ತಮ್ಮ ಸ್ವಂತ ಹಣ ಬಳಸಿಯೇ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೇವೆ ಎಂಬಂತೆ ವರ್ತಿಸುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಅಧಿಕಾರ ಬಲಕ್ಕೆ ಲಗಾಮು ಹಾಕುವುದು ಅತ್ಯವಶ್ಯ. ಈ ನಿಟ್ಟಿನಲ್ಲಿ ಮೈಸೂರು ಮತ್ತು ಬೆಂಗಳೂರು ಪಾಲಿಕೆಗಳ ಯೋಜನೆಗಳು ಗಮನಾರ್ಹ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ದಕ್ಷಿಣ ವಲಯದಲ್ಲಿನ ರಸ್ತೆಗಳ ನಾಮಫಲಕಗಳಲ್ಲಿ ತ್ವರಿತ ಸ್ಪಂದನೆಯ (ಕ್ಯೂಆರ್ – ಕ್ವಿಕ್ ರೆಸ್ಪಾನ್ಸ್) ಕೋಡ್ ಅಳವಡಿಕೆ ಚಾಲ್ತಿಯಲ್ಲಿದೆ. ಸಾರ್ವಜನಿಕರು ಇದನ್ನು ಸ್ಕ್ಯಾನ್ ಮಾಡುವ ಮೂಲಕ, ತಮ್ಮ ಕುಂದು-ಕೊರತೆಗಳ ಕುರಿತ ದೂರನ್ನು ಸಂಬಂಧಿತ ಅಧಿಕಾರಿಗೆ ನೇರವಾಗಿ ಸಲ್ಲಿಸಬಹುದು. ಸದ್ಯಕ್ಕೆ ಪ್ರಾಯೋಗಿಕವಾಗಿ ಚಾಲ್ತಿಯಲ್ಲಿರುವ ಈ ಯೋಜನೆಯನ್ನು ಪಾಲಿಕೆಯ ಇತರೆ ವಲಯಗಳಿಗೂ ವಿಸ್ತರಿಸುವ ಆಲೋಚನೆ ಇದೆ ಎನ್ನಲಾಗಿದೆ.
ಜನಸಾಮಾನ್ಯರ ದೃಷ್ಟಿಯಿಂದ ನೋಡಿದರೆ, ನಿಜವಾಗಿಯೂ ಇದೊಂದು ಮಹಾತ್ವಾಕಾಂಕ್ಷಿ ಯೋಜನೆ. ಬೀದಿ ದೀಪ, ಚರಂಡಿ, ರಸ್ತೆ ಮೊದಲಾದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಕ್ಷಣ ಯಾರಿಗೆ ದೂರಬೇಕು, ತಮ್ಮ ಬೀದಿಯ ಸಮಸ್ಯೆಗಳನ್ನು ಸರಿಪಡಿಸುವಂತೆ ಯಾರನ್ನು ಕೇಳಬೇಕೆಂದು ಎಲ್ಲ ಜನಸಾಮಾನ್ಯರಿಗೂ ಮಾಹಿತಿ ಇರುವುದಿಲ್ಲ. ಒಂದು ವೇಳೆ ಮಾಹಿತಿ ಇದ್ದರೂ, ಸರ್ಕಾರಿ ಕಚೇರಿಗೆ ಹೋಗಿಯೋ ಅಥವಾ ಜನಪ್ರತಿನಿಧಿಯ ಮನೆಬಾಗಿಲಿಗೆ ಹೋಗಿಯೋ ನಿವೇದನೆ ರೂಪದಲ್ಲಿ ಸಮಸ್ಯೆ ಹೇಳಿ ಬರುವಷ್ಟರಲ್ಲಿ ಗಂಟೆಗಳೇನು ದಿನಗಳೇ ಕಳೆದುಹೋಗಿರುತ್ತವೆ. ಅಲ್ಲದೆ, ಬಹುತೇಕ ಸಂದರ್ಭಗಳಲ್ಲಿ, ಸಮಸ್ಯೆ ಹೇಳಿಕೊಳ್ಳಲು ಬಂದ ಜನಸಾಮಾನ್ಯರನ್ನು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಡೆಸಿಕೊಳ್ಳುವ ರೀತಿಯಂತೂ, ತಾವು ತಮ್ಮ ಸ್ವಂತ ಹಣ ಬಳಸಿಯೇ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇವೆ ಎನ್ನುವಂತಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, “ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಇದು ನಮಗೆ ಸಂಬಂಧಿಸಿದ್ದಲ್ಲ,” ಎಂಬ ಸಬೂಬು ಹೇಳಿ ಕಾಲ ನೂಕುತ್ತಿದ್ದ ಮೈಗಳ್ಳರ ಸಂಖ್ಯೆಯೂ ಕಡಿಮೆ ಏನಿಲ್ಲ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ, ಸಾರ್ವಜನಿಕ ಸಮಸ್ಯೆಗಳನ್ನು ನೇರವಾಗಿ ಸಂಬಂಧಿಸಿದವರ ಗಮನಕ್ಕೆ ತರಲು ಮತ್ತು ದೂರಿನ ಸ್ಥಿತಿಗತಿಯನ್ನು ಮೇಲ್ವಿಚಾರಣೆ ಮಾಡಲು ಕ್ಯೂಆರ್ ಕೋಡ್ ವಿಧಾನ ಅತ್ಯಂತ ಸೂಕ್ತ.
ಈ ಸಂಪಾದಕೀಯ ಓದಿದ್ದೀರಾ?: ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಟಾಪಟಿ ಬಡ ರೈತರ ಬೆನ್ನಿಗೆ ಚೂರಿಯಾಗದಿರಲಿ
ಈಗಾಗಲೇ ಮೈಸೂರು ನಗರ ಪಾಲಿಕೆಯು ಕ್ಯೂಆರ್ ಕೋಡ್ ಬಳಸಿ ಸಾರ್ವಜನಿಕರಿಂದ ಅಹವಾಲು ಆಲಿಸುವ ಯೋಜನೆ ಜಾರಿಗೆ ತಂದಾಗಿದೆ. ಇದೀಗ ಬಿಬಿಎಂಪಿ ಕೂಡ ಇದೇ ದಾರಿಗೆ ಹೊರಳಿರುವುದು ಶ್ಲಾಘನೀಯ. ಯಾವುದೇ ರಸ್ತೆಯು ಯಾವ ಶಾಸಕರ ವ್ಯಾಪ್ತಿಗೆ ಬರುತ್ತದೆ, ಪಾಲಿಕೆ ಸದಸ್ಯರು ಯಾರು, ಕಸ ಸಂಗ್ರಹಣೆಯ ಗುತ್ತಿಗೆದಾರರು ಯಾರು, ಚರಂಡಿ ಮತ್ತು ಬೀದಿ ದೀಪ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಎಂಜಿನಿಯರ್ ಯಾರು, ಮರದ ಕೊಂಬೆ ತೆರವಿಗೆ ಯಾರನ್ನು ಸಂಪರ್ಕಿಸಬೇಕು, ಸೊಳ್ಳೆ ನಿವಾರಣೆಗೆ ಔಷಧ ಸಿಂಪಡಿಸಲು ಯಾರ ಗಮನಕ್ಕೆ ತರಬೇಕು…ಇತ್ಯಾದಿ ಸಾಕಷ್ಟು ಉಪಯುಕ್ತ ವಿವರಗಳು ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಲಭ್ಯ. ಆದರೆ, ಸದ್ಯಕ್ಕೆ ಈ ಎಲ್ಲ ಮಾಹಿತಿ ಇಂಗ್ಲಿಷ್ನಲ್ಲಿದ್ದು, ಕನ್ನಡದಲ್ಲೂ ಆದಷ್ಟು ಬೇಗ ಒದಗಿಸಿದರೆ ಮಾತ್ರ ಈ ಯೋಜನೆ ಪ್ರಯೋಜನಕಾರಿ ಆದೀತು. ಇಲ್ಲದಿದ್ದರೆ, ಈ ಪ್ರಾಯೋಗಿಕ ಯೋಜನೆಯಿಂದ ಯಾವುದೇ ನಿಖರ ಫಲಿತಾಂಶ ಹೊರಹೊಮ್ಮುವುದು ಕಷ್ಟ.
ಕ್ಯೂಆರ್ ಕೋಡ್ ಬಳಕೆಯನ್ನು ದೇಶದ ವಿವಿಧೆಡೆ ನಗರ ಪಾಲಿಕೆಗಳು ನಾನಾ ಉದ್ದೇಶಕ್ಕೆ ಬಳಸುತ್ತಿವೆ. ಚೆನ್ನೈ ಮಹಾನಗರ ಪಾಲಿಕೆಯು ತೆರಿಗೆ ಸಂಗ್ರಹಕ್ಕೆ, ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ ಮಹಾರಾಷ್ಟ್ರದ ಎಲ್ಲ ಪಾಲಿಕೆಗಳು ಅಕ್ರಮ ಫ್ಲೆಕ್ಸ್ ಮತ್ತು ಬ್ಯಾನರ್ ಪತ್ತೆಗೆ, ಪಂಜಾಬ್ನ ಲೂಧಿಯಾನ ನಗರ ಪಾಲಿಕೆಯು ತನ್ನ ವ್ಯಾಪ್ತಿಯ ಎಲ್ಲ ಮನೆಗಳ ತೆರಿಗೆ ಸಂಗ್ರಹ ಸ್ಥಿತಿಗತಿ ತಿಳಿಯಲು, ಬಿಹಾರದ ಪಾಟ್ನಾ ಮಹಾನಗರ ಪಾಲಿಕೆಯು ಎಲ್ಲ ಮನೆಯಿಂದ ತಪ್ಪದೆ ತ್ಯಾಜ್ಯ ಸಂಗ್ರಹ ಮಾಡಲು ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತಂದಿವೆ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು, ರಾಜ್ಯದ ನಗರ ಪಾಲಿಕೆಗಳು ಸಾರ್ವಜನಿಕರೊಂದಿಗೆ ನೇರ ಸಂವಹನ ಸಾಧ್ಯವಾಗಿಸಿಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಬೇಕಿದೆ. ಜೊತೆಗೆ, ಕುಂದು-ಕೊರತೆಯ ದೂರುಗಳನ್ನು ಕ್ಯೂಆರ್ ಕೋಡ್ ಬಳಸಿ ನೇರವಾಗಿ ಸಂಬಂಧಿಸಿದವರಿಗೆ ತಲುಪಿಸುವಂತಹ ವ್ಯವಸ್ಥೆ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಜಾರಿಯಾಗಬೇಕು; ಕ್ಯೂಆರ್ ಕೋಡ್ ತಂತ್ರಜ್ಞಾನ ಬಳಕೆ ಮತ್ತು ಮೇಲ್ವಿಚಾರಣೆಯತ್ತ ರಾಜ್ಯ ಸರ್ಕಾರ ಗಮನ ಹರಿಸಬೇಕು.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ