಯಿಂದ ಹೀನಾಯ ದಾಖಲೆ
ಈ ಸೋಲಿನೊಂದಿಗೆ ಐಪಿಎಲ್ ಇತಿಹಾಸದಲ್ಲೇ ತವರು ಮೈದಾನದಲ್ಲಿ ಅತ್ಯಧಿಕ ಪಂದ್ಯಗಳಲ್ಲಿ ಸೋತ ತಂಡವೆಂಬ ಅಪಕೀರ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದೆ. ಇದಕ್ಕೂ ಮುನ್ನ ಇಂತಹದೊಂದು ಹೀನಾಯ ದಾಖಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಸರಿನಲ್ಲಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ತವರು ಮೈದಾನ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಈವರೆಗೆ 84 ಪಂದ್ಯಗಳನ್ನಾಡಿದೆ. ಈ ವೇಳೆ ಡಿಸಿ ಪಡೆ 45 ಪಂದ್ಯಗಳಲ್ಲಿ ಪರಾಜಯಗೊಂಡಿದೆ. ಈ ಮೂಲಕ ಐಪಿಎಲ್ನಲ್ಲಿ ತವರು ಮೈದಾನದಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಸೋತ ತಂಡವೆಂಬ ಅನಗತ್ಯ ದಾಖಲೆಯೊಂದು ಡೆಲ್ಲಿ ಕ್ಯಾಪಿಟಲ್ಸ್ ನಿರ್ಮಿಸಿತ್ತು.
ಇದೀಗ ಈ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುರಿದೆ. ಆರ್‌ಸಿಬಿ ತಂಡವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 94 ಪಂದ್ಯಗಳನ್ನು ಆಡಿದೆ. ಈ ವೇಳೆ ಬರೋಬ್ಬರಿ 46 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ತವರು ಮೈದಾನದಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಸೋತ ಅಪಕೀರ್ತಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನದಾಗಿಸಿಕೊಂಡಿದೆ.