ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ವಾಜಮಂಗಲ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಭಾವಚಿತ್ರವಿದ್ದ ಬ್ಯಾನರ್‌ಗಳನ್ನು ಕೆಲ ಕಿಡಿಗೇಡಿಗಳು ವಿರೂಪಗೊಳಿಸಿದ್ದಲ್ಲದೇ ಅಲ್ಲಿದ್ದ ನಾಮಫಲಕಗಳಿಗೆ ಮಲ ಬಳಿದು ಅಪಮಾನಿಸಿ ವಿಕೃತಿ ಮೆರೆದಿದ್ದನ್ನು ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಕಿಡಿಗೇಡಿಗಳು ಅಂಬೇಡ್ಕರ್ ಬ್ಯಾನರ್‌ಗಳನ್ನು ಬ್ಲೇಡ್ ಹಾಗೂ ಚಾಕುವಿನಿಂದ ಹರಿದು ವಿರೂಪಗೊಳಿಸಿದ್ದಲ್ಲದೇ ಫಲಕದಲ್ಲಿರುವ ಬಾಬಾಸಾಹೇಬರ ಭಾವಚಿತ್ರಕ್ಕೆ ಮಲ ಬಳಿದಿರುವ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಮಹಾ ಮಾನವತಾವಾದಿ ಮೇಲೆ ಇಂತಹ ಹೀನ ಕೃತ್ಯ ಎಸಗಿದ್ದನ್ನು ಯಾವ ಭಾರತೀಯನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ.

ಸ್ಥಳೀಯ ಸಾಮರಸ್ಯ, ಸೌಹಾರ್ದವನ್ನು ಕೆಡಿಸಲು ಈ ಹೀನ ಕೃತ್ಯ ಮಾಡಿದ್ದಾರೆ. ಇದನ್ನು ಯಾರೇ ಎಸಗಿರಲಿ ಅಂತಹವರನ್ನು ಆದಷ್ಟು ಬೇಗ ಬಂಧಿಸಿ ಕಠೀಣ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಅಲ್ಲಿಯ ಪೋಲಿಸ್ ವರಿಷ್ಠಾಧಿಕಾರಿಗೆ ನವೀದ್ ಮುಲ್ಲಾ ಒತ್ತಾಯಿಸಿದ್ದಾರೆ.