ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಅತ್ಯಂತ ಮಹತ್ವದ್ದು. ಇತ್ತೀಚೆಗೆ ಲೇಖಕಿಯೊಬ್ಬರು ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದ ಪೋಸ್ಟ್‌ವೊಂದು ಭಾರೀ ಗದ್ದಲ ಎಬ್ಬಿಸಿತ್ತು. ಈ ಕುರಿತು ಇದುವರೆಗೆ ನಡೆದ ಚರ್ಚೆಗಳು ನಮಗೆ ಏನನ್ನು ತಿಳಿ ಹೇಳುತ್ತಿವೆ?
ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದರಿಂದ ತಮಗೆ ಆದ ಕೆಟ್ಟ ಅನುಭವದ ಕುರಿತು ಲೇಖಕಿಯೊಬ್ಬರು ಫೇಸ್‌ಬುಕ್‌ನಲ್ಲಿ ಬರೆದುಕೊಂಡದ್ದು ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಸಹಪ್ರಯಾಣಿಕರು ಶುಚಿತ್ವಕ್ಕೆ ಒತ್ತು ನೀಡದಿರುವುದರಿಂದ ತಮ್ಮಂತಹವರು ಬಸ್‍ನಲ್ಲಿ ಪ್ರಯಾಣಿಸುವಾಗ ಏನೆಲ್ಲ ಕಷ್ಟ ಅನುಭವಿಸಬೇಕಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡುವ ಸಲುವಾಗಿ ಅವರು ಆ ಟಿಪ್ಪಣಿ ಬರೆದಂತಿತ್ತು.
ದುಡ್ಡು ಕೊಟ್ಟು ಪ್ರಯಾಣಿಸಲು ಸಿದ್ಧವಿರುವ ತಮ್ಮಂತಹವರಿಗಾಗಿಯೇ ಪ್ರತ್ಯೇಕ ಬಸ್ ಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಲಿ ಎಂಬುದು ಕೂಡ ಅವರ ಆಗ್ರಹವಾಗಿತ್ತು. ಕೆಲ ಬಹುಮಾನಗಳಿಗೆ ಭಾಜನರಾಗುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬಂದಿದ್ದ ಇವರ ಕುರಿತು ವ್ಯಕ್ತಿಗತ ನೆಲೆಯಲ್ಲೂ ಸಾಕಷ್ಟು ಟೀಕೆ-ಟಿಪ್ಪಣಿಗಳು ಹೊರಹೊಮ್ಮಿದವು.
ಇಂತಹ ಚರ್ಚೆಗಳು – ಅದಿರುವ ರೀತಿಯಲ್ಲೇ ಸುತ್ತಲಿನ ಸಮಾಜ ಮತ್ತು ಬದುಕನ್ನು ಗ್ರಹಿಸಲು ನಾವು ಏಕೆ ಸೋಲುತ್ತಿದ್ದೇವೆ ಎಂಬ ಆತ್ಮಾವಲೋಕನಕ್ಕೆ ಅನುವು ಮಾಡಿಕೊಡಬೇಕಿತ್ತು. ಆದರೆ, ಹಾಗಾದಂತೆ ತೋರುತ್ತಿಲ್ಲ. ನಮ್ಮ ಬದುಕಿನ ಅನುಭವವೇ ಎಲ್ಲರ ಬದುಕಿನದ್ದೂ ಆಗಿರಬೇಕಿಲ್ಲ. ನಮ್ಮ ಬದುಕಿನ ಆದ್ಯತೆಗಳೇ ಎಲ್ಲರ ಬದುಕಿನ ಆದ್ಯತೆಗಳೂ ಆಗಬೇಕೆಂದೇನಿಲ್ಲ. ಸುತ್ತಲಿನ ಜಗತ್ತನ್ನು ಗಮನಿಸಲು, ಗ್ರಹಿಸಲು ನಾವು ಆತುಕೊಂಡಿರುವ ದೃಷ್ಟಿಕೋನಕ್ಕೇ ಎಲ್ಲರೂ ಜೋತುಬೀಳಬೇಕೆಂದೇನಿಲ್ಲ. ನಮಗಿಂತ ಭಿನ್ನವಾಗಿ ಬದುಕುತ್ತಿರುವ, ಭಿನ್ನ ಹಿನ್ನೆಲೆ ಮತ್ತು ಆದ್ಯತೆಗಳನ್ನು ಹೊಂದಿರುವ ಜನರ ಬದುಕಿನ ವಾಸ್ತವಗಳನ್ನು ಅರಿಯಲು ಬೇಕಿರುವ ಮುಕ್ತ ಮನಸ್ಥಿತಿ ಹೊಂದುವುದಾದರೂ ನಮ್ಮ ಆದ್ಯತೆಯಾಗಬೇಕಲ್ಲವೇ?
ನಾವು ಸಂಭ್ರಮಿಸುತ್ತಿರುವ ಮತ್ತು ಸ್ವಾಗತಿಸುತ್ತಿರುವ ಬಹುತೇಕ ಗೆಲುವುಗಳು ಕೂಡ, ಹೀಗೆ ಸುತ್ತಲಿನ ವಾಸ್ತವಕ್ಕೆ ತೆರೆದುಕೊಳ್ಳದ ಸಂಕುಚಿತ ದೃಷ್ಟಿಕೋನದ ವ್ಯಕ್ತಿತ್ವಕ್ಕೆ ಅನುಕರಣೀಯ ಮಾದರಿಯ ಪಟ್ಟ ಕಟ್ಟಲು ಹೇಗೆಲ್ಲ ಕೊಡುಗೆ ನೀಡುತ್ತಿವೆ ಎಂದು ಕೂಡ ಗಮನಿಸುವ ಅಗತ್ಯವಿದೆ.
ಈ ಆಡಿಯೊ ಕೇಳಿದ್ದೀರಾ?: ವರ್ತಮಾನ | ಉಚಿತ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆಯೇ?
ದೈನಂದಿನ ಬದುಕಿನಲ್ಲಿ ನಾವು ಮಾಡಿಕೊಳ್ಳುತ್ತಿರುವ ಆಯ್ಕೆಗಳು ಎಂತಹವೆಂದು ಚೂರು ಸಂಯಮದಿಂದ ಗಮನಿಸಿದರೂ ಸಾಕು, ಅವು ಸಂಕುಚಿತ ಪ್ರಜ್ಞೆ ಬಿತ್ತುವ ದ್ವೀಪಗಳ ಸೃಷ್ಟಿಗೆ ಹೇಗೆ ನೆಪವಾಗುತ್ತಿವೆ ಎಂಬುದರ ಅರಿವಾಗಬಹುದು. ನಮ್ಮ ಮಕ್ಕಳನ್ನು ಓದಿಸಲು ಉತ್ತಮ ಶಾಲಾ-ಕಾಲೇಜುಗಳಿಗಾಗಿ ಹುಡುಕುತ್ತೇವೆ. ನಮ್ಮ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆಗೆ ಎಟುಕುವ ಆ ಉತ್ತಮ ಶಾಲೆ ಅಥವಾ ಕಾಲೇಜಿಗೆ ಭಿನ್ನ ಆರ್ಥಿಕ-ಸಾಮಾಜಿಕ ಹಿನ್ನೆಲೆಯ ಮಕ್ಕಳೂ ಬರುವರೇ ಎಂದು ಗಮನಿಸುವುದು ನಮ್ಮ ಆದ್ಯತೆಯಾಗುವುದಿಲ್ಲ. ಬಹುತೇಕ ಒಂದೇ ಆರ್ಥಿಕ ಹಿನ್ನೆಲೆಯ ಮಕ್ಕಳನ್ನು ಒಳಗೊಳ್ಳುವ ಶಾಲೆಗಳಲ್ಲಿ ಕಲಿಯುವವರಿಗೆ ತಮಗಿಂತ ಭಿನ್ನ ಆರ್ಥಿಕ ಹಿನ್ನೆಲೆ ಹೊಂದಿರುವವರ ಬದುಕಿನ ಪರಿಚಯವಾಗುವುದಾದರೂ ಹೇಗೆ ಸಾಧ್ಯ?
ನಾವು ನೆಲೆಸಲು ಬಯಸುವ ಮನೆ ಕೂಡ ಉತ್ತಮ ಏರಿಯಾದಲ್ಲಿ ಇರಲಿ ಎಂದು ಆಶಿಸುತ್ತೇವೆ. ಈ ಉತ್ತಮ ಏರಿಯಾವೆಂಬುದು ಕೂಡ ಬಹುತೇಕ ಸಂದರ್ಭಗಳಲ್ಲಿ ನಮ್ಮ ಸಾಮಾಜಿಕ-ಆರ್ಥಿಕ ಹಿನ್ನೆಲೆಗೆ ಸರಿಸಮಾನರಾಗಿರುವವರು ಅಥವಾ ನಮಗಿಂತ ಉತ್ತಮ ಸ್ಥಿತಿಯಲ್ಲಿ ಇರುವವರೊಂದಿಗೆ ಬದುಕಲು ಸಾಧ್ಯವಿರುವ ಬಡಾವಣೆಯೇ ಆಗಿರುತ್ತದೆ. ಇನ್ನು, ನಾವು ಗೆಳೆತನವೋ ಪ್ರೇಮವೋ ಮತ್ತೊಂದೋ ಕಾರಣಕ್ಕೆ ಒಡನಾಡಲು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳು ಕೂಡ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ನಮಗೆ ಸರಿಸಮಾನರಾಗಿರುವ ಸಾಧ್ಯತೆಯೇ ಹೆಚ್ಚು.
ಸಾಮಾಜಿಕ ವೇದಿಕೆಗಳಲ್ಲಿನ ನಮ್ಮ ಒಡನಾಟ ಕೂಡ ಇಂತಹ ಏಕಮುಖಿ ಆದ್ಯತೆಗಳ ಹಿಡಿತದಿಂದ ಮುಕ್ತವಾಗಿರಲಾರದು. ಸಮಾನಮನಸ್ಕರೊಂದಿಗೆ ಮಾತ್ರ ಬೆರೆಯುವ ತುಡಿತ, ನಮ್ಮ ಹಾಗೆ ಆಲೋಚಿಸದ, ನಮ್ಮ ನಿಲುವಿಗೆ ಸಹಮತ ವ್ಯಕ್ತಪಡಿಸದವರೊಂದಿಗೆ ಅಂತರ ಕಾಯ್ದುಕೊಳ್ಳುವಂತೆ ನಮ್ಮನ್ನು ಪ್ರೇರೇಪಿಸುತ್ತಿದೆ. ಸಾಮಾಜಿಕ ಸಂವಹನಗಳಲ್ಲಿ ನಮ್ಮ ಒಲವು-ನಿಲುವಿಗೆ ಪೂರಕವಲ್ಲದ ಅಭಿಪ್ರಾಯ ವ್ಯಕ್ತಪಡಿಸುವವರನ್ನು, ಸಂಯಮ ಕಾಯ್ದುಕೊಳ್ಳದವರನ್ನು ದೂರ ತಳ್ಳುವುದರಲ್ಲಿ ನಮಗೆ ಇರುವಷ್ಟು ಉತ್ಸಾಹ, ಅವರನ್ನು ಅವರಿರುವ ರೀತಿಯಲ್ಲಿಯೇ ಸಹಿಸಿಕೊಳ್ಳುವಲ್ಲಿ ಇರಲಾರದು. ಹೀಗೆ, ತಮಗೆ ಆಗಿಬರದವರನ್ನು ಸಾಮಾಜಿಕ ತಾಣಗಳಲ್ಲಿ ಬ್ಲಾಕ್ ಅಥವಾ ಅನ್‍ಫಾಲೋ ಮಾಡುವುದು ಕೆಲವರ ಪಾಲಿಗೆ ಹೆಮ್ಮೆಯ ವಿಚಾರ. ಈ ಮೂಲಕ ತಮ್ಮ ಸಾಮಾಜಿಕ ಜಾಲತಾಣದ ವಾಲ್ ಅನ್ನು ಶುಚಿಗೊಳಿಸಿಕೊಂಡೆವೆಂದು ಬೀಗುವವರೂ ಇದ್ದಾರೆ.

ಬಳಕೆದಾರರ ತೊಡಗಿಸಿಕೊಳ್ಳುವಿಕೆ (ಎಂಗೇಜ್‍ಮೆಂಟ್) ಹೆಚ್ಚಿಸಲು ಸಾಮಾಜಿಕ ಜಾಲತಾಣಗಳು ಬಳಸುವ ಆಲ್ಗಾರಿದಂಗಳು ಕೂಡ ನಮ್ಮನ್ನು ದ್ವೀಪವಾಸಿಗಳಾಗಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ನಾವು ಯಾರನ್ನು ಮತ್ತು ಯಾವುದನ್ನು ಇಷ್ಟಪಡುತ್ತೇವೆ ಎಂಬುದನ್ನು ಮನಗಂಡ ನಂತರ, ಅಂತಹದ್ದನ್ನೇ ನಮಗೆ ಹೆಚ್ಚೆಚ್ಚು ತೋರಿಸುವ ಮೂಲಕ ತಮ್ಮ ಹಿತ ಸಾಧಿಸಿಕೊಳ್ಳುತ್ತಿವೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ರೂಪಿಸಿದ ಸರ್ಕಾರದ ನಡೆ ಟೀಕಿಸುವ ಭರದಲ್ಲಿ ತೀರಾ ಅಸೂಕ್ಷ್ಮವಾಗಿ ಟಿಪ್ಪಣಿ ಬರೆದು, ತನ್ನ ನಿಲುವೇ ಸರಿ ಎಂದು ವಾದಿಸಿದ ಲೇಖಕಿಯ ನಿಲುವಿನಲ್ಲಿ ಇಂದಿಗೂ ಹೆಚ್ಚಿನ ಬದಲಾವಣೆಯೇನು ಆಗಿರಲಿಕ್ಕಿಲ್ಲ. ನೇರವಾಗಿ ಅವರ ಬೆಂಬಲಕ್ಕೆ ಕೆಲವರಷ್ಟೇ ಬಂದಿರಬಹುದು. ಆದರೆ, ಅನ್ನಿಸಿದ್ದನ್ನು ನೇರವಾಗಿ ಹೇಳಿ ನಿಷ್ಠುರ ಕಟ್ಟಿಕೊಳ್ಳಲು ಬಯಸದವರು, ತಾವು ಕಟ್ಟಿಕೊಂಡಿರುವ ದ್ವೀಪಗಳಂತಹ ಸಾಹಿತ್ಯ ಕೂಟಗಳಲ್ಲಿ ಕುಳಿತು ಹರಟುವಾಗ ಲೇಖಕಿಯ ನಿಲುವಿಗೆ ಬೆಂಬಲ ಸೂಚಿಸಿರಲೂಬಹುದು.
ಇದು ಕೇವಲ ವ್ಯಕ್ತಿಗತ ನೆಲೆಗಟ್ಟಿನ ಸಮಸ್ಯೆಯಲ್ಲ. ಉತ್ತಮ ಬದುಕು ಕಟ್ಟಿಕೊಳ್ಳುವ ಸಲುವಾಗಿ ನಾವು ಮಾಡಿಕೊಳ್ಳುತ್ತಿರುವ ಉತ್ತಮ ಆಯ್ಕೆಗಳೆಲ್ಲವೂ ಅತ್ಯುತ್ತಮವಾದ ದ್ವೀಪವೊಂದರ ಸೃಷ್ಟಿಗೆ ತಳಪಾಯ ನಿರ್ಮಿಸುತ್ತಿವೆ! ಎಲ್ಲರ ಬದುಕಿನ ಏಳು-ಬೀಳುಗಳು, ಆಸೆ-ಹತಾಶೆಗಳ ಕುರಿತು ತಿಳಿವಳಿಕೆ ಇಲ್ಲದವರು ಆಡಳಿತದ ಭಾಗವಾದಾಗ, ರಾಜಕಾರಣಿಗಳಾದಾಗ, ವೈದ್ಯರು, ಪತ್ರಕರ್ತರು, ಬರಹಗಾರರು, ಶಿಕ್ಷಕರು ಇನ್ನೇನೋ ಆದಾಗ ಅದರ ದುಷ್ಪರಿಣಾಮ ಹೆಚ್ಚು ಉಂಟಾಗುವುದು ಆರ್ಥಿಕ ಮತ್ತು ಸಾಮಾಜಿಕವಾಗಿ ದುರ್ಬಲರಾಗಿಯೇ ಉಳಿದವರ ಮೇಲೆ ತಾನೇ?
ಬೇರೊಬ್ಬರ ಸಂಕುಚಿತ ವರ್ತನೆಯೆಡೆಗೆ ಅತಿ ಉತ್ಸಾಹದಿಂದ ಬೆರಳು ತೋರುವ ಮುನ್ನ, ಬದುಕು ಅರಿಯಲು ನಾವು ಅಪ್ಪಿಕೊಳ್ಳುವ ದೃಷ್ಟಿಕೋನವು ಸಂಕುಚಿತ ದ್ವೀಪಗಳ ಪ್ರಭಾವದಿಂದ ಅಸಲಿಗೂ ಮುಕ್ತವಾಗಿದೆಯೇ ಎಂದು ಸಂಯಮದಿಂದ ಗಮನಿಸುವ ಜರೂರತ್ತಿದೆ.
ಈ ಆಡಿಯೊ ಕೇಳಿದ್ದೀರಾ?: ವರ್ತಮಾನ | ಕರ್ನಾಟಕದ ಕಾಂಗ್ರೆಸ್ಸು, ಬಿಜೆಪಿ, ದುಡ್ಡಿರುವ ದೊಡ್ಡವರು ಹಾಗೂ ಬಡವರ ಘನತೆ
ಅಮಿತ್ ವರ್ಮ ನಡೆಸಿಕೊಡುವ ‘ದ ಸೀನ್ ಅಂಡ್ ದಿ ಅನ್‍ಸೀನ್’ ಪಾಡ್‍ಕಾಸ್ಟ್‌ನಲ್ಲಿ, ತಮ್ಮ ವೃತ್ತಿಬದುಕಿನ ಅನುಭವಗಳ ಕುರಿತು ಮಾತನಾಡುವ ವೇಳೆ ಕೇರಳದ ವೈದ್ಯ ಅಬ್ಬಿ ಫಿಲಿಪ್ಸ್ ಅವರು ಹಂಚಿಕೊಂಡ ಅನುಭವಗಳು ಗಮನಾರ್ಹ. “ರೋಗಿಯ ಯಕೃತ್ತಿನ ಆರೋಗ್ಯ ತೀರಾ ಹದಗೆಟ್ಟು, ದುಬಾರಿ ಚಿಕಿತ್ಸೆಯ ಮೊರೆಹೋಗುವ ಅನಿವಾರ್ಯತೆ ಎದುರಾದಾಗ, ನಾನು ಆ ವ್ಯಕ್ತಿಯ ಆರ್ಥಿಕ ಹಿನ್ನೆಲೆ ಕುರಿತು ಕೂಡ ತಿಳಿದುಕೊಳ್ಳಲು ಮುಂದಾಗುತ್ತೇನೆ. ರೋಗಿಯ ಕುಟುಂಬಸ್ಥರು ಆರ್ಥಿಕವಾಗಿ ಸದೃಢರಲ್ಲದಿದ್ದರೆ ಮತ್ತು ದುಬಾರಿ ಚಿಕಿತ್ಸೆಯ ನಂತರವೂ ರೋಗಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವ ಸಾಧ್ಯತೆ ಕಡಿಮೆ ಇದ್ದ ಪಕ್ಷದಲ್ಲಿ, ನಾನು ಅವರಿಗೆ ದುಬಾರಿ ಚಿಕಿತ್ಸೆಯ ಆಯ್ಕೆ ಮಾಡಿಕೊಳ್ಳದಿರುವುದು ಏಕೆ ಸೂಕ್ತವೆಂದು ಅರ್ಥ ಮಾಡಿಸಲು ಪ್ರಯತ್ನಿಸುವೆ. ಅಲ್ಲದೆ, ತಾವು ಹಣ ಖರ್ಚು ಮಾಡಿ ಚಿಕಿತ್ಸೆ ಕೊಡಿಸದಿರುವ ಕಾರಣಕ್ಕೇ ಹೀಗಾಯಿತು ಎನ್ನುವ ಕೊರಗು ಕುಟುಂಬಸ್ಥರನ್ನು ಬಾಧಿಸದ ಹಾಗೆ ಅವರಿಗೆ ವಾಸ್ತವವನ್ನು ಮನಗಾಣಿಸಲು ಮುತುವರ್ಜಿ ತೋರುತ್ತೇನೆ,” ಎಂದಿದ್ದರು.
ಹೀಗೆ, ರೋಗಿಗಳು ಮತ್ತವರ ಅವಲಂಬಿತರ ಹಿತ ಕಾಯುವ ಮಾನವೀಯ ಕಾಳಜಿ ರೂಢಿಸಿಕೊಳ್ಳಲು ವೈದ್ಯರಿಗೆ ಬಡವರ ಬದುಕಿನ ಪರಿಚಯವೂ ಇರಬೇಕು. ಉಳ್ಳವರನ್ನಷ್ಟೇ ಒಳಗೊಳ್ಳುವ ಶಾಲೆ-ಕಾಲೇಜು, ಉಳ್ಳವರೊಂದಿಗೆ ಮಾತ್ರ ಬೆರೆತು ಬದುಕುವ ಮನುಷ್ಯರ ನಡುವಿನಿಂದ ಹೊರಹೊಮ್ಮುವ ವೈದ್ಯರು ಕೂಡ ಅಬ್ಬಿ ಫಿಲಿಪ್ಸ್‌ರಂತೆ ಚಿಂತಿಸುವರೆಂಬ ಆಶಾಭಾವ ಹೊಂದಬಹುದೇ?
ನಾವು ಸೃಷ್ಟಿಸಿಕೊಂಡಿರುವ ದ್ವೀಪಗಳಿಗೆ, ‘ನಾವು ಮಾತ್ರ ಸರಿ ಇದ್ದೇವೆ’ ಎನ್ನುವ ಅಹಂ ಬಿತ್ತುವಲ್ಲಿ ಇನ್ನಿಲ್ಲದ ಉತ್ಸಾಹ. ತಪ್ಪು ಹಾದಿಯಲ್ಲಿರುವವರನ್ನು ಸರಿದಾರಿಗೆ ತರಲು ಬೇಕಿರುವ ಸಂವಹನದ ಸೇತುವೆಗಳನ್ನು ನಿರ್ಮಿಸಿ, ಉಳಿಸಿಕೊಳ್ಳುವ ಉಸಾಬರಿ ನಮಗೆ ಬೇಡವಾಗಿದೆ. ನೈತಿಕ ನಡೆಯಂತೆ ತೋರುವ, ನಮಗೆ ಸಮ್ಮತವಲ್ಲದ ವಿಚಾರ ಮತ್ತು ವೇದಿಕೆಯಿಂದ ಅಂತರ ಕಾಯ್ದುಕೊಳ್ಳುವುದರಿಂದ ಅಸಲಿಗೂ ಸಾಧಿಸಲು ಆಗುವುದಾದರೂ ಏನು? ಈ ಕುರಿತು ಚಿಂತಿಸಬೇಕಲ್ಲವೇ?
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ
ಕಲಾಕೃತಿಗಳ ಕೃಪೆ: Unsplash ಜಾಲತಾಣ