ಕಳ್ಳರು ಯಾವುದೇ ಜಾಗಕ್ಕೆ ಕಳ್ಳತನಕ್ಕೆ ಹೋದರೂ ಜಾಗರೂಕರಾಗಿರುತ್ತಾರೆ. ಆದರೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಕದಿಯುವುದಕ್ಕೆ ಹೋದಾಗ ಭಯಭಕ್ತಿ ಹೆಚ್ಚಾಗಿ ಕಾಡುತ್ತದೆ. ದೇವಸ್ಥಾನದ ವಸ್ತು ಕಳವು ಮಾಡಿದರೂ ಕೆಲವೊಮ್ಮೆ ಕ್ಷಮಾಪಣೆ, ತಪ್ಪೊಪ್ಪಿಗೆ ಸಲ್ಲಿಸುವುದುಂಟು. ಅಲ್ಲದೆ ದೇವರು ಶಿಕ್ಷೆ ಕೊಡುತ್ತಾನೆ ಎಂಬ ಭಯದಿಂದ ಕಳ್ಳತನವನ್ನು ನಿರಾಕರಿಸುವ ಸಾಧ್ಯತೆಯು ಇರುತ್ತದೆ. ಈಗ ಅದೇ ರೀತಿಯ ಒಂದು ಘಟನೆ ಹರಿಯಾಣ ರಾಜ್ಯದ ದೇವಸ್ಥಾನವೊಂದರಲ್ಲಿ ನಡೆದಿದೆ.
ಹರಿಯಾಣದ ರೇವಾರಿ ಜಿಲ್ಲೆಯ ಹನುಮಾನ್ ದೇವಸ್ಥಾನದೊಳಗೆ ಕಳ್ಳನೊಬ್ಬ ಹಗಲಿನ ವೇಳೆಯೆ ನುಗ್ಗಿದ್ದಾನೆ. ಹಲವು ಭಕ್ತರ ನಡುವೆಯೆ ದೇವರ ಮುಂದೆ ಕುಳಿತ ಕಳ್ಳ ಸುಮಾರು 10 ನಿಮಿಷ ಭಕ್ತಿಯಿಂದ ಹನುಮಾನ್ ಚಾಲೀಸಾವನ್ನು ಪಠಿಸಿದ್ದಾನೆ. ಅರ್ಚಕರ ಸಮ್ಮುಖದಲ್ಲಿಯೇ ದೇವರ ಪಾದಗಳಿಗೆ 10 ರೂಪಾಯಿಗಳನ್ನು ಅರ್ಪಿಸುತ್ತಾನೆ.
ಈ ಸುದ್ದಿ ಓದಿದ್ದೀರಾ? ಪುರುಷತ್ವ ಪರೀಕ್ಷೆಗೆ ರಕ್ತದ ಮಾದರಿ ಬಳಸಿ, ಎರಡು ಬೆರಳು ಪರೀಕ್ಷೆ ನಿಲ್ಲಿಸಿ: ಮದ್ರಾಸ್ ಹೈಕೋರ್ಟ್
ದೇವಾಸ್ಥಾನದಲ್ಲಿದ್ದ ಹತ್ತಾರು ಭಕ್ತರು ಪ್ರಾರ್ಥನೆ ಸಲ್ಲಿಸುವ ಸಮಯದಲ್ಲಿ ಕಾಣಿಕೆ ಡಬ್ಬಿ ಬಳಿ ಹೋದ ಕಳ್ಳ ಯಾರ ಗಮನಕ್ಕೂ ಬಾರದಂತೆ ದೇವರ ಹುಂಡಿಯನ್ನು ಹೊಡೆದು 5 ಸಾವಿರ ರೂ ದೋಚಿ ಪರಾರಿಯಾಗಿದ್ದಾನೆ. ಕಳ್ಳತನ ನಡೆದಿರುವುದು ತಿಳಿಯದ ಅರ್ಚಕರು ರಾತ್ರಿ ದೇವಸ್ಥಾನದ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಹಿಂತಿರುಗಿ ನೋಡಿದಾಗ ಕಾಣಿಕೆ ಡಬ್ಬಿಯ ಬೀಗ ಮುರಿದಿರುವುದು ಕಂಡುಬಂದಿದೆ.
ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೇಗುಲಕ್ಕೆ ಆಗಮಿಸಿ ವಿಚಾರಣೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನಿಜಾಂಶ ಬೆಳಕಿಗೆ ಬಂದಿದೆ. ದೃಶ್ಯಗಳಲ್ಲಿ ಕಳ್ಳನ ಎಲ್ಲ ಚಲನವಲನಗಳು ದಾಖಲಾಗಿದೆ. ಕಳ್ಳತನಕ್ಕೆ ಮೊದಲು ಮೊದಲು ಹನುಮಾನ್ ಚಾಲೀಸಾವನ್ನು ಪಠಿಸುತ್ತಾ ದೇವರ ಪಾದಗಳಿಗೆ ದುಡ್ಡನ್ನು ಅರ್ಪಿಸುತ್ತಿರುವುದು ದಾಖಲಾಗಿದೆ.
ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆಸಿದ್ದಾರೆ.