ಮೈಕ್ರೋಸ್ಕೋಪು | ‘ಕಾಲ ಕೆಟ್ಟಿದೆ’ ಎಂಬ ಕಟ್ಟುಕತೆಯ ಬೆನ್ನು ಹತ್ತಿ…

Date:

Advertisements
ಕಪಟತನ, ಅಪ್ರಾಮಾಣಿಕತೆ, ಕ್ರೌರ್ಯ, ಹಿಂಸೆಯನ್ನು ಅನೈತಿಕ ಎಂದೂ; ಸತ್ಯ, ಪ್ರಾಮಾಣಿಕತೆ, ಕರುಣೆ ಹಾಗೂ ದಯೆಯನ್ನು ನೈತಿಕ ಎಂದೂ ಪ್ರಪಂಚದ ಬಹುತೇಕ ನಾಗರಿಕತೆಗಳು ಒಪ್ಪಿಕೊಂಡಿವೆ. ಆದರೆ ಕಾಲದಿಂದ ಕಾಲಕ್ಕೆ ಇವೆಲ್ಲ ನಿಜಕ್ಕೂ ಕಡಿಮೆ ಆಗುತ್ತಿವೆಯೇ? 

‘ಕಾಲ ಕೆಟ್ಟುಹೋಯಿತು’ ಎನ್ನುವುದು ಕೂದಲು ನರೆತ ಬಹುತೇಕರು ಹೇಳುವ ಮಾತು. ತಾವು ಬಾಲ್ಯದಲ್ಲಿ ಕಂಡಂತಹ ಸಂಗತಿಗಳು ಮುಪ್ಪಿನ ಸಮಯದಲ್ಲಿ ಇಲ್ಲ ಎನ್ನುವ ಅರ್ಥದ ಮಾತು ಇದು. ಅಷ್ಟೇ ಅಲ್ಲ. ತಮ್ಮ ಕಾಲದಲ್ಲಿ ಇದ್ದ ನಡವಳಿಕೆ, ನೀತಿ ಮೊದಲಾದುವೂ ಬದಲಾಗಿವೆ ಎನ್ನುವ ವಿಶ್ವಾಸ ಈ ಮಾತಿನಲ್ಲಿ ಇರುತ್ತದೆ. ಹಾಗಂತ ಈ ಬದಲಾವಣೆ ಒಳ್ಳೆಯದಕ್ಕಾಗಿ ಆಗಿದೆ ಎಂದು ಯಾರೂ ನಂಬುವುದಿಲ್ಲ. ಅದರಲ್ಲಿಯೂ ಹೊಸ ಪೀಳಿಗೆಯ ನೈತಿಕತೆ ಕೆಟ್ಟಿದೆ ಎನ್ನುವುದೇ ಎಲ್ಲ ಹಳೆತಲೆಗಳ ನಂಬಿಕೆ. ಈಗ ಹೊಸ ಶಿಕ್ಷಣ ನೀತಿಯನ್ನೇ ನೋಡಿ. ಅದರಲ್ಲಿ ನೈತಿಕ ಶಿಕ್ಷಣಕ್ಕೆ ಬಹಳಷ್ಟು ಒತ್ತು ನೀಡಲಾಗಿದೆ. ಅಂದರೆ, ಈಗ ನೈತಿಕತೆ ಎನ್ನುವುದು ಸಹಜ ನಡವಳಿಕೆ ಅಲ್ಲ, ಅದನ್ನು ಕಲಿಸಬೇಕಾಗಿದೆ ಎಂದಲ್ಲವೇ? ಅರ್ಥಾತ್‌, ನೈತಿಕತೆ ಕಡಿಮೆ ಆಗಿದೆ. ಹೌದೇ? ಕಲಿಯುಗದಲ್ಲಿ ನೈತಿಕತೆ ಕಡಿಮೆ ಆಗಿದೆಯೇ? ಈ ಪ್ರಶ್ನೆ ಕೇವಲ ನಾವು ನೀವು ಕೇಳಿದ್ದಲ್ಲ. ಅಮೆರಿಕೆಯ ಹಾರ್ವರ್ಡ್‌ ವಿಶ್ವವಿದ್ಯಾನಿಲಯದ ಮನೋವಿಜ್ಞಾನಿ ಆಡಂ ಮಾಸ್ಟ್ರೊಲಾನಿ ಮತ್ತು ಅವರ ಸಂಗಡಿಗ ಕೊಲಂಬಿಯಾ ವಿಶ್ವವಿದ್ಯಾನಿಲಯದ ಡೇನಿಯಲ್‌ ಗಿಲ್ಬರ್ಟಿಗೆ ಕೂಡ ಇದೇ ಅನುಮಾನ ಬಂತಂತೆ. ಅನುಮಾನವನ್ನು ಪರಿಹರಿಸಿಕೊಳ್ಳಲು ಅವರು ಒಂದು ಸಂಶೋಧನೆಯನ್ನೇ ಮಾಡಿದ್ದಾರೆ. ಫಲಿತಾಂಶ ಏನು ಗೊತ್ತೇ? ನಾವು ಅಂದುಕೊಂಡ ಹಾಗೆ ಕಲಿಗಾಲ ಬಂದಿಲ್ಲ. ಕಲಿಗಾಲ ಬಂತು. ನೈತಿಕತೆ ಹಾಳಾಯಿತು ಎನ್ನುವುದೆಲ್ಲ ಕೇವಲ ನಮ್ಮ ನಂಬಿಕೆ ಅಷ್ಟೆ ಅಂತೆ.

ನೈತಿಕತೆ ಎಂದರೇನು? ನೀತಿವಂತರು ಎಂದರೆ ಯಾರು? ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಇದುವೇ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ’ ಎಂದು ಬಸವಣ್ಣ ಸುಮಾರು ಒಂದು ಸಾವಿರ ವರ್ಷಗಳ ಹಿಂದೆಯೇ ಸದಾಚಾರವೆಂದರೇನೆಂದು ತಿಳಿಸಿದ್ದರು. ಹೀಗೆಯೇ ಸತ್ಯಂ ಬ್ರೂಯಾತ್‌, ಪ್ರಿಯಂ ಬ್ರೂಯಾತ್‌ ಎನ್ನುವ ಸಂಸ್ಕೃತದ ನುಡಿಯನ್ನೂ ಕೇಳಿರುತ್ತೀರಿ. ಅಹಿಂಸಾ ಪರಮೋಧರ್ಮಃ ಎಂದು ಬುದ್ಧ ಹೇಳಿದ್ದೂ ಒಂದು ನೀತಿಯೇ. ಇವೆಲ್ಲವೂ ಸಮಾಜದಲ್ಲಿ ನಮ್ಮೊಂದಿಗೆ ಇರುವವರ ಜೊತೆಗೆ ನಾವು ಹೇಗೆ ನಡೆಸಿಕೊಳ್ಳಬೇಕು ಎನ್ನುವ ಪಾಠಗಳು ಅಥವಾ ನಿಯಮಗಳು ಎನ್ನಬಹುದು. ಬಹುತೇಕ ಇವನ್ನೇ ನೀತಿ ಎನ್ನುತ್ತೇವೆ. ಇಂತಹ ನಡವಳಿಕೆ ಇರುವವರನ್ನು ನೀತಿವಂತರು, ಇಲ್ಲದವರು ಅನೀತಿವಂತರು ಎಂದು ಭಾವಿಸುತ್ತೇವೆ. ಸದಾಚಾರಿಗಳೆಲ್ಲರೂ ನೀತಿವಂತರೆಂದು ಬಹುತೇಕ ಧರ್ಮಗಳು ಬೋಧಿಸುತ್ತವೆ.

ಈ ನಂಬಿಕೆ ನಮ್ಮೆಲ್ಲರಲ್ಲೂ ಇರುವುದನ್ನು ನಾವು ಕಾಣಬಹುದು. ಉದಾಹರಣೆಗೆ, ಭಿಕ್ಷುಕರನ್ನೂ, ಕಳ್ಳರನ್ನೂ ನಾವು ಒಂದೇ ತಕ್ಕಡಿಯಲ್ಲಿ ತೂಗುತ್ತೇವೆ. ಆದರೆ, ಮನಶ್ಶಾಸ್ತ್ರಜ್ಞರು ಹಾಗೆ ಮಾಡುವುದಿಲ್ಲ. ನೈತಿಕತೆಯಲ್ಲಿ ಅವರು ‘ಮೊರಾಲಿಟಿ’ ಮತ್ತು ‘ಎಥಿಕ್ಸ್‌’ ಎಂಬ ಎರಡು ಅಂಶಗಳನ್ನು ಕಾಣುತ್ತಾರೆ. ಕನ್ನಡದಲ್ಲಿ ಇವೆರಡೂ ನಡವಳಿಕೆಗಳಿಗೂ ‘ನೈತಿಕತೆ’ ಎಂದೇ ಹೆಸರಿದೆ. ಆದರೆ, ಎರಡೂ ಒಂದೇ ಅಲ್ಲ. ವಿಜ್ಞಾನಿಗಳು ಮತ್ತು ಮನಶ್ಶಾಸ್ತ್ರಜ್ಞರು ಇವೆರಡಕ್ಕೂ ಸೂಕ್ಷ್ಮ ವ್ಯತ್ಯಾಸಗಳಿವೆ ಎನ್ನುತ್ತಾರೆ. ಮೊರಾಲಿಟಿ ಎನ್ನುವುದು ವ್ಯಕ್ತಿಯ ಗುಣ. ಎಥಿಕ್ಸ್‌ ಎನ್ನುವುದು ಸಾಮಾಜಿಕವಾಗಿ ವ್ಯಕ್ತಿ ನಡೆದುಕೊಳ್ಳುವ ರೀತಿ. ಇದನ್ನು ಹೀಗೂ ಹೇಳಬಹುದು. ಮೊರಾಲಿಟಿಯನ್ನು ‘ನೈತಿಕತೆ’ ಎಂದರೆ, ಎಥಿಕ್ಸನ್ನು ‘ಸದಾಚಾರ’ ಎನ್ನಬಹುದು. ಒಂದು ಸಮಾಜದಲ್ಲಿ ಸದಾಚಾರಿಯಾಗಿರಬಲ್ಲ ವ್ಯಕ್ತಿ ವೈಯಕ್ತಿಕವಾಗಿ ಅನೈತಿಕವಾಗಿಯೂ ಇರಬಲ್ಲ.

Advertisements

ವಿಚಿತ್ರ ಎಂದರೆ, ನೀತಿಪಾಠಗಳು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಪ್ರಪಂಚದ ಹಲವಾರು ನಾಗರಿಕತೆಗಳಲ್ಲಿ ಕಾಲಕಾಲಕ್ಕೆ ಹೀಗೆ ನೀತಿಗಳನ್ನು ಹೇಳಿದವರಿದ್ದಾರೆ. ಕಪಟತನ, ಅಪ್ರಾಮಾಣಿಕತೆ, ಕ್ರೌರ್ಯ, ಹಿಂಸೆ ಇವನ್ನು ಅನೈತಿಕ ಎಂದೂ; ಸತ್ಯ, ಪ್ರಾಮಾಣಿಕತೆ, ಕರುಣೆ ಹಾಗೂ ದಯೆಗಳನ್ನು ನೈತಿಕ ಎಂದು ಪ್ರಪಂಚದ ಬಹುತೇಕ ನಾಗರಿಕತೆಗಳು ಒಪ್ಪಿಕೊಂಡಿವೆ. ಹಾಗಿದ್ದೂ ಈ ನಡವಳಿಕೆಗಳು ಬದಲಾಗಿವೆ. ಹಿಂದಿಗಿಂತಲೂ ಇಂದು ಇಂತಹ ನೀತಿವಂತರ ಸಂಖ್ಯೆ ಕಡಿಮೆ ಆಗಿದೆ ಎಂದು ಎಲ್ಲರೂ ನಂಬಿದ್ದೇವೆ. ಇದನ್ನೇ ನಾವು ಕಾಲ ಬದಲಾಗಿದೆ ಎಂದು ಹೇಳುವುದು. ಆದರೆ, ಅದು ಹೌದೇ? ನೀತಿವಂತರ ಸಂಖ್ಯೆ ಕಡಿಮೆ ಆಗಿದೆಯೇ?

ಈ ಸ್ವಾರಸ್ಯಕರ ಪ್ರಶ್ನೆಗೆ ಅರವತ್ತು ದೇಶಗಳ ಜನರು ಕೊಟ್ಟ ಉತ್ತರಗಳನ್ನು ಮಾಸ್ಟ್ರೊಲಾನಿ ಮತ್ತು ಗಿಲ್ಬರ್ಟ್‌ ವೈಜ್ಞಾನಿಕವಾಗಿ ಪರಿಶೀಲಿಸಿದ್ದಾರೆ. ಈ ಪರಿಶೀಲನೆಯಿಂದ ನಮ್ಮ ನೈತಿಕತೆ ನಿಜವಾಗಿಯೂ ಕಡಿಮೆ ಆಗಿದೆಯೋ ಅಥವಾ ಅದು ಕೇವಲ ಆಡುಮಾತೋ ಎಂದು ತಿಳಿಯುವ ಉದ್ದೇಶವಿತ್ತು. ವೈಜ್ಞಾನಿಕ ಪರಿಶೀಲನೆಯೇ ಎಂದು ಹುಬ್ಬೇರಿಸಬೇಡಿ. ಕಣ್ಣಿಗೆ ಕಂಡದ್ದನ್ನೂ ಪರೀಕ್ಷಿಸಿ ನೋಡು ಎನ್ನುವುದು ವಿಜ್ಞಾನಿಗಳ ವಿಚಾರ. ವೈಯಕ್ತಿಕವಾಗಿ ನಮಗೆ ತೋರುವ ಸಂಗತಿಗಳು ಕೇವಲ ನಮಗೆ ಹಾಗೆ ತೋರಿದರೂ, ವಾಸ್ತವ ಬೇರೆಯೇ ಇರಬಹುದು ಎನ್ನುವುದು ಇವರ ತರ್ಕ.

ಉದಾಹರಣೆಗೆ, ಕಾಲ ಬದಲಾಗಿದೆ, ನೈತಿಕತೆ ಕಡಿಮೆಯಾಗಿದೆ ಎಂದರೆ ಏನರ್ಥ? ನೀತಿವಂತರ ಸಂಖ್ಯೆ ಕಡಿಮೆ ಆಗಿದೆ ಎಂದಷ್ಟೆ! ಇದಕ್ಕೆ ಎರಡು ಕಾರಣಗಳಿರಬಹುದು. ಮೊದಲನೆಯದಾಗಿ, ಹಿಂದಿನವರೆಲ್ಲರೂ ನೀತಿವಂತರಾಗಿದ್ದರು ಎಂದಿಟ್ಟುಕೊಳ್ಳಿ. ಹಾಗಿದ್ದರೆ, ಕಾಲ ಕಳೆದಂತೆ ಅವರು ಬದಲಾಗಿರಬೇಕು ಅಥವಾ ಅವರಲ್ಲಿ ಕೆಲವರು ಸತ್ತು ಸಂಖ್ಯೆ ಕಡಿಮೆ ಆಗಿರಬೇಕು ಅಲ್ಲವೇ? ಇದನ್ನು ವೈಜ್ಞಾನಿಕವಾಗಿ ಪರಿಶೀಲಿಸಬಹುದು. ಹಾಗೆಯೇ, ನೈತಿಕತೆ ಕಡಿಮೆ ಆಗುತ್ತಲೇ ಇದೆ ಎನ್ನುವುದಾದರೆ, ನಿನ್ನೆಗಿಂತ ಅದು ಮೊನ್ನೆ ಹೆಚ್ಚಿರಬೇಕು. ಮೊನ್ನೆಗಿಂತ ಕಳೆದ ವರ್ಷ ಇನ್ನೂ ಹೆಚ್ಚಿರಬೇಕು. ದಶಕದ ಹಿಂದೆ ಒಂದು ವರ್ಷ ಹಿಂದಿನದಕ್ಕಿಂತ ಹೆಚ್ಚಿರಬೇಕು. ಅಲ್ಲವೇ? ಇದ್ಯಾವುದೂ ಅಲ್ಲದೆ, ಈ ಭಾವನೆ ಕೇವಲ ನಮ್ಮ ವಿಶ್ವಾಸವಾಗಿದ್ದರೆ, ಅಂದಿಗೂ, ಇಂದಿಗೂ ಏನೂ ವ್ಯತ್ಯಾಸ ಇರಬಾರದಷ್ಟೆ?

ಈ ತರ್ಕವನ್ನು ಬೆನ್ನತ್ತಿದ ಮಾಸ್ಟ್ರೊಲಾನಿ ಮತ್ತು ಗಿಲ್ಬರ್ಟ್‌ ಪ್ರಪಂಚದ 60 ರಾಷ್ಟ್ರಗಳಲ್ಲಿ ಅಂದಂದಿನ ನೈತಿಕತೆಯ ಕುರಿತು ನಡೆದ ಸಮೀಕ್ಷೆಗಳನ್ನು ಎರಡು ರೀತಿಯಲ್ಲಿ ಅಧ್ಯಯನ ಮಾಡಿದರು. 1949ರಿಂದಲೂ, ಅಂದರೆ ಎರಡನೆಯ ವಿಶ್ವಯುದ್ದ ನಡೆದು ಪರಮಾಣು ಬಾಂಬು ಸಿಡಿದ ತಕ್ಷಣದ ದಿನಗಳಿಂದ ಇಂದಿನವರೆಗೂ ಇಂತಹ ಸಮೀಕ್ಷೆಗಳು ನೂರಾರು ನಡೆದಿವೆ. ಅಮೆರಿಕವೊಂದರಲ್ಲಿಯೇ 140ಕ್ಕೂ ಹೆಚ್ಚು ಸಮೀಕ್ಷೆಗಳು 1949-2019ರ ನಡುವಿನ ಎಪ್ಪತ್ತು ವರ್ಷಗಳಲ್ಲಿ ನಡೆದಿದ್ದವು. ಸಾಮಾನ್ಯವಾಗಿ ಇಂತಹ ಸರ್ವೆಗಳು ಜನರಿಗೆ ಹೀಗೆ ಪ್ರಶ್ನೆಗಳನ್ನು ಕೇಳಿದ್ದವು – ಈ ಹಿಂದೆ ಇದ್ದುದಕ್ಕಿಂತ ಈಗ ನೈತಿಕತೆ ಮತ್ತು ಪ್ರಾಮಾಣಿಕತೆ ಕಡಿಮೆ ಆಗಿದೆಯೇ? ಹಿಂದಿನದಕ್ಕಿಂತ ಈಗಿನ ಜನರ ನೈತಿಕತೆ ಮತ್ತು ಪ್ರಾಮಾಣಿಕತೆ ಹೆಚ್ಚಿದೆಯೇ? ಈಗ ನೈತಿಕತೆ ಮತ್ತು ಪ್ರಾಮಾಣಿಕತೆ ಇದ್ದಷ್ಟೇ ಇದೆಯೇ?

ಈ ಪ್ರಶ್ನೆಗಳಿಗೆ ಅಮೆರಿಕ ಜನರು ಕೊಟ್ಟ ಉತ್ತರಗಳನ್ನು ಆಯಾ ಕಾಲಕ್ಕೆ ತಕ್ಕಂತೆ ವಿಂಗಡಿಸಿ, ಉತ್ತರಗಳನ್ನು ಹೋಲಿಸಿದ್ದಾರೆ. ಒಟ್ಟು 2,20,777 ಜನರ ಅಭಿಪ್ರಾಯಗಳನ್ನು ಹೀಗೆ ಪರಿಶೀಲಿಸಿದ್ದಾರೆ. ಒಟ್ಟಾರೆ ಜನರಲ್ಲಿ ಎಷ್ಟು ಜನ ನೈತಿಕತೆ ಕಡಿಮೆಯಾಗುತ್ತಿದೆ ಎಂದು ಉತ್ತರಿಸಿದ್ದಾರೆ ಎಂಬುದನ್ನು ಕಾಲಘಟ್ಟಗಳಿಗೆ ತಕ್ಕಂತೆ ವರ್ಗೀಕರಿಸಿದ್ದಾರೆ. ಹೀಗೆ ನೋಡಿದಾಗ, ಇಂತಹ ಜನರ ಪ್ರಮಾಣ ಎಲ್ಲ ಕಾಲದಲ್ಲಿಯೂ ಹೆಚ್ಚೂಕಡಿಮೆ ಒಂದೇ ಪ್ರಮಾಣದಲ್ಲಿತ್ತು. ಒಂದು ವೇಳೆ, ನೈತಿಕತೆ ನಿಜಕ್ಕೂ ಕಡಿಮೆ ಆಗಿದ್ದಲ್ಲಿ, ಹೀಗೆ ಹೇಳುವವರ ಪ್ರಮಾಣವೂ ಹೆಚ್ಚಬೇಕಿತ್ತು ಎನ್ನುವುದು ಈ ಸಂಶೋಧಕರ ತರ್ಕ.

ಇದು ಕೇವಲ ಅಮೆರಿಕನ್ನರ ಅಭಿಪ್ರಾಯವೋ, ಬೇರೆಯವರದ್ದೂ ಹೀಗೆಯೇ ಇದೆಯೋ ಎನ್ನುವ ಸಂಶಯದಿಂದ ಇನ್ನೂ 59 ರಾಷ್ಟ್ರಗಳಲ್ಲಿನ ಮೂರು ಲಕ್ಷಕ್ಕೂ ಮಿಗಿಲಾದ ಜನರ ಅಭಿಪ್ರಾಯಗಳ ಸಮೀಕ್ಷೆಗಳಲ್ಲಿಯೂ ಇದೇ ರೀತಿಯಲ್ಲಿ ನೈತಿಕತೆ ಕಡಿಮೆ ಆಗಿದೆ ಎನ್ನುವವರ ಪ್ರಮಾಣ ವಿವಿಧ ಕಾಲಗಳಲ್ಲಿ ಒಂದೇ ತೆರನಾಗಿತ್ತು. ಅಂದರೆ, ಜನರ ದೃಷ್ಟಿಯಲ್ಲಿಯಷ್ಟೆ ಈ ಬದಲಾವಣೆಯಾಗಿದೆ. ಮಾನವನ ಸ್ವಭಾವ, ಗುಣ ಹಾಗೆಯೇ ಇರಬಹುದು ಎನ್ನುವ ಅಂದಾಜು ಸಿಕ್ಕಿತು.

ಇದನ್ನು ಇನ್ನಷ್ಟು ಕೂಲಂಕಷವಾಗಿ ನೋಡಲು ಸ್ವತಃ ಒಂದು ಸಮೀಕ್ಷೆ ನಡೆಸಿದರು. 2020ನೇ ಇಸವಿಯಲ್ಲಿ ಬದುಕುತ್ತಿರುವ ಜನರಲ್ಲಿ ಪ್ರಾಮಾಣಿಕತೆ, ನೈತಿಕತೆಯ ಪ್ರಮಾಣ ಎಷ್ಟಿದೆ ಎಂಬ ಪ್ರಶ್ನೆಯನ್ನು ಕೇಳಿದರು. ಇದನ್ನು ಅಳೆಯಲು ಒಂದು ಮಾಪಕ ಸೂಚಿಯನ್ನೂ ಕೊಟ್ಟಿದ್ದರು. ಈ ಪ್ರಶ್ನೆಗೆ ದೊರೆತ ಉತ್ತರಕ್ಕೂ ಇದೇ ಜನರು ಬೇರೆ-ಬೇರೆ ಕಾಲದಲ್ಲಿದ್ದ ಜನರ ನೈತಿಕತೆ, ಪ್ರಾಮಾಣಿಕತೆಗೆ ನೀಡಿದ ಉತ್ತರಗಳ ಜೊತೆಗೆ ಏನಾದರೂ ಸಂಬಂಧವಿದೆಯೋ ಎಂದು ಗಮನಿಸಿದ್ದಾರೆ. ಒಂದು ವೇಳೆ ನಿಜವಾಗಿಯೂ ಇವರು ಹೇಳಿದ ಹಾಗೆ ನೈತಿಕತೆ ಕುಸಿದಿದ್ದರೆ, ಅದು ಕಳೆದ ವರ್ಷ ಬಹಳ ಹೆಚ್ಚಿರಬೇಕಿತ್ತು. ಆದರೆ ಹಾಗಾಗಿಲ್ಲವಂತೆ. ಇಂದಿನ ಜನರ ನೈತಿಕತೆ ಹಾಗೂ ಪ್ರಾಮಾಣಿಕತೆಯೊಂದಿಗೆ ಹೋಲಿಸಿದಾಗ, ನಿನ್ನೆಯದ್ದರಲ್ಲಿಯೂ, ದಶಕದ ಹಿಂದಿನದ್ದರಲ್ಲಿಯೂ ಅಂತಹ ವ್ಯತ್ಯಾಸವೇನಿರಲಿಲ್ಲ. ಅಂದರೆ ನೈತಿಕತೆ ನಿಜವಾಗಿಯೂ ಕುಗ್ಗಿಲ್ಲ.

ಈ ಆಡಿಯೊ ಕೇಳಿದ್ದೀರಾ?: ಮೈಕ್ರೋಸ್ಕೋಪು | ಪ್ರತಿದಿನ ಸಿಗುತ್ತಿರುವ 19,000 ಕೋಟಿ ಗಂಟೆ ಸಮಯವನ್ನು ನಾವು ಏನು ಮಾಡುತ್ತಿದ್ದೇವೆ?

ಇದು ನಿಜವೇ? ಇದಕ್ಕೆ ಕಾರಣವೇನಿರಬಹುದು? ಇದನ್ನೂ ಮಾಸ್ಟ್ರೊಲಾನಿ ಮತ್ತು ಗಿಲ್ಬರ್ಟ್‌ ವಿಶ್ಲೇಷಿಸಿದ್ದಾರೆ. ಒಟ್ಟಾರೆ ನೈತಿಕತೆ ಕಡಿಮೆಯಾಯಿತು ಎಂದು ಹೇಳುವ ಜನರಿಗೆ ಇನ್ನೊಂದು ಪ್ರಶ್ನೆಯನ್ನೂ ಇವರು ಕೇಳಿದ್ದರು; ‘ನೈತಿಕತೆ ನಿಮ್ಮ ಬಂಧುಗಳಲ್ಲಿ ಕಡಿಮೆ ಆದ ಹಾಗೆ ಸಮಾಜದಲ್ಲಿಯೂ ಕಡಿಮೆ ಆಗಿದೆಯಾ?’ ಈ ಪ್ರಶ್ನೆಗೆ ಬಹುತೇಕ ಮಂದಿ ಇಲ್ಲ ಎಂದಿದ್ದಾರೆ. ಅಂದರೆ, ತಮ್ಮ ಬಂಧುಗಳಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆ ಬದಲಾಗಿಲ್ಲವೆನ್ನುವ ಉತ್ತರ ಬಂದಿದೆ. ಮನೋವಿಜ್ಞಾನಿಗಳು ಹೇಳುವ ಹಾಗೆ ಇದು ಪೂರ್ವಾಗ್ರಹಪೀಡಿತ ನೆನಪು. ಅರ್ಥಾತ್‌, ಈ ಉತ್ತರಕ್ಕೆ ಬಂಧುಗಳು ಮತ್ತು ಪರಿಚಿತರು ಉಳಿದವರಿಗಿಂತಲೂ ನಂಬುಗಸ್ತರು, ಸದಾಚಾರಿಗಳು ಎನ್ನುವ ಪೂರ್ವಾಗ್ರಹವೇ ಪ್ರಮುಖ ಕಾರಣ ಎನ್ನುತ್ತಾರೆ ಮಾಸ್ಟ್ರೊಲಾನಿ ಮತ್ತು ಗಿಲ್ಬರ್ಟ್‌.

ಒಟ್ಟಾರೆ ನೈತಿಕತೆ, ಅಂದರೆ ಮನುಷ್ಯರಲ್ಲಿ ಸಮಾಜ ಜೀವನಕ್ಕೆ ಅಗತ್ಯವಾದ ಪ್ರಾಮಾಣಿಕತೆ, ನೈತಿಕತೆಗಳು ಕಾಲಕಾಲಕ್ಕೆ ಕಡಿಮೆ ಆಗುತ್ತವೆ ಎನ್ನುವುದು ನಿಜವಲ್ಲ; ಅದು ಕೇವಲ ಆಯಾ ಕಾಲದ ಜನರ ಭಾವನೆಗಳಷ್ಟೆ ಎನ್ನುವುದು ಸಾರಾಂಶ. ಇದು ನಿಜವೇ ಇರಬೇಕು. ಸ್ವಧರ್ಮೀಯರಿಗಿಂತಲೂ ಅನ್ಯ ಧರ್ಮದವರ ನಡವಳಿಕೆ ಅನೈತಿಕ ಅಥವಾ ಅನಾಚಾರ ಎಂದು ನಾವೆಲ್ಲರೂ ಭಾವಿಸುತ್ತೇವಷ್ಟೆ. ಹಾಗೆಯೇ, ನಮ್ಮ ಹವ್ಯಾಸ, ನಡವಳಿಕೆ, ಆಚಾರಗಳಿಗೆ ಹೊಂದಿಕೊಳ್ಳದವರ ಹವ್ಯಾಸ, ನಡವಳಿಕೆ, ಆಚಾರಗಳು ತಪ್ಪು ಎಂಬ ಭಾವನೆಯೂ ನಮ್ಮಲ್ಲಿ ಹೆಚ್ಚು. ಏನಂತೀರಿ?

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಕೊಳ್ಳೇಗಾಲ ಶರ್ಮ
ಕೊಳ್ಳೇಗಾಲ ಶರ್ಮ
ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ಸೈನ್ಸ್‌ ರಿಪೋರ್ಟರ್‌' ಪತ್ರಿಕೆಗೆ ವರದಿಗಾರರಾಗಿದ್ದರು. ಮೂರು ದಶಕಗಳಿಂದ ವಿಜ್ಞಾನ ಬರವಣಿಗೆಯಲ್ಲಿ ಸಕ್ರಿಯರು. ವಿಜ್ಞಾನ ಸಂವಹನದ ಹೊಸ ಸಾಧ್ಯತೆಗಳನ್ನು ಹುಡುಕುವ ಉತ್ಸಾಹಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X