ಕೋಕಿಲಮ್ಮ ಪುಟ್ಟ ಹುಡುಗಿಯಾಗಿದ್ದಾಗ ಅಮ್ಮನ ಹೂ ವ್ಯಾಪಾರಕ್ಕೆ ನೆರವಾಗುತ್ತ, ಬಿಡುವು ಸಿಕ್ಕಾಗ ಆಡುತ್ತ, ದಣಿವಾರಿಸಿಕೊಳ್ಳುತ್ತ ಇದ್ದ ಜಾಗವದು. ಹೀಗೆ ಕೂತು 50 ವರ್ಷಗಳೇ ಉರುಳಿಹೋಗಿವೆ. ಬೆಂಗಳೂರು ಬೇಕಾದಷ್ಟು ಬದಲಾಗಿದೆ. ಆದರೆ, ಕೋಕಿಲಮ್ಮನವರು ಮಾತ್ರ ಅಲ್ಲೇ ಕುಂತವರೆ...
ರಾಜಾಜಿನಗರದ ಮರಿಯಪ್ಪನಪಾಳ್ಯದ ಚಾಮುಂಡೇಶ್ವರಿ ದೇವಸ್ಥಾನದ ಮುಂದಿನ ಫುಟ್‌ಪಾತಿನ ಮೇಲೆ ವಯಸ್ಸಾದ ಹೆಂಗಸರೊಬ್ಬರು, ಕತ್ತು ಬಗ್ಗಿಸಿಕೊಂಡು ಹೂ ಕಟ್ಟುತ್ತಿದ್ದರು. ಅವರ ಶ್ರದ್ಧೆ ಮತ್ತು ತಲ್ಲೀನತೆ ಗೀಜಗನ ಹಕ್ಕಿ ಗೂಡು ಕಟ್ಟಿದ್ದಕ್ಕಿಂತ ದೊಡ್ಡದು. ರಸ್ತೆಯಲ್ಲಿ ವಾಹನಗಳು, ಜನಗಳು ಗಿಜಿಗುಡುತ್ತಿದ್ದರೂ, ಅವುಗಳಿಗೂ ನನಗೂ ಸಂಬಂಧವೇ ಇಲ್ಲ ಎಂಬಂತೆ ತಮ್ಮ ಕಾಯಕದಲ್ಲಿ ಕರಗಿಹೋಗಿದ್ದರು.
ನಾಲ್ಕು ಕಲ್ಲು ಚಪ್ಪಡಿಗಳ ಮೇಲೆ ಒಂದು ಸ್ಲ್ಯಾಬ್, ಅದರ ಮೇಲೆ ಕಟ್ಟಿದ ಹೂವಿನ ದಂಡೆ, ಪಕ್ಕದಲ್ಲಿ ಹರಿದ ಛತ್ರಿ, ನೀರಿನ ಟಂಬ್ಲರ್, ದಾರದ ಉಂಡೆ, ಹೂವಿನ ಸರ ಕಟ್ ಮಾಡಲು ಚೂಪಾದ ತಗಡಿನ ಚೂರು, ಎರಡು ದೊಡ್ಡ ಪ್ಲಾಸ್ಟಿಕ್ ಬ್ಯಾಗುಗಳು – ಇವುಗಳ ನಡುವೆ ಕೂತಿದ್ದರು ಕೋಕಿಲಮ್ಮ. ಅವರ ಮುಂದೆ ಕಣಗಿಲೆ, ಸುಗಂಧರಾಜ, ಮಲ್ಲಿಗೆ ಹೂಗಳ ಕಟ್ಟಿದ ದಂಡೆ ಇತ್ತು, ಕಟ್ಟಬೇಕಾದ ಹೂವಿನ ರಾಶಿ ಇತ್ತು. ಖರೀದಿಸುವಂತೆ ಹೋಗಿ ಪಕ್ಕದಲ್ಲಿ ಕೂತೆ. ಸುಗಂಧರಾಜ ಮತ್ತು ಮಲ್ಲಿಗೆ ಹೂವಿನ ಘಮ ಮೂಗನ್ನು ಮುತ್ತಿ, ಮನಸಿಗೆ ಮುದ ನೀಡಿತು. ಆದರೆ, ಕೂತಿದ್ದೇ ಮಹಾಪರಾಧವೆಂಬಂತೆ, “ಅಯ್ಯೋ… ಅಲ್ಯಾಕ್ ಕೂರ್ತಿರ!” ಎಂದು ನೊಂದುಕೊಂಡರು ಕೋಕಿಲಮ್ಮ. ಫುಟ್‌ಪಾತಿನಲ್ಲಿ ಕೂರೋದು ನನ್ನ ಕರ್ಮ, ಅದು ನಿಮಗೇಕೆ ಎಂಬುದು ಅವರ ಅನಿಸಿಕೆ. ಜೊತೆಗೆ, ಹೂವು ಕೊಳ್ಳಲು ಬರುವ ಎಲ್ಲರೂ ನಿಂತೇ ಖರೀದಿಸುತ್ತಾರೆ, ಕಾಸು ಕೊಟ್ಟು ಹೋಗುತ್ತಾರೆ, ಹಿಂಗ್ ಬಂದ್ ಕೂತಿದ್ದೇಕೆ ಎಂಬ ಪ್ರಶ್ನೆಯೂ ಅವರ ಮುಖದ ಮೇಲಿತ್ತು.
ಅರವತ್ತೇಳು ವರ್ಷಗಳ ಕೋಕಿಲಮ್ಮನವರ ಅಪ್ಪ-ಅಮ್ಮ ತಮಿಳುನಾಡಿನ ಈರೋಡು ಜಿಲ್ಲೆಯ ಭವಾನಿಯವರು. ಮದುವೆಯಾದ ನಂತರ ಕೆಲಸ ಅರಸಿ ಆ ಕಾಲಕ್ಕೇ ಬೆಂಗಳೂರಿಗೆ ವಲಸೆ ಬಂದವರು. ಸುಮಾರು 80 ವರ್ಷಗಳ ಹಿಂದೆ, ಅವರು ಬಂದ ಕಾಲಕ್ಕೆ ಬೆಂಗಳೂರಿನ ರಾಜಾಜಿನಗರದಲ್ಲಿ ಹೊಲಗಳಿದ್ದವಂತೆ. ಗಂಡ-ಹೆಂಡತಿ ಇಬ್ಬರೂ ಮಣ್ಣಿನ ದಿಣ್ಣೆಯ ಮೇಲೆ ಕೂತು, ಬಟ್ಟೆ ಹರವಿ ತರಕಾರಿಗಳನ್ನು ಗುಡ್ಡೆ ಹಾಕಿ ಮಾರುತ್ತ ಬದುಕಿಗೊಂದು ದಾರಿ ಹುಡುಕಿಕೊಂಡಿದ್ದರು.

ಅವರಿದ್ದ ಅದೇ ಜಾಗ ಈಗ ಕಾಂಕ್ರೀಟ್ ಕಾಡಾಗಿದೆ. ಹುಡುಕಿದರೂ ಮಣ್ಣಿನ ನೆಲ ಕಾಣದಾಗಿದೆ. ರಸ್ತೆಗೆ ಡಾಂಬರು ಬಂದಿದೆ. ಫುಟ್‌ಪಾತ್‌ಗೆ ಕಲ್ಲಿನ ಚಪ್ಪಡಿಗಳನ್ನು ಅಳವಡಿಸಲಾಗಿದೆ. ಪಕ್ಕದಲ್ಲಿಯೇ ಮೆಟ್ರೋ ಓಡಾಡುತ್ತದೆ. ಗೌಜು ಗದ್ದಲವೂ ಹೆಚ್ಚಾಗಿ, ‘ಬ್ಯುಸಿ ಏರಿಯಾ’ ಎನಿಸಿಕೊಂಡಿದೆ. ಆ ಗೌಜಿನಲ್ಲಿಯೇ ಗೋಡೆಗೊರಗಿ ಕೂತ ಕೋಕಿಲಮ್ಮನವರು, ಒಂದೊಂದೇ ಹೂ ಎತ್ತಿ ಕಟ್ಟುತ್ತ, ನಗರದ ವೇಗಕ್ಕೆ ತದ್ವಿರುದ್ಧವಾಗಿ ತಣ್ಣಗೆ ಕೂತಿದ್ದಾರೆ.
“ಇದು ನಮ್ಮಮ್ಮ ಕೂತ ಜಾಗ. ಈಗ ಅವರಿಲ್ಲ, ಅವರ ಜೊತೆ ಕೂತಷ್ಟೇ ಸಮಾಧಾನ ಆಯ್ತದೆ…” ಎಂದರು. ಅವರು ಪುಟ್ಟ ಹುಡುಗಿಯಾಗಿದ್ದಾಗ ಅಮ್ಮನ ವ್ಯಾಪಾರಕ್ಕೆ ನೆರವಾಗುತ್ತ, ಬಿಡುವು ಸಿಕ್ಕಾಗ ಆಡುತ್ತ, ದಣಿವಾರಿಸಿಕೊಳ್ಳುತ್ತ ಇದ್ದ ಜಾಗವದು. ಹೀಗೆ ಕೂತು 50 ವರ್ಷಗಳೇ ಉರುಳಿಹೋಗಿವೆ. ಬೆಂಗಳೂರು ಬೇಕಾದಷ್ಟು ಬದಲಾಗಿದೆ. ಹಾಗೆಯೇ, ಕೋಕಿಲಮ್ಮನವರ ಬದುಕಿನಲ್ಲೂ ಏರುಪೇರುಗಳಾಗಿವೆ. ಮಣ್ಣು-ಕಲ್ಲು-ಗುಡ್ಡೆಗಳಿದ್ದ ಜಾಗ ಕಾಂಕ್ರೀಟ್ ಕಾಡಾಗಿದೆ. ಕವಿ ಸಿದ್ದಲಿಂಗಯ್ಯನವರ ಕವನದಂತೆ ಕೋಕಿಲಮ್ಮನವರು ಮಾತ್ರ ಅಲ್ಲೇ ಕುಂತವರೆ!
“ನಮ್ಮಪ್ಪ-ಅಮ್ಮ ಬೆಂಗಳೂರಿಗೆ ಬಂದದ್ದು ಕೂಲಿಗಾಗಿ. ಕೈಗೆ ಸಿಕ್ಕಿದ್ದನ್ನು ಮಾರಾಟ ಮಾಡಿ ಬದುಕ್ತಿದ್ರು. ಆಗ ಇಂದಿರಾ ಗಾಂಧಿ ಬಡವರಿಗೆಲ್ಲ ಸೈಟ್ ಕೊಡ್ತಿದ್ರು; ಎಷ್ಟು ಅಂತೀರಾ… ಬರೀ 25 ರೂಪಾಯಿ. ನಮ್ಮಪ್ಪ, “ನಮಗ್ಯಾಕೆ… ಇಲ್ಲೆಂಥ ಮನೆ ಕಟ್ಟದು? ನಮ್ಮೂರಲ್ಲಿ ಕಟ್ಟನಾ,” ಅಂತ ಸುಮ್ಮನಾದ್ರು. ಈಗ ನಮ್ಮ ಮೊಮ್ಮಕ್ಕಳ ಕಾಲಕ್ಕೂ, ನಾವು ಬಾಡಿಗೆ ಮನೇಲೆ ಇರೋ ಹಂಗಾಯ್ತು,” ಎಂದು ಅಪ್ಪನ ತಪ್ಪು ನಿರ್ಧಾರಕ್ಕೆ ವ್ಯಥೆಪಟ್ಟರು.
ಈ ಆಡಿಯೊ ಕೇಳಿದ್ದೀರಾ?: ಸಿ ಎಸ್ ದ್ವಾರಕಾನಾಥ್ ಸಂದರ್ಶನ | ‘ಹೈಕೋರ್ಟ್ ನ್ಯಾಯಮೂರ್ತಿಯ ಇನ್ನೊಂದು ಮೂತಿ’ ಅಂತ ಹೆಡ್ಡಿಂಗ್ ಕೊಟ್ಟಿದ್ದರು ಲಂಕೇಶ್!
“ವ್ಯಾಪಾರ ಹೆಂಗಿದೆ ಅಜ್ಜಿ?” ಎಂದೆ.
“ದಿನಕ್ಕೆ ಐನೂರಾಯ್ತದೆ, ಅದೂ ಶುಕ್ರವಾರ ಮಾತ್ರ. ಉಳಿದಂತೆ ಇನ್ನೂರು, ಮುನ್ನೂರು ಆಯ್ತದೆ. ಐವತ್ತು-ನೂರಕ್ಕೆ ಮೋಸ ಇಲ್ಲ. ಮಳೆ-ಗಿಳೆ ಬಂದ್ರೆ ಅದೂ ಇಲ್ಲ. ಸೀಸನ್‌ಗೆ ತಕ್ಕನಾಗಿ ಹೂ ಬತ್ತದೆ. ಈ ಏರಿಯಾದಲ್ಲಿ ರೇಟ್ ಕಡಿಮೆ ಇದ್ರೆ ಕೊಂಡ್ಕತರೆ. ಅದ್ಕೇ ಮಾರ್ಕೆಟ್‌ನಲ್ಲಿ ಕಡಿಮೆ ಇರೋ ಹೂ ತನ್ನಿ ಅಂದ್ರೆ ಮಕ್ಕಳು ತಂದುಕೊಡ್ತರೆ,” ಎಂದು, ಎದುರಿದ್ದ ದೇವಸ್ಥಾನಕ್ಕೊಂದು ಕೈ ಮುಗಿದು, “ಆ ತಾಯಿ ಇರೋವರಗೂ ನನಗೇನೂ ಯೋಚ್ನೆ ಇಲ್ಲ. ಮೊದ್ಲು ಈ ದೇವಸ್ಥಾನಕ್ಕೆ ಭಾರೀ ಜನ ಬರತಿದ್ರು, ಆಗ ನಾನು ಗಾಡಿ ಹಾಕಿದ್ದೆ. ನಾನೇ ಮಾರ್ಕೆಟ್‌ಗೆ ಹೋಗ್ತಿದ್ದೆ. ವ್ಯಾಪಾರಾನೂ ಜೋರಾಗಿತ್ತು. ಕೊರೊನಾ ಟೈಮಲ್ಲಿ ಬಿದ್ದು ಸೊಂಟ ಮುರಕಂಡೆ, ಕಾಲಿಗೆ ಏಟಾಯ್ತು, ಬಿಟ್ಟೆ…” ಎಂದರು.
“ಆಸ್ಪತ್ರೆ… ಡಾಕ್ಟರ್‌ಗೆ ತೋರಿಸಿಕೊಳ್ಳಲಿಲ್ಲವಾ?” ಎಂದೆ.
“ಕೊರೊನಾ ಟೈಮಲ್ಲಿ ಎಲ್ಲಿದ್ದೋ ಆಸ್ಪತ್ರೆ…? ಹೋಗಿದ್ರೆ, ಇವತ್ತು ನಿನ್ನ ಮುಂದೆ ನಾನೆಲ್ಲಿ ಕೂತಿರತಿದ್ದೆ? ಮಕ್ಕಳು ನನ್ನ ಏನೂ ಕೇಳದಿಲ್ಲ. ನಾನೂ ಅವರಿಗೆ ಏನೂ ಕಷ್ಟ ಕೊಡಬಾರದು ಅಂತ ಆಸ್ಪತ್ರೆ-ಔಷಧಿ ಅಂತೆಲ್ಲ ಹೋಗದೆ ಸುಮ್ನೆ ಆದೆ. ಅವತ್ತು ಅಲ್ಲೋಗಿದ್ರೆ ಇವತ್ತು ಇಲ್ಲಿ ಇರ್ತಿರಲಿಲ್ಲ…” ಎಂದರು.
“ಮತ್ತೆ ಸೊಂಟದ ನೋವು?” ಎಂದೆ.
“ಅದೈತೆ ಅದರ ಪಾಡಿಗೆ… ಈ ವಯಸ್ಸಲ್ಲಿ ಆಸ್ಪತ್ರೆ ಅಂತೋದ್ರೆ ಆಯ್ತದಾ? ಎಷ್ಟು ದಿನ ಇರ್ತಿನೋ ಏನೋ! ಅದೇನೂ ತೊಂದ್ರೆ ಕೊಟ್ಟಿಲ್ಲ, ಇರಲಿ ಬುಡು…” ಎಂದರು.

“ಯಜಮಾನರು ಏನ್ ಮಾಡ್ತರೆ?” ಎಂದೆ.
ಒಂದು ಸಲ ದೇವಸ್ಥಾನದ ಕಡೆ ಮುಖ ಮಾಡಿ ಮೌನವಾದರು. ತೀರಿಹೋಗಿರಬಹುದೆಂದು ಸುಮ್ಮನಾದೆ. ಆದರೆ ಅವರು ಸುಮ್ಮನಾಗಲಿಲ್ಲ. “ಅದೊಂದು ದೊಡ್ಡ ಕತೆ…” ಎಂದು ನಿಟ್ಟುಸಿರುಬಿಟ್ಟರು. ಆ ನಿಟ್ಟುಸಿರು ಅವರ ಬದುಕಿನ ಕತೆಯನ್ನೆಲ್ಲ ಹೇಳುವಂತಿತ್ತು. “ಭಾಳಾ ಜೋರಾಗಿ ಹಣ್ಣು-ತರಕಾರಿ ವ್ಯಾಪಾರ ಮಾಡ್ತಿದ್ರು. ಸುಮಾರು ಗಾಡಿ ಹಾಕಿದ್ರು. ನಮ್ಮತ್ರ ಬಂಡವಾಳ ಇತ್ತಿಲ್ಲ, ದುಡ್ಡೆಲ್ಲಿಂದ ಬರಬೇಕು, ಬಡ್ಡಿಗೆ ಸಾಲ ತಂದು ಹಾಕಿದ್ರು. ಒಂದ್ ಸಲ ಹಿಂಗೇ ಮಾವಿನಹಣ್ಣಿನ ಕಾಲ. ಎಲ್ಲೆಲ್ಲಿಂದನೋ ತಂದು ಗೋಡಾನ್‌ನಲ್ಲಿ ರಾಶಿ ಹಾಕಿದ್ರು. ಮಳೆ ಬಂತು. ವ್ಯಾಪಾರ ಕೈ ಕೊಡ್ತು. ಹಣ್ಣೆಲ್ಲ ಕೊಳತೋದೊ… ಟೈಮ್ ಸರಿಯಿಲ್ಲ ಅಂದ್ರೆ ಮುಟ್ಟಿದ್ದೆಲ್ಲ ಲಾಸು ಅಂತಾರಲ್ಲ, ಹಂಗಾಗೋಯ್ತು ನಮ್ ಕತೆ. ಗೋಡಾನ್ ಬಾಡಿಗೆ, ಹುಡುಗರಿಗೆ ಸಂಬಳ, ಸಾಲಗಾರರ ಕಾಟ ಶುರುವಾಯಿತು. ಎಲ್ಲಿಂದ ತರದು? ನಮಗೊಂದು ಸಣ್ಣ ಮನೆ ಇತ್ತು. ಐದು ಲಕ್ಷಕ್ಕೆ ಹೋಗೋ ಮನೇನ ನಮಗ್ಯಾರಿಗೂ ಹೇಳ್ದೆ ಅರ್ಜೆಂಟಲ್ಲಿ ಎರಡೂವರೆ ಲಕ್ಷಕ್ಕೆ ಮಾರಿ, ಸಾಲಗಾರರಿಗೆ ಕೊಟ್ಟು, ಇಲ್ಲಿದ್ರೆ ಜೀವಸಹಿತ ಬಿಡದಿಲ್ಲ ಅಂತೇಳಿ ಎತ್ತಕಡಿಕೋ ಹೊಂಟೋದ್ರು. ಇನ್ನೂ ಮೂರು ಲಕ್ಷ ಸಾಲ ಹಂಗೇ ಐತೆ…” ಎಂದರು.
“ಎಷ್ಟು ವರ್ಷ ಆಯ್ತು?” ಎಂದೆ.
“ಇಪ್ಪತ್ತು ವರ್ಷ ಆಯ್ತು. ಮಕ್ಕಳೆಲ್ಲ ಚಿಕ್ಕವು. ಮನೆ ಇಲ್ಲ, ಮನೆ ಯಜಮಾನಿಲ್ಲ… ಏನ್ಮಾಡ್ಲಿ? ಒಂಟಿ ಹೆಂಗಸು ಮೂರು ಮಕ್ಕಳನ್ನು ಕಟ್ಟಿಕೊಂಡು ಪಡಬಾರದ ಪಾಡು ಪಟ್ಟುಬುಟ್ಟೆ. ಮನೆ ಕೆಲ್ಸ, ಗಾರೆ ಕೆಲ್ಸ, ಕೈಗೆ ಸಿಕ್ಕಿದ ಕೆಲ್ಸನೆಲ್ಲ ಮಾಡಿದೆ. ಜೊತೆಗೆ ದೇವಸ್ಥಾನಿತ್ತು, ಹೂವಿನ ಗಾಡಿ ಇತ್ತು. ಈ ಹೂವೇ ನೋಡಿ ನನ್ನ ಕೈ ಹಿಡಿದಿದ್ದು. ನನ್ನ ಮೂರೂ ಮಕ್ಕಳು ನನ್ನ ವ್ಯಾಪಾರಕ್ಕೆ ಜೊತೆಯಾದೋ, ಕೈಲಾದ ಸಹಾಯ ಮಾಡಿದೋ, ಈ ಪುಟ್ಪಾತಲ್ಲೇ ಬೆಳೆದೋ, ಜೊತೆಗೆ ಓದಿಕೊಂಡೋ. ಇಬ್ಬರು ಗಂಡುಮಕ್ಕಳು – ಒಬ್ಬ ಎಂಜಿನಿಯರು, ಇನ್ನೊಬ್ಬ ಬಿಕಾಂ, ಇಬ್ಬರಿಗೂ ಮದುವೆಯಾಗಿದೆ. ಅವರವರ ಸಂಸಾರ ನೋಡಿಕೊಂಡು ಚೆನ್ನಾಗವ್ರೆ. ಒಬ್ಬಳು ಹೆಣ್ಮಗಳು – ಮೈಸೂರಿಗೆ ಮದುವೆ ಮಾಡಿಕೊಟ್ಟಿದ್ದೀನಿ. ಕಿರಿಮಗನ ಮನೇಲಿ ಇದೀನಿ. ನೈಟ್ ಡೂಟಿ ಮುಗಿಸ್ಕಂಡು ಬತ್ತಾ ಹೂ ತಂದುಕೊಡ್ತನೆ, ಟೈಮ್ ಟೈಮ್ಗೆ ಕಾಫಿ-ತಿಂಡಿ ತಂದುಕೊಡ್ತರೆ. ಚೆನ್ನಾಗಿದಿನಿ. ನಾಳೆಗೆ ಏನು ಅನ್ನಂಗಿಲ್ಲ…” ಎಂದರು.
ಈ ಆಡಿಯೊ ಕೇಳಿದ್ದೀರಾ?: ರಂಗ ನಿರ್ದೇಶಕ ಲಕ್ಷ್ಮಣ್ ಕೆ ಪಿ ಸಂದರ್ಶನ | ‘ಅವತ್ತು ಥಟ್ಟನೆ ಅಳು ಬಂದು ಗಾಂಧಿಯ ವೇಷ ಕಿತ್ತು ಬಿಸಾಡಿಬಿಟ್ಟಿದ್ದೆ!’
“ಹೂವು, ವ್ಯಾಪಾರ, ಫುಟ್ಪಾತು ಈಗ ಏನನ್ನಿಸುತ್ತದೆ?” ಅಂದೆ.
“ನಾನ್ ಇಲ್ಲೇ ಹುಟ್ಟಿ ಬೆಳೆದದ್ದು. ಯಾರೂ ನಂಬಲ್ಲ; ಹೂವು ಮುಟ್ಟಿದರೆ ಮುದುಡಿಹೋಗಬಹುದು, ಆದರೆ ಅದು ಕೊಟ್ಟ ಧೈರ್ಯ ದೊಡ್ಡದು. ವ್ಯಾಪಾರ-ದುಡ್ಡು ನಿಮಗ್ಗೊತ್ತೇ ಇದೆ, ಅದಿದ್ರೇ ಜನ ನೋಡದು. ಬೀದಿಗೆ ಬಂದರೆ, ವ್ಯಾಪಾರಕ್ಕಿಳಿದರೆ ಎಲ್ಲಾ ಭಾಷೆನೂ ಬತ್ತದೆ. ನನಗೆ ಎಲ್ಲರೂ ಗೊತ್ತು…” ಎನ್ನುವಾಗಲೇ, ಒಬ್ಬರು ವಯಸ್ಸಾದ ಮುಸ್ಲಿಂ ತಾತ ಆಗತಾನೇ ಬಕ್ರೀದ್ ಹಬ್ಬದ ಬಿರಿಯಾನಿ ತಿಂದು, ಭಾರೀ ಜೋಶ್‌ನಲ್ಲಿ ಕೋಕಿಲಮ್ಮನವರ ಜೊತೆ ತಮಿಳಿನಲ್ಲಿ ಏನೋ ಹೇಳಿ, ನಗಿಸಿ ಹೋದರು. “ನೋಡಿ… ಎಲ್ಲಾ ಬತ್ತರೆ, ನಾವ್ ಒಳ್ಳೆರಾಗಿದ್ರೆ ಅವರೂ ಒಳ್ಳೆರಾಗಿರ್ತರೆ. ದೇವರ ನಂಬಬೇಕು, ಮನುಷ್ಯರನ್ನು ಮಾತಾಡಸಬೇಕು. ದೇವ್ರು ಕಾಪಾಡ್ತನೆ, ಮನುಷ್ಯರು ಸಹಾಯ ಮಾಡ್ತರೆ. ನಾನು ಯಾರಿಗೂ ತೊಂದರೆ ಕೊಟ್ಟೋಳಲ್ಲ, ಯಾರ ಹತ್ತಾನೂ ಸಹಾಯ ಬೇಡದೋಳಲ್ಲ…” ಎಂದು, ಹುಟ್ಟಿದಾಗಿನಿಂದ ಕಷ್ಟಪಟ್ಟು ಕೆಲಸವನ್ನೇ ನಂಬಿಕೊಂಡು ಬದುಕಿದ ಸ್ವಾಭಿಮಾನದ ಕತೆ ಹೇಳಿದರು. ಕೋಕಿಲಮ್ಮನವರು ಸರಿಸುಮಾರು 17 ವರ್ಷವಿದ್ದಾಗ ಈ ಹೂವಿನ ವ್ಯಾಪಾರಕ್ಕಿಳಿದಿದ್ದರೂ, ಐವತ್ತು ವರ್ಷಗಳಿಂದ ಹೂವಿನ ವ್ಯಾಪಾರ ಮಾಡುತ್ತಿದ್ದರೂ, ಹೂವನ್ನು ನಂಬಿಯೇ ಬದುಕು ಕಟ್ಟಿಕೊಂಡಿದ್ದರೂ – ಇಲ್ಲಿಯವರೆಗೆ ಎಷ್ಟು ಟನ್ ಹೂ ಮಾರಿರಬಹುದು, ಎಷ್ಟು ಮೊಳ ಅಳೆದಿರಬಹುದು, ಅದೆಷ್ಟು ದಾರದ ಉಂಡೆಗಳು ಖಾಲಿಯಾಗಿರಬಹುದು ಅಂತ ಕೇಳಿದರೆ, ಬೊಚ್ಚುಬಾಯಿಯಲ್ಲಿ ಮಗುವಿನಂತೆ ನಗುತ್ತಾರೆ. ಯೋಚಿಸಿ, “ಅಯ್ಯೋ ಹುಚ್ಚಪ್ಪ… ಅದೆಲ್ಲ ಲೆಕ್ಕ ಇಡಕ್ಕಾಯ್ತದಾ? ಈ ಹೂವಿನ ಜೊತೆ ದಾರನೂ ದೇವರ ಪಾದ ಸೇರಿದಂಗೆ, ನಾವೂ ಒಂದಿನ ದೇವ್ರು ಪಾದ ಸೇರಿದ್ರೆ… ಸಾಕು,” ಅಂದರು.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ