ಸರ್ಕಾರದ ಅಧೀನದಲ್ಲಿರುವ ಕೈಗಾರಿಕೆ, ಶಿಕ್ಷಣ, ಸಾರಿಗೆ, ವ್ಯಾಪಾರ ಕಚೇರಿ ಹಾಗೂ ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲ ಕಡೆಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಲು ಸೂಚಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಬೀದರ್ ಜಿಲ್ಲೆಯ ಔರಾದ ಪಟ್ಟಣ ಪಂಚಾಯತಿ ಎದುರು ಪ್ರತಿಭಟನೆ ನಡೆಸಿದ ಕರವೇ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಪಂಚಾಯತಿ ಸಿಇಒಗೆ ಹಕ್ಕೊತ್ತಾಯ ಸಲ್ಲಿಸಿದ್ದಾರೆ. “ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಆದರೆ, ಗಡಿ ತಾಲೂಕು ಔರಾದದಲ್ಲಿ ಅನ್ಯಭಾಷೆಯ ಪ್ರಭಾವ ದಟ್ಟವಾಗಿದ್ದು, ಕನ್ನಡ ಕುಂಠಿತವಾಗುತ್ತಿದೆ. ಕೇವಲ ಅಂಗಡಿ ಮುಂಗಟ್ಟುಗಳ ನಾಮಫಲಕ ಬದಲಾದರೆ ಕನ್ನಡ ಅನುಷ್ಠಾನಕ್ಕೆ ಬರುವುದಿಲ್ಲ. ತಾಲೂಕಿನ ಶಾಲಾ ಕಾಲೇಜು, ವಾಹನ, ಬ್ಯಾಂಕ್, ವಾಣಿಜ್ಯ, ನ್ಯಾಯಾಂಗ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಕನ್ನಡದಲ್ಲಿ ನಾಮ ಫಲಕಗಳನ್ನು ಅಳವಡಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಕನ್ನಡ ಸಾಹಿತ್ಯ ಪರಿಷತ್ತು, ಜನಪದ ಸಾಹಿತ್ಯ ಪರಿಷತ್ತು ಮತ್ತು ಇತರ ಕನ್ನಡ ಸಂಘ ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು ಕನ್ನಡ ಅನುಷ್ಠಾನಕ್ಕೆ ತರಲು ಶ್ರಮಿಸಬೇಕು. ವಾರದೊಳಗೆ ಕನ್ನಡ ನಾಮ ಫಲಕಗಳನ್ನು ಹಾಕದಿದ್ದಲ್ಲಿ, ಜುಲೈ 18ರಂದು ಅನ್ಯ ಭಾಷೆಯ ಫಲಕಗಳಿಗೆ ಮಸಿ ಬಳಿಯಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ಅನೀಲ ದೇವಕತ್ತೆ, ಗೌರವಾಧ್ಯಕ್ಷ ಬಸವರಾಜ ಶೇಟಕರ, ನಗರ ಘಟಕದ ಅಧ್ಯಕ್ಷ ಬಾಲಾಜಿ ದಾಮಾ, ಮಹೇಶ ಹಳೆಂಬುರೆ, ಪಪ್ಪು ಹಕ್ಕೆ, ಅರ್ಜುನ್ ಭಂಗೆ ,ಧರ್ಮ ಕಾಂಬಳೆ ,ದೀಲಿಪ ಹಕ್ಕೆ ,ಮೇಹಬುಬ ಭಾಗವಾನ, ಯೋವನ ಕಾಂಬಳೆ, ಕಪೀಲ ಚೌವಾಣ, ಮುನ್ನಾ ಹಕ್ಕೆ ,ಕಪೀಲ ಹತ್ನೋಳೆ, ಸಂಗಮೇಶ ಮೇತ್ರೆ ಇದ್ದರು.