ಸಿಡಿಲು: ಅಚಾನಕ್ ಅಪಘಾತವಲ್ಲ; ಸಿದ್ಧತೆಯ ಕೊರತೆಯಿಂದ ಸಂಭವಿಸಿದ ದುರಂತ!

Date:

Advertisements

ಕಳೆದ ಕೆಲವು ದಿನಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಆಗುತ್ತಿರುವ ಸಿಡಿಲು ಸಹಿತ ಧಾರಾಕಾರ ಮಳೆಯ ಪರಿಣಾಮವಾಗಿ ಹಲವಾರು ಮಂದಿ ಸಾವಿಗೀಡಾಗಿದ್ದಾರೆ ಜತೆಗೆ ಸಾಕಷ್ಟು ಪ್ರಮಾಣದ ಹಾನಿಯುಂಟಾಗಿದೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟಾರೆ ಪ್ರಾಕೃತಿಕ ವಿಪತ್ತನ್ನು ಹೊರತುಪಡಿಸಿ  ಸಿಡಿಲಿನಿಂದಲೇ ಸುಮಾರು 244 ಜನರು ಜೀವ ಕಳೆದುಕೊಂಡಿದ್ದಾರೆ ಎಂಬುದಾಗಿ ವರದಿಗಳು ಹೇಳುತ್ತಿವೆ. ಇದು ಪರಿಸ್ಥಿತಿಯ ಜಟಿಲತೆ ಮತ್ತು ಸರ್ಕಾರದ ಮುಂದಿರುವ ಸವಾಲು ಕುರಿತ ಗಂಭೀರ ಚಿತ್ರಣ ತೆರೆದಿಡುತ್ತದೆ.

ಕರ್ನಾಟಕ ರಾಜ್ಯವೊಂದರಲ್ಲೇ ಕಳೆದ 2022-23ರಲ್ಲಿ 100, 2023-24ರಲ್ಲಿ 61 ಹಾಗೂ 2024-25ರಲ್ಲಿ (ಇಲ್ಲಿವರೆಗೆ) 83 ಮಂದಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. 2011-2021ರ (10 ವರ್ಷಗಳ ಅವಧಿ) ಅವಧಿಯಲ್ಲಿ ಒಟ್ಟು 812 ಜನರು ಸಿಡಿಲಿನಿಂದ ಜೀವ ಕಳೆದುಕೊಂಡಿದ್ದಾರೆ. ಸರ್ಕಾರ ಹಾಗೂ ಇಲಾಖೆಯ ಹಲವು ಮುಂಜಾಗ್ರತಾ ಕ್ರಮಗಳ ಹೊರತಾಗಿಯೂ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದು ಸರ್ಕಾರಕ್ಕೂ ಸವಾಲಾಗಿ ಪರಿಣಮಿಸಿದೆ.

ಯಾವುದೇ ನೈಸರ್ಗಿಕ ವಿಕೋಪವನ್ನು ಹೆಚ್ಚಾಗಿ ದುಡಿಯುವ ವರ್ಗ ಎದುರಿಸುತ್ತದೆ. ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವ ರೈತರು, ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಹೆಚ್ಚು ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಹೆಚ್ಚಾಗಿ ಸಿಡಿಲಿಗೆ ತುತ್ತಾಗುತ್ತಾರೆ.

Advertisements

ಸರ್ಕಾರ ಮತ್ತು ಹವಾಮಾನ ಇಲಾಖೆಸಿಡಿಲು, ಪ್ರವಾಹ, ಭೂಕಂಪ ಮತ್ತು ಇತರ ನೈಸರ್ಗಿಕ ವಿಕೋಪಗಳನ್ನು ನಿಯಂತ್ರಿಸಲು ಮತ್ತು ಜನರ ಸುರಕ್ಷತೆಗಾಗಿ ಹಲವು ಮುಂಜಾಗ್ರತಾ ಕ್ರಮಗಳನ್ನು ತಂದಿದೆ. ಅವುಗಳಲ್ಲಿ..

ಸಿಡಿಲು, ಮಳೆ ಮತ್ತು ಹವಾಮಾನ ಮುನ್ಸೂಚನೆ:

Damini” ಮತ್ತು “Sidilu” : ಹವಾಮಾನ ಇಲಾಖೆಯು “Damini” ಮತ್ತು “Sidilu” ಎಂಬ ಆಪ್‌ಗಳನ್ನು ಜನರಿಗೆ ಪರಿಚಯಿಸಿದೆ. ಇವು 30–45 ನಿಮಿಷಗಳ ಒಳಗಾಗಿ ಸಿಡಿಲು ಬಡಿಯುವ  ಮುನ್ನೆಚ್ಚರಿಕೆಗಳನ್ನು ನೀಡುತ್ತವೆ. ಈ ಆಪ್‌ಗಳಲ್ಲಿ ಹೆಚ್ಚು ಮಳೆಯಾಗುವುದು, ಭಾರೀ ಗಾಳಿ, ಸಿಡಿಲು ಉಂಟಾಗುವ ಸಂದರ್ಭಗಳಲ್ಲಿ ಕಡಿಮೆ ಅಪಾಯಕ್ಕೆ ಹಳದಿ ದೀಪ, ಮಧ್ಯಮಕ್ಕೆ ಕೇಸರಿ ಹಾಗೂ ತೀವ್ರ ಮಟ್ಟದ ಅಪಾಯವಿದ್ದರೆ ಕೆಂಪು ದೀಪಗಳ ಮೂಲಕ ಮುನ್ಸೂಚನೆ ನೀಡುತ್ತವೆ.

ʼಸಿಡಿಲುʼ ಕುರಿತು ಸರ್ಕಾರ ಹಾಗೂ ವಿವಿಧ ಸಂಸ್ಥೆಗಳು ಸಮಾಜದ ಎಲ್ಲಾ ಹಂತಗಳ ಜನರಿಗೆ ಜಾಗೃತಿ ಮೂಡಿಸಲು ಆಗಾಗ್ಗೆ ಕಾರ್ಯಕ್ರಮಗಳು ಹಾಗೂ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತವೆ.

ಸರ್ಕಾರಿ ಶಾಲೆಗಳಲ್ಲಿ “ಜೀವನ ರಕ್ಷಣಾ ಶಿಕ್ಷಣ” ಅಡಿಯಲ್ಲಿ ಸಿಡಿಲು ಬಡಿತದಿಂದ ರಕ್ಷಣೆ ಕುರಿತು ಪಾಠಗಳು, ವಿಜ್ಞಾನ ದಿನ, ಪರಿಸರ ದಿನ, ಹವಾಮಾನ ದಿನಾಚರಣೆಸಂದರ್ಭಗಳಲ್ಲಿ”ಸಿಡಿಲು ಬಡಿತದಲ್ಲಿ ಏನು ಮಾಡಬೇಕು/ಮಾಡಬಾರದು?” ಎಂಬುದರ ಕುರಿತ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಗ್ರಾಮ ಪಂಚಾಯತ್‌ಗಳು ಮತ್ತು ತಹಶೀಲ್ದಾರ್ ಕಚೇರಿಗಳು ಸೇರಿ ಗ್ರಾಮೀಣ ಜನರಿಗೆ ಸರಳ ಭಾಷೆಯಲ್ಲಿ ಮಾಹಿತಿ ನೀಡುವ ಕಾರ್ಯಕ್ರಮಗಳು ನಡೆಸುತ್ತವೆ. ಮುಂದುವರೆದು ದೂರದ ಹಳ್ಳಿಗಳಲ್ಲಿ ಲೌಡ್‌ಸ್ಪೀಕರ್ ಮೂಲಕ ಮುನ್ನೆಚ್ಚರಿಕೆ ಸಂದೇಶ ಪ್ರಸಾರ ಮಾಡುವ ಕಾರ್ಯಕ್ರಮಗಳು ಹೆಚ್ಚೆಚ್ಚು ಆಗಬೇಕು. ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ತಂಡಗಳು ಕಡಿಮೆ ತೀವ್ರತೆಯ ಸಿಡಿಲಿಗೆ ಒಳಗಾದಾಗ ಪ್ರಾಥಮಿಕ ಪರಿಹಾರ ನೀಡುವುದು ಹೇಗೆ ಎಂಬುದನ್ನು ಪಬ್ಲಿಕ್ ಡೆಮೊನ್ಸ್‌ಟ್ರೇಶನ್ ಮೂಲಕ ತೋರಿಸಲಾಗುತ್ತದೆ.

ಸರ್ಕಾರ ಹಲವು ಕಾರ್ಯಕ್ರಮಗಳನ್ನೇನೋ ತಂದಿದೆ. ಆದರೆ ಇದು ನಿಜಕ್ಕೂ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬಂದಿದೆಯೇ ಎನ್ನುವುದು ಪ್ರಶ್ನೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮಾಹಿತಿ ತಲುಪಿಸುವ, ವಿಕೋಪಗಳಿಂದ ರಕ್ಷಿಸಿಕೊಳ್ಳಲು ಅವರನ್ನು ತರಬೇತುಗೊಳಿಸುವ ಕಾರ್ಯಗಳು ಮತ್ತಷ್ಟು ಆಗಬೇಕು.

ಇತ್ತೀಚಿನ ವರದಿಗಳ ಪ್ರಕಾರ, ಮಲೆನಾಡು, ಕರಾವಳಿ ಭಾಗದಲ್ಲಿ ಹೆಚ್ಚು ಸಿಡಿಲು ಉಂಟಾಗುತ್ತದೆ. ಆದರೆ, ಬೆಟ್ಟ ಗುಡ್ಡ, ದೂರದ ಜನವಸತಿ ಕಾರಣದಿಂದ ಜೀವಹಾನಿ ಕಡಿಮೆ. ಬಯಲು, ಸಮತಟ್ಟಾದ ಪ್ರದೇಶಗಳಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಭಾರೀ ಮಳೆಯಾಗುವ ವೇಳೆ ಸಿಡಿಲಿನಿಂದ ತಪ್ಪಿಸಿಕೊಳ್ಳಲು ಕೆಲವು ಸ್ವಯಂ ಮುಂಜಾಗ್ರತಾ ಕ್ರಮವಹಿಸುವುದು ಅತ್ಯಗತ್ಯ.

ಅವುಗಳಲ್ಲಿ:

  • ಮಳೆ ಆಗುವ ಸಮಯದಲ್ಲಿ ಹೊರಗೆ ನಿಲ್ಲಬೇಡಿ
  • ಮರಗಳ ಕೆಳಗೆ, ವಿದ್ಯುತ್ ಕಂಬಗಳ ಹತ್ತಿರ ಹೋಗಬೇಡಿ
  • ತೆರೆದ ಜಾಗದಲ್ಲಿದ್ದರೆ, ಮಂಡಿಯೂರಿ ಕುಳಿತು ತಲೆ ಬಗ್ಗಿಸಿ, ಕಿವಿಗಳನ್ನು ಮುಚ್ಚಿಕೊಳ್ಳಿ
  • ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಸುವುದು ತಪ್ಪಿಸಿ
  • ಭದ್ರವಾಗಿರುವ ಕಟ್ಟಡ ಅಥವಾ ವಾಹನದಲ್ಲಿ ಇದ್ದರೆ ಒಳಗೆ ಇರಿ
  • ಲೋಹದ ತಗಡುಗಳನ್ನು ಹೊಂದಿರುವ ಮನೆಗಳು ಸುರಕ್ಷಿತವಲ್ಲ
  • ಗುಂಪುಗುಂಪಾಗಿರದೆ ಅಂತರ ಕಾಯ್ದುಕೊಳ್ಳಿ
  • ತಗ್ಗು ಪ್ರದೇ ಶಗಳನ್ನು ಆಶ್ರಯಿಸಿ

ಸಿಡಿಲು ಎಂಬುದು ಶತಮಾನಗಳಿಂದಲೂ ಪ್ರಕೃತಿಯ ಒಂದು ಸಹಜ ಮತ್ತು ವೈಜ್ಞಾನಿಕ ಕ್ರಿಯೆ. ಮೋಡಗಳಲ್ಲಿ ತಾಪಮಾನ ವ್ಯತ್ಯಾಸ, ವಿದ್ಯುತ್ ಉಂಟಾದಾಗ ಆ ವಿದ್ಯುತ್ ಭೂಮಿಗೆ ಹರಿದುಬರುವ ಕ್ರಿಯೆಯೇ ಸಿಡಿಲು. ಇದರ ಸಂಭವನೆ ನಿಯಂತ್ರಣದಲ್ಲಿಲ್ಲ ಹೌದು!ಆದರೆ, ಇದರ ಪರಿಣಾಮವನ್ನು ತಡೆಯುವುದು ನಮ್ಮ ವ್ಯವಸ್ಥೆಯ ಹೊಣೆಗಾರಿಕೆ.

ಪ್ರತಿವರ್ಷವೂ ಸಾವಿರಾರು ಜನರು ಸಿಡಿಲಿಗೆ ಬಲಿಯಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದ ರೈತರು, ಬೆಳೆಗಾರರು, ಬೀದಿ ವ್ಯಾಪಾರಿಗಳು – ಇವರುಗಳು ಮುಖ್ಯವಾಗಿ ಇದಕ್ಕೆ ತುತ್ತಾಗುವವರಾಗಿದ್ದಾರೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡುತ್ತದೆ, ಆದರೆ ಈ ಮಾಹಿತಿಯು ಎಲ್ಲರಿಗೂ ತಲುಪುತ್ತಿದೆಯಾ? ಗ್ರಾಮ ಮಟ್ಟದ ಶಿಕ್ಷಕರು, ಪಂಚಾಯತ್ ಸದಸ್ಯರು, ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗಿದೆಯಾ?

ಇಲ್ಲಿ ಸಮಸ್ಯೆ ಪ್ರಕೃತಿಯದ್ದಲ್ಲ. ನಾವು ಪ್ರಕೃತಿಯೊಂದಿಗೆ ಹೊಂದಿಕೊಳ್ಳುವ ವ್ಯವಸ್ಥೆ ಮತ್ತು ಸಿದ್ಧತೆ ರೂಪಿಸಿಕೊಂಡಿಲ್ಲ. ಗ್ರಾಮೀಣ ಶಾಲೆಗಳಲ್ಲಿ ಲೈಟ್ನಿಂಗ್ ಅರೆಸ್ಟರ್ ಇಲ್ಲ, ತುರ್ತು ಆಶ್ರಯದ ಸ್ಥಳಗಳಿಲ್ಲ, ಜನರಿಗೆ ತಕ್ಷಣ ಮಾಹಿತಿ ನೀಡುವ ಪ್ಲಾಟ್‌ಫಾರ್ಮ್‌ಗಳು ಅಸಾಧ್ಯ. ಈ ಎಲ್ಲದೂ ವ್ಯವಸ್ಥೆಯ ವೈಫಲ್ಯ. ನಿಸರ್ಗ ತನ್ನ ಕೆಲಸ ತಾನು ಮಾಡುತ್ತದೆ. ಆದರೆ ಪ್ರಕೃತಿಯೊಂದಿಗೆ, ಪ್ರಕೃತಿಯಲ್ಲೇ ಜೀವಿಸುವ ಮನುಷ್ಯ ವ್ಯವಸ್ಥೆ ಮಾರ್ಪಾಡುಗೊಳ್ಳಬೇಕಿದೆ. ಹೀಗಾಗಿ, ಸಿಡಿಲನ್ನು ತಡೆಹಿಡಿಯಲು ಸಾಧ್ಯವಿಲ್ಲವಾದರೂ ಅದರ ಪರಿಣಾಮಗಳನ್ನು ತಡೆಹಿಡಿಯುವುದು ಸಂಪೂರ್ಣವಾಗಿ ಸಾಧ್ಯ. ಅದಕ್ಕೆ ತಂತ್ರಜ್ಞಾನ, ಶಿಕ್ಷಣ, ಜಾಗೃತಿ, ಸರಿಯಾದ ಯೋಜನೆ ಮತ್ತು ದಕ್ಷ ನಿರ್ವಹಣೆಯ ಅವಶ್ಯಕತೆ ಇದೆ.

ಪ್ರತಿಯೊಬ್ಬ ನಾಗರಿಕನಿಗೂ ಸಿಡಿಲು ಬಗ್ಗೆ ಜಾಗೃತಿ ಮೂಡಿಸುವುದು ಮೊದಲ ಹೆಜ್ಜೆ. ಗ್ರಾಮೀಣ ಭಾಗಗಳಲ್ಲಿ ಜನರಿಗೆ ತಾಂತ್ರಿಕ ಮಾಹಿತಿಯನ್ನು ಸರಳವಾಗಿ ತಲುಪಿಸಬೇಕಾಗಿದೆ. ಜೊತೆಗೆ, ಹವಾಮಾನ ಇಲಾಖೆ ನೀಡುವ ಮುನ್ಸೂಚನೆಗಳನ್ನು ಪ್ರಾಂತೀಯ ಭಾಷೆಯಲ್ಲಿ ಕೂಡ ತಲುಪಿಸುವ ವ್ಯವಸ್ಥೆ ಅಗತ್ಯ. ರಾಜ್ಯ ಸರಕಾರವು ಸಿಡಿಲು ಹೆಚ್ಚು ಸಂಭವಿಸುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಲೈಟ್ನಿಂಗ್ ಅರೆಸ್ಟರ್, ಸುರಕ್ಷಿತ ಆಶ್ರಯ ಸ್ಥಳಗಳು ಮತ್ತು ತುರ್ತು ಸಂದೇಶ ವ್ಯವಸ್ಥೆಗಳನ್ನು ನಿರ್ಮಾಣ ಮಾಡಬೇಕು. ಶಾಲೆಗಳಲ್ಲಿಯೂ ಮಕ್ಕಳಿಗೆ ಸಿಡಿಲಿನ ವೇಳೆ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಶಿಕ್ಷಣ ನೀಡುವುದು ಬಹುಮುಖ್ಯ.

ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಪರ್ಸೆಂಟೇಜ್ ಪೀಕಲಾಟ | ಕಮಿಷನ್‌ಗೆ ‘ಕೈ’ ಚಾಚಿತೇ ಸರ್ಕಾರ?

ಅಂತಿಮವಾಗಿ, ಇಂತಹ ಘಟನೆಯು ಮುಂಬರುವ ದಿನಗಳಲ್ಲಿ ಮರುಕಳಿಸದಂತೆ, ಅಭಿವೃದ್ಧಿ ಯೋಜನೆಗಳ ಜೊತೆಗೆ ಪ್ರಾಕೃತಿಕ ಅನಾಹುತ ನಿರ್ವಹಣೆಯು ಸಹ ಸಮನ್ವಯವಾಗಿ ನಡೆಯಬೇಕು. ಇದರಿಂದ ಕೇವಲ ಪರಿಹಾರವಲ್ಲದೆ ಶಾಶ್ವತ ನಿರ್ವಹಣೆಯತ್ತ ನಾವು ಹೆಜ್ಜೆ ಹಾಕಬಹುದು.

WhatsApp Image 2025 05 16 at 6.54.26 PM
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

Download Eedina App Android / iOS

X