ಯಾವ ವಿಶ್ವವಿದ್ಯಾಲಯಗಳು ಮಾಡಲಾಗದ ಸಾಧನೆಯನ್ನು ಡಾ. ಫ ಗು ಹಳಕಟ್ಟಿ ಅವರು ವಚನ, ಸಾಹಿತ್ಯ ಸಂರಕ್ಷಣೆಯಲ್ಲಿ ಮಾಡಿದ್ದಾರೆ. ಅವರ ವಚನ ಸಾಹಿತ್ಯ ಸಂರಕ್ಷಣೆಗೆ ನೀಡಿದ ಕೊಡುಗೆ ಅನನ್ಯ ಎಂದು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಕೆ ಪಾಟೀಲ್ ಹೇಳಿದರು.
ಗದಗ ನಗರದ ಜಗದ್ಗುರು ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಡಾ. ಫ ಗು ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
“ಸರ್ಕಾರ ವಚನ ಸಾಹಿತ್ಯ ಸಂರಕ್ಷಣೆಗೆ ಸಲ್ಲಿಸಿದ ಸೇವೆಗೆ ಸಮರ್ಪಕ ನಾಮಕರಣ ಮಾಡಿದಂತಿದೆ. ಹಳಕಟ್ಟಿ ಅವರು ಶರಣ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ, 12ನೇ ಶತಮಾನದಲ್ಲಿ ವಚನಗಳನ್ನು ಉಳಿಸಲು ನಡೆದಿರುವ ಹೋರಾಟ ನಮಗೆಲ್ಲ ಅರಿವಿದೆ. ಅದನ್ನು ನಂತರದ ದಿನಗಳಲ್ಲಿ ಸಂಗ್ರಹಿಸಿ ಸಂರಕ್ಷಣೆ ಮಾಡುವ ಕಾರ್ಯ ಹಳಕಟ್ಟಿಯವರದಾಗಿದೆ. ಇವರ ಈ ಕಾರ್ಯಕ್ಕೆ ಅಪಾರ ಜನಮನ್ನನೆ ದೊರತಿದೆ” ಎಂದು ಹೇಳಿದರು.
“ಸರ್ಕಾರ ಇಂತಹ ಮಹನೀಯರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ ಡಾ. ಫ ಗು ಹಳಕಟ್ಟಿಯವರ ಸಾರ್ಥಕ ಸಾಧನೆಯನ್ನು ಇಂದಿನ ಯುವಜನರಿಗೆ ಹಾಗೂ ಜನಸಾಮಾನ್ಯರಿಗೆ ಅರ್ಥೈಸಬೇಕು. ಶಿಕ್ಷಣ ಸಂಸ್ಥೆಗಳ ಸಹಯೋಗದ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿಧ್ಯಾರ್ಥಿಗಳಿಗೆ ಮಹಾನಚೇತನರ ಜೀವನ ಸಾಧನೆಯನ್ನು ತಿಳಿಸಿ ಜೀವನದಲ್ಲಿ ಸಾಧನೆ ಮಾಡಲು ಪ್ರೇರಣೆಯಾಗಬೇಕು” ಎಂದು ಅಭಿಪ್ರಾಯ ಪಟ್ಟರು.
ಈ ಸುದ್ದಿ ಓದಿದ್ದೀರಾ? ಮಹಿಳೆ, ಶೂದ್ರರನ್ನು ಶಿಕ್ಷಣದಿಂದ ದೂರವಿರಿಸಿದ್ದ ಚಾತುರ್ವರ್ಣ ವ್ಯವಸ್ಥೆ : ಸಿಎಂ ಸಿದ್ದರಾಮಯ್ಯ
ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿ ಆಶೀರ್ವಚನ ನೀಡಿದರು. ಗದಗ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಕನ್ನಡ ಪ್ರಾಧ್ಯಾಪಕ ಡಾ. ರಮೇಶ ಕಲ್ಲನಗೌಡರ ಅವರು ಡಾ. ಫ ಗು ಹಳಕಟ್ಟಿಯವರ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ ಎಸ್ ನೇಮಗೌಡ, ಉಪವಿಭಾಗಾಧಿಕಾರಿ ಅನ್ನಪೂರ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಸೇರಿದಂತೆ ಗಣ್ಯರು, ಸಾಹಿತ್ಯಾಸಕ್ತರು ಇದ್ದರು.
ವಿಜಯಪುರ : ಜಿಲ್ಲೆಯ ಬಸವ ಬಾಗೇವಾಡಿಯಲ್ಲಿ ವಚನ ಸಾಹಿತಿ ಫಕೀರಪ್ಪ ಗುರುಸಪ್ಪಾ ಹಳಕಟ್ಟಿಯವರ ಜನ್ಮದಿನವನ್ನು ವಚನ ಸಂರಕ್ಷಣಾ ದಿನವನ್ನಾಗಿ ಆಚರಿಸುವ ಮೂಲಕ ಸಮಾಜಕ್ಕೆ ವಿಭಿನ್ನವಾದ ಸಂದೇಶವನ್ನು ಸಾರಿದ್ದಾರೆ.
“ಫಕೀರಪ್ಪ ಹಳಕಟ್ಟಿ ರವರು ವಚನಗಳ ಸಂಗ್ರಹ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಗಳು ಅಪಾರ. ಸಿದ್ದೇಶ್ವರ ಬ್ಯಾಂಕ್ ಸ್ಥಾಪನೆ, ನಗರಸಭಾ ಅದ್ಯಕ್ಷರಾಗಿ ಅವರು ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸಿದ್ದಾರೆ” ಎಂದು ತಹಶೀಲ್ದಾರ್ ಬಿ ಎಸ್ ನಾಯಕ್ ಎಂದು ತಿಳಿಸಿದರು.
“ಫಕೀರಪ್ಪ ಹಳಕಟ್ಟಿಯವರು ತಮ್ಮ ಸ್ವಂತ ಮನೆಯನ್ನು ಮಾರಾಟ ಮಾಡಿ ಮುದ್ರಣಾಲಯವನ್ನು ಸ್ಥಾಪಿಸಿ ವಚನಗಳನ್ನು ಮುದ್ರಣ ಮಾಡಿದರು. ಫಕೀರಪ್ಪ ಹಳಕಟ್ಟಿರವರು ಕಡು ಬಡತನದಲ್ಲಿ ಸಾಹಿತ್ಯ ಸೇವೆಯನ್ನು ಸಂಶೋಧನೆ ಮಾಡಿದರು. ಹಳಕಟ್ಟಿ ಅವರ ಸಾಧನೆ ನೋಡಿ ಬಿಎಂಶ್ರೀ ಅವರು ʼವಚನ ಗುಮ್ಮಟʼ ಎಂಬ ಬಿರುದನ್ನು ನೀಡಿದ್ದಾರೆ” ಎಂದರು.