ಐಪಿಎಲ್ 2025ನೇ ಆವೃತ್ತಿ ಬಹುತೇಕ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 4 ತಂಡಗಳು ಪ್ಲೇಆಫ್ ಹಂತ ತಲುಪಿದ್ದು, ಯಾವ ತಂಡಗಳು ಮೊದಲ ಎರಡು ಸ್ಥಾನ ಪಡೆಯಲಿವೆ ಎಂಬುದು ಉಳಿದ ಪಂದ್ಯಗಳಲ್ಲಿ ನಿರ್ಧಾರವಾಗಲಿದೆ. ಇಂದು ಗುಜರಾತ್ – ಚೆನ್ನೈ ನಡುವೆ 67ನೇ ಪಂದ್ಯ ಹಾಗೂ ಕೆಕೆಆರ್ – ಹೈದರಾಬಾದ್ ನಡುವೆ 68ನೇ ಪಂದ್ಯ ನಡೆಯಲಿದೆ.
ಗುಜರಾತ್ ಅಗ್ರ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದರೆ, ಸಿಎಸ್‌ಕೆ ಪ್ರತಿಷ್ಠೆಗಾಗಿ ಹೋರಾಟ ನಡೆಸಲಿದೆ. ಗುಜರಾತ್ ತಂಡ ಬಲಿಷ್ಠವಾಗಿದ್ದು, ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ.
ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಚೆನ್ನೈ ಬಲಿಷ್ಠವಾಗಿದೆ. ಸದ್ಯದ ಪ್ರದರ್ಶನ ಗಮನಿಸಿದರೆ ಗುಜರಾತ್ ತಂಡ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎಂದು ತೋರಿಸುತ್ತದೆ. ಆದರೆ ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಲೀಗ್‌ಗೆ ಜಯದ ವಿದಾಯ ಹೇಳುವ ಯೋಜನೆ ಮಾಡಿಕೊಂಡಿದೆ. ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡುವ ತಂಡ ಗೆಲುವು ಸಾಧಿಸುವ ಸಾಧ್ಯತೆಯಿದೆ. ಗುಜರಾತ್ ಆಡಿದ 13 ಪಂದ್ಯಗಳಲ್ಲಿ 18 ಅಂಕವನ್ನು ಕಲೆ ಹಾಕಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಅಂಕ ಪಟ್ಟಿಯಲ್ಲಿ ಮೊದಲೆರೆಡು ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಕಾದಾಟ ನಡೆಸಲಿದೆ.
ಗುಜರಾತ್ ಟೈಟಾನ್ಸ್ ತಂಡದ ಬ್ಯಾಟಿಂಗ್‌ಗೆ ಯುವ ಬ್ಯಾಟರ್‌ಗಳೇ ಆಧಾರ. ಗುಜರಾತ್ ಟೈಟಾನ್ಸ್ ತಂಡದ ಪರ ಇನಿಂಗ್ಸ್ ಆರಂಭಿಸುವ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅಮೋಘ ಪ್ರದರ್ಶನದಲ್ಲಿದ್ದಾರೆ. ಇವರಿಬ್ಬರೂ ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ ಉತ್ತಮ ಇನಿಂಗ್ಸ್ ಕಟ್ಟುವ ಕನಸು ಕಾಣುತ್ತಿದ್ದಾರೆ. ಶೆರ್ಫೇನ್ ರುದರ್ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ ಸ್ಥಿರ ಪ್ರದರ್ಶನವನ್ನು ನೀಡಿ ತಂಡಕ್ಕೆ ನೆರವಾಗಬೇಕಿದೆ.
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ಐದು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಆದರೆ ಈ ಬಾರಿ ಲೀಗ್‌ನಲ್ಲಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಚೆನ್ನೈ ತಂಡದ ಪರ ಆಯುಷ್ ಮಾತ್ರೆ, ಶೇಕ್ ರಶೀದ್ ಬಿಗ್ ಇನಿಂಗ್ಸ್ ಕಟ್ಟುವ ಅವಶ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಉರ್ವಿಲ್ ಪಟೇಲ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ ಮಧ್ಯಮ ಕ್ರಮಾಂಕದಲ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಅನಿವಾರ್ಯತೆ ಇದೆ. ಚೆನ್ನೈ ತಂಡದ ಪರ ವೇಗದ ಬೌಲರ್‌ಗಳು ಹಾಗೂ ಸ್ಪಿನ್ ಬೌಲರ್‌ಗಳು ಶಿಸ್ತುಬದ್ಧ ದಾಳಿ ನಡೆಸಬೇಕಿದೆ.
ಉಭಯ ತಂಡಗಳ ಸಂಭಾವ್ಯ ಆಟಗಾರರು:
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶೆರ್ಫೇನ್ ರುದರ್ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಅರ್ಷದ್ ಖಾನ್, ರಶೀದ್ ಖಾನ್, ಕಗಿಸೊ ರಬಾಡ, ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್
ಇಂಪ್ಯಾಕ್ಟ್ ಆಟಗಾರ: ಪ್ರಸಿದ್ಧ್ ಕೃಷ್ಣ
ಚೆನ್ನೈ ಸೂಪರ್ ಕಿಂಗ್ಸ್: ಆಯುಷ್ ಮಾತ್ರೆ, ಡೆವೊನ್ ಕಾನ್ವೇ, ಉರ್ವಿಲ್ ಪಟೇಲ್ , ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಎಂ ಎಸ್ ಧೋನಿ (ನಾಯಕ ಮತ್ತು ವಿಕರಟ್ ಕೀಪರ್), ನೂರ್ ಅಹ್ಮದ್, ಖಲೀಲ್ ಅಹ್ಮದ್, ಮಥೀಶ ಪತಿರಣ
ಇಂಪ್ಯಾಕ್ಟ್ ಆಟಗಾರ: ಅನ್ಶುಲ್ ಕಾಂಬೋಜ್
ಪಂದ್ಯ ನಡೆಯುವ ಸಮಯ: ಮಧ್ಯಾಹ್ನ 3.30
ಕೋಲ್ಕತ್ತಾ – ಹೈದರಾಬಾದ್; ಪ್ರತಿಷ್ಠೆಗಾಗಿ ಆಟ
ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ತಂಡಗಳು ಪ್ರತಿಷ್ಠೆಗಾಗಿ ನವದೆಹಲಿಯ ಅರುಣ್ ಚೇಟ್ಲಿ ಮೈದಾನದಲ್ಲಿ ಹೋರಾಟ ನಡೆಸಲಿವೆ. ಈ ಎರಡೂ ತಂಡಗಳು 17ನೇ ಆವೃತ್ತಿಯ ಐಪಿಎಲ್‌ನ ಫೈನಲ್‌ನಲ್ಲಿ ಕಾದಾಟ ನಡೆಸಿದ್ದವು. ಆದರೆ ಈ ಬಾರಿಯ ಲೀಗ್‌ನಲ್ಲಿ ಉಭಯ ತಂಡಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.
ಕೆಕೆಆರ್ ಆಡಿದ 13 ಪಂದ್ಯಗಳಲ್ಲಿ 5 ಗೆಲುವು, 6 ಸೋಲುಗಳಿಂದ 12 ಅಂಕಗಳನ್ನು ಕಲೆ ಹಾಕಿದೆ. ಎಸ್‌ಆರ್‌ಎಚ್ ತಾನು ಆಡಿದ 13 ಪಂದ್ಯಗಳಲ್ಲಿ 5 ಜಯ, 7 ಸೋಲು ಕಂಡಿದ್ದು, 11 ಅಂಕಗಳನ್ನು ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಪೂರ್ಣ ಅಂಕಗಳನ್ನು ಕಲೆ ಹಾಕುವ ಇರಾದೆ ಉಭಯ ತಂಡಗಳದ್ದಾಗಿದೆ. ಈ ಮೈದಾನದಲ್ಲಿ ಟಾಸ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ವೇಳೆ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಮಾಡಲು ಮುಂದಾಗುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? ಮೈದಾನದಲ್ಲಿ ಜಗಳಕ್ಕಿಳಿದ ಅಭಿಷೇಕ್ ಶರ್ಮಾ–ದಿಗ್ವೇಶ್ ರಥಿ; ಬಿಸಿಸಿಐನಿಂದ ಒಬ್ಬರಿಗೆ ಅಮಾನತು ಶಿಕ್ಷೆ
ಕೆಕೆಆರ್ ತಂಡದ ಭರವಸೆಯ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲವಾಗಿದ್ದು ತಂಡದ ಚಿಂತೆಯನ್ನು ದ್ವಿಗುಣ ಮಾಡಿದೆ. ದುಬಾರಿ ಆಟಗಾರ ವೆಂಕಟೇಶ್ ಅಯ್ಯರ್ ಈ ಲೀಗ್‌ನಲ್ಲಿ ರನ್ ಕಲೆ ಹಾಕುವಲ್ಲೇ ಹಿಂದೆ ಬಿದಿದ್ದು ನಿರಾಸೆ ಮೂಡಿಸಿದ್ದಾರೆ. ಆರಂಭಿಕರಾಗಿ ಅಫ್ಘಾನಿಸ್ತಾನದ ಬ್ಯಾಟರ್ ರಹಮಾತುಲ್ಲಾ ಗುರ್ಬಾಜ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಇವರಿಗೆ ಸುನಿಲ್ ನರೈನ್ ಉತ್ತಮ ಸಾಥ್ ನೀಡಬಲ್ಲರು.
ಮಧ್ಯಮ ಕ್ರಮಾಂಕದಲ್ಲಿ ನಾಯಕ ಅಜಿಂಕ್ಯ ರಹಾನೆ ಪ್ರತಿ ಪಂದ್ಯದಲ್ಲೂ ಸ್ಥಿರ ಪ್ರದರ್ಶನ ನೀಡಿದ್ದಾರೆ. ಆದರೆ ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಕೊನೆಯ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ಗೆಲುವು ಸಾಧ್ಯ. ಬೌಲಿಂಗ್ ವಿಭಾಗದಲ್ಲಿ ಹರ್ಷಿತ್ ರಾಣಾ, ವೈಭವ್ ಆರೋರಾ, ರಮಣದೀಪ್ ಸಿಂಗ್ ಬಿಗುವಿನ ದಾಳಿ ನಡೆಸಿ ಸನ್ ತಂಡದ ಬ್ಯಾಟರ್‌ಗಳನ್ನು ಕಾಡಬೇಕಿದೆ. ಇನ್ನು ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ಪಿರ್ಕಿ ಮೋಡಿ ಮಾಡಬೇಕಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ ಆರ್‌ಸಿಬಿ ತಂಡವನ್ನು ಮಣಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ಹೈದರಾಬಾದ್ ತಂಡ ಈ ಬಾರಿ ಲೀಗ್‌ನಲ್ಲಿ ಹೊರ ಬಿದ್ದಿದೆ. ಸ್ಟಾರ್ ಬ್ಯಾಟರ್‌ಗಳಾದ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಟಾಪ್ ಆರ್ಡರ್‌ನಲ್ಲಿ ಬಿಗುವಿನ ದಾಳಿಯನ್ನು ನಡೆಸಬೇಕಿದೆ.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್‌ಗಳು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಸನ್ ತಂಡದ ಬೌಲಿಂಗ್‌ನಲ್ಲಿ ಸ್ಟಾರ್ ಆಟಗಾರರು ಇದ್ದು ತಮ್ಮ ಬಿಗುವಿನ ದಾಳಿ ನಡೆಸಿ ಜಯದಲ್ಲಿ ಮಿಂಚಬೇಕು. ಈಗಾದಾಗ ಜಯ ಪಡೆದುಕೊಳ್ಳಬಹುದು.
ಉಭಯ ತಂಡಗಳ ಸಂಭಾವ್ಯ ಆಟಗಾರರು:
ಎಸ್‌ಆರ್‌ಹೆಚ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಈಶಾನ್ ಮಾಲಿಂಗ
ಇಂಪ್ಯಾಕ್ಟ್ ಆಟಗಾರ: ಜೀಶನ್ ಅನ್ಸಾರಿ
ಕೆಕೆಆರ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ಆಂಗ್ಕ್ರಿಶ್ ರಘುವಂಶಿ, ಮನೀಶ್ ಪಾಂಡೆ / ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಹೆನ್ರಿಚ್ ನಾರ್ಟ್ಜೆ
ಇಂಪ್ಯಾಕ್ಟ್ ಆಟಗಾರ: ಹರ್ಷಿತ್ ರಾಣಾ
ಪಂದ್ಯ ನಡೆಯುವ ಸಮಯ: ಸಂಜೆ 7.30
ಎರಡೂ ಪಂದ್ಯಗಳ ನೇರ ಪ್ರಸಾರ: ಜೊಯೋ ಹಾಟ್ ಸ್ಟಾರ್ ಹಾಗೂ ಸ್ಟಾರ್ ಸ್ಪೋರ್ಟ್ಸ್