ಮಂಡ್ಯ ಜಿಲ್ಲೆ, ಗ್ರಾಮಾಂತರ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ‘ ರೈತ ಶಾಲೆ ‘ ನಿರ್ಮಿಸಿದ್ದು ಉದ್ಘಾಟನೆಗೆ ಸಿದ್ದವಾಗಿದೆ.
ರೈತರಿಗೆ ಅಗತ್ಯ ಇರುವ ಕೃಷಿಗೆ ಪೂರಕವಾದ ಮಾಹಿತಿ ನೀಡುವುದು. ವಿದ್ಯಾವಂತರನ್ನು ಕೃಷಿಯ ಕಡೆಗೆ ಆಕರ್ಶಿಸುವಂತೆ ಮಾಡುವುದು ಹಾಗೂ ಉದ್ಯೋಗಕ್ಕಾಗಿ ಪರ ಊರಿಗೆ ಗುಳೆ ಹೋಗದಂತೆ ತಡೆಯುವ ನಿಟ್ಟಿನಲ್ಲಿ ಶಿಕ್ಷಕರ ತಂಡವೊಂದು ಮಹತ್ವದ ಪ್ರಯತ್ನಕ್ಕೆ ಕೈಹಾಕಿದೆ.
ಏಳು ಶಿಕ್ಷಕರ ತಂಡ ಸೇರಿ ಕೃಷಿಯ ಸಾಧಕ – ಬಾಧಕ ಚರ್ಚಿಸಿ, ಹೆಚ್ಚುತ್ತಿರುವ ರೈತರ ಆತ್ಮಹತ್ಯೆ, ಬರದಿಂದ ರೈತರು ಅನುಭವಿಸಿದ ಸಂಕಷ್ಟಗಳು, ಬೆಳೆದ ಬೆಳೆಗೆ ಬೆಲೆ ಸಿಗದಿರುವುದು ಜೊತೆಗೆ ಮಾರುಕಟ್ಟೆ ಸಮಸ್ಯೆ, ಸಾಲ ಇಂತಹ ವಿಚಾರಗಳನ್ನು ಬಹು ಮುಖ್ಯವಾಗಿರಿಸಿಕೊಂಡು ಉಪನ್ಯಾಸಕ ಸತ್ಯಮೂರ್ತಿ ಅವರ ನೇತೃತ್ವದಲ್ಲಿ ‘ ರೈತ ಶಾಲೆ ‘ ನಿರ್ಮಿಸಿದ್ದಾರೆ.
₹6 ಲಕ್ಷ ರೂಪಾಯಿ ವೆಚ್ಚದಲ್ಲಿ ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶಿಕ್ಷಕರ ತಂಡದ ಜೊತೆಗೆ 80 ಜನರು ಸೇರಿ ಸುಸರ್ಜಿತವಾದ ಕಟ್ಟಡ ಕಟ್ಟಿದ್ದಾರೆ. ಈ ತಂಡ ಬೇರೆ ಬೇರೆ ಊರುಗಳಿಗೆ ಭೇಟಿ ಕೊಟ್ಟು ಕೃಷಿ ತಜ್ಞರು, ಪ್ರಗತಿಪರ ರೈತರಿಂದ ಮಾಹಿತಿ ಪಡೆದು ರೈತರಿಗೆ ಶಿಕ್ಷಣದ ಜೊತೆಗೆ ತರಬೇತಿ ಶಿಬಿರ, ಮಾದರಿ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡುವುದು, ತಜ್ಞರನ್ನು ಕರೆದು
ಮಾಹಿತಿ ಕೊಡಿಸುವುದು ಇದರ ಉದ್ದೇಶವಾಗಿದೆ.
ಇದರ ಮೂಲಕ ರೈತರಿಗೆ ಬೀಜಗಳನ್ನು ವಿತರಿಸಿ ಅವುಗಳನ್ನು ಭವಿಷ್ಯಕ್ಕೆ ಸಂರಕ್ಷಿಸಲು ಉತ್ತೇಜನ ನೀಡಬೇಕಿದೆ. ಬೀಜಕ್ಕಾಗಿ ಕಂಪನಿಗಳ ಮೊರೆ ಹೋಗದಂತೆ ತಡೆಯಬೇಕಿದೆ. ಜೊತೆಗೆ ಸ್ವಾವಲಂಬಿಗಳಾಗಿ ಕೃಷಿ ನಡೆಸುವುದು ಬಹು ಮುಖ್ಯವಾದ ಗುರಿ ಎಂದು ಸತ್ಯಮೂರ್ತಿ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಭತ್ತ ಕಟಾವು ಯಂತ್ರ, ಕೃಷಿ ಸಲಕರಣೆಗಳು ರೈತರಿಗೆ ಕಡಿಮೆ ಬೆಲೆಯಲ್ಲಿ ಬಾಡಿಗೆ ನೀಡುವ ಯೋಜನೆಯನ್ನು ಸಹ ಸಿದ್ದಪಡಿಸಲಾಗಿದೆ. ಸಾವಯವ ಕೃಷಿ ಹಾಗೂ ನೈಸರ್ಗಿಕ ಕೃಷಿಯನ್ನು ಕೈಗೊಳ್ಳಲು ಪ್ರೋತ್ಸಾಹ ನೀಡುವುದಾಗಿ ರಾಸಾಯನಿಕ ಹಾಗೂ ಕೀಟನಾಶಕ ಮುಕ್ತ ಕೃಷಿ ನಡೆಸುವಂತೆ ಅಣಿ ಮಾಡುವುದಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಬಿಳಿಗಿರಿರಂಗನ ಬೆಟ್ಟದ ರೇಷ್ಮೆ ಕೃಷಿ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಕೆ. ವೆಂಕಟೇಶ್
ಜೂನ್. 16 ರಂದು ಆದಿಚುಂಚನಗಿರಿ ಕ್ಷೇತ್ರದ ಪೀಠಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ರೈತ ಶಾಲೆ ಉದ್ಘಾಟಿಸಲಿದ್ದಾರೆ. ರೈತರಿಗೆ ಪ್ರವೇಶ ಉಚಿತವಾಗಿದ್ದು ಜಿಲ್ಲೆಯ ಯಾವುದೇ ಭಾಗದಿಂದ ರೈತರು ಬಂದು ವ್ಯವಸಾಯದ ಮಾಹಿತಿ ಪಡೆಯಬಹುದು. ಇದಕ್ಕಾಗಿ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿರುತ್ತಾರೆ.