ರಾಜಕೀಯ ವಿಷಯಗಳ ಬಗ್ಗೆ ಬಾಲಿವುಡ್‌ನ ಮೌನವನ್ನು ನಟ ಪ್ರಕಾಶ್ ರಾಜ್ ಟೀಕಿಸಿದ್ದಾರೆ. “ಅರ್ಧದಷ್ಟು ನಟರು ಮಾರಾಟವಾಗಿದ್ದಾರೆ. ಮಾತನಾಡಲು ತುಂಬಾ ಹೆದರುತ್ತಾರೆ ಅಥವಾ ಸುಮ್ಮನಿದ್ದು ಬಿಡುತ್ತಾರೆ” ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ಇತ್ತೀಚೆಗೆ ‘ದಿ ಲಲ್ಲನ್ ಟಾಪ್’ ಜೊತೆಗೆ ನಡೆದ ಸಂವಾದದಲ್ಲಿ, ಚಲನಚಿತ್ರೋದ್ಯಮ ಏಕೆ ಮೌನವಾಗಿರಬಾರದು? ಕಲಾವಿದರು ಏಕೆ ಧೈರ್ಯಶಾಲಿಯಾಗಿರಬೇಕು? ವಿಶೇಷವಾಗಿ ಕಥೆಗಳನ್ನು ಹೇಳುವ ಸ್ವಾತಂತ್ರ್ಯ ಅಪಾಯದಲ್ಲಿರುವ ಬಗ್ಗೆ ನಟ ಮಾತನಾಡಿದರು.
ಇದನ್ನು ಓದಿದ್ದೀರಾ? ನಮ್ಮ ರಾಮ ಸಕುಟುಂಬ ಪರಿವಾರದವನು, ಅವರ ರಾಮ ಕೊಲ್ಲುವವನು: ಪ್ರಕಾಶ್ ರಾಜ್
ರಾಜ್ ತನ್ನ ಸಹ ನಟರುಗಳನ್ನೂ ಟೀಕಿಸಿದರು. “ಅರ್ಧದಷ್ಟು ನಟರು ಮಾರಾಟವಾಗಿದ್ದಾರೆ. ನನ್ನ ಸ್ವಂತ ಸಹೋದ್ಯೋಗಿಗಳು ಮತ್ತು ಅವರಲ್ಲಿ ಅರ್ಧದಷ್ಟು ಜನರು ಮಾತನಾಡಲು ಭಯಪಡುತ್ತಾರೆ. ಏಕೆಂದರೆ ಅವರಿಗೆ ಮಾತನಾಡುವಷ್ಟು ಶಕ್ತಿಯಿಲ್ಲ” ಎಂದಿದ್ದಾರೆ.
ಇನ್ನು ತಾನು ರಾಜಕೀಯ ವಿಷಯಗಳ ಬಗ್ಗೆ ಮಾತನಾಡಲು ಹೆದರುತ್ತೇನೆ ಎಂದು ಒಪ್ಪಿಕೊಂಡ ತನ್ನ ಆಪ್ತ ಸ್ನೇಹಿತನೊಂದಿಗಿನ ಸಂಭಾಷಣೆಯನ್ನೂ ಪ್ರಕಾಶ್ ರಾಜ್ ನೆನಪಿಸಿಕೊಂಡರು.
“ನನಗೆ ಒಬ್ಬ ಆಪ್ತ ಸ್ನೇಹಿತನಿದ್ದಾನೆ. ಅವನು ನನಗೆ ‘ಪ್ರಕಾಶ್ ನಿಮಗೆ ಶಕ್ತಿ ಇದೆ, ನೀವು ಮಾತನಾಡಬಹುದು, ನನಗೆ ಸಾಧ್ಯವಿಲ್ಲ’ ಎಂದು ಹೇಳಿದ್ದನು. ನಾನು ಅವನನ್ನು ಅರ್ಥಮಾಡಿಕೊಂಡಿರುವುದಾಗಿ ಹೇಳಿದೆ. ಆದರೆ ನಾನು ಆತನನ್ನು ಕ್ಷಮಿಸಲಾಗದು. ಏಕೆಂದರೆ ಭವಿಷ್ಯದಲ್ಲಿ, ಇತಿಹಾಸವು ಅಪರಾಧಗಳನ್ನು ಮಾಡಿದವರನ್ನು ಕ್ಷಮಿಸುತ್ತದೆ. ಆದರೆ ಮೌನವಾಗಿರುವವರನ್ನು ಕ್ಷಮಿಸುವುದಿಲ್ಲ. ಎಲ್ಲರೂ ಜವಾಬ್ದಾರರಾಗುತ್ತಾರೆ” ಎಂದು ಪ್ರಕಾಶ್ ರಾಜ್ ಹೇಳಿದರು.
ಇದನ್ನು ಓದಿದ್ದೀರಾ? ಪ್ರಕಾಶ್ ರಾಜ್ ಬಿಜೆಪಿ ಸೇರ್ಪಡೆ ವದಂತಿ: ಬಹುಭಾಷಾ ನಟ ಹೇಳಿದ್ದೇನು?
“ಸರ್ಕಾರಗಳು ಕೆಲವು ಇತಿಹಾಸವನ್ನು ಮರೆಮಾಚಲು ಯತ್ನಿಸಿದರೂ ಕೂಡಾ ಚಲನಚಿತ್ರ ನಿರ್ಮಾಪಕರು ತಮ್ಮ ಸಿನಿಮಾದ ಕಥೆ ಏನಿದೆ ಅದಕ್ಕೆ ಬದ್ಧರಾಗಿರಬೇಕು. ಯಾವುದೇ ಪ್ರಬಲ ಸರ್ಕಾರವು ಚರ್ಚೆಗಳನ್ನು ನಿಲ್ಲಿಸುತ್ತದೆ. ಕಲಾವಿದರೂ ಕೂಡಾ ಇದಕ್ಕೆ ಬದ್ಧರಾಗಿರಬೇಕು. ಅವರು ಯಾವ ರೀತಿಯ ಚಲನಚಿತ್ರಗಳನ್ನು ಮಾಡುತ್ತಾರೆ ಎಂಬುದರ ಪ್ರಜ್ಞೆಯನ್ನು ಹೊಂದಿರಬೇಕು. ತಾವು ನಟಿಸಿ ಚಿತ್ರವನ್ನು ಬಿಡುಗಡೆ ಮಾಡಲು ಹೋರಾಡಲು ಸಿದ್ಧರಾಗಿರಬೇಕು. ಆ ದೃಢತೆಯ ಅಗತ್ಯವಿದೆ” ಎಂದರು.
ಫವಾದ್ ಖಾನ್ ಮತ್ತು ವಾಣಿ ಕಪೂರ್ ನಟಿಸಿದ ‘ಅಬೀರ್ ಗುಲಾಲ್’ ಚಿತ್ರಕ್ಕೆ ನಿಷೇಧ ಹೇರಿರುವ ಬಗ್ಗೆಯೂ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಈ ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.
ಆದರೆ ಒಂದು ಸಿನಿಮಾವು ವಿವಾದವನ್ನು ಹುಟ್ಟುಹಾಕಬಹುದು ಎಂಬ ಕಾರಣಕ್ಕಾಗಿ ಚಲನಚಿತ್ರಗಳನ್ನು ನಿಷೇಧಿಸುವ ಕಲ್ಪನೆಯನ್ನು ರಾಜ್ ವಿರೋಧಿಸಿದರು. “ನಾನು ಯಾವುದೇ ಚಲನಚಿತ್ರವನ್ನು ನಿಷೇಧಿಸುವ ಪರವಾಗಿಲ್ಲ, ಅದು ಪ್ರಚಾರವಾಗಲಿ ಅಥವಾ ಇಲ್ಲದಿರಲಿ. ಸಿನಿಮಾವು ಮಕ್ಕಳ ಮೇಲಿನ ದೌರ್ಜನ್ಯ ಅಥವಾ ಅಶ್ಲೀಲತೆಯನ್ನು ಉತ್ತೇಜಿಸದೆ ಇರುವಾಗ ಆ ಚಿತ್ರವನ್ನು ಯಾಕೆ ನಿಷೇಧಿಸಬೇಕು? ಜನರು ನಿರ್ಧರಿಸಲಿ” ಎಂದು ಹೇಳಿದರು.
