ಕರ್ತವ್ಯದಲ್ಲಿರುವಾಗ ರಸ್ತೆ ಅಪಘಾತದಲ್ಲಿ ಯೋಧ ಮೃತಪಟ್ಟರೆ ಅದು ಹೋರಾಟದ ಸಾವಾಗುವುದಿಲ್ಲ, ಯುದ್ಧದಲ್ಲಿ ಸಾವನ್ನಪ್ಪಿದರು ಎಂಬ ಹುತಾತ್ಮ ಸ್ಥಾನವನ್ನು ನೀಡಲಾಗುವುದಿಲ್ಲ ಎಂದು ಬಿಹಾರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಅಧಿಕಾರಿಗಳಿಗೆ ಬಂದಿರುವ ಪತ್ರವನ್ನು ಉಲ್ಲೇಖಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಪಿಟಿಐ ವರದಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವಾಗ ಸಾವನ್ನಪ್ಪಿದ ಸಿವಾನ್ ನಿವಾಸಿ ರಾಮ್ ಬಾಬು ಸಿಂಗ್ ಅವರು ಸೇನಾ ಯೋಧರಾಗಿದ್ದರು. ಬಿಎಸ್‌ಎಫ್‌ನಲ್ಲಿ ಅಲ್ಲ. ಅವರ ಸಾವನ್ನು ‘ಯುದ್ಧದ ಸಾವು’ ಎಂದು ಪರಿಗಣಿಸಲಾಗುವುದಿಲ್ಲ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ತೆಲಂಗಾಣದ ಬಗ್ಗೆ ಮೋದಿ ಅವಹೇಳನ: ರಾಹುಲ್ ಗಾಂಧಿ ಆಕ್ರೋಶ
ಇದಕ್ಕೂ ಮೊದಲು, ಮುಖ್ಯಮಂತ್ರಿ ಕಚೇರಿ ಸಿಂಗ್ ಅವರನ್ನು ‘ಬಿಎಸ್‌ಎಫ್ ಯೋಧ’ ಎಂದು ಕರೆದಿದೆ. ಜೊತೆಗೆ ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಹಾಗೆಯೇ ಕಳೆದ ವಾರ ರಸ್ತೆ ಅಪಘಾತದಲ್ಲಿ ಯೋಧ ಸಾವನ್ನಪ್ಪಿದ ಬಳಿಕ ಅವರನ್ನು ‘ಹುತಾತ್ಮ’ ಎಂದು ಸರ್ಕಾರ ಹೇಳಿತ್ತು.
ಆದರೆ ಇದೀಗ ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಮಗೆ ಮಾಹಿತಿ ನೀಡಿರುವುದಾಗಿ ಪಿಟಿಐ ವರದಿ ಮಾಡಿದೆ. “ನಿನ್ನೆ ರಾತ್ರಿ ನಮಗೆ ಸೇನೆಯಿಂದ ಪತ್ರ ಬಂದಿದೆ, ಅದರಲ್ಲಿ ರಾಮ್ ಬಾಬು ಸಿಂಗ್ ಅವರು ಸೇನೆಯಲ್ಲಿದ್ದಾರೆ ಎಂದು ನಮಗೆ ತಿಳಿಸಲಾಗಿದೆ. ಅಲ್ಲದೆ, ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಕಾರಣ ಅವರ ಸಾವನ್ನು ‘ಯುದ್ಧದ ಸಾವು’ ಎಂದು ಕರೆಯಲಾಗುವುದಿಲ್ಲ ಎಂದು ಉಲ್ಲೇಖಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಸಿಂಗ್ ಅವರ ಮೃತದೇಹ ಬುಧವಾರ ಬೆಳಿಗ್ಗೆ ಪಟನಾ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಅಲ್ಲಿ ಮಾಲಾರ್ಪಣೆ ಸಮಾರಂಭ ನಡೆದಿದೆ. ಆದರೆ ಸಾಮಾನ್ಯವಾಗಿ ಹುತಾತ್ಮ ಯೋಧರಿಗೆ ನೀಡುವ ಗೌರವ ರಕ್ಷೆ ನೀಡಲಾಗಿಲ್ಲ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ | ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಯೋಧನ ಮೃತದೇಹ ಪತ್ತೆ
ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ನಿನ್ನೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎಕ್ಸ್‌ನಲ್ಲಿ ರಾಮ್ ಬಾಬು ಸಿಂಗ್ ಒಬ್ಬ ಬಿಎಸ್ಎಫ್ ಯೋಧ ಎಂದು ಪೋಸ್ಟ್ ಮಾಡಿದ್ದರು. ಈಗ, ಅವರು ಸೇನೆಯಲ್ಲಿದ್ದರು ಎಂದು ತಿಳಿದುಬಂದಿದೆ. ಸಿಎಂ ಈ ರೀತಿ ಗೊಂದಲ ಸೃಷ್ಟಿಸುವುದು ವಿಷಾದನೀಯ. ಆದರೆ ಸಿಂಗ್ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡುವ ಭರವಸೆಯನ್ನು ಸಿಎಂ ಈಡೇರಿಸುತ್ತಾರೆ ಎಂದು ಭಾವಿಸುತ್ತೇನೆ” ಎಂದು ತಿಳಿಸಿದ್ದಾರೆ.
“ಇನ್ನು ಸಿಂಗ್ ಅವರ ಪಾರ್ಥಿವ ಶರೀರ ಬಂದ ಬಗ್ಗೆ ನನಗೆ ಯಾರೂ ತಿಳಿಸಿಲ್ಲ. ನಾನು ಒಬ್ಬಂಟಿಯಾಗಿ ಬಂದಿದ್ದೇನೆ. ಇಬ್ಬರು ಉಪಮುಖ್ಯಮಂತ್ರಿಗಳು ಮತ್ತು ದೊಡ್ಡ ಸಂಪುಟ ಸೇರಿದಂತೆ ಸರ್ಕಾರಿ ಪ್ರತಿನಿಧಿಗಳು ಕಾಣದಿರುವುದು ನಿರಾಶಾದಾಯಕ. ನಾನು ಸಿಂಗ್ ಅವರ ಕುಟುಂಬದೊಂದಿಗೆ ಮಾತನಾಡಿ ಸಂತಾಪ ಸೂಚಿಸಿದ್ದೇನೆ” ಎಂದು ತಿಳಿಸಿದರು.
ಸಿಂಗ್ ಅಂತ್ಯಕ್ರಿಯೆಯನ್ನು ಬುಧವಾರ ಸಂಜೆ ಸಿವಾನ್‌ನ ವಾಸಿಲ್‌ಪುರ ಗ್ರಾಮದಲ್ಲಿರುವ ಅವರ ಹುಟ್ಟೂರಿನಲ್ಲಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುತ್ತದೆ. “ಸಿಂಗ್ ಅವರ ತ್ಯಾಗದ ಬಗ್ಗೆ ನಮಗೆ ಹೆಮ್ಮೆ ಇದೆ. ಕರ್ತವ್ಯದ ವೇಳೆ ಮಡಿಯುವ ಅರೆಸೈನಿಕ ಸಿಬ್ಬಂದಿಗೆ ‘ಹುತಾತ್ಮ’ ಸ್ಥಾನಮಾನ ನೀಡುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯುತ್ತೇನೆ. ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸೈನಿಕರಂತೆಯೇ ಅವರನ್ನು ಗೌರವಿಸಬೇಕು. ಸಿಎಪಿಎಫ್ ಸಿಬ್ಬಂದಿಗೆ ಸಾಮಾನ್ಯವಾಗಿ ಅರ್ಹವಾದ ಮನ್ನಣೆ ಸಿಗುವುದಿಲ್ಲ” ಎಂದು ಯಾದವ್ ಹೇಳಿದ್ದಾರೆ.
