ಜನರಿಗೆ ಅರ್ಥವಾಗದ, ಜನರಿಗೆ ಗೊತ್ತಿಲ್ಲದ ಸಂಸ್ಕೃತ ಭಾಷೆಯಲ್ಲಿದ್ದ ಧರ್ಮದ ಸಾರವನ್ನು ಬಸವಣ್ಣ ಮತ್ತು ವಚನಕಾರರು ಜನರಿಗೆ ಅರ್ಥ ಆಗುವ, ಜನರದ್ದೇ ಆದ ಕನ್ನಡ ಭಾಷೆಯಲ್ಲಿ ತಿಳಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ನಗರ ಜಿಲ್ಲಾಡಳಿತ ರವೀಂದ್ರ ಕಲಾ ಕ್ಷೇತ್ರದಲ್ಲಿ ಫ ಗು ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಫ ಗು ಹಳಕಟ್ಟಿ ಅವರು 200 ವಚನಕಾರರ ವಚನಗಳನ್ನು ಸಂಗ್ರಹಿಸಿ ತಮ್ಮ ಮತ್ತು ಮುಂದಿನ ತಲೆಮಾರಿಗೆ ದಾಟಿಸುವ ಮಹಾನ್ ಮೌಲ್ಯಯುತವಾದ ಕೆಲಸ ಮಾಡಿದರು. ಆದ್ದರಿಂದಲೇ ಫ ಗು ಹಳಕಟ್ಟಿ ಅವರ ಜನ್ಮದಿನವನ್ನು “ವಚನ ಸಾಹಿತ್ಯ ಸಂರಕ್ಷಣಾ ದಿನ”ವನ್ನಾಗಿ ಆಚರಿಸಲಾಗುತ್ತಿದೆ. ಹೀಗಾಗಿ ಫ ಗು ಹಳಕಟ್ಟಿಯವರ ಮಾರ್ಗ ನಮಗೆಲ್ಲರಿಗೂ ಮಾದರಿಯಾಗಲಿ ಎಂದು ಆಶಿಸಿದರು.
ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾಧಿಕಾರಿ ಕೆ ಎ ದಯಾನಂದ್, ಇಲಾಖೆ ಕಾರ್ಯದರ್ಶಿ ಡಾ. ಎನ್ ಮಂಜುಳ ಸೇರಿ ಹಲವರು ಉಪಸ್ಥಿತರಿದ್ದರು. ಡಾ. ಗೋ ರು ಚನ್ನಬಸಪ್ಪ ಅವರು ಫ ಗು ಹಳಕಟ್ಟಿಯವರ ಕುರಿತು ಉಪನ್ಯಾಸ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಪಕ್ಷಗಳ ವಿರುದ್ಧ ಸುಳ್ಳು ಪ್ರಚಾರಕ್ಕೆ ಪ್ರಧಾನಿಯಿಂದ ಅಧಿಕಾರ ದುರ್ಬಳಕೆ: ರಾಷ್ಟ್ರಪತಿಗೆ ಸಚಿವ ದಿನೇಶ್ ಗುಂಡೂರಾವ್ ಪತ್ರ