ಸ್ವಯಂ ಘೋಷಿತ ಯೋಗ ಗುರು ಬಾಬಾರಾಮ್‌ದೇವ್ ಅವರು ಹಮ್‌ದರ್ದ್ ಪಾನೀಯವನ್ನು ‘ಶರಬತ್ ಜಿಹಾದ್’ ಎಂದು ಕರೆದಿದ್ದರು. ಅವರ ಹೇಳಿಕೆ ಕುರಿತು ದೆಹಲಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ‘ಹೇಳಿಕೆಗಳ ಬಗ್ಗೆ ಎಚ್ಚವಹಿಸಬೇಕು. ಇಲ್ಲದಿದ್ದಲ್ಲಿ, ಕಠಿಣವಾದ ಆದೇಶ ನೀಡಬೇಕಾಗುತ್ತದೆ’ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ, ಪತಂಜಲಿ ಬ್ರಾಂಡ್‌ನ ‘ಗುಲಾಬ್ ಶರಬತ್’ ಪ್ರಚಾರ ಮಾಡಿದ್ದ ರಾಮ್‌ದೇವ್ ಅವರು ಹಮ್‌ದರ್ದ್ ಪಾನೀಯಾ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. “ಹಮ್‌ದರ್ದ್‌ನ ರೂಹ್ ಅಫ್ಜಾ (ಶರಬತ್) ಮಾರಾಟದಿಂದ ಗಳಿಸಿದ ಹಣವನ್ನು ಮದರಸಾಗಳು ಮತ್ತು ಮಸೀದಿಗಳ ನಿರ್ಮಾಣಕ್ಕೆ ಬಳಸಲಾಗಿದೆ. ಅದು ಶರಬತ್ ಜಿಹಾದ್” ಎಂದು ಹೇಳಿದ್ದರು.
ರಾಮ್‌ದೇವ್ ಹೇಳಿಕೆ ವಿರುದ್ಧ ‘ಹಮ್‌ದರ್ದ್ ನ್ಯಾಷನಲ್ ಫೌಂಡೇಶನ್ ಇಂಡಿಯಾ’ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಅಮಿತ್ ಬನ್ಸಾಲ್, “ಬಾಬಾ ರಾಮ್‌ದೇವ್ ಅವರ ಹೇಳಿಕೆಯು ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ತಂದಿದೆ. ಅವರು ನೀಡಿರುವ ಹೇಳಿಕೆ ಅಸಮರ್ಥನೀಯವಾದದ್ದು. ಇಂತಹ ಹೇಳಕೆಗಳ ಬಗ್ಗೆ ರಾಮ್‌ದೇವ್ ಎಚ್ಚವಹಿಸಬೇಕು. ಇಲ್ಲದಿದ್ದಲ್ಲಿ, ಕಠಿಣವಾದ ಆದೇಶ ನೀಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ವಿಚಾರಣೆ ವೇಳೆ ಹಮ್‌ದರ್ದ್ ಸಂಸ್ಥೆ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೊಹಟಿಗೆ, ‘ರಾಮ್‌ದೇವ್ ಹೇಳಿಕೆಯು ಸಮುದಾಯದ ನಡುವೆ ಬಿರುಕು ಸೃಷ್ಟಿತ್ತದೆ. ಇದು ದ್ವೇಷ ಭಾಷಣವಾಗಿದೆ. ರಾಮ್‌ದೇವ್ ಅವರು ತಮ್ಮ ಉದ್ಯಮದ ಬಗ್ಗೆ ಗಮನ ಹರಿಸಲಿ, ಮತ್ತೊಂದು ಸಂಸ್ಥೆಗೆ ಯಾಕೆ ತೊಂದರೆ ಕೊಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.