ಬುಡಕಟ್ಟು ಮಹಿಳೆಯ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿ, ಗುಪ್ತಾಂಗಕ್ಕೆ ಚೂಪಾದ ವಸ್ತು ತುರುಕಿ ಕೊಂದಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಖಲ್ವಾ ಪ್ರದೇಶದಲ್ಲಿ ನಡೆದಿದೆ. 45 ವರ್ಷದ ಮಹಿಳೆ ಮೇಲೆ 25ರಿಂದ 38 ವರ್ಷ ವಯಸ್ಸಿನ ಇಬ್ಬರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ವಿಕೃತಕಾಮಿಗಳು ಮಹಿಳೆಯ ಗುಪ್ತಾಂಗಕ್ಕೆ ಗಟ್ಟಿಯಾದ ಮತ್ತು ಚೂಪಾದ (ಬಹುಶಃ ಕಬ್ಬಿಣದ ರಾಡ್) ತುರುಕಿ, ಆಕೆಯ ಆಂತರಿಕ ಅಂಗಗಳಿಗೆ ಹಾನಿ ಮಾಡಿದ್ದಾರೆ. ಇದರಿಂದಾಗಿ ಮಹಿಳೆ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಅಮಾನುಷ ಕೃತ್ಯ | ದಲಿತ ಬಾಲಕಿಯ ಅಪಹರಣ, ನಿರಂತರ ಸಾಮೂಹಿಕ ಅತ್ಯಾಚಾರ
ಕೊರ್ಕು ಬುಡಕಟ್ಟು ಜನಾಂಗದವರೇ ಆದ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಮತ್ತು ಆರೋಪಿಗಳು ನೆರೆಹೊರೆಯವರಾಗಿದ್ದರು. ವಿವಾಹ ಸಮಾರಂಭವೊಂದಕ್ಕೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಜೊತೆಯಲ್ಲೇ ಇದ್ದ ನೆರೆಹೊರೆಯ ಈ ಪುರುಷರು ತಮ್ಮ ಮನೆಗೆ ಎಂದಿನಂತೆ ಮಹಿಳೆಯನ್ನು ಕರೆದೊಯ್ದು ಈ ಕೃತ್ಯ ಎಸಗಿದ್ದಾರೆ.
ಶನಿವಾರ ಬೆಳಿಗ್ಗೆ, ಮಹಿಳೆಯ ಇಬ್ಬರು ಗಂಡು ಮಕ್ಕಳು ತಮ್ಮ ತಾಯಿ ಬರದ ಕಾರಣ ವಿಚಾರಿಸಲೆಂದು ನೆರೆಮನೆಗೆ ಹೋಗಿದ್ದು ತಾಯಿ ಗಂಭೀರ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ತಾಯಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋದ ಮಕ್ಕಳು ಭಯಗೊಂಡು ಯಾರಿಗೂ ಮಾಹಿತಿ ನೀಡಿಲ್ಲ, ದೂರೂ ನೀಡಿಲ್ಲ. ತೀವ್ರ ಆಂತರಿಕ ಗಾಯಗಳಿಂದಾಗಿ ಮಹಿಳೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಾವನ್ನಪ್ಪಿದರು. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ತಿಳಿದಿದೆ ಎನ್ನಲಾಗಿದೆ.
ಬುಡಕಟ್ಟು ಮಹಿಳೆಯ ಮೇಲೆ ನಡೆದ ಕ್ರೂರ ಕೃತ್ಯದ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ವಿರೋಧ ಪಕ್ಷ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. “ಮಧ್ಯಪ್ರದೇಶದಲ್ಲಿ ಮೋಹನ್ ರಾಜ್ ಆಳ್ವಿಕೆಯಲ್ಲಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಖಾಂಡ್ವಾ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯ ನಾವು ದಿಗಿಲುಬೀಳುವಂತೆ ಮಾಡುತ್ತದೆ. ನಿಮ್ಮ ಗೃಹ ಸಚಿವರಿಗೆ (ಮುಖ್ಯಮಂತ್ರಿಯೇ ಗೃಹಸಚಿವರು) ಸ್ವಲ್ಪವಾದರೂ ನಾಚಿಗೆ ಎಂಬುವುದು ಇದೆಯೇ? ಸರ್ಕಾರಕ್ಕೆ ಈ ಅಪರಾಧಗಳನ್ನು ನಿಯಂತ್ರಿಸುವ ಯಾವುದೇ ಧೈರ್ಯವಿಲ್ಲ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಇದನ್ನು ಓದಿದ್ದಿರಾ? ಕೆ.ಆರ್.ಪೇಟೆ ದಲಿತ ಯುವಕನ ಹತ್ಯೆ ಪ್ರಕರಣ; ಮೇ 27ಕ್ಕೆ ಬೃಹತ್ ಪ್ರತಿಭಟನೆ
ದೇಶದಲ್ಲಿ ದಲಿತ, ಬುಡಕಟ್ಟು ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ
ನಮ್ಮ ದೇಶದಲ್ಲಿ ಹಲವು ಶತಮಾನಗಳಿಂದಲೇ ಮಹಿಳೆಯರನ್ನು ಸರಕಾಗಿ ಕಾಣಲಾಗುತ್ತದೆ. ಅದರಲ್ಲೂ ದಲಿತ, ಬುಡಕಟ್ಟು ಮಹಿಳೆಯರನ್ನು ಸರ್ವರ್ಣಿಯರ ಮತ್ತು ಅದೇ ಜಾತಿಗೆ ಸೇರಿದ ಪುರುಷರ ಸೊತ್ತಿನಂತೆ ಈ ಪುರುಷ ಪ್ರಧಾನ ಸಮಾಜ ಪರಿಗಣಿಸುತ್ತಾ ಬಂದಿದೆ. ಎಷ್ಟೇ ಬದಲಾವಣೆಗಳಾದರೂ ಮಹಿಳೆಯರ ಮುಖ್ಯವಾಗಿ ದಲಿತ ಮಹಿಳೆಯರ ಮೇಲೆ ಜಾತಿ ಆಧಾರದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ಕಡಿಮೆಯಾಗಿಲ್ಲ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಇತ್ತೀಚಿನ ಡೇಟಾ ಪ್ರಕಾರ 2015 ಮತ್ತು 2020ರ ನಡುವೆ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಶೇಕಡ 45ರಷ್ಟು ಹೆಚ್ಚಳವಾಗಿದೆ. ದೇಶದಲ್ಲಿ ಪ್ರತಿದಿನ ಸರಾಸರಿ 10 ದಲಿತ ಮಹಿಳೆಯರು ಮತ್ತು ಯುವತಿಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015-2016 ಲೈಂಗಿಕ ದೌರ್ಜನ್ಯದ ಪ್ರಮಾಣವು ದಲಿತ ಮಹಿಳೆಯರ ಮೇಲೆ ಅಧಿಕವಾಗಿದೆ ಎಂದು ಹೇಳಿದೆ. ಪರಿಶಿಷ್ಟ ಪಂಗಡಗಳ (ಆದಿವಾಸಿ ಅಥವಾ ಸ್ಥಳೀಯ ಭಾರತೀಯರು) ಮಹಿಳೆಯರ ಮೇಲೆ ಶೇ.7.8ರಷ್ಟು, ಪರಿಶಿಷ್ಟ ಜಾತಿಗಳು (ದಲಿತರು) ಶೇ.7.3ರಷ್ಟು, ಹಿಂದುಳಿದ ಜಾತಿಗಳು (ಒಬಿಸಿ) ಶೇ. 5.4 ರಷ್ಟು, ಬುಡಕಟ್ಟು ಜನಾಂಗದಲ್ಲಿ ಶೇ. 4.5ರಷ್ಟು ಲೈಂಗಿಕ ದೌರ್ಜನ್ಯದ ಪ್ರಮಾಣವು ಹೆಚ್ಚಿದೆ ಎಂದು ಸಮೀಕ್ಷೆ ವರದಿ ಹೇಳಿದೆ.
