ವಿದ್ಯುತ್ ಸರಬರಾಜು ಕಂಪನಿಗಳು ಗ್ರಾಮ ಪಂಚಾಯತಿ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳಿಗೆ ವಿದ್ಯುತ್ ಸರಬರಾಜು ಮಾಡುತ್ತಿವೆ. ಆದರೆ, ವಿದ್ಯುತ್ ಶುಲ್ಕವನ್ನು ಗ್ರಾಮ ಪಂಚಾಯತಿಗಳು ಪಾವತಿ ಮಾಡಿಲ್ಲ. ಎಲ್ಲ ಗ್ರಾಮ ಪಂಚಾಯತಿಗಳ ಒಟ್ಟು ವಿದ್ಯುತ್ ಶುಲ್ಕವು 2024ರ ಮಾರ್ಚ್ ಅಂತ್ಯದ ವೇಳೆಗೆ 6,509 ಕೋಟಿ ರೂ. ಬಾಕಿ ಉಳಿದಿದೆ. ಅದರಲ್ಲಿ, ಅಸಲು ಮೊತ್ತ 5,257.70 ಕೋಟಿ ರೂ. ಇದೆ. ಬಡ್ಡಿ ಮೊತ್ತವು 1,350 ಕೋಟಿ ರೂ. ಇದ್ದು, ಆ ಬಡ್ಡಿ ಮೊತ್ತವನ್ನು ಮನ್ನಾ ಮಾಡಲು ರಾಜ್ಯ ಸಚಿವ ಸಂಪುಟವು ನಿರ್ಧರಿಸಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್, “ಮೈಸೂರು ಮತ್ತು ದಾವಣಗೆರೆ ಈ 2 ಜಿಲ್ಲಾ ಆಸ್ಪತ್ರೆಗಳಲ್ಲಿ ಇನ್-ಹೌಸ್ ಮಾದರಿಯಲ್ಲಿ 2 ಎಂಆರ್‌ಐ ಸ್ಕ್ಯಾನ್ ಮಷಿನ್‌ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ” ಎಂದು ತಿಳಿಸಿದ್ದಾರೆ.
“ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸೇವೆಗಳನ್ನು ಎಲ್ಲ ಫಲನುಭವಿಗಳಿಗೆ ಉಚಿತವಾಗಿ ಒದಗಿಸುವುದು. ರೋಗ ಪತ್ತೆ ಪರೀಕ್ಷೆಗಳಿಗಾಗಿ ಫಲಾನುಭವಿಗಳು ಮಾಡುವ ಹೆಚ್ಚಿನ ಸ್ವಂತ ವೆಚ್ಚವನ್ನು ಕಡಿಮೆ ಮಾಡುವುದು. ನಿಖರವಾದ ರೋಗಪತ್ತೆ ಪರೀಕ್ಷೆಗಳ ಆಧಾರದ ಮೇಲೆ ಸರಿಯಾದ ಚಿಕಿತ್ಸೆಯನ್ನು ಒದಗಿಸಲಾಗುವುದು. ನಿಖರವಾದ ರೋಗಪತ್ತೆ ಸೇವೆಗಳನ್ನು ಒದಗಿಸುವುದರಿಂದ ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟಬಹುದು” ಎಂದು ಹೇಳಿದ್ದಾರೆ.
“ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡಲು ನಿರಕ್ಷೇಪಣಾ ಪತ್ರ ಕೋರಿ, ಭಾರತ ಸರ್ಕಾರದ ಗೃಹ ಮಂತ್ರಾಲಯಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಗೃಹ ಮಂತ್ರಾಲಯ ತಿರಸ್ಕರಿಸಿದೆ. ಆದರೆ, ಭಾರತ ಸಂವಿಧಾನದ 7ನೇ ಪರಿಚ್ಛೇದವು ಒಕ್ಕೂಟ ಪಟ್ಟಿಯಲ್ಲಿ ಬರುವ ವಿವಿಧ ವಿಷಯಗಳ ಬಗ್ಗೆ ವಿವರಿಸುತ್ತದೆ. ಅದರ ಅಡಿಯಲ್ಲಿ, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡಿ, ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ಸಚಿವ ಸಂಪುಟ ಅನುಮೋದಿಸಿದೆ” ಎಂದು ತಿಳಿಸಿದ್ದಾರೆ.