ಭಾನುವಾರ ನಿಗದಿಯಾಗಿದ್ದ ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಗೂ (ನೀಟ್) ಒಂದು ದಿನ ಮುನ್ನ ಕೋಟಾದಲ್ಲಿ ನೀಟ್ ಆಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಕೋಣೆಯ ಕಬ್ಬಿಣದ ಗ್ರಿಲ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಹೆಸರನ್ನು ಬಹಿರಂಗಪಡಿಸಲು ಕುನ್ಹಾಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಅರವಿಂದ್ ಭಾರದ್ವಾಜ್ ನಿರಾಕಿಸಿದ್ದಾರೆ. ಆ ಬಾಲಕಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು. ಮಧ್ಯಪ್ರದೇಶದ ಶಿಯೋಪುರದವಳು ಎಂದು ಹೇಳಿದರು.
ಇದನ್ನು ಓದಿದ್ದೀರಾ? ರಾಜಸ್ಥಾನ | ಜೆಇಇ ಆಕಾಂಕ್ಷಿ ಆತ್ಮಹತ್ಯೆ; 24 ಗಂಟೆಯಲ್ಲೇ ಎರಡನೇ ಪ್ರಕರಣ
ಕಳೆದ ಹಲವು ವರ್ಷಗಳಿಂದ ಕೋಟಾದಲ್ಲಿ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದ ಬಾಲಕಿ ಕೋಚಿಂಗ್ ಸಂಸ್ಥೆಯಲ್ಲಿ ನೀಟ್-ಯುಜಿಗೆ ತಯಾರಿ ನಡೆಸುತ್ತಿದ್ದಳು. ವಿದ್ಯಾರ್ಥಿನಿ ಭಾನುವಾರ ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಯಲಿರುವ ನೀಟ್-ಯುಜಿ ಪರೀಕ್ಷೆಯನ್ನು ಬರೆಯಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಘಟನೆಯ ಸಮಯದಲ್ಲಿ ಕುಟುಂಬ ಸದಸ್ಯರು ಮನೆಯಲ್ಲಿದ್ದರು ಮತ್ತು ರಾತ್ರಿ 9 ಗಂಟೆ ಸುಮಾರಿಗೆ ಆಕೆಯ ಮೃತ ದೇಹ ಪತ್ತೆಯಾಗಿದೆ. ಕೋಣೆಯಲ್ಲಿ ಯಾವುದೇ ಸುಸೈಡ್ ಲೆಟರ್ ಕಂಡುಬಂದಿಲ್ಲ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಈ ವರ್ಷದ ಜನವರಿಯಿಂದ ಈವರೆಗೆ ಕೋಟಾದಲ್ಲಿ ಕೋಚಿಂಗ್ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ 14ನೇ ಪ್ರಕರಣ ಇದಾಗಿದೆ. ಕಳೆದ ವರ್ಷ ಕೋಟಾದಲ್ಲಿ ಒಟ್ಟು 17 ಕೋಚಿಂಗ್ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೋಟಾ ಕೋಚಿಂಗ್ ಸೆಂಟರ್ಗಳಿಗೆ ಹೆಸರುವಾಸಿಯಾಗಿದೆ. ಜೆಇಇ, ನೀಟ್ ಮೊದಲಾದ ಸ್ಪರ್ಧಾತ್ಪಕ ಪರೀಕ್ಷೆಗಳ ತಯಾರಿ ನಡೆಸುವವರು ಹೆಚ್ಚಾಗಿ ಕೋಟಾದ ಕೋಚಿಂಗ್ ಸೆಂಟರ್ಗಳಲ್ಲಿ ತರಬೇತಿ ಪಡೆಯುತ್ತಾರೆ. ಆದರೆ ಅದೆಷ್ಟೋ ವಿದ್ಯಾರ್ಥಿಗಳು ಕಲಿಕೆಯ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
