- ಉಪಮುಖ್ಯಮಂತ್ರಿಯಾಗಿ ಅಜಿತ್ ಪ್ರಮಾಣ
- 1999ರಲ್ಲಿ ಎನ್‌ಸಿಪಿ ಸ್ಥಾಪಿಸಿದ ಶರದ್ ಪವಾರ್
ಅಜಿತ್ ಪವಾರ್ ತಮ್ಮ ಬೆಂಬಲಿತ ಎಂಟು ಶಾಸಕರ ಜೊತೆ ಬಂಡಾಯವೆದ್ದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರ ಸೇರಿದ ನಂತರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಒಂಬತ್ತು ಮಂದಿ ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರ ಪ್ರಯೋಗಿಸಲು ಎನ್‌ಸಿಪಿ ತೀರ್ಮಾನಿಸಿದೆ. ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಎನ್‌ಸಿಪಿ ವಿಧಾನ ಸಭಾಧ್ಯಕ್ಷರಿಗೆ ಮನವಿ ಮಾಡಿದೆ ಎಂದು ಸೋಮವಾರ (ಜುಲೈ 3) ಮಾಧ್ಯಮಗಳು ವರದಿ ಮಾಡಿವೆ.
ಈ ಬಗ್ಗೆ ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, “ಅಜಿತ್ ಮತ್ತು ಇತರ ಶಾಸಕರ ಅನರ್ಹತೆ ಕುರಿತ ಅರ್ಜಿಯನ್ನು ಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಅವರಿಗೆ ಸಲ್ಲಿಸಲಾಗಿದೆ” ಎಂದು ತಿಳಿಸಿದರು.
“ಎನ್‌ಸಿಪಿಯ ನಿರ್ಧಾರ ಕೈಗೊಳ್ಳುವ ಅಧಿಕಾರ ಶರದ್ ಪವಾರ್ ಬಳಿಯೇ ಇದೆ ಎಂದು ತಿಳಿಸುವ ಇ-ಮೇಲ್ ಸಂದೇಶವನ್ನು ಭಾರತದ ಚುನಾವಣಾ ಆಯೋಗಕ್ಕೂ ಕಳುಹಿಸಲಾಗಿದೆ” ಎಂದು ಜಯಂತ್ ಪಾಟೀಲ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ವೈಫಲ್ಯಗಳನ್ನು ಬೇರೆಡೆ ಸೆಳೆಯಲು ಜನರ ದಿಕ್ಕು ತಪ್ಪಿಸುತ್ತಿರುವ ಪ್ರಧಾನಿ: ಕಾಂಗ್ರೆಸ್ ಆಕ್ರೋಶ
ಮಹಾರಾಷ್ಟ್ರ ರಾಜಕೀಯದಲ್ಲಿ ಭಾನುವಾರ ಹಠಾತ್ ಬೆಳವಣಿಗೆಯಾಯಿತು. ಎನ್‌ಸಿಪಿಯ ಅಜಿತ್ ಪವಾರ್ ಅವರು ಇತರ ಎಂಟು ಶಾಸಕರೊಂದಿಗೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಮತ್ತು ಬಿಜೆಪಿ ಸರ್ಕಾರವನ್ನು ಸೇರಿದರು.
ಬಳಿಕ ಅಜಿತ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶರದ್ ಪವಾರ್ ಅವರು 1999ರಲ್ಲಿ ಎನ್‌ಸಿಪಿ ಸ್ಥಾಪಿಸಿದರು.