ಐಪಿಎಲ್ 18ನೇ ಆವೃತ್ತಿಯ 35 ಮತ್ತು 36ನೇ ಪಂದ್ಯಗಳು ತೀವ್ರ ಹಣಾಹಣಿಯಲ್ಲಿ ನಡೆಯಲಿದ್ದು, ಎರಡೂ ಪಂದ್ಯಗಳಿಂದ ಪ್ರೇಕ್ಷಕರಿಗೆ ಭರ್ಜರಿ ಆಟದ ಮನರಂಜನೆ ಸಿಗಲಿದೆ. ಇಂದಿನ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಸೆಣಸಲಿವೆ.
ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಡೆಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಯೋಜನೆ ಮಾಡಿಕೊಂಡಿದ್ದರೆ, ಮೂರನೇ ಸ್ಥಾನದಲ್ಲಿರುವ ಗುಜರಾತ್ ಈ ಪಂದ್ಯವನ್ನು ಗೆದ್ದು ಅಗ್ರ ಸ್ಥಾನಕ್ಕೇರುವ ಉತ್ಸಾಹದಲ್ಲಿದೆ.
ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರ ಪಡೆಯೇ ಇದೆ. ಗುಜರಾತ್ ತವರಿನಲ್ಲಿ ಡೆಲ್ಲಿ ಅಜೇಯ ದಾಖಲೆಯನ್ನು ಹೊಂದಿದೆ. ಈ ಅಂಗಳದಲ್ಲಿ ಈ ಮೊದಲು ಆಡಿದ 2 ಪಂದ್ಯಗಳಲ್ಲೂ ಡೆಲ್ಲಿ ತಂಡ ಗೆಲುವು ಸಾಧಿಸಿದೆ. ಈ ಮೈದಾನದಲ್ಲಿ ಒಟ್ಟು ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆಲುವು ಸಾಧಿಸಿದೆ. ಈ ಪಿಚ್‌ನಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡುವ ಸಾಧ್ಯತೆಯಿದೆ. ಗುಜರಾತ್ ಪಿಚ್ ಆರಂಭದಲ್ಲಿ ಬ್ಯಾಟರ್‌ಗಳಿಗೆ ಸಹಾಯ ಮಾಡಲಿದ್ದು, ಚೆಂಡು ರೂಢಿಯಾದ ನಂತರ, ಬೌಲರ್‌ಗಳಿಗೆ ನೆರವು ಲಭಿಸಲಿದೆ.
ಗುಜರಾತ್ ಜೈಂಟ್ಸ್ ತಂಡದ ಆರಂಭಿಕರಾದ ಶುಭಮನ್ ಗಿಲ್ ಹಾಗೂ ಬಿ ಸಾಯಿ ಸುದರ್ಶನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಇಬ್ಬರೂ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವ ಕನಸು ಕಾಣುತ್ತಿದ್ದಾರೆ. ಸಾಯಿ ಸುದರ್ಶನ್ ಈ ಪಂದ್ಯದಲ್ಲಿ ಮಿಂಚಿದರೆ ಮತ್ತೆ ಇವರ ಮುಡಿಗೆ ಆರೆಂಜ್ ಕ್ಯಾಪ್ ಸೇರಲಿದೆ. ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್ ತಂಡದ ಆಧಾರಸ್ತಂಭ. ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುವ ಕಲೆಯನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಉಳಿದಂತೆ ಶಾರುಖ್ ಖಾನ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಟಿಯಾ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಬೇಕಿದೆ. ಗುಜರಾತ್ ತಂಡದ ಬೌಲಿಂಗ್ ವಿಭಾಗಕ್ಕೆ ಬಲ ನೀಡಿದ್ದು ಮೊಹಮ್ಮದ್ ಸಿರಾಜ್ ಹಾಗೂ ಕನ್ನಡಿಗ ಪ್ರಸಿದ್ಧ ಕೃಷ್ಣ. ಇವರಿಬ್ಬರೂ ಅವಕಾಶ ನೀಡಿದಾಗಲೆಲ್ಲ ಬಿಗುವಿನ ದಾಳಿ ನಡೆಸಿದ್ದಾರೆ. ಸ್ಪಿನ್ ವಿಭಾಗದಲ್ಲಿ ಖ್ಯಾತ ಸ್ಪಿನ್ ಬೌಲರ್ ರಶೀದ್ ಖಾನ್ ಇದ್ದು, ಇವರಿಗೆ ಸಾಯಿ ಕಿಶೋರ್ ಉತ್ತಮ ಜೊತೆ ನೀಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬಲಾಢ್ಯ ಬ್ಯಾಟರ್‌ಗಳು ಇದ್ದು ತಂಡಕ್ಕೆ ನೆರವಾಗುತ್ತಿದ್ದಾರೆ. ಶನಿವಾರ ಎಲ್ಲರ ಕಣ್ಣುಗಳು ಕನ್ನಡಿಗ ಕೆಎಲ್ ರಾಹುಲ್ ಮೇಲೆ ನೆಟ್ಟಿರಲಿವೆ. ಇವರು ಪ್ರಸಕ್ತ ಸರಣಿಯಲ್ಲಿ ಅಮೋಘ ಫಾರ್ಮ್‌ನಲ್ಲಿದ್ದು, ಎದುರಾಳಿಗಳ ನಿದ್ದೆಗೆಡಿಸಿದ್ದಾರೆ. ಅಭಿಷೇಕ್ ಪೋರೆಲ್, ಕರುಣ್ ನಾಯರ್, ಟ್ರಿಸ್ಟನ್ ಸ್ಟಬ್ಸ್, ಆಶುತೋಷ್ ಶರ್ಮಾ ಭರವಸೆ ಮೂಡಿಸಿದ್ದಾರೆ. ಯುವ ಆಲ್‌ರೌಂಡರ್ ವಿಪ್ರಜ್ ನಿಗಮ್ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನೆರವಾಗುತ್ತಿದ್ದಾರೆ. ವೇಗದ ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್ ತಮ್ಮ ಯಾರ್ಕರ್‌ಗಳಿಂದ ಎದುರಾಳಿಗಳಿಗೆ ಕಾಡಬಲ್ಲರು. ಮೋಹಿತ್ ಶರ್ಮಾ, ಮುಕೇಶ್ ಕುಮಾರ್ ಸಹ ಬಿಗುವಿನ ದಾಳಿ ಸಂಘಟಿಸಬಲ್ಲರು. ಸ್ಪಿನ್ ವಿಭಾಗದಲ್ಲಿ ಕುಲ್‌ದೀಪ್ ಯಾದವ್ ಪ್ರಮುಖ ಅಸ್ತ್ರವಾಗಿದ್ದು, ಎದುರಾಳಿ ಬ್ಯಾಟರ್‌ಗಳ ರನ್ ಕದಿಯುತ್ತಿದ್ದಾರೆ.
ಗುಜರಾತ್ ಟೈಟಾನ್ಸ್ 11ರ ಬಳಗ:
ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶೆರ್ಫೇನ್ ರುದರ್ಫೋರ್ಡ್, ಶಾರೂಖ್ ಖಾನ್, ರಾಹುಲ್ ತೆವಾಟಿಯಾ, ಅರ್ಷದ್ ಖಾನ್, ರಶೀದ್ ಖಾನ್, ರವಿ ಶ್ರೀನಿವಾಸನ್, ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ (ಇಂಪ್ಯಾಕ್ಟ್ ಪ್ಲೇಯರ್)
ಡಿಸಿ ಸಂಭಾವ್ಯ 11ರ ಬಳಗ:
ಅಕ್ಷರ್ ಪಟೇಲ್ (ನಾಯಕ), ಜೇಕ್ ಫ್ರೇಸರ್-ಮೆಕ್‌ಗುರ್ಕ್/ಡೊನೊವನ್ ಫೆರೇರಾ/ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆ ಎಲ್ ರಾಹುಲ್ (ವಿಕೆಟ್ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ಮೋಹಿತ್ ಶರ್ಮಾ, ಮುಖೇಶ್ ಕುಮಾರ್ (ಇಂಪ್ಯಾಕ್ಟ್ ಪ್ಲೇಯರ್)
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ಲಖನೌ ಗೆಲುವಿನ ಓಟಕ್ಕೆ ರಾಜಸ್ಥಾನ ತಡೆ ನೀಡುತ್ತಾ?
ಐಪಿಎಲ್ 2025 ರ 36ನೇ ಪಂದ್ಯವು ರಾಜಸ್ಥಾನ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವೆ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ರಾಜಸ್ಥಾನ ಸಂಪೂರ್ಣವಾಗಿ ವಿಫಲವಾಗಿದೆ. ಆದರೆ ಲಖನೌ ಸೂಪರ್ ಜೈಂಟ್ಸ್ ತಂಡ ಸ್ಥಿರ ಪ್ರದರ್ಶನ ನೀಡುತ್ತಿದೆ.
ತವರಿನಲ್ಲಿ ಲಖನೌ ತಂಡವನ್ನು ರಾಜಸ್ಥಾನ ಮಣಿಸುವ ನಿರೀಕ್ಷೆಯಲ್ಲಿದೆ. ರಾಜಸ್ಥಾನ ರಾಯಲ್ಸ್ ತಂಡವು ಸತತ ಮೂರು ಸೋಲುಗಳನ್ನು ಕಂಡಿದ್ದು, ಗೆಲುವಿನ ಲಯಕ್ಕೆ ಮರಳಲು ಸಿದ್ಧವಾಗುತ್ತಿದೆ. ಇತ್ತ ಸತತ ಮೂರು ಪಂದ್ಯಗಳನ್ನು ಗೆದ್ದಿರುವ ಲಖನೌ ಸೂಪರ್ ಜೈಂಟ್ಸ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮತ್ತೊಂದು ಜಯವನ್ನು ದಾಖಲಿಸಲು ತಂತ್ರ ರೂಪಿಸಿದೆ.
ರಾಜಸ್ಥಾನ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೂ ನಡೆದ 58 ಐಪಿಎಲ್ ಪಂದ್ಯಗಳಲ್ಲಿ 20 ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದಿದ್ದರೆ, 37 ಪಂದ್ಯಗಳನ್ನು ಗುರಿ ಬೆನ್ನಟ್ಟಿದ ತಂಡಗಳು ಜಯ ಸಾಧಿಸಿವೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಆಯ್ಕೆಯಾಗಿದೆ.
ರಾಜಸ್ಥಾನ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವೆ ಐಪಿಎಲ್‌ನಲ್ಲಿ 5 ರೋಚಕ ಪಂದ್ಯಗಳು ನಡೆದಿವೆ. ರಾಜಸ್ಥಾನ 4 ರಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದರೆ, ಲಖನೌ ತಂಡ 1 ರಲ್ಲಿ ಮಾತ್ರ ಜಯ ಕಂಡಿದೆ. ತವರಿನಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವಿನ ಉತ್ಸಾಹದಲ್ಲಿದೆ. ಆಟಗಾರರಿಂದ ಸಂಘಟಿತ ಪ್ರದರ್ಶನ ಕಂಡು ಬರುತ್ತಿಲ್ಲ. ಐಪಿಎಲ್ 2025 ರಲ್ಲಿ ಸಿಎಸ್‌ಕೆ ವಿರುದ್ಧ ವನಿಂದು ಹಸರಂಗ 35 ರನ್‌ಗಳಿಗೆ 4 ವಿಕೆಟ್ ಪಡೆದಿರುವುದನ್ನು ಹೊರತುಪಡಿಸಿದರೆ, ಅವರಿಂದ ಬೇರೆ ಉತ್ತಮ ಪ್ರದರ್ಶನ ಬಂದಿಲ್ಲ. ಆದಾಗ್ಯೂ, ಮುಂಬರುವ ಪಂದ್ಯಗಳಲ್ಲಿ ಅವರು ಒಳ್ಳೆಯ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
ಆರ್‌ಆರ್ ಸಂಭಾವ್ಯ ಬಳಗ:
ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್‌ಕೀಪರ್), ರಿಯಾನ್ ಪರಾಗ್, ನಿತೀಶ್ ರಾಣಾ, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಕುಮಾರ್ ಕಾರ್ತಿಕೇಯ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ
ಎಲ್‌ಎಸ್‌ಜಿ ಸಂಭಾವ್ಯ ಬಳಗ:
ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್‌ಕೀಪರ್), ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ಅವೇಶ್ ಖಾನ್, ಪ್ರಿನ್ಸ್ ಯಾದವ್, ದಿಗ್ವೇಶ್ ರಾಠಿ.
ಪಂದ್ಯ ಆರಂಭ: ಸಂಜೆ 7.30
ಎರಡೂ ಪಂದ್ಯಗಳ ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ ಸ್ಟಾರ್