ತನ್ನ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ದಾಖಲೆಯ ಸ್ಫೋಟಕ ಶತಕ ಸಿಡಿಸಿದ ವೈಭವ್ ಸೂರ್ಯವಂಶಿಗೆ ಬಿಹಾರ ರಾಜ್ಯ ಸರ್ಕಾರ ಬಂಪರ್ ಬಹುಮಾನ ಘೋಷಿಸಿದೆ.
ಶತಕ ಬಾರಿಸಿದ ವೈಭವ್ ಸೂರ್ಯವಂಶಿಗೆ ಸಿಎಂ ನಿತೀಶ್ ಕುಮಾರ್ ತಮ್ಮ ನಿವಾಸದಲ್ಲಿ ಸನ್ಮಾನಿಸಿದರು. ಇದೇ ವೇಳೆ ಬಿಹಾರ ರಾಜ್ಯ ಸರ್ಕಾರದಿಂದ 10 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದರು.
ವೈಭವ್ ಸೂರ್ಯವಂಶಿಗೆ ಅಭಿನಂದನೆ ತಿಳಿಸಿ ಮಾತನಾಡಿದ ಅವರು, ಕಿರಿಯ ವಯಸ್ಸಿನಲ್ಲೇ ಅವರ ಪ್ರತಿಭೆ ಮುಂದೆ ಭಾರತೀಯ ಕ್ರಿಕೆಟ್‌ಗೆ ಹೊಸ ಭರವಸೆಯಾಗಿದೆ. ಇಂದು ಇಡೀ ದೇಶವೇ ಅವನ ಬಗ್ಗೆ ಹೆಮ್ಮೆ ಪಡುತ್ತಿದೆ. 2024ರಲ್ಲಿ ನಾನು ವೈಭವ್ ಮತ್ತು ಅವರ ತಂದೆಯನ್ನ ಭೇಟಿಯಾಗಿದ್ದೆ, ಆಗಲೇ ನಾನು ಅವರ ಭವಿಷ್ಯ ಉಜ್ವಲವಾಗಿರಲಿದೆ ಎಂದು ಹಾರೈಸಿದ್ದೆ. ಹಾಗೆಯೇ ಇಂದು ಯಶಸ್ಸು ಕಾಣುತ್ತಿದ್ದಾರೆ. ಐಪಿಎಲ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನದ ಬಳಿಕ ನಾನು ಅವರಿಗೆ ಕರೆ ಮಾಡಿ ಮಾತನಾಡಿದ್ದೆ. ವೈಭವ್ ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಇನ್ನಷ್ಟು ದಾಖಲೆಗಳನ್ನು ನಿರ್ಮಿಸಿ ದೇಶಕ್ಕೆ ಕೀರ್ತಿ ತರಲೆಂದು ಹಾರೈಸುತ್ತೇನೆ ಎಂದು ಶುಭಕೋರಿದ್ದಾರೆ.
ಚೊಚ್ಚಲ ಪಂದ್ಯದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ 3ನೇ ಪಂದ್ಯದಲ್ಲೇ ಸ್ಫೋಟಕ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು 35 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ವೇಗದ ಶತಕ ಬಾರಿಸಿದ 2ನೇ ಆಟಗಾರ ಹಾಗೂ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ಗೆಲುವಿನತ್ತ ಸಮೀಪಿಸಿದ್ದ ರಾಜಸ್ಥಾನ ರಾಯಲ್ಸ್ ಮಣಿಸಿದ ಆ ಒಂದು ಕ್ಯಾಚ್
ಐಪಿಎಲ್ ಇತಿಹಾಸದಲ್ಲೇ ಅತಿ ವೇಗದ ಶತಕ ಸಿಡಿಸಿದ ಖ್ಯಾತಿ ಕ್ರಿಸ್ ಗೇಲ್ (30 ಎಸೆತ) ಅವರ ಹೆಸರಿನಲ್ಲಿದೆ. ಇದೀಗ 35 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವೈಭವ್ ಸೂರ್ಯವಂಶಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಉಳಿದಂತೆ ಯೂಸೂಫ್ ಪಠಾಣ್ (37 ಎಸೆತ), ಡೇವಿಡ್ ಮಿಲ್ಲರ್ (38 ಎಸೆತ), ಟ್ರಾವಿಸ್ ಹೆಡ್ (39 ಎಸೆತ) ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಟಾಪ್-5 ಆಟಗಾರ ಪಟ್ಟಿಯಲ್ಲಿದ್ದಾರೆ.
ವೈಭವ್ ಈ ಆವೃತ್ತಿಯಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಜೊತೆಗೆ ಅತೀ ಕಿರಿಯ ವಯಸ್ಸಿಗೆ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾರೆ. ಇಡೀ ಐಪಿಎಲ್‌ನಲ್ಲೇ ಅತೀ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಯಶಸ್ವಿ ಜೈಸ್ವಾಲ್ ಹೆಸರಲ್ಲಿದೆ. 2023ರ ಆವೃತ್ತಿಯಲ್ಲಿ ಜೈಸ್ವಾಲ್ ಕೆಕೆಆರ್ ವಿರುದ್ಧ ಕೇವಲ 13 ಎಸೆತಗಳಲ್ಲಿಅರ್ಧ ಶತಕ ಬಾರಿಸಿದ್ದರು. 2018ರಲ್ಲಿ ಕೆ.ಎಲ್ ರಾಹುಲ್, 2022ರಲ್ಲಿ ಪ್ಯಾಟ್ ಕಮ್ಮಿನ್ಸ್ (ಅಂದು ಕೆಕೆಆರ್) ಮುಂಬೈ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಕ್ರಮವಾಗಿ 2, 3ನೇ ಸ್ಥಾನಗಳಲ್ಲಿದ್ದಾರೆ.
आई॰पी॰एल॰ के इतिहास में सबसे कम उम्र (14 साल) में शतक लगाने वाले खिलाड़ी बने बिहार के श्री वैभव सूर्यवंशी को बधाई एवं शुभकामनाएं। वे अपनी मेहनत और प्रतिभा के बलबूते भारतीय क्रिकेट की एक नई उम्मीद बन गए हैं। सभी को उन पर गर्व है। श्री वैभव सूर्यवंशी एवं उनके पिता जी से वर्ष 2024… pic.twitter.com/n3UmiqwTBX
— Nitish Kumar (@NitishKumar) April 29, 2025