ಜೂಜಾಟದಲ್ಲಿ ತೊಡಗಿದ್ದ ಎಂದು ಬಂಧಿಸಲಾಗಿದ್ದ ವ್ಯಕ್ತಿಯೊಬ್ಬ ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾದ್ದಾನೆ ಎಂಬ ಆರೋಪಿಸಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದ ಘಟನೆ ಉತ್ತರ ಪ್ರದೇಶ ಬಾಗ್ಪತ್ ಜಿಲ್ಲೆಯ ರತೌಲ್ ಪಟ್ಟಣದಲ್ಲಿ ನಡೆದಿದೆ.
28 ವರ್ಷದ ಮೊಹಮ್ಮದ್ ಸಾಜಿದ್ ಅಬ್ಬಾಸಿ ಎಂಬಾತನನ್ನು ಜೂಜಾಟದಲ್ಲಿ ತೊಡಗಿದ್ದ ಎನ್ನುವ ಆರೋಪದಲ್ಲಿ ರತೌಲ್ ಪಟ್ಟಣದ ಪೊಲೀಸರು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದರು. ಆದರೆ ವಿಚಾರಣೆಯ ಸಮಯದಲ್ಲಿ ಆರೋಪಿಗೆ ಚಿತ್ರಹಿಂಸೆ ನೀಡಲಾಗಿದೆ. ಪೊಲೀಸರ ಹಲ್ಲೆಯಿಂದಲೇ ಸಾವೀಗೀಡಾಗಿದ್ದಾನೆ ಎಂದು ಆರೋಪಿಸಿರುವ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದ್ದಾರೆ.
“ನನ್ನ ಮಗ ಜೂಜಾಟದಲ್ಲಿ ಭಾಗಿಯಾಗಿಲ್ಲ. ಆತ ಜೂಜಾಟದಲ್ಲಿ ತೊಡಗಿದ್ದವರನ್ನು ನೋಡುತ್ತಿದ್ದ. ಆದರೆ ಪೊಲೀಸರು ಆಗಮಿಸಿ ನನ್ನ ಮಗ ಸೇರಿದಂತೆ ಮೂವರನ್ನು ಕರೆದೊಯ್ದರು. ಪ್ರಾಥಮಿಕ ವಿಚಾರಣೆಯ ನಂತರ ಉಳಿದ ಇಬ್ಬರನ್ನು ಬಿಡುಗಡೆಗೊಳಿಸಲಾಯಿತು. ಆದರೆ ನನ್ನ ಮಗನನ್ನು ಬಿಡುಗಡೆ ಮಾಡದೆ ಹಲ್ಲೆ ನಡೆಸಿದ್ದಾರೆ. ಪೊಲೀಸರ ಚಿತ್ರಹಿಂಸೆಯಿಂದಲೇ ಆತ ಸಾವೀಗೀಡಾಗಿದ್ದಾನೆ” ಎಂದು ಮೃತಪಟ್ಟ ಮೊಹಮ್ಮದ್ ತಂದೆ ಸಾಜಿದ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶರದ್ ಪವಾರ್ ಅವರನ್ನು ಬಗ್ಗಿಸುವುದು ಅಷ್ಟು ಸುಲಭವಲ್ಲ. ಇದನ್ನು Heroically ಹೇಳುತ್ತಿಲ್ಲ
“ನಮಗೆ ಕುಟುಂಬದಿಂದ ಇನ್ನೂ ಯಾವುದೇ ದೂರು ಬಂದಿಲ್ಲ. ಆತ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳುತ್ತಿದ್ದಾರೆ. ನಾವು ದೂರು ಸ್ವೀಕರಿಸಿದ ನಂತರ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತೇವೆ. ಸದ್ಯ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಕುಟುಂಬದವರು ದೂರು ನೀಡಿದ ನಂತರ ಅದರಂತೆ ಕ್ರಮ ಕೈಗೊಳ್ಳುತ್ತೇವೆ. ನಾನು ಹೆಚ್ಚುವರಿ ಎಸ್ಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದೇನೆ. ಅವರು ಕಾನೂನಿನ ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ” ಎಂದು ಉತ್ತರ ಪ್ರದೇಶ ಬಾಗ್ಪತ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅರ್ಪಿತ್ ವಿಜಯವರ್ಗಿಯಾ ತಿಳಿಸಿದ್ದಾರೆ.
“ಸಾಜಿದ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆಯ ನಂತರ ಬಿಡುಗಡೆ ಮಾಡಿದ್ದಾರೆ. ಆತ ತಮ್ಮ ಕುಟುಂಬ ಸದಸ್ಯರೊಂದಿಗೆ ಆರೋಗ್ಯವಾಗಿ ಹೋಗಿದ್ದ ಮತ್ತು ಮನೆಯಲ್ಲಿ ಸಾವನ್ನಪ್ಪಿದ್ದಾನೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗಿದೆ ”ಎಂದು ಪೊಲೀಸರು ತಿಳಿಸಿದ್ದಾರೆ.
“ಇಲ್ಲಿ ಆಟವಾಡುತ್ತಿದ್ದ ಮಕ್ಕಳು ಪೊಲೀಸರು ನನ್ನ ಸೋದರನನ್ನು ಥಳಿಸಿದ್ದನ್ನು ನೋಡಿದ್ದಾರೆ. ನಾವು ಆತನನ್ನು ಮನೆಗೆ ಕರೆತಂದಾಗ ಆತ ತೀವ್ರವಾಗಿ ಅಸ್ವಸ್ಥಗೊಂಡಿದ್ದ. ನಂತರ ಪ್ರಜ್ಞಾಹೀನನಾದ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೊರಟೆವು. ಮಾರ್ಗಮಧ್ಯೆದಲ್ಲೇ ಆತ ಮೃತಪಟ್ಟಿದ್ದಾನೆ. ಆತ ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ. ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಆತ ದಿನಕ್ಕೆ 250 ರಿಂದ 300 ರೂ. ಸಂಪಾದನೆ ಮಾಡುತ್ತಿದ್ದ” ಎಂದು ಸಂತ್ರಸ್ತನ ಸಹೋದರ 37 ವರ್ಷದ ಸಹಾಬುದ್ದೀನ್ ತಿಳಿಸಿದ್ದಾರೆ.