ಭಾರತ ಹಾಗೂ ವೆಸ್ಟ್ ಇಂಡೀಸ್ ಎರಡು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಇಂದಿನಿಂದ(ಜುಲೈ 12) ಆರಂಭವಾಗಲಿದೆ. ಪಂದ್ಯ ವಿಂಡೀಸ್‌ನ ವಿಂಡ್ಸರ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋಲು ಕಂಡಿರುವ ಭಾರತ 2023-25ರ ಚಾಂಪಿಯನ್‌ಶಿಪ್‌ನಲ್ಲಿ ಗೆಲುವಿನ ಆರಂಭ ಪಡೆಯಲು ಈ ಸರಣಿಯು ಪ್ರಮುಖವಾಗಿದೆ.
ಈಗಾಗಲೇ ಹಲವು ಅಂತಾರಾಷ್ಟ್ರೀಯ ಟೂರ್ನಿಯ ಸರಣಿಗಳ ವೈಫಲ್ಯ ಹಾಗೂ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿರುವ ವೆಸ್ಟ್ ಇಂಡೀಸ್ ತಂಡಕ್ಕೆ ತವರಿನ ಪಿಚ್‌ನಲ್ಲಿ ಪುಟಿದೇಳಲು ಅವಕಾಶ ದೊರೆತಿದೆ.
ಕ್ರೇಗ್ ಬ್ರಾಥ್‌ವೇಟ್ ನಾಯಕತ್ವದ ಆತಿಥೇಯ ವೆಸ್ಟ್ ಇಂಡೀಸ್ ತಂಡದಲ್ಲಿ ಅನುಭವಿಗಳ ಜೊತೆ ಹೊಸಬರು ಇದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಕಿರ್ಕ್ ಮೆಕೆಂಜಿ ಪಾದಾರ್ಪಣೆ ನಿರೀಕ್ಷೆಯಲ್ಲಿದ್ದು, ರಖೀಮ್ ಕಾರ್ನ್‌ವಾಲ್ ಕೂಡ ತಂಡದಲ್ಲಿದ್ದಾರೆ. ಕೇಮಾರ್ ರೋಚ್, ಅಲ್ಜಾರಿ ಜೋಸೆಫ್, ಜೇಸನ್ ಹೋಲ್ಡರ್, ಶಾನೊನ್ ಗ್ಯಾಬ್ರಿಯಲ್ ಅವನ್ನೊಳಗೊಂಡ ಬೌಲಿಂಗ್ ಪಡೆ ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದೆ.
ಜೈಸ್ವಾಲ್ ಕಣಕ್ಕಿಳಿಯುವ ಸಾಧ್ಯತೆ
ಅನುಭವಿ ಚೇತೇಶ್ವರ್ ಪೂಜಾರ ಅವರನ್ನು ಭಾರತ ತಂಡದಿಂದ ಕೈ ಬಿಡಲಾಗಿದ್ದು, ಐಪಿಎಲ್ ಹಾಗೂ ದೇಸಿ ಟೂರ್ನಿಗಳಲ್ಲಿ ಮಿಂಚಿದ್ದ ಯುವ ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶ ನೀಡಲಾಗಿದೆ. ಉದಯೋನ್ಮುಖ ಆಟಗಾರ ಯಶಸ್ವಿ ಜೈಸ್ವಾಲ್ ಅವರು ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಮತ್ತೊಬ್ಬ ಯುವ ಆಟಗಾರ ಶುಭ್‌ಮನ್ ಗಿಲ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಂಭವವಿದೆ. ಸ್ಫೋಟಕ ಆಟಗಾರ ವಿರಾಟ್ ಕೊಹ್ಲಿ, ಮತ್ತೊಬ್ಬ ಅನುಭವಿ ಅಜಿಂಕ್ಯ ರಹಾನೆ ತಂಡದಲ್ಲಿದ್ದು, ತಂಡದ ಬ್ಯಾಟಿಂಗ್ ಬಲ ಹೆಚ್ಚಲಿದೆ. ಕೆ ಎಸ್ ಭರತ್ ಹಾಗೂ ಇಶಾನ್ ಕಿಶನ್ ಇಬ್ಬರು ಕೀಪರ್‌ಗಳಿಗೆ ಸ್ಥಾನ ನೀಡಲಾಗಿದ್ದು, ಮೊದಲ ಪಂದ್ಯದಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದರ ಬಗ್ಗೆ ಕುತೂಹಲವಿದೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಜೊತೆ ಸ್ಪಿನ್ನರ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ತಂಡದಲ್ಲಿರುವುದರಿಂದ ಭರವಸೆ ಮತ್ತಷ್ಟು ಹೆಚ್ಚಿದೆ.
ವೇಗದ ಬೌಲಿಂಗ್‌ನಲ್ಲಿ ಮೊಹಮದ್ ಸಿರಾಜ್, ಜಯ್‌ದೇವ್ ಉನಾದ್ಕತ್ ಆಡುವುದು ಬಹುತೇಕ ಖಚಿತ. ಉಳಿದ ಸ್ಥಾನಕ್ಕೆ ನವ್‌ದೀಪ್ ಸೈನಿ, ಮುಕೇಶ್ ಕುಮಾರ್ ನಡುವೆ ಪೈಪೋಟಿ ಇದೆ. ಸ್ಥಾನ ಪಡೆದುಕೊಂಡಿರುವ ಶಾರ್ದೂಲ್ ಠಾಕೂರ್ ಬೌಲಿಂಗ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆ್ಯಷಸ್ ಸರಣಿ | ಬ್ರೂಕ್ – ವೋಕ್ಸ್ ಜೊತೆಯಾಟ; ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ರೋಚಕ ಜಯ
2 ದಶಕಗಳಿಂದ ಸೋಲದ ಭಾರತ
ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಕಳೆದ 21 ವರ್ಷಗಳಲ್ಲಿ ಯಾವುದೇ ಟೆಸ್ಟ್ ಪಂದ್ಯ ಸೋತಿಲ್ಲ. 2002ರಲ್ಲಿ ವಿಂಡೀಸ್‌ನಲ್ಲಿ ನಡೆದಿದ್ದ ಸರಣಿಯಲ್ಲಿ ಕೊನೆ ಬಾರಿ ಭಾರತ ಸೋತಿತ್ತು. ಆ ಬಳಿಕ ವಿಂಡೀಸ್ ಪಿಚ್‌ಗಳಲ್ಲಿ 4 ಬಾರಿ ಸರಣಿ ಆಡಿರುವ ಭಾರತ ತಂಡ ಎಲ್ಲ ಬಾರಿಯೂ ಸರಣಿ ಜಯಿಸಿದೆ. ಅಲ್ಲದೇ ಈವರೆಗೆ ವಿಂಡೀಸ್‌ನಲ್ಲಿ ಭಾರತ 12 ಬಾರಿ ಟೆಸ್ಟ್ ಸರಣಿ ಆಡಿದ್ದು, 5 ಸರಣಿಯನ್ನು ಭಾರತ ಗೆದ್ದಿದ್ದರೆ, 7 ಸರಣಿ ವೆಸ್ಟ್ ಇಂಡೀಸ್ ಪಾಲಾಗಿದೆ.
ಸಂಭವನೀಯ ಆಟಗಾರರು
ಭಾರತ:
ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ ಎಸ್ ಭರತ್/ಇಶಾನ್ ಕಿಶನ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯದೇವ್ ಉನಾದ್ಕತ್.
ವಿಂಡೀಸ್:
ಕಾರ್ಲೋಸ್ ಬ್ರಾಥ್‌ವೇಟ್(ನಾಯಕ), ತೇಜ್‌ನಾರಯಣ್ ಚಂದ್ರಪಾಲ್, ರೀಫರ್, ಬ್ಲಾಕ್‌ವುಡ್, ಕಾರ್ನ್‌ವೆಲ್, ಮೆಕೆಂಜೀ, ಡಿ ಸಿಲ್ವ, ಹೋಲ್ಡರ್, ಜೋಸೆಫ್, ರೋಚ್, ವ್ಯಾರಿಕನ್,
ಮುಖಾಮುಖಿ ಪಂದ್ಯಗಳು: 98
ಭಾರತ ಗೆಲುವು: 22
ವೆಸ್ಟ್ ಇಂಡೀಸ್ ಗೆಲುವು: 30
ಡ್ರಾ : 46
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರಪ್ರಸಾರ: ಜಿಯೋ ಸಿನಿಮಾ