ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸವರ್ಣೀಯ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಗುಂಪು ಇಬ್ಬರು ದಲಿತರನ್ನು ಹತ್ಯೆ ಮಾಡಿರುವ ಘಟನೆ ಗುಜರಾತ್ ಸುರೇಂದ್ರನಗರ ಜಿಲ್ಲೆಯ ಚುಡಾ ತಾಲೂಕಿನ ಸಮಾಧಿಯಾಲ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಅಲ್ಜಿ ಪರ್ಮಾರ್ (60) ಮತ್ತು ಅವರ ಸಹೋದರ ಮನೋಜ್ ಪರ್ಮಾರ್ (54) ಎಂದು ಗುರುತಿಸಲಾಗಿದೆ. ಬುಧವಾರ(ಜುಲೈ 12) ರಾತ್ರಿ ತೀವ್ರವಾಗಿ ಗಾಯಗೊಂಡ ಇವರನ್ನು ಸುರೇಂದ್ರನಗರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸವರ್ಣೀಯರಿಂದ ಗಾಯಗೊಂಡಿರುವ ಪರುಲ್ಬೆನ್ ಪರ್ಮಾರ್ ನೀಡಿದ ದೂರಿನ ಆಧಾರದ ಮೇಲೆ, ಚುಡಾ ಪೊಲೀಸರು ಗುರುವಾರ(ಜುಲೈ 13) ಬೆಳಗ್ಗೆ ಕತಿ ದರ್ಬಾರ್ ಸಮುದಾಯದ ಆರು ಮಂದಿ ಹಾಗೂ 15 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗುಜರಾತ್ ಸುರೇಂದ್ರನಗರ ವಿಭಾಗದ ಪೊಲೀಸ್ ಮಹಾನಿರೀಕ್ಷಕರಾದ ಅಶೋಕ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಸಮಾಧಿಯಾಲ ಗ್ರಾಮದ ತುಂಡು ಭೂಮಿಯಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ನಡೆದ ಗಲಭೆಯಲ್ಲಿ ದಲಿತ ಸಮುದಾಯದ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಹಿಳೆಯರು ಸೇರಿದಂತೆ ಕೆಲವರು ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಶೋಕ್ ಕುಮಾರ್ ಯಾದವ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ | ಪ್ರತೀಕಾರ ಕ್ರಮವಾಗಿ ಅತ್ಯಾಚಾರ; ಬಯಲಿಗೆ ಬಾರದ ನೂರಾರು ಪ್ರಕರಣಗಳು
1998ರಿಂದಲೂ ಜಮೀನಿನ ವಿವಾದ ನಡೆಯುತ್ತಿದ್ದು, ದಲಿತ ಕುಟುಂಬ ಕೆಳ ನ್ಯಾಯಾಲಯದಲ್ಲಿ ಪ್ರಕರಣವನ್ನೂ ಗೆದ್ದುಕೊಂಡಿತ್ತು. ಎಂದಿನಂತೆ ಮೃತ ಸಹೋದರರು ಹಾಗೂ ಅವರ ಕುಟುಂಬಸ್ಥರು ತಮ್ಮ ಕೃಷಿ ಭೂಮಿಯಲ್ಲಿ ಉಳುಮೆ ಮಾಡಲು ತೆರಳಿದಾಗ ಸವರ್ಣೀಯ ಸಮುದಾಯದ ಗುಂಪು ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿದೆ. ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಪರ್ಮಾರ್ ಕುಟುಂಬ ಹೊಲದಲ್ಲಿ ಉಳುಮೆ ಮುಗಿಸಿ ಹಿಂತಿರುಗುತ್ತಿದ್ದಾಗ ಸುಮಾರು 20 ಜನರ ಗುಂಪು ದೊಣ್ಣೆ ಮತ್ತು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಪ್ರಮುಖ ಆರೋಪಿ ಅಮರಭಾಯಿ ಖಚಾರ್ ಮತ್ತು ಆತನ ಸಹೋದರ ಮತ್ತು ಪುತ್ರರ ನೇತೃತ್ವದಲ್ಲಿ ದಾಳಿ ಮಾಡಿದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ನಂತರ ಅಲ್ಜಿಭಾಯಿ ಮತ್ತು ಮನೋಜ್‌ಭಾಯ್ ಪರ್ಮಾರ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ಗಲಭೆ, ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.