ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರ ಅಧಿಕಾರಾವಧಿ ಇನ್ನು 6 ತಿಂಗಳಲ್ಲಿ ಮುಗಿಯಲಿದೆ. ಆದರೆ, ಈಗಾಗಲೇ ಆ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.
ವೈದ್ಯಕೀಯ ಅಧೀಕ್ಷಕ ಡಾ. ಸಿ ಅರುಣಕುಮಾರ್, ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಈಶ್ವರ ಹೊಸಮನಿ, ಕ್ಷಕಿರಣ ವಿಭಾಗದ ಮುಖ್ಯಸ್ಥ ಜಿ ಸಿ ಪಾಟೀಲ, ಉಪ ವೈದ್ಯಕೀಯ ಅಧಿಕ್ಷಕ ಡಾ. ರಾಜಶೇಖರ ದ್ಯಾಬೇರಿ ಮತ್ತು ಜೀವ ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಎಂ ಸಿ ಚಂದ್ರು ನಿರ್ದೇಶಕ ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.
2019ರ ನವೆಂಬರ್ನಲ್ಲಿ ನಿರ್ದೇಶಕರ ಹದ್ದೆಗೆ ಆಯ್ಕೆ ಬಯಸಿ ಒಟ್ಟು 14 ವೈದ್ಯರು ಅರ್ಜಿ ಸಲ್ಲಿಸಿದ್ದರು. ಅರ್ಜಿಗಳನ್ನು ಪರಿಶೀಲಿಸಿದ ಆಯ್ಕೆ ಸಮಿತಿಯು ಐವರನ್ನು ಸಂದರ್ಶನಕ್ಕೆ ಆಹ್ವಾನಿಸಿತು. ಪ್ರಭಾರಿ ನಿರ್ದೇಶಕರಾಗಿದ್ದ ಡಾ. ರಾಮಲಿಂಗಪ್ಪ ಅಂಟರತಾನಿ, ಶರೀರಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಎಫ್. ಕಮ್ಮಾರ, ಜೀವ ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಎಂ ಸಿ ಚಂದ್ರು ಮತ್ತು ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪಿ ಕೆ ವಾರಿ ಸಂದರ್ಶನಕ್ಕೆ ಹಾಜರಾಗಿದ್ದರು. ಔಷಧ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ದತ್ತಾತ್ರೇಯ ಎ ಎನ್ ಅವರು ಗೈರಾಗಿದ್ದರು. ಈ ವೇಳೆ ಡಾ. ರಾಮಲಿಂಗಪ್ಪ ಅಂಟರತಾನಿ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಮುಂದಿನ 6 ತಿಂಗಳಲ್ಲಿ ಇವರ ಹುದ್ದೆ ಮುಗಿಯಲಿದ್ದು, ಆಸ್ಥಾನಕ್ಕೆ ಪೈಪೋಟಿಗಳು ನಡೆಯುತ್ತಿವೆ.
ಕಿಮ್ಸ್ ನಿರ್ದೇಶಕರ ಆಯ್ಕೆ ಪ್ರಕ್ರಿಯೆ
ಕಿಮ್ಸ್ನ ಆಡಳಿತಾತ್ಮಕ ಹುದ್ದೆಯಲ್ಲಿ ಹಾಗೂ ಹಲವು ವಿಭಾಗಗಳಲ್ಲಿ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿರುವ 50 ವರ್ಷ ಮೇಲ್ಪಟ್ಟವರು ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ನಿರ್ದೇಶಕರ ಆಯ್ಕೆ ಸಮಿತಿಯಲ್ಲಿ ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಸಚಿವರೇ ಮುಖ್ಯಸ್ಥರಾಗಿದ್ದು, ಅವರ ಸಮ್ಮುಖದಲ್ಲೇ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಅದಕ್ಕೂ ಮುನ್ನ ಅರ್ಜಿಗಳನ್ನು ಪರಿಶೀಲಿಸಲು ಸರ್ಕಾರವು ಉನ್ನತ ಮಟ್ಟದ ಆಯ್ಕೆ ಸಮಿತಿ ರಚಿಸುತ್ತದೆ. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ, ಅರ್ಹವಾಗಿರುವುದನ್ನು ಅಂತಿಮಗೊಳಿಸಿ ಸಮಿತಿಯು ಸರ್ಕಾರದ ಮುಖ್ಯಕಾರ್ಯದರ್ಶಿಗೆ ವರದಿ ಸಲ್ಲಿಸುತ್ತದೆ. ಅದನ್ನು ಆಧರಿಸಿ ವೈದ್ಯಕೀಯ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಮುಖ್ಯ ಕಾರ್ಯದರ್ಶಿ ಒಳಗೊಂಡ ತಂಡ ನಿರ್ದೇಶಕರ ಸಂದರ್ಶನ ನಡೆಸುತ್ತದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | 92 ಕೆ.ಜಿ ಗಾಂಜಾ, ಕಾರು ವಶ; ಆರೋಪಿಗಳು ಪರಾರಿ
“ಕಿಮ್ಸ್ ನಿರ್ದೇಶಕರ ಹುದ್ದೆ ಆಯ್ಕೆ ಪ್ರಕ್ರಿಯೆ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಕೆಲ ಆಕಾಂಕ್ಷಿಗಳು ರಾಜಕೀಯ ಮುಖಂಡರು ಮತ್ತು ಸಚಿವರ ಮೂಲಕ ಒತ್ತಡ ತರುತ್ತಿದ್ದಾರೆ. ಇನ್ನೂ ಕೆಲವರು ಸೇವಾ ಹಿರಿತನ ಹಾಗೂ ಅರ್ಹತೆ ಆಧಾರದಲ್ಲಿ ಹುದ್ದೆ ಆಕಾಂಕ್ಷಿಗಳಾಗಿದ್ದಾರೆ” ಎಂದು ಕಿಮ್ಸ್ನ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.