ನಮ್ಮ ರಾಮ ಸಕುಟುಂಬ ಪರಿವಾರದವನು, ಅವರ ರಾಮ ಕೊಲ್ಲುವವನು: ಪ್ರಕಾಶ್‌ ರಾಜ್‌

1
407

ತಮ್ಮ ಭಾಷಣದುದ್ದಕ್ಕೂ ವಿಡಂಬನೆ, ಕತೆ, ರೂಪಕಗಳನ್ನು ಬಳಸಿದ ಪ್ರಕಾಶ್‌ ರಾಜ್‌ ಅವರು ಪ್ರಧಾನಿಯನ್ನು ’ಮಹಾಪ್ರಭು’ ಎಂದು ಸಂಬೋಧಿಸುತ್ತಲೇ ಕಾಲೆಳೆದರು

“ನಮ್ಮ ರಾಮ ಸಕುಟುಂಬ, ಸಪರಿವಾರದವನು. ಅವರ ರಾಮ ಕೊಲ್ಲುವವನು” ಎಂದು ಬಹುಭಾಷಾ ನಟ, ಹೋರಾಟಗಾರ ಪ್ರಕಾಶ್ ರಾಜ್‌ ಹೇಳಿದರು.

ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ “ನವೀನ್‌ ಸೂರಿಂಜೆ ಅವರು ಬರೆದಿರುವ ’ಮಹೇಂದ್ರ ಕುಮಾರ್‌- ನಡುಬಗ್ಗಿಸದ ಎದೆಯ ದನಿ’ ಕೃತಿ ಬಿಡುಗಡೆ ಕಾರ್ಯಕ್ರಮ”ದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತಮ್ಮ ಭಾಷಣದುದ್ದಕ್ಕೂ ವಿಡಂಬನೆ, ಕತೆ, ರೂಪಕಗಳನ್ನು ಬಳಸಿದ ಅವರು ಪ್ರಧಾನಿ ಮೋದಿಯವರನ್ನು ’ಮಹಾಪ್ರಭು’ ಎಂದು ಸಂಬೋಧಿಸುತ್ತಲೇ ಕಾಲೆಳೆದರು.

“ಜೈ ಶ್ರೀರಾಮ್ ಅಂತೆ. ಯಾವ ಥರದ ರಾಮ ನಮಗೆ ಗೊತ್ತು ಅಂತ ಅವರಿಗೆ ಹೇಳಬೇಕು. ನಮ್ಮ ಮನೆ ಮಾತು ರಾಮ. ‘ಅಯ್ಯೋ ರಾಮ’, ’ರಾಮರಾಮ’ ಎಂದು ಕೆಲಸವನ್ನು ನಾವು ಆರಂಭಿಸುತ್ತೇವೆ. ಆದರೆ ಇವರದ್ದು ಕೊಲ್ಲುವ ರಾಮ” ಎಂದು ಅಭಿಪ್ರಾಯಪಟ್ಟರು.

“ನಮ್ಮ ಊರುಗಳಲ್ಲಿ, ಜನಪದದಲ್ಲಿ, ಜನಜೀವನದಲ್ಲಿ ಇರುವ ನಮ್ಮ ರಾಮ-  ಸಕುಟುಂಬ, ಸಪರಿವಾರದವನು ಮತ್ತು ಮರ್ಯಾದಾ ಪುರುಷ. ನಮ್ಮ ರಾಮನೊಂದಿಗೆ ಸೀತೆ, ಲಕ್ಷ್ಮಣ, ಹನುಮಂತ ಇದ್ದಾರೆ. ಆದರೆ ಇವರು ಸೀತೆಯನ್ನು ಹೊರಗಿಡುತ್ತಾರೆ. ಮಹಾಪ್ರಭುಗಳಿಗೆ ಕಟುಂಬ ಇಷ್ಟವಿಲ್ಲ. ಅದಕ್ಕೆ ಬಾಲರಾಮ ಅನ್ನುತ್ತಾರೆ. ಬಾಲರಾಮನನ್ನು ಇವರು ಕರೆದುಕೊಂಡು ಬರುತ್ತಾರಂತೆ. ಏನ್ರೀ ಈ ದೇಶದ ಗತಿ?” ಎಂದು ಪ್ರಶ್ನಿಸಿದರು.

“ಚಾರ್‌ ಮಿನಾರ್‌ ಏರಿಯಾದಲ್ಲಿ ಹಿಂದಿ ಸಿನಿಮಾವೊಂದರ ಶೂಟಿಂಗ್ ಮಾಡುತ್ತಿದ್ದೆ. ರಾತ್ರಿ ಹನ್ನೊಂದು ಗಂಟೆಯ ಸಮಯ. ಚಾರ್‌ ಮಿನಾರ್‌ ಪಕ್ಕದಲ್ಲಿ ಒಂದು ಸಣ್ಣದೊಂದು ಗುಡಿ ಕಟ್ಟಿಕೊಂಡಿದ್ದಾರೆ. ಅಲ್ಲಿ ಪೂಜೆ ನಡೆಯುತ್ತಿತ್ತು. ಒಂದು ಗುಂಪು ಜೋರಾಗಿ ’ಜೈಸೀರಾಮ್‌’ ಎಂದು ಕೂಗಿತು. ಭಂಗಿಯ ಮತ್ತಿನಲ್ಲಿ ಸ್ವಲ್ಪ ತೂರಾಡುತ್ತಿದ್ದರು. ಮತ್ತೆ ‘ಜೈಸೀರಾಮ್‌’ ಎಂದು ಕೂಗಿದರು. ಅವರನ್ನು ಹತ್ತಿರ ಕರೆದು, ’ಜೈಸೀರಾಮ್’ ಅಲ್ಲ ಕಣೋ ‘ಜೈ ಶ್ರೀರಾಮ್‌’ ಎನ್ನಬೇಕು. ಕುಡಿದು ಓಡಾಡಬೇಡಿ. ನಿಮ್ಮ ದೇವರ ಹೆಸರನ್ನು ಶ್ರದ್ಧೆಯಿಂದ ಹೇಳೋದು ಕಲಿಯಿರಿ ಎಂದು ತಿಳಿಸಿದೆ. ಊರೆಲ್ಲ ನಕ್ಕರು. ಇದೇ ನಮ್ಮ ಆಟಿಟ್ಯೂಡ್” ಎಂದು ತಿಳಿಸಿದರು.

“ಮೊನ್ನೆ ಮಾಡಿದ ಭಾಷಣದಲ್ಲಿ ಏಕವಚನ ಹೆಚ್ಚಾಯಿತು ಎಂದು ಬಿಜೆಪಿಯವರು ನನ್ನ ಬೈದರು. ಹೀಗಾಗಿ ಅವರನ್ನು ಮಹಾಪ್ರಭು ಎಂದು ಕರೆಯುತ್ತೇನೆ. ಆಕ್ಷೇಪ ವ್ಯಕ್ತಪಡಿಸಿದವರಲ್ಲಿ, ‘ವಿಷಯ ಸರಿ ಇತ್ತಾ?’ ಅಂತ ಕೇಳಿದೆ. ‘ವಿಷಯ ಇತ್ತು ಸಾರ್‌, ಆದರೆ ಏಕವಚನದಲ್ಲಿ ಬೈಯಬಾರದಿತ್ತು’ ಎಂದರು. ಹಾಗಾದರೆ ಇನ್ನು ಮೇಲೆ ಮಹಾಪ್ರಭು ಎನ್ನುತ್ತೇನೆ ಬಿಡಪ್ಪ ಎಂದೆ. ಮಹಾಪ್ರಭುವಿನ ಅಂತಃಪುರಕ್ಕೆ ಹೋಗುವವರು ಯಾರು? ಅವರ ಹತ್ತಿರ ಇರುವವರು ಯಾರು? ಮೇಕಪ್ ಮ್ಯಾನ್, ಕ್ಯಾಸ್ಟ್ಯೂಮರ್‌, ಕ್ಯಾಮೆರಾ ಮ್ಯಾನ್‌- ಇವರನ್ನು ಬಿಟ್ಟರೆ ಯಾರೂ ಇರುವುದಿಲ್ಲ ಎಂದು ಕುಟುಕಿದರು.

“ರಾಜಕಾರಣಿಗಳು, ಮಹಾಪ್ರಭುಗಳು ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಾರೆ. ಶ್ರೀಮಂತರು ಯುದ್ಧಕ್ಕೆ ಬೇಕಾದ ಊಟ, ಉಪಚಾರ ಖರ್ಚುಗಳನ್ನು ನೋಡಿಕೊಳ್ಳುತ್ತಾರೆ. ಬಡವರು ತಮ್ಮ ಮಕ್ಕಳನ್ನು ಯುದ್ಧಕ್ಕೆ ಕಳುಹಿಸುತ್ತಾರೆ. ಯುದ್ಧ ಮುಗಿದ ಮೇಲೆ ರಾಜಕಾರಣಿಗಳು, ಮಹಾಪ್ರಭುಗಳು ಉಳಿದ ಶಸ್ತ್ರಾಸ್ತ್ರಗಳನ್ನು, ಮಾಡಿದ ವೆಚ್ಚವನ್ನು ವಾಪಸ್‌ ಪಡೆಯುತ್ತಾರೆ. ಗೆದ್ದ ನೆಲದಲ್ಲಿ ಶ್ರೀಮಂತರು ‌ವ್ಯಾಪಾರ ಮಾಡುತ್ತಾರೆ. ಬಡವರು ತಮ್ಮ ಮಕ್ಕಳ ಹೆಣಗಳನ್ನು ಹುಡುಕುತ್ತಾ ಅಲೆಯುತ್ತಿರುತ್ತಾರೆ. ಇಂದು ಆಗುತ್ತಿರುವುದು ಇಷ್ಟೇ” ಎಂದು ಎಚ್ಚರಿಸಿದರು.

“ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇತ್ತು. ಬೇಡವೆಂದು ಈ ಪಕ್ಷವನ್ನು ಹಾರಿಸಿದರು. ತಮ್ಮ ಗಾಯಗಳನ್ನು ಮಾಗಿಸುವುದಾಗಿ ಮಾತು ಕೊಟ್ಟಿದ್ದರಿಂದ ಇವರನ್ನು ಗೆಲ್ಲಿಸಿದರು. ಆದರೆ ಗಾಯವನ್ನು ಮಾಗಿಸುತ್ತೇವೆ ಎಂದು ಬಂದವರಿಂದಲೇ ಹೆಚ್ಚು ಗಾಯಗಳಾಗಿವೆ” ಎಂದು ಬೇಸರ ವ್ಯಕ್ತಪಡಿಸಿದರು.

“ಪುಲ್ವಾಮ ಘಟನೆ ನೋಡುತ್ತಿದ್ದೆ. ಇಡೀ ದೇಶದಲ್ಲಿ ಈವೆಂಟ್‌ ಥರ ಮಾಡುತ್ತಿದ್ದರು. ಶವಪೆಟ್ಟಿಗೆಗಳನ್ನು ಮೆರವಣಿಗೆ ಮಾಡುತ್ತಾ ಗಾಡಿಗಳು ಹೋಗುತ್ತಿದ್ದವು. ನೋಡುನೋಡುತ್ತಿದ್ದಂತೆ ಅನಿಸಿದ್ದು- ಎಲ್ಲ ಶವಪೆಟ್ಟಿಗೆಗಳ ಗಾಡಿಗಳು ಹಳ್ಳಿಗಳ ಕಡೆ ಹೋಗುತ್ತಿದ್ದವು. ದೇಶವನ್ನು ಕಾಯುವ ಸೈನಿಕ, ದೇಶಕ್ಕೆ ಅನ್ನ ಹಾಕುವ ರೈತ ಇಬ್ಬರೂ ಹಳ್ಳಿಯವರೇ ಹೊರತು ಪಟ್ಟಣದವರಲ್ಲ” ಎಂದರು.

ಇದನ್ನೂ ಓದಿರಿ: ಹಿಂದುತ್ವಕ್ಕೆ ಅಂಬೇಡ್ಕರ್‌ವಾದವೇ ಪರ್ಯಾಯ: ಸಂತೋಷ್ ಲಾಡ್

“ಗೌರಿಯನ್ನು ಕೊಂದ ಪರಶುರಾಮ ವಾಗ್ಮೋರೆಯು ತಂದೆ ತಾಯಿಗೆ ಒಬ್ಬನೇ ಮಗ. ಈಗ ವಾಗ್ಮೋರೆಯ ಪೋಷಕರು ಏನು ಮಾಡುತ್ತಿದ್ದಾರೆಂದು ಇವರು ನೋಡುತ್ತಿದ್ದಾರಾ? ಈ ಥರದ ಹೋರಾಟದಲ್ಲಿ ಬಡವರ ಮಕ್ಕಳು ಸತ್ತದ್ದು ಕೆಲವರಾದರೂ ಇವರು ಕೊಂದದ್ದು ಸಾವಿರಾರು ಕನಸುಗಳನ್ನು. ಇದು ನಮಗೆ ಅರ್ಥವಾಗಬೇಕಿದೆ” ಎಂದು ನುಡಿದರು.

ಮಹಾಪ್ರಭು ಕುಸಿದು ಬಿದ್ದ ಪ್ರಸಂಗ

ಪ್ರಕಾಶ್ ರಾಜ್ ಅವರು ಆಕಾರ್‌ ಪಟೇಲ್ ಅವರ ಕಾದಂಬರಿಯೊಂದನ್ನು ಉಲ್ಲೇಖಿಸಿ ಹೇಳಿದ ಕಥೆಯೊಂದು ಇಡೀ ಸಭಾಂಗಣವನ್ನು ನಗೆಗಡಲಲ್ಲಿ ತೇಲಿಸಿತು. ತೀವ್ರ ವಿಡಂಬನೆ ಹೊಂದಿದ್ದ ಈ ಪ್ರಸಂಗದ ಮೂಲಕ ಪ್ರಧಾನಿ ಮೋದಿಯವರ ಕಾಲೆಳೆಯಲಾಯಿತು.

ಆ ಕಥೆ ಹೀಗಿತ್ತು: “ಒಂದು ಊರಿನಲ್ಲಿ ದೊಡ್ಡ ಆಸ್ಪತ್ರೆಯ ಉದ್ಘಾಟನೆಯ ಕಾರ್ಯಕ್ರಮ ಆಯೋಜನೆಯಾಗಿತ್ತು. ಮಹಾಪ್ರಭುಗಳು ಬರುತ್ತಿದ್ದಾರೆ. ಜನಸ್ತೋಮ ಸೇರಿದೆ. ಮೀಡಿಯಾಗಳು ಬಂದಿವೆ. ಬಾವುಟಗಳು ಹಾರಾಡುತ್ತಿದೆ. ಸಾಹೇಬರು ಪ್ಲೈಟ್‌ನಿಂದ ಇಳಿದು ನಡೆದುಕೊಂಡು ಆಗಮಿಸುತ್ತಿದ್ದಾಗ, ಹೂವಿನ ಮಳೆಗರೆಯಲಾಯಿತು. ಅವರು ಒಬ್ಬರೇ ಇರಬೇಕಾದ್ದರಿಂದ ಸ್ಟೇಜ್ ಖಾಲಿಯಾಗುತ್ತದೆ. ಮಹಾಫ್ರಭುಗಳು ಬಂದು ನಿಂತ ಮೇಲೆ ಎಲ್ಲವೂ ನಿಶ್ಯಬ್ಧ. ಮಹಾಪ್ರಭುಗಳು ಆ ಕಡೆ ನೋಡಿದಾಗ ಬೆಳಕು ಸರಿಯಾಗಿ ಬರುತ್ತಿಲ್ಲ ಎಂದು ಗೊತ್ತಾದ ತಕ್ಷಣ ಸನ್ನೆ ಮಾಡುತ್ತಾರೆ. ಆ ಕಡೆ ಇದ್ದ ಮೀಡಿಯಾ ಕ್ಯಾಮೆರಾಗಳನ್ನು ಈ ಕಡೆ ತರಲಾಗುತ್ತದೆ. ಭಾವನಾತ್ಮಕ ಭಾಷಣ ಶುರುವಾಗುತ್ತದೆ. ಆಂಗಿಕ ಅಭಿನಯ ಎಲ್ಲ ನಡೆಯುತ್ತದೆ. ಮಹಾಪ್ರಭು ದಿಢೀರನೆ ಕುಸಿದು ಬಿಡುತ್ತಾರೆ. ಒಂದು ಕ್ಷಣ ಇಡೀ ಸಭೆಯಲ್ಲಿ ಮೌನ.  ‘ಇದು ಇನ್ನೊಂದೇನಾದರೂ ಡ್ರಾಮಾ ಇರಬೇಕು, ಎದ್ದು ಏನಾದ್ರೂ ಹೇಳ್ತಾರೆ’ ಅಂತ ಜನರ ಮೌನ! ಕುಸಿದು ಬಿದ್ದದ್ದು ಬೇರೆ ಏನೋ ಕಾರಣಕ್ಕೆಂದು ತಿಳಿದು ಅಂಗರಕ್ಷಕ ಬರುತ್ತಾನೆ. ನೋಡಿದರೆ ಪ್ರಹಾಪ್ರಭುಗಳು ಸ್ವಲ್ಪ ಆಯಾಸಗೊಂಡಿದ್ದಾರೆ. ಮಾತು ಬರುತ್ತಿಲ್ಲ. ಹೇಗಿದ್ದರೂ ತೆರೆಯ ಹಿಂದೆಯೇ ಆಸ್ಪತ್ರೆ ಇದೆ ಎಂದು ಕರೆದುಕೊಂಡು ಹೋದರೆ ಒಳಗಡೆ ಡಾಕ್ಟ್ರು, ಯಂತ್ರೋಪಕರಣ ಏನೂ ಇಲ್ಲ. ನಮ್ಮ ಮಹಾಪ್ರಭುಗಳು ಉದ್ಘಾಟನೆ ಮಾಡೋದೆಲ್ಲ ಇದೇ”.

“ಇಲ್ಲದೆ ಇರೋ ಹೈವೇ, ಇಲ್ಲದೆ ಇರೋ ಆಸ್ಪತ್ರೆ- ಎಲ್ಲೆಂದರಲ್ಲಿ ಕಲ್ಲು ಹಾಕುತ್ತಿದ್ದಾರೆ. ಇವರು ನಮ್ಮನ್ನು ಶಿಲಾಯುಗಕ್ಕೆ ಕರೆದುಕೊಂಡು ಹೋಗಲು ಕಲ್ಲು ಹಾಕುತ್ತಿದ್ದಾರೆಯೇ ಹೊರತು, ಮುಂದಕ್ಕೆ ಕರೆದುಕೊಂಡು ಹೋಗಲು ಅಲ್ಲ” ಎಂದು ಟೀಕಿಸಿದರು.

“ಮಹಾಪ್ರಭುಗಳು ಪರಿವಾರ ಎನ್ನುತ್ತಿದ್ದಾರೆ. ಮೋದಿ ಕಾ ಪರಿವಾರ್‌ ಎನ್ನುತ್ತಿದ್ದಾರೆ. ಯಾವ ಪರಿವಾರ ಸಾರ್‌ ನಿಮ್ಮದು? ನಮ್ಮ ಪರಿವಾರ ಅಲ್ಲ ನಿಮ್ಮದು. ನಿಮ್ಮದು ಸಂಘಪರಿವಾರ. ನಿಮ್ಮ ಪರಿವಾರದಲ್ಲಿ ನಮ್ಮ ಪರಿವಾರದ ಮಣಿಪುರಕ್ಕೆ ಸ್ಥಳವಿಲ್ಲ, ಆದ್ದರಿಂದ ನೀವು ನಮ್ಮ ಪರಿವಾರ ಅಲ್ಲ. ನಿಮ್ಮ ಪರಿವಾರದಲ್ಲಿ ರೈತರ ನೋವು ಕೇಳಿಸುತ್ತಿಲ್ಲ. ನೀವು ನಮ್ಮ ಪರಿವಾರ ಅಲ್ಲ. ನಮ್ಮ ಹೆಣ್ಣು ಮಕ್ಕಳು ನಿಮಗೆ ಕಾಣಿಸಲ್ಲ” ಎಂದು ವಾಗ್ದಾಳಿ ನಡೆಸಿದರು.

“ಬಸವಣ್ಣ, ಅಂಬೇಡ್ಕರ್‌ ನಮ್ಮ ಕನಸುಗಳು. ಅವರು ಇಲ್ಲವಾದರೆ ನಾವು ಬದುಕಲಿಕ್ಕೆ  ಸಾಧ್ಯವಾಗಲ್ಲ” ಎಂದು ತಿಳಿಸಿದರು.

ಇದನ್ನೂ ಓದಿರಿ: ಓದುಗರ ಕೈಗೆ ಮಹೇಂದ್ರ ಕುಮಾರ್‌ ’ಎದೆಯ ದನಿ’: ಅಂಗುಲಿಮಾಲನ ನೆನೆದ ಒಡನಾಡಿಗಳು

“ಮಹೇಂದ್ರ ಕುಮಾರ್‌ ಅವರ ಪರಿಚಯ ಸ್ವಲ್ಪ ಕಾಲ ಇತ್ತು. ಅವರು ಬದಲಾದ ನಂತರದ ದಿನಗಳಲ್ಲಿ ಭೇಟಿಯಾಗಿದ್ದೆ. ಗಂಟೆಗಟ್ಟಲೆ ಅವರೊಂದಿಗೆ ಚರ್ಚೆ ಮಾಡಿದೆ. ಅಸಹಾಯಕತೆ, ಕೋಪ, ಪಶ್ಚಾತ್ತಾಪ ಅವರಲ್ಲಿತ್ತು. ಕ್ರೌರ್ಯ ಮತ್ತು ಪಶ್ಚಾತ್ತಾಪ ಒಬ್ಬ ಮನುಷ್ಯನನ್ನು ಹೇಗೆ ಕುಗ್ಗಿಸುತ್ತೆ ಅನ್ನೋದನ್ನು ನೋಡಿದೆ. ಆದರೆ ಈ ಜನಕ್ಕೆ ಸತ್ಯ ಹೇಳಬೇಕು. ನಾನು ಮತ್ತೆ ಕಟ್ಟಬೇಕು, ಮಾಡಿದ ತಪ್ಪನ್ನು ಸರಿಪಡಿಸಬೇಕು ಎಂದು ಮಹೇಂದ್ರ ಹೊರಟರು” ಎಂದು ನೆನಪುಗಳನ್ನು ಮೆಲುಕು ಹಾಕಿದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್‌, ಕೃತಿಯ ಲೇಖಕರಾದ ನವೀನ್‌ ಸೂರಿಂಜೆ, ಹೋರಾಟಗಾರರಾದ ಮನೀರ್‌ ಕಾಟಿಪಳ್ಳ, ಹೈಕೋರ್ಟ್ ವಕೀಲರಾದ ಎಸ್.ಬಾಲನ್‌, ಶಾಸಕಿ ನಯನಾ ಮೋಟಮ್ಮ, ಕಾಂಗ್ರೆಸ್ ನಾಯಕರು ಹಾಗೂ ಮಹೇಂದ್ರ ಕುಮಾರ್‌ ಒಡನಾಡಿಗಳಾದ ಸುಧೀರ್‌ ಕುಮಾರ್‌ ಮುರೊಳ್ಳಿ, ನಿಕೇತ್ ರಾಜ್ ಮೌರ್ಯ, ಪ್ರಕಾಶಕ ಬಸವರಾಜ ಸೂಳಿಬಾವಿ ಹಾಜರಿದ್ದರು. ಹೋರಾಟಗಾರ್ತಿ ನಜ್ಮಾ ಚಿಕ್ಕನೇರಳೆಯವರು ಕಾರ್ಯಕ್ರಮ ನಿರೂಪಿಸಿದರು.

1 COMMENT

  1. Prakash Raj ravara Olagina Manassu Badavara, Dalithara, apara Kalaji ide. Hagu Samajadalli Sama samaja Nirmana Madalu horatiddare, Ivarige Shubhavagli, Jai Bheem

LEAVE A REPLY

Please enter your comment!
Please enter your name here