ಗುರುವಾರ ಸಂಜೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ನಡುವಿನ ಐಪಿಎಲ್ ಪಂದ್ಯವನ್ನು ಅರ್ಧದಲ್ಲೇ ನಿಲ್ಲಿಸಿದ ಬೆಳವಣಿಗೆ ನಡೆದಿದೆ.
ಕ್ರೀಡಾಂಗಣದಲ್ಲಿ ಗಮನಾರ್ಹವಾದ ತಾಂತ್ರಿಕ ವೈಫಲ್ಯದಿಂದಾಗಿ ಅರ್ಧಕ್ಕೆ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
“ಈ ಪ್ರದೇಶದಲ್ಲಿ ವಿದ್ಯುತ್ ಕಡಿತದಿಂದಾಗಿ, ಎಚ್ಪಿಸಿಎ ಕ್ರೀಡಾಂಗಣದ ಒಂದು ಫ್ಲಡ್ ಲೈಟಿನ ಗೋಪುರವು ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ. ಕ್ರೀಡಾಂಗಣದಲ್ಲಿ ಹಾಜರಿದ್ದವರಿಗೆ ಉಂಟಾದ ಅನಾನುಕೂಲತೆಗೆ ಬಿಸಿಸಿಐ ವಿಷಾದಿಸುತ್ತದೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿರಿಸಿ ದಾಳಿ ನಡೆಸಿದ. ಆ ಬಳಿಕ ಸಂಘರ್ಷ ಆರಂಭವಾಗಿದೆ. ಈ ನಡುವೆಯೂ ಐಪಿಎಲ್ ಪಂದ್ಯಾವಳಿಯು ಮುಂದುವರಿದಿತ್ತು.
ಮಳೆಯಿಂದಾಗಿ ಇಂದಿನ ಪಂದ್ಯ ತಡವಾಗಿ ಆರಂಭವಾಗಿತ್ತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.
ಆರಂಭಿಕ ಆಟಗಾರರಾದ ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರನ್ ಸಿಂಗ್ ಸ್ಫೋಟಕ ಆರಂಭ ಒದಗಿಸಿದರು. ಈ ಜೋಡಿ 10.1 ಓವರ್ ಗಳಲ್ಲೇ ಮೊದಲ ವಿಕೆಟ್ಗೆ 122 ರನ್ ಕಲೆಹಾಕಿ ಬೃಹತ್ ಮೊತ್ತ ಗಳಿಸುವ ಲೆಕ್ಕಾಚಾರದಲ್ಲಿದೆ. 10.1ನೇ ಓವರ್ ನಲ್ಲಿ 34 ಎಸೆತಗಳಲ್ಲಿ 5 ಬೌಂಡರಿ 6 ಸಿಕ್ಸರ್ ಸಹಿತ 70 ರನ್ ಗಳಿಸಿದ್ದ ಪ್ರಿಯಾಂಶ್ ಆರ್ಯ ಔಟಾದರು. ಈ ಸಂದರ್ಭದಲ್ಲೇ ಮೈದಾನದಲ್ಲಿ ಏಕಾಏಕಿ ಎರಡು ದೊಡ್ಡ ವಿದ್ಯುತ್ ದೀಪಗಳು ಸ್ಥಗಿತಗೊಂಡವು.
ಅಪಾಯದ ಮುನ್ಸೂಚನೆ ಬೆನ್ನಲ್ಲೇ ತಕ್ಷಣ ಕಾರ್ಯಪ್ರವೃತ್ತರಾದ ಮೈದಾನದ ಸಿಬ್ಬಂದಿ ಪ್ರೇಕ್ಷಕರನ್ನು ಮೈದಾನದಿಂದ ಹೊರಕಳಿಸಿದರು. ತುರ್ತು ಬಾಗಿಲುಗಳನ್ನು ತೆರೆಯುವ ಮೂಲಕ ಕಡಿಮೆ ಸಮಯದಲ್ಲಿ ಮೈದಾನದಲ್ಲಿ ಪ್ರೇಕ್ಷಕರನ್ನು ಸಂಪೂರ್ಣವಾಗಿ ಹೊರಕಳಿಸಲಾಯಿತು. ಕೂಡಲೇ ಆಟಗಾರರನ್ನು ಸುರಕ್ಷತಾ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
