- ಮಳೆ ಮುಂದುವರಿದ ಪರಿಣಾಮ ಅಮರನಾಥ ಯಾತ್ರೆ ಸ್ಥಗಿತ
- ದೆಹಲಿಯಲ್ಲಿ 40 ವರ್ಷಗಳಲ್ಲೇ ಗರಿಷ್ಠ ಮಳೆ ದಾಖಲು
ಹಿಮಾಚಲ ಪ್ರದೇಶ, ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಸೋಮವಾರವೂ (ಜುಲೈ 10) ಮುಂದುವರಿದಿದೆ.
ಉತ್ತರ ಭಾರತದ ರಾಜ್ಯಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಸಂಬಂಧಿಸಿದ ಅವಘಡಗಳಲ್ಲಿ ಸೋಮವಾರದ ಹೊತ್ತಿಗೆ 22 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರೀ ಮಳೆ ಭಾನುವಾರ ಉತ್ತರ ಭಾರತವನ್ನು ಅಕ್ಷರಶಃ ನಲುಗಿಸಿದೆ. ಹಲವು ಪ್ರದೇಶಗಳಲ್ಲಿ ಮುಂಗಾರು ಮಳೆಯು ಬಿರುಗಾಳಿ ಸಹಿತ ಬೀಸಿದೆ. ಇದರಿಂದ ಗುಡ್ಡಗಾಡು ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಪ್ರವಾಹ, ಭೂಕುಸಿತದಿಂದ 17 ಮಂದಿ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಐದು ಮಂದಿ ಅಸುನೀಗಿದ್ದಾರೆ ಎಂದು ವರದಿಯಾಗಿದೆ.
ಭಾರೀ ಮಳೆ ಪರಿಣಾಮ ಹಿಮಾಚಲ ಪ್ರದೇಶದ ಕುಲ್ಲು ಪ್ರದೇಶದಲ್ಲಿ ಬಿಯಾಸ್ ನದಿಯಲ್ಲಿ ಪ್ರವಾಹ ಉಂಟಾಗಿ ಮನಾಲಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳು, ಮಳಿಗೆಗಳು ನದಿಯಲ್ಲಿ ಕೊಚ್ಚಿ ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಿರಂತರ ಮಳೆಯಾಗುತ್ತಿರುವುದರಿಂದ ಹಿಮಾಚಲ ಪ್ರದೇಶದ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಳೆಯಿಂದ ಉಂಟಾದ ನಾಲ್ಕು ಪ್ರತ್ಯೇಕ ಭೂಕುಸಿತಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಶಿಮ್ಲಾದ ಕೋಟ್‌ಗಢ ಪ್ರದೇಶದಲ್ಲಿ ಮನೆ ಕುಸಿತದಿಂದ ಒಂದೇ ಕುಟುಂಬದ ಮೂವರು ಬಲಿಯಾಗಿದ್ದಾರೆ. ಕುಲ್ಲು ಮತ್ತು ಛಂಬಾ ಪ್ರದೇಶಗಳಲ್ಲಿ ತಲಾ ಒಂದು ಸಾವು ವರದಿಯಾಗಿದೆ. ಶಿಮ್ಲಾ ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ಭೂ ಕುಸಿತ ಉಂಟಾಗಿ ಮಹಿಳೆ ಮತ್ತು ಅವರ ಪುತ್ರ ಅಸುನೀಗಿದ್ದಾರೆ.
ಹಿಮಾಚಲ ಪ್ರದೇಶದ ತುರ್ತು ಕಾರ್ಯಾಚರಣೆ ಕೇಂದ್ರ ನೀಡಿದ ಮಾಹಿತಿ ಪ್ರಕಾರ, ಕಳೆದ 36 ಗಂಟೆಗಳಲ್ಲಿ 14 ಪ್ರಮುಖ ಭೂಕುಸಿತ, 13 ಕಡೆ ಹಠಾತ್ ಪ್ರವಾಹ ಸಂಭವಿಸಿದ್ದು 700 ಕ್ಕೂ ಹೆಚ್ಚು ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಇಲ್ಲಿಯ ಕೊಟ್ಟಿಯಿಂದ ಜೋಗಿಂದರ್ ನಗರಕ್ಕೆ ಸಂಪರ್ಕ ಕಲ್ಪಿಸುವ ಬಿಯಾಸ್ ನದಿಗೆ ಅಡ್ಡಲಾಗಿದ್ದ ಸೇತುವೆ ಕುಸಿದಿದೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ಅಮರನಾಥ ಯಾತ್ರೆ ಮತ್ತೆ ಸ್ಥಗಿತ
ಭಾರೀ ಮಳೆ ಪರಿಣಾಮ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಹಾಗೂ ಶ್ರೀನಗರದಲ್ಲಿ ಹಿಮಪಾತದ ವರದಿಯಾಗಿದೆ. ಮಳೆ ಹಾಗೂ ಹಿಮಪಾತದಿಂದ ಸ್ಥಗಿತಗೊಂಡಿದ್ದ ಅಮರನಾಥ ತೀರ್ಥಯಾತ್ರೆಯ ಭಕ್ತಾದಿಗಳನ್ನು ಪಂಚತರ್ಣಿ ಮತ್ತು ಶೇಷನಾಗ್ ಶಿಬಿರಗಳಲ್ಲಿ ರಕ್ಷಿಸಲಾಗಿತ್ತು. ಎರಡು ದಿನಗಳ ಸ್ಥಗಿತದ ನಂತರ ಯಾತ್ರೆಯನ್ನು ಮತ್ತೆ ಆರಂಭಿಸಲಾಯಿತು. ಆದರೆ ಮಳೆ ಮುಂದುವರಿದ ಕಾರಣ ಸೋಮವಾರ ಮತ್ತೆ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.
ವಾರ್ಷಿಕ ಅಮರನಾಥ ಯಾತ್ರೆಯು ಜುಲೈ 1 ರಿಂದ ಆರಂಭವಾಗಿದೆ. 650ಕ್ಕೂ ಹೆಚ್ಚು ಯಾತ್ರಾರ್ಥಿಗಳು ಹವಾಮಾನ ವೈಪರೀತ್ಯದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಲುಕಿಕೊಂಡಿದ್ದಾರೆ.
ಉತ್ತರಾಖಂಡ್‌ನಲ್ಲಿ ಮಳೆಯಿಂದ ಆರು ಸಾವು
ಉತ್ತರಾಖಂಡ್‌ನಲ್ಲೂ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಸಂಬಂಧಿತ ಅವಘಡಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಹೆದ್ದಾರಿಗಳಲ್ಲಿ ಭೂಕುಸಿತ ಉಂಟಾಗಿ ಜನರು ಗ್ರಾಮಗಳಿಗೆ ತೆರಳಲಾಗದೇ ಪರದಾಡುತ್ತಿದ್ದಾರೆ.
ಭಾರೀ ಮಳೆ ಹಿನ್ನೆಲೆ ಕಾಶೀಪುರದಲ್ಲಿ ಮನೆಯ ಗೋಡೆ ಕುಸಿದು ದಂಪತಿ ಮೃತಪಟ್ಟಿದ್ದಾರೆ. ಉತ್ತರಕಾಶಿ ಜಿಲ್ಲೆಯಲ್ಲಿ ಭಾನುವಾರ ಸಂಜೆ ಬಂಡೆಯೊಂದು ಉರುಳಿ ಬಿದ್ದು 45 ವರ್ಷದ ಮುಖ್ಯ ಪೇದೆ ಛಮನ್ ಸಿಂಗ್ ತೋಮರ್ ಅವರು ಅಸುನೀಗಿದ್ದಾರೆ.
ರಿಷಿಕೇಶ್-ಬದರಿನಾಥ್ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ಗಂಗಾ ನದಿಗೆ ಜೀಪ್ ಉರುಳಿ ಮೂವರು ಸಾವನ್ನಪ್ಪಿದ್ದಾರೆ. ಜೀಪ್‌ನಲ್ಲಿ 11 ಮಂದಿಯಿದ್ದು, ಐವರನ್ನು ರಕ್ಷಿಸಲಾಗಿದೆ, ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಪೊಲೀಸರು ತಿಳಿಸಿದ್ದಾರೆ.
ಹರಿಯಾಣದಲ್ಲಿ ಮಾರ್ಕಂಡ, ಘಗ್ಗರ್ ಮತ್ತು ತಂಗಿ ಎಂಬ ಮೂರು ನದಿಗಳು ಅಪಾಯದ ಅಂಚಿನಲ್ಲಿ ಹರಿಯುತ್ತಿದ್ದು ನೆರೆ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ ಎಂದು ವರದಿಯಾಗಿದೆ.
ದೆಹಲಿಯಲ್ಲಿ ಶಾಲೆಗಳಿಗೆ ರಜೆ
ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಇದು ದಶಕಗಳಲ್ಲೇ ವರದಿಯಾದ ಹೆಚ್ಚಿನ ಪ್ರಮಾಣದ ಮಳೆ ಎಂದು ಹೇಳಲಾಗುತ್ತಿದೆ. ನಿರಂತರ ಮಳೆ ಹಿನ್ನೆಲೆ ಇಲ್ಲಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮಳೆಯು ಮುಂದುವರಿದಿದ್ದು ಮನೆಯಿಂದ ಹೊರಗೆ ಬರದಂತೆ ಜನರಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ದೆಹಲಿಯಲ್ಲಿ 153 ಮಿ.ಲೀ ಮಳೆಯಾಗಿದ್ದು ಹಲವು ರಸ್ತೆಗಳು ಜಲಾವೃತವಾಗಿವೆ. ಇದು ಕಳೆದ 40 ವರ್ಷಗಳಲ್ಲೇ ಜುಲೈನ ಒಂದೇ ದಿನವಾದ ಗರಿಷ್ಠ ಪ್ರಮಾಣದ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ಮಾಡಿದೆ.
ಗುಡ್ಡಪ್ರದೇಶಗಳಲ್ಲಿ ರಸ್ತೆಗಳು ಕೊಚ್ಚಿಹೋಗಿದ್ದು, ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಭೇಟಿ ನೀಡುವಂತೆ ಪ್ರವಾಸಿಗರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ವಿದ್ಯುತ್ ವೈರಿಂಗ್ ಪರಿಶೀಲಿಸಿದ್ದಕ್ಕೆ ದಲಿತ ವ್ಯಕ್ತಿಗೆ ಚಪ್ಪಲಿ ನೆಕ್ಕಿಸಿದ ಲೈನ್‌ಮೆನ್
ಮಳೆಯ ಪರಿಣಾಮ ರೈಲು ಸಂಚಾರಕ್ಕೂ ಅಡ್ಡಿಯಾಗಿದೆ. ಉತ್ತರ ರೈಲ್ವೆಯು 17 ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದು, 12 ರೈಲುಗಳ ಮಾರ್ಗ ಬದಲಾವಣೆ ಮಾಡಿದೆ. ಅಲ್ಲದೆ ಜಲಾವೃತದಿಂದಾಗಿ ನಾಲ್ಕು ಕಡೆ ಸಂಚಾರ ಸ್ಥಗಿತಗೊಳಿಸಲಾಗಿದೆ.
ಯಮುನಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಜನರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳಿಗೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.