ವಡಿವೇಲ್ ಎಂಬ ಸುಪ್ರಸಿದ್ದ ಹಾಸ್ಯನಟನೊಬ್ಬನಿಗೆ ಜೀವಮಾನದ ಅಪೂರ್ವ ಅವಕಾಶ ಎಂಬಂತಹ ಗಂಭೀರ ಪಾತ್ರ. ಅದರಲ್ಲೂ ನಾಯಕ ನಟನ ಪಾತ್ರವನ್ನೇ ನೀಡಿ ವಡಿವೇಲ್ ಒಳಗಿನ ಅಪ್ರತಿಮ ಕಲಾವಿದನನ್ನು ಹೊರಜಗತ್ತಿಗೆ ಪರಿಚಯಿಸಿದ್ದಾರೆ. ಫಹಾದ ಫಾಜಿಲ್ ಭಾರತ ಚಿತ್ರರಂಗದ ನಿಜವಾದ ನಟರಾಕ್ಷಸ!
“ನೋವು ಭಾರತದ ಇತಿಹಾಸವು ಬ್ರಾಹ್ಮಣತ್ವಕ್ಕೂ ಬೌದ್ಧತ್ವಕ್ಕೂ ನಡೆದ ಮಾರಾಣಾಂತಿಕ ಸಂಘರ್ಷದ ಕತೆಯಾಗಿದೆ” ಎನ್ನುತ್ತಾರೆ ಬಾಬಾಸಾಹೇಬ್ ಅಂಬೇಡ್ಕರ್. (The history of India was mortal conflict between Buddhism and Brahminism)
ಮುಂದುವರೆದು ಬ್ರಾಹ್ಮಣತ್ವವನ್ನು ಬಿಡಿಸಿ ಹೇಳುವ ಬಾಬಾಸಾಹೇಬರು “Brahminism means the nagation of equality, fraternity and freedom(ಸಮತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯಗಳನ್ನು ನಿರಾಕರಿಸುವುದೇ ಬ್ರಾಹ್ಮಣವಾ) ಎಂದು ಹೇಳುತ್ತಾ: ಬ್ರಾಹ್ಮಣತ್ವದ ಜನಕರು ಬ್ರಾಹ್ಮಣರೇ ಆದರೂ ಅದು ಇಂದು ಎಲ್ಲರೊಳಗೂ ಹಾಸುಹೊಕ್ಕಾಗಿದೆ. ಜನರೊಳಗೆ ಬ್ರಾಹ್ಮಣತ್ವವನ್ನು ಒಂದು ದೈವನಿಯಮವೆಂಬಂತೆ ಬಿತ್ತಿದ ಕೀರ್ತಿ ಬ್ರಾಹ್ಮಣರಿಗೇ ಸಲ್ಲುತ್ತದೆ. ಎಂಬ ಬಹಳ ಸೂಕ್ಷ್ಮ ಎಳೆಯಿಂದ ಈ ದೇಶದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಸಂರಚನೆಯನ್ನು ಬಾಬಾಸಾಹೇಬರು ಗ್ರಹಿಸಿ ಈ ದೇಶದ ಮೂಲನಿವಾಸಿಗಳು ಸಾಗಬೇಕಾದ ಸೌಹಾರ್ದಯುತ ಮಾರ್ಗವನ್ನು ತೋರಿದ್ದಾರೆ.
ಈ ಹಿನ್ನೆಲೆಯಲ್ಲಿ ಇತ್ತೀಚಗೆ ಬಿಡುಗಡೆಗೊಂಡಿರುವ ತಮಿಳು ಚಿತ್ರ ಮಾಮನ್ನನ್ ತೆರೆದುಕೊಳ್ಳುತ್ತದೆ. ತರುಣ ನಿರ್ದೇಶಕ ಮಾರಿ ಸೆಲ್ವರಾಜ್ ಅವರ ಮಹತ್ವಾಕಾಂಕ್ಷೆಯ ಚಿತ್ರವಿದು. ಒಂದೇ ಕತೆಯೊಳಗಡೆ ಹಲವು ಪದರಗಳಿರುವ ವಿಶೇಷವೂ ವಿಶಿಷ್ಟವೂ ಆಗಿರುವ ಸಿನಿಮಾ ಮಾಮನ್ನನ್.
ಹಿಂದೆ ಇದೇ ತಮಿಳು ತೆರೆಯಲ್ಲಿ ಬಂದ ಚಿನ್ನಗೌಂಡರ್, ನಾಟ್ಟಾಮೈ, ತೇವರ್ ಮಗನ್ ಸಿನಿಮಾಗಳು ನಮಗೆ ದಾಟಿಸಿದ ಧೋರಣೆಗಳೇನು? ಈಗ ಹೊಸತಲೆಮಾರಿನ ಪಾ.ರಂಜಿತ್, ವೆಟ್ರಿಮಾರನ್, ಮಾರಿ ಸೆಲ್ವರಾಜ್ ತರದವರು ಕಟ್ಟುತ್ತಿರುವ ಕಾಲಾ, ಕಬಾಲಿ, ಸಾರ್ಪಟ್ಟ ಪರಂಬರೈ, ವಿಸಾರಣೈ, ವಿಡುತಲೈ, ಅಸುರನ್, ಪರಿಯೇರಂ ಪೆರುಮಾಳ್, ಕರ್ಣನ್ ಮತ್ತು ಮಾಮನ್ನನ್ ಚಿತ್ರಗಳು ಧ್ವನಿಸುವ ನೀತಿಯೇನು? ಎಂದು ನೋಡಿದರೆ ಇದೊಂದು ಕ್ರಾಂತಿ ಮತ್ತು ಪ್ರತಿಕ್ರಾಂತಿಯಾಗಿಯೇ ಕಾಣುತ್ತಿದೆ.
ಮಾರಿ ಸೆಲ್ವರಾಜ್ ತನ್ನ ಹಿಂದಿ ಪರಿಯೇರಂ ಪೆರುಮಾಳ್ ಮತ್ತು ಕರ್ಣನ್ ಚಿತ್ರಗಳಲ್ಲಿ ಜಾತಿಯ ಸಾಮಾಜಿಕ ಪದರಗಳನ್ನು ಒಡೆದು ಜಾತಿವಾದಿಗಳ ಎದೆಗೆ ಇರಿದಿದ್ದರು.
ಈಗಿನ ಮಾಮನ್ನನ್ ಚಿತ್ರದಲ್ಲಿ ಸಾಮಾಜಿಕ, ಶೈಕ್ಷಣಿಕ ವಿಷಯಗಳೊಡನೆಯೇ ಸುತ್ತಿಕೊಂಡಿರುವ ರಾಜಕೀಯ ಪದರವನ್ನೂ ಬಿಡಿಸಿ ಮೇಲುಧೋರಣೆಗೆ ಮೆಟ್ಟಿನಲ್ಲಿ ಬಾರಿಸಿದ್ದಾರೆ! ಅದೇ ಸಮಯಕ್ಕೆ ಮೇಲುಧೋರಣೆಯ ದಾಳವಾಗುವ ಮೀಸಲು ನಾಯಕರ ದುರ್ಬಲ ಮನಸ್ಥಿತಿಗೂ, ಮೇಲು ಜನರ ದಾಳವಾಗುವ ದಲಿತ ಸಂಘಟನೆಗಳ ದಡ್ಡತನಕ್ಕೂ ಚಾಟಿ ಬೀಸಿದ್ದಾರೆ!
ಯಾವ ಶಿಕ್ಷಣವನ್ನು ಬ್ರಾಹ್ಮಣರು ಶೂದ್ರಾತಿಶೂದ್ರರಿಂದ ದೂರವಿರಿಸಿದ್ದರೋ ಅದು ಬಸವಾದಿ ಶರಣರು ಮತ್ತು ಫುಲೆಯವರ ಅಕ್ಷರಕ್ರಾಂತಿಯ ಫಲವಾಗಿ ನಮಗೆ ತಲುಪಿತು. ಅದನ್ನು ದಕ್ಕಿಸಿಕೊಂಡ ಅಂಬೇಡ್ಜರರು “ಶಿಕ್ಷಣವೆಂದರೆ ಹುಲಿಯ ಹಾಲು” ಅದನ್ನು ಜನ ಕಲಿತು ಗರ್ಜಿಸಬೇಕೆಂದು ಬಯಸಿದ್ದರು. ಸಂವಿಧಾನದ ನಂತರ ಹಕ್ಕಾಗಿ ಬಂದ ಶಿಕ್ಷಣವನ್ನು ಬ್ರಾಹ್ಮಣಶಾಹಿ ಉದ್ಯಮವಾಗಿಸಿ ಸಂವಿಧಾನದಲ್ಲೂ ಅದು ಶೂದ್ರಾತಿಶೂದ್ರರಿಗೆ ಎಟುಕದಂತೆ ಮಾಡುತ್ತಿದೆ. ಅದರ ವಿರುದ್ದ ನಡೆಸುವ ಉಚಿತ ಶಿಕ್ಷಣ/ಉಚಿತ ತರಬೇತಿ ಎಂಬುದು ಹೇಗೆ ಅಕ್ಷರದ ಮೇಲೆ ದಬ್ಬಾಳಿಕೆ ಮಾಡುತ್ತದೆ. ಅದನ್ನು ದಮನಿತರು ದಕ್ಕಿಸಿಕೊಳ್ಳುವಾಗ ತೆರೆದುಕೊಳ್ಳುವ ಸಾಮಾಜಿಕ ಮತ್ತು ರಾಜಕೀಯ ಅಸಮಾನತೆಯ ಕ್ರೌರ್ಯಗಳ ವಿವಿಧ ಪದರುಗಳೇ ಮಾಮನ್ನನ್ ಚಿತ್ರದ ತಿರುಳು.
“ಎಲ್ಲರೂ ಸಮಾನರೆಂಬ ಜೀವನಕ್ರಮ ನಮ್ಮದಾಗಬೇಕು” ಎಂಬ ಸಂವಿಧಾನದ ಆಶಯವನ್ನು ಹೇಳಲು ಮಾರಿ ಸೆಲ್ವರಾಜ್ ಕಟ್ಟಿರುವ ಈ ಪರಿಣಾಮಕಾರಿ ಕತೆಯಲ್ಲಿ ಯಾವುದೋ ಒಂದು ಘಟನೆಯಿಲ್ಲ. ಯಾರದೋ ಒಬ್ಬ ವ್ಯಕ್ತಿಯ ಕತೆಯಿಲ್ಲ.
ಒಟ್ಟಾರೆಯಾಗಿ ಅಲ್ಲಲ್ಲಿ ಆಗಾಗ ನಡೆದಿರುವ ನಡೆಯುತ್ತಿರುವ ಜಾತಿಕ್ರೌರ್ಯದ ಅಮಾನುಷ ಘಟನೆಗಳನ್ನು ಮಾಮನ್ನನ್ ಕತೆಯೊಳಗೆ ಸೊಗಸಾಗಿ ಮಿಳಿತಗೊಳಿಸಿ ಪಾತ್ರಗಳನ್ನು ಸೃಷ್ಟಿಸಿ ಜೀವಂತ ಎನಿಸುವಂತೆ ಕಟ್ಟಿಕೊಟ್ಟಿದ್ದಾರೆ. ಹಾಗೆಂದು ಇದೊಂದು ಕಾಲ್ಪನಿಕವಾದ ಕತೆಯಲ್ಲ. ಎಲ್ಲವೂ ನೈಜಘಟನೆಗಳೇ. ಮೀಸಲು ಕ್ಷೇತ್ರಗಳಲ್ಲಿ ಜನನಾಯಕ ಹುಟ್ಟುವುದಿಲ್ಲ ಎಂಬ ಅಂಬೇಡ್ಕರ್ ವಾಣಿ. ಈ ಚಿತ್ರವನ್ನು ನೋಡಿದಾಗ ನಮಗೆ ಅರ್ಥವಾಗುತ್ತದೆ. ಅಂಬೇಡ್ಕರ್ ವಿಚಾರಧಾರೆಯನ್ನು ಅರಿಯದ ಜಾತಿ ಸಂಘಟನೆಗಳು ಹೇಗೆ ದುಷ್ಟರ ದಾಳವಾಗುತ್ತವೆ ಎಂಬುದನ್ನು ಚಿತ್ರದಲ್ಲಿ ಬಹಳ ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ. ಇಂತಹ ಐತಿಹಾಸಿಕ ಜಾತಿಯಾಧಾರಿತ ಸಾಮಾಜಿಕ ವಿಷಯಗಳನ್ನು ನೇರವಾಗಿ ಸಿನಿಮಾ ಪ್ರತಿಪಾದಿಸುತ್ತಿದ್ದರೂ ಅನೇಕ ನಾಜೂಕುದಾರರು ಇದೊಂದು ಅಪ್ಪಮಗನ ಬಾಂಧವ್ಯದ ಚಿತ್ರ. ಕಾಮಿಡಿ ನಟನೊಬ್ಬನ ಗಂಭೀರ ಚಿತ್ರ ಎಂಬಂತೆ ಬಿಂಬಿಸುತ್ತಾ ಅದರ ಆಶಯವನ್ನು ದಿಕ್ಕುತಪ್ಪಿಸುವ ಯತ್ನವನ್ನು ಜಾತಿವಾದಿಗಳು ಮಾಡುತ್ತಿದ್ದಾರೆ. ಇದರಲ್ಲಿನ ತಾಂತ್ರಿಕ ನ್ಯೂನತೆಗಳೇನೇ ಇರಲಿ ಇದು ಅಪ್ಪಟ ದೇಸಿ ದಲಿತ ಸ್ವಾಭೀಮಾನವನ್ನು ಬಡಿದೆಬ್ಬಿಸುವ ಚಿತ್ರ. ಇದರಿಂದಾಚೆ ಕೂದಲು ಸೀಳಿ ವಿಶ್ಲೇಷಿಸುವ ಹಂತಕ್ಕೆ ನಾನು ಹೋಗಲಾರೆ. ಇಂತಹ ಚಿತ್ರ ಯೋಚಿಸಲು ಮತ್ತು ನಿರ್ಮಿಸಲು ಎಂಟೆದೆ ಸಾಮಾಜಿಕ ಬದ್ದತೆ ಬೇಕು. ಅದನ್ನು ಬಹಳ ಸಮರ್ಥವಾಗಿ ಮಾರಿ ಸೆಲ್ವರಾಜ್ ಮತ್ತು ಉದಯನಿಧಿ ಸ್ಟಾಲಿನ್ ನಿರ್ವಹಿಸಿದ್ದಾರೆ.
ವಡಿವೇಲ್ ಎಂಬ ಸುಪ್ರಸಿದ್ದ ಹಾಸ್ಯನಟನೊಬ್ಬನಿಗೆ ಜೀವಮಾನದ ಅಪೂರ್ವ ಅವಕಾಶ ಎಂಬಂತಹ ಗಂಭೀರ ಪಾತ್ರ. ಅದರಲ್ಲೂ ನಾಯಕ ನಟನ ಪಾತ್ರವನ್ನೇ ನೀಡಿ ವಡಿವೇಲ್ ಒಳಗಿನ ಅಪ್ರತಿಮ ಕಲಾವಿದನನ್ನು ಹೊರಜಗತ್ತಿಗೆ ಪರಿಚಯಿಸಿದ್ದಾರೆ.
ಫಹಾದ ಫಾಜಿಲ್ ಭಾರತ ಚಿತ್ರರಂಗದ ನಿಜವಾದ ನಟರಾಕ್ಷಸ!
ಇಂತಹ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ! ಯಶಸ್ಸಿನ ತುತ್ತತುದಿಯಲ್ಲಿರುವ ಕೀರ್ತಿ ಸುರೇಶ್. ಡಿಎಂಕೆ ಸರ್ಕಾರದ ಯುವಜನ ಖಾತೆಯ ಮಂತ್ರಿಯಾಗಿರುವ ಉದಯನಿಧಿ ಇಂತಹ ಚಿತ್ರದ ನಾಯಕ ಮತ್ತು ನಿರ್ಮಾಪಕ! ಈತ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ. ಇದು ಈ ಚಿತ್ರದ ವಿಚಿತ್ರವೆನಿಸುವ ಕಾಂಬಿನೇಷನ್. ಈ ಚಿತ್ರದ ಕಲಾವಿದರ ಈ ವಿಚಿತ್ರ ಸಂಯೋಜನೆಯೇ ಈ ಪರಿಯಾದ ಯಶಸ್ಸಿಗೆ ಕಾರಣವಾಗಿದೆ. ಮಾರಿ ಸೆಲ್ವರಾಜ್ ಹೇಳಬೇಕಾದ್ದನ್ನು ಢಾಳಾಗಿ, ಅದ್ದೂರಿಯಾಗಿ ಹೇಳುವ ಮೂಲಕ ಜನಸಾಮಾನ್ಯರೆಲ್ಲರನ್ನೂ ತಲುಪಿದ್ದಾರೆ.
ತಮಿಳುನಾಡಿನಲ್ಲಿ ಈ ಚಿತ್ರವೀಗ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಈ ಚಿತ್ರ ಬಿಡುಗಡೆ ಮಾಡದಂತೆ ಒಂದು ವರ್ಗದ ಜನ ತಡೆಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಡಿಎಂಕೆ ಅಧಿಕಾರದಲ್ಲಿದ್ದ ಕಾರಣಕ್ಕೂ ಸ್ಟಾಲಿನ್ ಚಿತ್ರವಾದ ಕಾರಣಕ್ಕೂ ಸಿನಿಮಾ ತೆರೆಕಂಡಿದೆ. ತಪ್ಪದೇ ಎಲ್ಲರೂ ನೋಡಲೇಬೇಕಾದ ಸಿನಿಮಾ ಇದು.
ಸಾವಿರಾರು ವರ್ಷಗಳ ಭಾರತೀಯ ಸಾಮಾಜೋ-ಸಾಂಸ್ಕೃತಿಕ ಸಂರಚನೆಯು ಬಹಳ ಅಸಹ್ಯಕರವಾದುದು. ಈ ಅಸಹ್ಯಗಳನ್ನು ಸರ್ವರೀತಿಯಲ್ಲೂ ಮುಚ್ವಿಟ್ಟು ಆ ಎಲ್ಲಾ ವಿಕೃತಿಗಳಿಗೂ ಪರಂಪರೆ, ವೇದ ಉಪನಿಷತ್ತು, ಸ್ಮೃತಿ, ಧರ್ಮ ಮತ್ತು ದೇವರುಗಳ ಬಣ್ಣಬಳಿದು ಅಸಮಾನತೆ, ಅಗೌರವ, ಅವಮಾನ ಗುಲಾಮಗಿರಿಗಳನ್ನೇ ಜೀವನಕ್ರಮವೆಂದು ಪರಿಭಾವಿಸುವ ಮಟ್ಟಕ್ಕೆ ಜನಸಮುದಾಯಗಳ ಮೆದುಳನ್ನು ಕಂಡಿಷನ್ ಮಾಡಿರುವ ಬ್ರಾಹ್ಮಣ್ಯದ ಹುನ್ನಾರವನ್ನು, ಮಹಾತ್ಮಫುಲೆ, ಪೆರಿಯಾರ್ ಮತ್ತು ಬಾಬಾಸಾಹೇಬರು ಬಹಳ ಕರಾರುವಕ್ಕಾಗಿ ಬಯಲಿಗೆಳೆದರು.
ಫುಲೆಯವರ ದ ಸ್ಲೇವರಿ ಪೆರಿಯಾರರ ಬ್ರಾಹ್ಮಣ್ಯ ಕುರಿತ ಸರಣಿ ಬರಹಗಳು, ಬಾಬಾಸಾಹೇಬರ ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ, ಬ್ರಾಹ್ಮಣ್ಯದ ದಿಗ್ವಿಜಯ ಕೃತಿಗಳು ನಿಜವಾದ ಗತ ಭಾರತದ ಇತಿಹಾಸದ ಚಿತ್ರಣಗಳನ್ನು ಕಟ್ಟಿಕೊಡುತ್ತವೆ.
ಇದೆಲ್ಲವನ್ನೂ ಜಾಗೃತ ಹೊಸತಲೆಮಾರಿನ ಕೆಲವು ಪ್ರಜ್ಞಾವಂತ ಬರಹಗಾರರು, ಕಲಾವಿದರು, ಚಿಂತಕರು, ಹೋರಾಟಗಾರರು ಖಡಕ್ಕಾಗಿ ಗುರ್ತಿಸುತ್ತಾ ವಿವಿಧ ಆಯಾಮಗಳಲ್ಲಿ ಈ ತಾರತಮ್ಯ ನೀತಿಯನ್ನು ಭಿತ್ತರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಮಾರಿ ಸೆಲ್ವರಾಜ್ ಬೆಳ್ಳಿಪರದೆಯ ಮೇಲೆ ತನ್ನ ಇತಿಹಾಸದ ಅನ್ಯಾಯವನ್ನು ಪ್ರತಿಭಟಿಸುತ್ತಾ ಪಾಪತ್ಮರ ಘೋರ ಅಪರಾಧಗಳನ್ನು ಅವರ ಮುಖಕ್ಕೆ ರಾಚುವಂತೆ ಹಿಡಿಯುವ ಪ್ರಯತ್ನವನ್ನು ಬಹಳ ಸಂಯಮದಿಂದ ಮಾಡುತ್ತಿದ್ದಾರೆ. ಮೊದಲ ಚಿತ್ರ “ಪರಿಯೇರಂ ಪೆರುಮಾಳ್” “ಕರ್ಣನ್” “ಮಾಮನ್ನನ್” ಇವೆಲ್ಲದರಲ್ಲೂ ಬ್ರಾಹ್ಮಿನಿಸಂ ಸೃಷ್ಟಿಸಿರುವ ಇಂತಹ ಸಾಮಾಜಿಕ ಸಂರಚನೆಯನ್ನು ಒಡೆಯುತ್ತಲೇ ಬಂದಿದ್ದಾರೆ.
“ಯಾಕೆ ಎಲ್ಲಾ ಸಿನಿಮಾದಲ್ಲೂ ನೀವು ಜಾತಿಯನ್ನೇ ತರುತ್ತೀರಲ್ಲ?’ ಎಂಬ ಪತ್ರಕರ್ತರ ಮಾತಿಗೆ ಮಾರಿ ಸೆಲ್ವರಾಜ್ ಹೇಳುವ ಉತ್ತರ, “ಇಡೀ ನಾಡಿನ ಸಾಮಾಜಿಕ ಜೀವನದಲ್ಲಿ ಮತ್ತು ರಾಜಕಾರಣದಲ್ಲಿ ಜಾತಿ ಕುರಿತು ಮಾಯಾಡುತ್ತಲೇ ಇದ್ದಾರೆ. ಜಾತಿ ಬಳಸಿ ಅಧಿಕಾರ ಕಬಳಿಸುತ್ತಿದ್ದಾರೆ. ಜಾತಿ ಹೆಸರಲ್ಲಿ ಸಂಘರ್ಷ ಮರ್ಯಾದೆ ಹತ್ಯೆಗಳು ನಡೆಯುತ್ತಿದ್ದಾವೆ. ನಾನು ಇಂತಹ ಸೂಕ್ಷ್ಮಗಳನ್ನು ಚಿತ್ರಮಾಧ್ಯಮದಲ್ಲಿ ಹೇಳಿದಾಗ ಮಾತ್ರ ಯಾಕೆ ಅದನ್ನೇ ಪಾಯಿಂಟ್ ಮಾಡ್ತೀರಿ!? ಹೌದು ಇದೆಲ್ಲವೂ ನಾನು ಅನುಭವಿಸಿದ ನೋವುಗಳೇ ಅದನ್ನೇ ಬೇರೆ ಬೇರೆ ರೂಪದಲ್ಲಿ ಹೇಳುತ್ತೇನೆ. ಒಂದಷ್ಟು ಯಶಸ್ವಿ ಚಿತ್ರಕೊಟ್ಟು ಆ ನಂತರ ಹೇಳಬಹುದಾಗಿತ್ತು ಎಂದು ಕೆಲವರು ಹೇಳುತ್ತಾರೆ. ಆದರೆ ನಾನು ಈಗಲೇ ಹೇಳಬೇಕು. ನಾಳೆ ನಾನಿರುತ್ತೇನಾ ಗೊತ್ತಿಲ್ಲ. ಆದರೆ ಅದಕ್ಕಾಗಿ ನಾನು ಕಾಯಲಾರೆ. ಅವಕಾಶ ಸಿಕ್ಕಾಗೆಲ್ಲವೂ ನಾನು ಸಾಧ್ಯವಾದಷ್ಟು ಇದೆಲ್ಲವನ್ನೂ ಹಲವು ರೂಪದಲ್ಲಿ, ಹಲವು ರೂಪಕಗಳಲ್ಲಿ ಹೇಳಿಯೇ ತೀರುತ್ತೇನೆ. ಹೇಳಬೇಕಾದ್ದು ಇನ್ನೂ ಬಹಳವಿದೆ ಅಧಿಕಾರ ಕಬಳಿಸುತ್ತಾರೆ. ನಾನು ಮಾತ್ರ ಯಾಕೆ ಜಾತಿಯನ್ನು ಚಿತ್ರದ ಮೂಲಕ ಹೇಳಬಾರದು? ಇದೆಲ್ಲವೂ ನಾನು ಅನುಭವಿಸಿದ ನೋವು ಕೆಳಸ್ತರದಿಂದ ನೋವನ್ನು ಅನುಭವಿಸಿರುವ ನಾನು ಅದನ್ನು ಹೇಳಲೇಬೇಕಲ್ಲವೇ!?”ಎಂಬ ಬಹಳ ಪ್ರಬುದ್ದವಾಗಿ ಹೇಳುತ್ತಾರೆ. ಹೌದು ನಾವು ಹೇಳಬೇಕಾದ್ದು ಇನ್ನೂ ಬಹಳವಿದೆ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಇಂದಲ್ಲದಿದ್ದರೆ ಇನ್ಯಾವಾಗ? ಇನ್ನೆಷ್ಟು ದಿನ ಇದ್ದಂತಿರು ಇದೇ ನಮ್ಮ ಸಂಸ್ಕೃತಿ ಎಂದು ಒತ್ತಡ ಹೇರುವ ಬ್ರಾಹ್ಮನಿಕಲ್ ಸೋಷಿಯಲ್ ಆರ್ಡರ್ ಕತೆಗಳನ್ನೇ ನೋಡಬೇಕು ನಾವು? ಬದಲಾವಣೆಗೆ ತೆತ್ತುಕೊಳ್ಳೋಣ ಬನ್ನಿ.