ಭಾರತ- ಪಾಕ್ ಸಂಘರ್ಷದಿಂದಾಗಿ ಐಪಿಎಲ್ ಪಂದ್ಯಗಳು ಒಂದು ವಾರ ಮುಂದಡಲ್ಪಟ್ಟದ್ದರಿಂದ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ಇನ್ನು ಐಪಿಎಲ್ ಲೀಗ್ ಹಂತದ 13 ಹಾಗೂ ಪ್ಲೇ ಆಫ್ ಹಂತದ ನಾಲ್ಕು ಪಂದ್ಯಗಳು ಬಾಕಿ ಇವೆ. ಐಪಿಎಲ್ ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಇದರ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಡೆಯಲಿದೆ. ಪ್ರಶಸ್ತಿ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಹೀಗಾಗಿ ದಕ್ಷಿಣ ಆಫ್ರಿಕಾದ ಆಟಗಾರರು ಪ್ಲೇ ಆಫ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ.
ಐಪಿಎಲ್ ಲೀಗ್ ಹಂತದ ಪಂದ್ಯಗಳು ಮುಗಿದ ಬಳಿಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ಆಟಗಾರರಿಗೆ ತವರಿಗೆ ಕರೆದಿದೆ. ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ತಯಾರಿ ನಡೆಸಲಿದ್ದಾರೆ. ಐಪಿಎಲ್‌ನಲ್ಲಿ ಭಾಗವಹಿಸುವ ಆಟಗಾರರಿಗೆ ಮೇ 27 ರಂದು ತವರಿಗೆ ಆಗಮಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸದ ಆಟಗಾರರು ಐಪಿಎಲ್‌ನಲ್ಲಿ ಮುಂದುವರೆಯಲಿದ್ದಾರೆ.
ದಕ್ಷಿಣ ಆಫ್ರಿಕಾದ ಒಟ್ಟು 20 ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಈ 20 ಆಟಗಾರರಲ್ಲಿ ಒಟ್ಟು 8 ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಭಾಗವಹಿಸಲಿದ್ದಾರೆ.
ಇದನ್ನು ಓದಿದ್ದೀರಾ? ಒಂದೇ ಓವರ್‌ನಲ್ಲಿ 6 ಸಿಕ್ಸ್; ಇಂಗ್ಲೆಂಡ್‌ನಲ್ಲಿ ಭಾರತೀಯ ಮೂಲದ ಆಟಗಾರನ ಸಾಧನೆ
ಇದರಲ್ಲಿ ಆರ್‌ಸಿಬಿ ತಂಡದ ಲುಂಗಿ ಎನ್‌ಗಿಡಿ, ಗುಜರಾತ್ ಟೂಟಾನ್ಸ್‌ನ ಕಗಿಸೋ ರಬಾಡ, ಎಲ್‌ಎಸ್‌ಜಿ ತಂಡದ ಐಡೆನ್ ಮಾರ್ಕ್ರಾಮ್, ಪಂಜಾಬ್‌ನ ಮಾರ್ಕೊ ಜಾನ್ಸೆನ್, ಡೆಲ್ಲಿ ತಂಡದ ಟ್ರಿಸ್ಟನ್ ಸ್ಟಬ್ಸ್, ಎಸ್‌ಆರ್‌ಎಚ್ ತಂಡದ ವಿಯಾನ್ ಮುಲ್ಡರ್, ಮುಂಬೈ ತಂಡದ ರಯಾನ್ ರಿಕಲ್ಟನ್ ಫೈನಲ್‌ಗೆ ಆಯ್ಕೆಯಾದ ಆಟಗಾರರು.
ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ನಿರ್ಧಾರವನ್ನು ಆಟಗಾರರ ಮೇಲೆ ಬಿಟ್ಟಿದೆ. ಹೀಗಾಗಿ ಆಸೀಸ್ ಆಟಗಾರರು ಪ್ಲೇಆಫ್‌ನಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.
ಆರ್‌ಸಿಬಿ ತಂಡದ ಜೋಶ್ ಹ್ಯಾಜಲ್‌ವುಡ್, ಡೆಲ್ಲಿ ತಂಡದ ಮಿಚೆಲ್ ಸ್ಟಾರ್ಕ್, ಪಂಜಾಬ್ ಜೋಶ್ ಇಂಗ್ಲಿಷ್ ಇವರು ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂರು ತಂಡಗಳು ಪ್ಲೇ ಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಈ ವೇಳೆ ಈ ಆಟಗಾರರು ಪ್ಲೇ ಆಫ್ ಪಂದ್ಯಗಳನ್ನು ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಖಚಿತತೆ ಇಲ್ಲ.