ನಗರಕೆರೆ ಗ್ರಾಮದ ತೊರೆ ಮಾಲದಲ್ಲಿನ ಪ್ರದೇಶದಲ್ಲಿ ಚಿರತೆಯೊಂದು ತನ್ನ ಮರಿಯೊಂದಿಗಿರುವುದು ಕಂಡುಬಂದಿದೆ. ಚಿರತೆ ಪ್ರತ್ಯಕ್ಷವಾಗಿರುವುದನ್ನು ಕಂಡ ರೈತರು ಆತಂಕಗೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಗರಕೆರೆ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳಿಂದ ಚಿರತೆ ಇರುವಿಕೆಯ ಸುದ್ದಿ ಹರಡಿತ್ತು. ಆದರೂ ಯಾವತ್ತಿಗೂ ಚಿರತೆ ಮುಖಾಮುಖಿಯಾಗಿರಲಿಲ್ಲ. ನಿನ್ನೆ ಮಧ್ಯಾಹ್ನ ರೈತ ಎನ್ ಎಲ್ ಬಲರಾಮು ಅವರ ಪುತ್ರ ಚಿರಾಗ್ ಅವರು ತೋಟದ ಕಡೆ ಹೋದಾಗ, ಚಿರತೆ ತನ್ನ ಮರಿಯೊಂದಿಗೆ ಇರುವುದನ್ನು ಅತಿ ಸನಿಹದಲ್ಲೇ ಕಂಡಿದ್ದಾರೆ
ಇತರೆ ರೈತರನ್ನು ಕರೆದು ಚಿರತೆ ಇರುವುದನ್ನ ತೋರಿಸಿದ್ದು, ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ. ಜತೆಗೆ ಮುಂಜಾಗೃತಾ ಕ್ರಮವಾಗಿ ಚಿರತೆ ಇರುವ ಕುರಿತು ಆರಣ್ಯ ಇಲಾಖೆ ಅಧಿಕಾರಿ ಗವಿಯಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ.
ರೈತರಿಂದ ಸುದ್ದಿ ತಿಳಿದ ಗವಿಯಪ್ಪ ಮಂಗಳವಾರ ಬೆಳಿಗ್ಗೆಯೇ ತಮ್ಮ ಸಿಬ್ಬಂದಿಯನ್ನು ನಗರಕೆರೆಯಲ್ಲಿನ ಚಿರತೆ ಕಂಡ ಸ್ಥಳಕ್ಕೆ ಕಳುಹಿಸಿಕೊಡುವುದಾಗಿ ಹೇಳಿದ್ದು, ರೈತರು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ.
ಈ ಪ್ರದೇಶದಲ್ಲಿ ಕಾಡು ಹಂದಿ ಮುಳ್ಳು ಹಂದಿಗಳ ಹಾವಳಿ ವಿಪರೀತವಾಗಿದ್ದು, ಆಹಾರ ಹರಸಿ ಬಂದ ಚಿರತೆ
ಇಲ್ಲೇ ಬೀಡು ಬಿಟ್ಟಿರುವುದಾಗಿ ಇಲ್ಲಿನ ರೈತ ಮುಖಂಡರಾದ ಎನ್ ಎಸ್ ಪ್ರಸನ್ನಕುಮಾರ್, ಮಲ್ಲಿಕಾರ್ಜುನ ಧನಂಜಯ್ಯ ಕುಮಾರ್ ಸೇರಿದಂತೆ ಮತ್ತಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿದ್ದೀರಾ? ಶ್ರೀನಿವಾಸಪುರ ಮಾವಿನ ಮಾರುಕಟ್ಟೆ ಮತ್ತೆ ಸಜ್ಜು; ಮೇ 15ರಿಂದ ಆರಂಭ
ಚಿರತೆ ಇಲ್ಲಿ ನೆಲೆಸಿರುವುದರಿಂದ ಈ ಭಾಗದ ಕೃಷಿಕರು, ಕುರಿಗಾಹಿಗಳ ಸುರಕ್ಷತೆಗೆ ಧಕ್ಕೆ ಬಂದಿದೆ. ಈ ಮೊದಲು ಈ ಪ್ರದೇಶದಲ್ಲಿ ಜಮೀನಿನ ಕಾವಲಿಗೆ ಕಟ್ಟಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿತ್ತು. ಆಗ ಅರಣ್ಯ ಇಲಾಖೆಯವರು ಬೋನ್ ಇರಿಸಿ ಕಾರ್ಯಾಚರಣೆ ಮಾಡಿದ್ದರು. ಚಿರತೆ ಸೆರೆ ಸಿಕ್ಕಿರಲಿಲ್ಲ. ಇದೀಗ ಅರಣ್ಯ ಇಲಾಖೆ ಕಾರ್ಯಚರಣೆ ಯಶಸ್ವಿಯಾಗಿ ಈ ಭಾಗದ ರೈತರ ಆತಂಕ ದೂರಾಗುವುದೇ ಕಾಯ್ದು ನೋಡಬೇಕು ಎನ್ನುತ್ತಿದ್ದಾರೆ ನಗೆಕೆರೆ ಗ್ರಾಮಸ್ಥರು.