ಬೀದರ್‌ | ಅಲ್ಪಸಂಖ್ಯಾತರ ಶಾಲಾ-ಕಾಲೇಜು ʼಅತಿಥಿʼ ಆಯ್ಕೆಗೆ ಪ್ರವೇಶ ಪರೀಕ್ಷೆ: ಉಪವಾಸ ಧರಣಿ ಎಚ್ಚರಿಕೆ!

Date:

Advertisements

2025-26ನೇ ಶೈಕ್ಷಣಿಕ ಸಾಲಿನಿಂದ ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಈ ಬಾರಿ ರಾಜ್ಯಾದ್ಯಂತ ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಮೆರಿಟ್‌ ಪದ್ಧತಿಯನ್ವಯ ಆಯ್ಕೆ ಮಾಡಿಕೊಳ್ಳುವ ಇಲಾಖೆಯ ನಿರ್ಧಾರವನ್ನು ಅತಿಥಿ ಶಿಕ್ಷಕ-ಉಪನ್ಯಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಆಯಾ ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯಡಿ ಬರುವ ವಸತಿ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕ, ಉಪನ್ಯಾಸಕರ ಹುದ್ದೆಗೆ ಎದುರಾಗಿ ತಾತ್ಕಾಲಿಕವಾಗಿ ಅರ್ಜಿ ಮೆರಿಟ್‌ ಪದ್ಧತಿಯಂತೆ ಅತಿಥಿ ಶಿಕ್ಷಕ, ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲು ಇಲಾಖೆ ಆದೇಶಿಸಿದೆ.

ʼಅತಿಥಿʼ ಶಿಕ್ಷಕರ ಆಯ್ಕೆ ವಿಧಾನ ಹೇಗೆ?

Advertisements

ಪ್ರವೇಶ ಪರೀಕ್ಷೆ ಜಿಲ್ಲಾ ಹಂತದಲ್ಲಿಯೇ ನಡೆಸಲಾಗುತ್ತದೆ. ರಾಜ್ಯಾದ್ಯಂತ ಏಕರೂಪ ಪ್ರವೇಶ ಪರೀಕ್ಷೆ ನಡೆಸಿ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಶೇ 40ರ ಸರಾಸರಿ ಅಂಕಗಳು. ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪದವಿ ವಿದ್ಯಾರ್ಹತೆಯಲ್ಲಿ ಪಡೆದಿರುವ ಶೇ 20 ರಷ್ಟು ಅಂಕ ಹಾಗೂ ಅತಿಥಿ ಉಪನ್ಯಾಸಕರಿಗೆ ಸ್ನಾತಕೋತ್ತರ ಪದವಿಯಲ್ಲಿ ಪಡೆದಿರುವ ಶೇ 20ರಷ್ಟು ಅಂಕ, ಬಿ.ಇಡ್‌ ವಿದ್ಯಾರ್ಹತೆಯಲ್ಲಿ ಪಡೆದಿರುವ ಶೇ 20 ಅಂಕಗಳು. ಈ ಎಲ್ಲಾ ಅಂಕಗಳ ಕ್ರೋಡೀಕರಣದೊಂದಿಗೆ 1:2 ಅನುಪಾತದಲ್ಲಿ ತಾತ್ಕಾಲಿಕ ಮೆರಿಟ್‌ ಪಟ್ಟಿಯನ್ನು ಸಿದ್ಧಪಡಿಸಲಾಗುವುದುʼ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ʼಅನುಪಾತದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಜಿಲ್ಲಾ ಹಂತದಲ್ಲಿನ ಆಯ್ಕೆ ಸಮಿತಿ 20 ಅಂಕಗಳಿಗೆ ತರಗತಿ ಪ್ರಾತ್ಯಕ್ಷಿಕೆ ಪರೀಕ್ಷೆ (Classroom Demonstration Test) ಕೈಗೊಂಡು ಅಂತಿಮವಾಗಿ 1:1 ಅನುಪಾತದಲ್ಲಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಕೌನ್ಸೆಲಿಂಗ್‌ ಮೂಲಕ ತಾತ್ಕಾಲಿಕವಾಗಿ ಜಿಲ್ಲಾ ಹಂತದಲ್ಲಿಯೇ ಸ್ಥಳ ನಿಯುಕ್ತಿಗೊಳಿಸಲಾಗುವುದುʼ ಎಂದಿದ್ದಾರೆ.

ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಜಿಲ್ಲಾ ಹಂತದ ಆಯ್ಕೆ ಸಮಿತಿಗೆ ಅಧ್ಯಕ್ಷರಾಗಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ನಡೆಯುತ್ತಿರುವ ಶಾಲಾ-ಕಾಲೇಜಿನ ಓರ್ವ ಪ್ರಾಚಾರ್ಯ/ಮುಖ್ಯಗುರು ಸದಸ್ಯ ಕಾರ್ಯದರ್ಶಿ ಹಾಗೂ ವಿಷಯವಾರು ವಿಷಯ ತಜ್ಞರು ಮತ್ತು ಸ್ಥಳೀಯ ಪ್ರಸಿದ್ಧ ಶಿಕ್ಷಣ ತಜ್ಞರ ಸದಸ್ಯರನ್ನು ಒಳಗೊಂಡ ಒಟ್ಟು ನಾಲ್ಕು ಜನರ ಆಯ್ಕೆ ಸಮಿತಿ ಅತಿಥಿ ಶಿಕ್ಷಕರ-ಉಪನ್ಯಾಸಕರನ್ನು ಜಿಲ್ಲಾ ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸುತ್ತಾರೆ.

ಪ್ರವೇಶ ಪರೀಕ್ಷೆ ಸ್ವರೂಪ :

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅತಿಥಿ ಶಿಕ್ಷಕರು, ಉಪನ್ಯಾಸಕರ ಹುದ್ದೆ ಬಯಸಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2025ರ ಜೂನ್‌ 1ರಂದು ಆಯಾ ಜಿಲ್ಲೆಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಅಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1ಗಂಟೆವರೆಗೆ (120 ನಿಮಿಷ) ಒಟ್ಟು ನೂರು ಪ್ರಶ್ನೆಗಳನ್ನು ಹೊಂದಿರುವ 100 ಅಂಕಗಳ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತದೆ.

ಪ್ರಶ್ನೆ ಪತ್ರಿಕೆಯು ಕಡ್ಡಾಯ ಕನ್ನಡ 20 ಅಂಕ, ಕಡ್ಡಾಯ ಇಂಗ್ಲಿಷ್‌ 20 ಅಂಕ, ಶಿಶು ವಿಕಸನ ಮತ್ತು ಬೋಧನಾ ಕ್ರಮ 40 ಅಂಕ ಪ್ರಸ್ತುತ ಶಿಕ್ಷಣದ ಒಲವುಗಳು ಹಾಗೂ ಶೈಕ್ಷಣಿಕ ಪ್ರಚಲಿತ ಘಟನೆಗಳು 20 ಅಂಕಗಳ (6-10ನೇ ತರಗತಿ) ಪಠ್ಯಕ್ರಮ ಸೇರಿ ಒಟ್ಟು 100 ಅಂಕಗಳ ಪರೀಕ್ಷೆ ನಡೆಯುತ್ತದೆ ಎಂದು ಮೇ 5ರಂದು ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಪ್ರವೇಶ ಪರೀಕ್ಷೆ ರದ್ದತಿಗೆ ʼಅತಿಥಿʼಗಳ ಆಗ್ರಹ :

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಾಲಾ-ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ಆಯ್ಕೆಗೆ ಇದೇ ಮೊದಲ ಬಾರಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ನಿರ್ಧಾರ ಸಂಪೂರ್ಣ ರದ್ದುಗೊಳಿಸಬೇಕೆಂದು ಅತಿಥಿ ಶಿಕ್ಷಕರು, ಉಪನ್ಯಾಸಕರು ಆಗ್ರಹಿಸಿದ್ದಾರೆ.

ಈ ಕುರಿತು ಬೀದರ್‌, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳ ಮುಖಾಂತರ ಸಿಎಂ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.

ʼಕಳೆದ 8-10 ವರ್ಷಗಳಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ವಸತಿ ಸಹಿತ ಹಾಗೂ ವಸತಿ ರಹಿತ ಶಾಲಾ-ಕಾಲೇಜುಗಳಲ್ಲಿ ಅತಿಥಿ ಶಿಕ್ಷಕ-ಉಪನ್ಯಾಸಕರಾಗಿ ಕಡಿಮೆ ಗೌರವಧನ ಪಡೆದು ಪ್ರಾಮಾಣಿಕವಾಗಿ ಖಾಯಂ ನೌಕರರಂತೆ ಸೇವೆ ಸಲ್ಲಿಸುತ್ತಿದ್ದೇವೆ. ಪ್ರಸಕ್ತ ವರ್ಷ ಇಲಾಖೆಯವರು ಅತಿಥಿ ಶಿಕ್ಷಕ- ಉಪನ್ಯಾಸಕರ ನೇಮಕಾತಿಗಾಗಿ ಪ್ರವೇಶ ಪರೀಕ್ಷೆ ಎಂಬ ಹೊಸ ಮಾನದಂಡ ಜಾರಿಗೊಳಿಸಿದ್ದು ಅವೈಜ್ಞಾನಿಕವಾಗಿದೆʼ ಎಂದು ಅತಿಥಿ ಶಿಕ್ಷಕರೊಬ್ಬರು ಹೇಳುತ್ತಾರೆ.

ಇದನ್ನೂ ಓದಿ : ಈ ದಿನ ಸಂಪಾದಕೀಯ | ಎಲ್ಲೆಲ್ಲೂ ಮೆರೆಯುತ್ತಿರುವ ಕ್ರೌರ್ಯ ಮಕ್ಕಳ ಮನಸುಗಳನ್ನೂ ಆಳಿದರೆ ಅದರ ಹೊಣೆ ಯಾರದು?

ʼಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಘ ಅಡಿಯಲ್ಲಿ ನಡೆಯುವ ಶಾಲಾ-ಕಾಲೇಜಿನ ಅತಿಥಿ ಶಿಕ್ಷಕ-ಉಪನ್ಯಾಸಕರ ಆಯ್ಕೆಗೆ ಯಾವುದೇ ಪರೀಕ್ಷೆ ಕಡ್ಡಾಯ ಇಲ್ಲ. ಬೇರೆ ಇಲಾಖೆಗೆ ಇರದಿರುವ ಹೊಸ ನಿಯಮ ಅಲ್ಪಸಂಖ್ಯಾತರ ಇಲಾಖೆಯಡಿ ಸೇವೆ ಸಲ್ಲಿಸುವ ʼಅತಿಥಿʼಗಳಿಗೆ ಮಾತ್ರ ಏಕೆʼ ಎಂದು ಪ್ರಶ್ನಿಸಿದ್ದಾರೆ.

ʼಪ್ರವೇಶ ಪರೀಕ್ಷೆ, ಮೆರಿಟ್‌ ಮುಖಾಂತರ ಆಯ್ಕೆ ಮಾಡುವುದರಿಂದ ಈಗಾಗಲೇ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕ-ಉಪನ್ಯಾಸಕರಿಗೆ ಸಹಜವಾಗಿ ಅನ್ಯಾಯ ಆಗಲಿದೆ. ಅತಿಥಿ ಶಿಕ್ಷಕ-ಉಪನ್ಯಾಸಕರಿಗೆ ಗೌರವಧನವೇ ಬದುಕಿಗೆ ಆಧಾರವಾಗಿದೆ. ಪರೀಕ್ಷೆ ನಡೆಸಿದರೆ ಕಡಿಮೆ ವಿದ್ಯಾರ್ಹತೆ ಇರುವ ಹಳೆ ಅತಿಥಿ ಶಿಕ್ಷಕರು, ಉಪನ್ಯಾಸಕರು ಪರೀಕ್ಷೆಯಿಂದ ಹೊರ ಉಳಿಯುವ ಸಾಧ್ಯತೆ ಇದೆ ಎಂದು ಬಸವಕಲ್ಯಾಣದ ಅತಿಥಿ ಶಿಕ್ಷಕರೊಬ್ಬರು ಈದಿನ.ಕಾಮ್‌ ಜೊತೆ ಮಾತನಾಡಿ ಗೋಳು ತೋಡಿಕೊಂಡರು.

ಬೀದರ್‌ ಜಿಲ್ಲೆಯಲ್ಲಿ 111 ʼಅತಿಥಿʼ ಹುದ್ದೆ :

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬೀದರ್‌ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ-ಕಾಲೇಜು, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ-ಕಾಲೇಜು ಮತ್ತು ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 2025-26ನೇ ಶೈಕ್ಷಣಿಕ ಸಾಲಿಗೆ ಒಂದು ವರ್ಷಕ್ಕೆ ತಾತ್ಕಾಲಿಕವಾಗಿ ಅನ್ವಯಿಸುವಂತೆ ಒಟ್ಟು 110 ಅರ್ಹ ಅತಿಥಿ ಶಿಕ್ಷಕರು/ಉಪನ್ಯಾಸಕರನ್ನು ಅಯ್ಕೆ ಮಾಡಲು ಅರ್ಜಿ ಅಹ್ವಾನಿಸಲಾಗಿದೆ.

ಇಲಾಖೆ ಅಡಿಯಲ್ಲಿ ಶಾಲೆಗಳಲ್ಲಿ (6ರಿಂದ 10ನೇ) ಕನ್ನಡ (16), ಇಂಗ್ಲೀಷ (17), ಹಿಂದಿ (3), ಉರ್ದು (5), ಗಣಿತ (15) ವಿಜ್ಞಾನ (12), ಸಮಾಜ ವಿಜ್ಞಾನ (16), ದೈಹಿಕ ಶಿಕ್ಷಣ (2) ಸೇರಿ ಒಟ್ಟು 86 ಶಿಕ್ಷಕ ಹುದ್ದೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ (3), ಇಂಗ್ಲೀಷ್ (3), ಉರ್ದು (2), ಗಣಿತ (3), ಭೌತಶಾಸ್ತ್ರ (4), ರಸಾಯನ ಶಾಸ್ತ್ರ (3), ಜೀವಶಾಸ್ತ್ರ (3), ಇತಿಹಾಸಶಾಸ್ತ್ರ (1), ಅರ್ಥಶಾಸ್ತ್ರ (1), ವ್ಯಾವಹಾರಶಾಸ್ತ್ರ (1), ಲೆಕ್ಕಶಾಸ್ತ್ರ (1) ಒಟ್ಟು 25 ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.‌

ಅತಿಥಿ ಶಿಕ್ಷಕ-ಉಪನ್ಯಾಸಕರ ಬೇಡಿಕೆ :

ʼಅತಿಥಿ ಶಿಕ್ಷಕರ, ಉಪನ್ಯಾಸಕರ ನೇಮಕಾತಿಯಲ್ಲಿ ಪ್ರವೇಶ ಪರೀಕ್ಷೆ ನಿಯಮ ಸಂಪೂರ್ಣ ರದ್ದುಗೊಳಿಸಬೇಕು. ಈ ಹಿಂದೆ ಕಾರ್ಯನಿರ್ವಹಿಸಿದ ಅತಿಥಿ ಶಿಕ್ಷಕರ, ಉಪನ್ಯಾಸಕರ ಶ್ರಮಕ್ಕೆ ಬೆಲೆ ಕೊಟ್ಟು, ಈ ವರ್ಷವೂ ಅವರನ್ನೇ ಮುಂದುವರಿಸಬೇಕು. ಸರಕಾರದ ನೇಮಕಾತಿಯಲ್ಲಿ ಶೇ25ರಷ್ಟು ಕೃಪಾಂಕ ನೀಡಬೇಕು. ಸೇವಾ ಭದ್ರತೆ ಒದಗಿಸಿ ಮಾಸಿಕ ಕನಿಷ್ಠ 35,000 ಗೌರವ ಧನ ನೀಡಬೇಕುʼ ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು.

ʼಮಹಿಳಾ ಶಿಕ್ಷಕರಿಗೆ ಪ್ರಸೂತಿ ರಜೆ ಜತೆಗೆ ವೇತನ. ಅತಿಥಿಗಳಿಗೆ ವರ್ಷದ 12 ತಿಂಗಳು ಗೌರವಧನ ಪಾವತಿಸಬೇಕು. ಜೀವ ವಿಮಾ ಸೌಲಭ್ಯ ಕಲ್ಪಿಸಬೇಕು. ಕಾಯಂ ನೌಕರರಿಗೆ ನೀಡುವ ವಿವಿಧ ತರಬೇತಿಗಳಿಗೆ ನಮನ್ನು ನಿಯೋಜಿಸಬೇಕು. ಹಿಂದಿ ಭಾಷಾ ವಿಷಯವನ್ನು ಐಚ್ಛಿಕವಾಗಿಡದೆ ಕಡ್ಡಾಯ ಮೂಲ ಪರಿಗಣಿಸಬೇಕುʼ ಎಂದು ಒತ್ತಾಯಿಸಿದ್ದಾರೆ.

ʼಈಗಿರುವ ಅತಿಥಿ ಶಿಕ್ಷಕ, ಉಪನ್ಯಾಸಕರನ್ನು ಮುಂದುವರಿಸದೇ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆದರೆ ಕುಟುಂಬ ಸಮೇತ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮುಂದೆ ನಿರಂತರ ಉಪವಾಸ ಸತ್ಯಾಗ್ರಹ ನಡೆಸಲಾಗುವುದುʼ ಎಂದು ಎಚ್ಚರಿಸಿದ್ದಾರೆ.

ʼಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶಾಲಾ-ಕಾಲೇಜುಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಪ್ರಸಕ್ತ ವರ್ಷದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ಮುಖಾಂತರ ಒಂದು ವರ್ಷಕ್ಕೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕ, ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲು ಇಲಾಖೆ ಆದೇಶಿಸಿದೆ. ಬೀದರ್ ಜಿಲ್ಲೆಯಲ್ಲಿ‌ 12 ವಸತಿ ರಹಿತ, 6 ವಸತಿ ಸಹಿತ ಅಲ್ಪಸಂಖ್ಯಾತರ ಇಲಾಖೆಯಡಿ ಶಾಲಾ-ಕಾಲೇಜುಗಳಿವೆ. ಈ ಎಲ್ಲ ಶಾಲಾ-ಕಾಲೇಜಿನಲ್ಲಿ ಕಾಯಂ ಶಿಕ್ಷಕರ ಕೊರತೆ ಇದೆ. ಹೀಗಾಗಿ ʼಅತಿಥಿʼಗಳ ನೇಮಕ ಮಾಡಿಕೊಳ್ಳಲು ಈಗಾಗಲೇ ಅರ್ಜಿ ಕರೆಯಲಾಗಿದೆ. ಅರ್ಹ ಹೊಸ ಅಭ್ಯರ್ಥಿಗಳಾಗಲಿ ಅಥವಾ ಇಲಾಖೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಅತಿಥಿ ಶಿಕ್ಷಕ-ಉಪನ್ಯಾಸಕರು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯಬಹುದುʼ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಳಿರಾಮ ʼಈದಿನ.ಕಾಮ್‌ʼ ಗೆ ತಿಳಿಸಿದ್ದಾರೆ.‌

ಈ ಸುದ್ದಿ ಓದಿದ್ದೀರಾ? ಬೀದರ್‌ | ಅತಿಥಿ ಶಿಕ್ಷಕ, ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ʼಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಶಾಲಾ-ಕಾಲೇಜಿನ ಅತಿಥಿ ಶಿಕ್ಷಕರ ಆಯ್ಕೆ ಪ್ರಕ್ರಿಯೆಗೆ ಪರೀಕ್ಷೆ ಎಂಬ ಹೊಸ ಮಾನದಂಡ ಆದೇಶಿಸಿದ್ದು ಸ್ವಾಗತಾರ್ಹ. ಇದು ಇತರೆ ಇಲಾಖೆಯಡಿ ನಡೆಯುತ್ತಿರುವ ಶಾಲಾ-ಕಾಲೇಜಿನ ಅತಿಥಿಗಳಿಗೂ ವಿಸ್ತರಿಸುವುದು ಅಗತ್ಯವಾಗಿದೆ. ಅತಿಥಿ ಶಿಕ್ಷಕ,ಉಪನ್ಯಾಸಕರಿಂದ ನಿರೀಕ್ಷಿತ ಫಲಿತಾಂಶ ಬಂದಿಲ್ಲವೆಂಬ ಕಾರಣದಿಂದ ಇಲಾಖೆ ಈ ಹೊಸ ಮಾನದಂಡ ಜಾರಿಗೊಳಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಫಲಿತಾಂಶ ಕುಸಿತ ಇರುವ ಅದೇ ಶಾಲಾ-ಕಾಲೇಜಿನ ಕಾಯಂ ಶಿಕ್ಷಕ, ಉಪನ್ಯಾಸಕರ ವಿರುದ್ಧ ಕ್ರಮಕ್ಕೆ ಹೊಸ ಮಾನದಂಡ ಅಗತ್ಯವಿಲ್ಲವೇʼ ಎಂದು ಸಾಮಾಜಿಕ ಚಿಂತಕ ಜಗದೀಶ್ವರ ಬಿರಾದರ್ ಪ್ರಶ್ನಿಸಿದರು.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X