ಈಗಾಗಲೆ ನಿಷೇಧಗೊಂಡಿರುವ ‘ರೈಕ್ಸ್‌ಬರ್ಗರ್ಸ್’ ಸಂಘಟನೆ ವಲಸೆ ವಿರೋಧಿ, ಮುಸ್ಲಿಮ್ ವಿರೋಧಿ ಹಾಗೂ ಯಹೂದಿ ವಿರೋಧಿ ಸಿದ್ಧಾಂತವನ್ನು ಹೊಂದಿದೆ. AFD ಪಕ್ಷವೂ ಇದೇ ಸಿದ್ಧಾಂತಗಳನ್ನು ಪ್ರತಿಪಾದಿಸಿದೆ. ಜರ್ಮನಿಯಲ್ಲಿ ‘ಜರ್ಮನೀಯತೆ’ಯ ಬೆನ್ನಟ್ಟಿದೆ. ಹಿರಿಯ ಪತ್ರಕರ್ತ ಕೆ. ಎಂ. ರಾಕೇಶ್ ಜರ್ಮನಿಯಿಂದ ‘ಈ ದಿನ’ಕ್ಕಾಗಿ ಬರೆದ ವಿಶೇಷ ಲೇಖನ
ಇತ್ತೀಚಿನ ದಿನಗಳಲ್ಲಿ ಜರ್ಮನಿ ವಿಚಿತ್ರ ಭಯ ಆತಂಕಗಳ ದುಃಸ್ವಪ್ನ ಎದುರಿಸಿದೆ. ತನ್ನ ದೇಶದ ಏಕೈಕ ಅತಿದೊಡ್ಡ ಪ್ರತಿಪಕ್ಷ ‘ಆಲ್ಟರ್ನೇಟಿವ್ ಫಾರ್ ಡೂಶ್ ಲ್ಯಾಂಡ್’ (AFD) ನಿಷೇಧಿಸಬೇಕೇ ಬೇಡವೇ ಎಂಬ ಸಂದಿಗ್ಧವಿದು.
ಪ್ರತಿಪಕ್ಷದ ನಿಷೇಧಿಸುವುದೇ, ಅದೂ ಜನತಂತ್ರದಲ್ಲಿ! ಯಾಕಾಗಿ?
ಎರಡನೆಯ ವಿಶ್ವಯುದ್ಧದ ನಂತರ ಜರ್ಮನಿ ಪರಿತಪಿಸಿ ಪೋಷಿಸಿದ ಮಹಾಮೌಲ್ಯಗಳಾದ ಜನತಂತ್ರ ಮತ್ತು ಜಾತ್ಯತೀತೆಯ ಆಶೋತ್ತರಗಳನ್ನು ತೀವ್ರತರವಾಗಿ ವಿರೋಧಿಸುವ ಪ್ರತಿಪಕ್ಷವಿದು, ಅತೀವ ಬಲಪಂಥೀಯ ವಿಚಾರಧಾರೆ.
ಹೊಸದಾಗಿ ಆರಿಸಿ ಬಂದಿರುವ ಜರ್ಮನ್ ಸರ್ಕಾರವು ತೀವ್ರಬಲಪಂಥೀಯ ಸಂಘಟನೆ ರೈಕ್ಸ್‌ಬರ್ಗರ್ಸ್ (Reichsburgers) ಮತ್ತು ಅದರ ‘ಅರಸ’ ಫಿಟ್ಸೆಕ್ (Fitzek) ಅವನ ‘ಪ್ರಜೆ’ಗಳನ್ನು ಇದೇ ಏಪ್ರಿಲ್ 13ರಂದು ಬಂಧಿಸಿತ್ತು.
ನಾಜೀ ಜರ್ಮನಿಯು ಸಂಪೂರ್ಣವಾಗಿ ಗುರುತಿಸಿದ ನಾಗರಿಕರು ಎಂಬುದು ‘ರೈಕ್ಸ್‌ಬರ್ಗರ್ಸ್’ನ ಅರ್ಥ. ಸಾಮ್ರಾಜ್ಯಶಾಹೀ ನಾಗರಿಕರು ಎಂದೂ ಇವರು ತಮ್ಮನ್ನು ಕರೆದುಕೊಳ್ಳುತ್ತಾರೆ. 1875-1945ರಲ್ಲಿ ನಾಜಿವಾದದ ಅಳಿವಿನ ಮುನ್ನ ಅಸ್ತಿತ್ವದಲ್ಲಿದ್ದ ಜರ್ಮನಿಯನ್ನೇ ಆದರಿಸಿ ಅಂಗೀಕರಿಸುವ ತತ್ವದವರು. ದ್ವಿತೀಯ ವಿಶ್ವಯುದ್ಧದ ನಂತರ ಉದಯವಾದ ಜರ್ಮನಿ ಒಕ್ಕೂಟ ಗಣರಾಜ್ಯವನ್ನು ಇವರು ಒಪ್ಪುವುದೇ ಇಲ್ಲ. ಹಿಟ್ಲರನನ್ನು ಸೋಲಿಸಿದ ಮಿತ್ರರಾಷ್ಟ್ರಗಳ ಒಕ್ಕೂಟದ ವಶದಲ್ಲೇ ಉಳಿದಿದೆ ಜರ್ಮನಿ, ಇದೊಂದು ಖಾಸಗಿ ಕಂಪನಿ ಎಂದು ನಂಬುವವರು. ದಂಡಶುಲ್ಕಗಳು, ತೆರಿಗೆಗಳನ್ನು ತುಂಬಲು ನಿರಾಕರಿಸುವ ಮತ್ತು ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸುವ ಮತ್ತು ತಮ್ಮದೇ ‘ರಾಷ್ಟ್ರೀಯ ಸರಹದ್ದುಗಳನ್ನು’ ಸಾರಿಕೊಂಡು ‘ಎರಡನೆಯ ಜರ್ಮನ್ ಸಾಮ್ರಾಜ್ಯ’ ಎಂದೆಲ್ಲ ಕರೆದುಕೊಳ್ಳುವವರು. ಕೆಲವು ಸಲ ಅವರದೇ ಸ್ವಂತ ಪಾಸ್‌ಪೋರ್ಟ್ ಗಳನ್ನು ಮತ್ತು ಡ್ರೈವಿಂಗ್ ಲೈಸೆನ್ಸ್ ಗಳನ್ನು ಅಚ್ಚು ಹಾಕಿಕೊಂಡು ತಮ್ಮನ್ನು ‘ಅರಸೊತ್ತಿಗೆ’ ಎಂದು ಬಣ್ಣಿಸಿಕೊಳ್ಳುವವರು. ಎರಡು ವರ್ಷಗಳ ಹಿಂದೆ ಜರ್ಮನ್ ಗಣರಾಜ್ಯವನ್ನು ಉರುಳಿಸುವ ಪಿತೂರಿ ಹೂಡಿದ್ದವರು. ಜರ್ಮನಿ ಸಂಸತ್ತಿನ ಮೇಲೆ ದಾಳಿ ನಡೆಸಿ, ಪ್ರಧಾನಮಂತ್ರಿಯನ್ನು (ಛಾನ್ಸಲರ್), ಪ್ರಮುಖ ಮಂತ್ರಿಗಳನ್ನು, ಪ್ರತಿಪಕ್ಷದ ನಾಯಕನನ್ನು ಬಂಧಿಸಿ ನಾಜೀವಾದಿ ಸರ್ಕಾರವನ್ನು ಮರುಸ್ಥಾಪಿಸಲು ಬಯಸಿದ್ದರು. ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಹೊಂದಿರುವ ಆಪಾದನೆಯೂ ಅವರ ಮೇಲಿದೆ.

ಪ್ರತಿಪಕ್ಷವನ್ನು ನಿಷೇಧಿಸುವ ಸಂಕಟದ ವಿಷಯಕ್ಕೆ ವಾಪಸು ಬರೋಣ. ರೈಕ್ಸ್‌ಬರ್ಗರ್ಸ್ ಸಂಘಟನೆಯನ್ನು ನಿಷೇಧಿಸಿರುವ ಇದೇ ಸರ್ಕಾರ ಇಷ್ಟೇ ತೀವ್ರತರ ಬಲಪಂಥೀಯ ರಾಜಕೀಯ ಪಕ್ಷವನ್ನು ನಿಷೇಧಿಸಲು ಹಿಂದೇಟು ಹಾಕುತ್ತಿದೆ. ನಾಜೀವಾದದ ರೀತಿಯ ಆಂದೋಲನಗಳ ಪುನರುತ್ಥಾನವನ್ನು ಈ ರಾಜಕೀಯ ಪಕ್ಷ ಪ್ರತಿಪಾದಿಸುತ್ತದೆ. ಆದರೂ ನಿಷೇಧದ ಕ್ರಮಕ್ಕೆ ಮುಂದಾಗುತ್ತಿಲ್ಲ.
ಜನತಂತ್ರವನ್ನು ತಿರಸ್ಕರಿಸಿ ಜರ್ಮನ್ ರೈಕ್‌ನ (1871ರ ಜರ್ಮನ್ ಸಾಮ್ರಾಜ್ಯ ಅಥವಾ ಅಧಿಪತ್ಯ) ಸ್ಥಾಪನೆ ಫಿಟ್ಝೆಕ್ ಮತ್ತು ಅದರ ಅನುಯಾಯಿಗಳ ಉದ್ದೇಶ. ಜರ್ಮನಿಯ ಸಂವಿಧಾನ ಸಂರಕ್ಷಣಾ ಕಚೇರಿಯು (ಬಿ.ಎಫ್.ವಿ ಎಂಬ ಬೇಹುಗಾರಿಕೆ ದಳ) ರೈಕ್ಸ್‌ಬರ್ಗರ್ಸ್ ಆಂದೋಲನದ ಮೇಲೆ ತೀವ್ರ ನಿಗಾ ಇಡುತ್ತ ಬಂದಿದೆ.
ಏಕೈಕ ದೊಡ್ಡ ಪ್ರತಿಪಕ್ಷ AfDಯು ತೀವ್ರವಾದಿ ಸಂಘಟನೆಯಾಗಿದ್ದು, ದೇಶವನ್ನು ತೀವ್ರ ಬಲಪಂಥೀಯತೆಯತ್ತ ಒಯ್ಯುವ ಭಾರೀ ಹೆಜ್ಜೆ ಇರಿಸುತ್ತಿರುವ ಅಪಾಯವಿದೆ ಎಂಬುದಾಗಿ ಬಿ.ಎಫ್.ವಿ ವರದಿಗಳನ್ನು ನೀಡಿತ್ತು. ಈ ವರದಿಗಳನ್ನು ಆಧರಿಸಿಯೇ ರೈಕ್ಸ್‌ಬರ್ಗರ್ಸ್ ಸಂಘಟನೆಯನ್ನು ನಿಷೇಧಿಸಲಾಯಿತು.
ಆದರೆ ರೈಕ್ಸ್‌ಬರ್ಗರ್ಸ್ ಒಂದು ಸಂಘಟನೆ. AfD ಬಲವಾಗಿ ಬೆಳೆಯುತ್ತಲೇ ನಡೆದಿರುವ ಒಂದು ಪೂರ್ಣ ಪ್ರಮಾಣದ ರಾಜಕೀಯ ಪಕ್ಷ. ಈ ಹಿಂದಿನ ಸಂಸತ್ ಚುನಾವಣೆಗಳಲ್ಲಿ 76 ಸ್ಥಾನಗಳಲ್ಲಿ ಗೆದ್ದಿತ್ತು. ಇತ್ತೀಚಿನ ಚುನಾವಣೆಗಳಲ್ಲಿ ಈ ಸಂಖ್ಯೆ 152ಕ್ಕೆ ಇಮ್ಮಡಿಯಾಗಿದೆ. ಜರ್ಮನ್ ಸಂಸತ್ತಿನ ಒಟ್ಟು ಸದಸ್ಯ ಬಲ 630.
AfD ಗಿಂತ ಹೆಚ್ಚಿನ ಸೀಟುಗಳನ್ನು ಗೆದ್ದಿರುವ ಮತ್ತೊಂದು ಸಂಪ್ರದಾಯವಾದಿ ರಾಜಕೀಯ ಪಕ್ಷವಾದ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ (CDU) ಆಳುವ ಸಮ್ಮಿಶ್ರ ಸರ್ಕಾರದ ಭಾಗವಾಗಿದೆ.ಈ ಕಾರಣದಿಂದಾಗಿಯೇ ಈ ಹಿಂದಿನ ಸರ್ಕಾರವು ತೀವ್ರಗಾಮಿ AFDಯನ್ನು ನಿಷೇಧಿಸುವುದು ಸಾಧ್ಯವಾಗಲಿಲ್ಲ.
ಒಂದು ಕೋಟಿ ಮತದಾರರನ್ನು ಹೊಂದಿರುವ AfD ಯನ್ನು ಅಷ್ಟು ಸುಲಭವಾಗಿ ನಿಷೇಧಿಸುವುದಾದರೂ ಹೇಗೆ? ಬದಲಿಗೆ ಅವರನ್ನು ವಾಸ್ತವಾಂಶಗಳೊಂದಿಗೆ ಗಟ್ಟಿಯಾಗಿ ಮುಖಾಮುಖಿಯಾಗಬೇಕು ಎಂದು ಈ ಹಿಂದಿನ ಪ್ರಧಾನಿ ಮರ್ಝ್ ಹೇಳಿದ್ದರು. ಚುನಾವಣೆಗಳ ನಂತರ ನಡೆಸಲಾದ ಜನಾಭಿಪ್ರಾಯ ಸಂಗ್ರಹದಲ್ಲಿ AfD ಜನಪ್ರಿಯತೆಯ ಪಟ್ಟಿಯಲ್ಲಿ ತುತ್ತ ತುದಿಗೇರಿತ್ತು. ನಿಷೇಧದ ನಿಷ್ಠುರ ನಿರ್ಧಾರದಿಂದ ಹಿಂತೆಗೆಯಲು ಈ ಅಂಶವೂ ಕಾರಣವಿದ್ದೀತು.
AfD ನ್ಯಾಯಾಲಯದ ಮೆಟ್ಟಿಲೇರಿ ತನಗೆ ‘ತೀವ್ರಗಾಮಿ’ ಎಂಬ ಹಣೆಪಟ್ಟಿ ಹಚ್ಚುವುದನ್ನು ತಡೆದಿತ್ತು. ಆ ಹೊತ್ತಿಗೆ ಸರ್ಕಾರಿ ಬೇಹುಗಾರಿಕೆ ಸಂಸ್ಥೆ (BfV) ಈ ಪಕ್ಷದ ತೀವ್ರಗಾಮಿ ಚಟುವಟಿಕೆಗಳ ಕುರಿತು 1000 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ನಾಜೀ ಜರ್ಮನಿಯ ಕಾಲದ ಹಳೆಯ ಪೂರ್ವಜರ್ಮನಿ ಜಿಲ್ಲೆಗಳಲ್ಲಿ AfD ಭಾರೀ ಬೆಂಬಲ ಹೊಂದಿದೆ. ಆದರೆ ಈ ಪಕ್ಷದ ತೀವ್ರಗಾಮಿ ಚಟುವಟಿಕೆಗಳು ತಿಳಿದುಬಂದ ನಂತರ ವಿವಾದ ಭುಗಿಲೆದ್ದು ಭಾರೀ ಪ್ರಮಾಣದ ಜರ್ಮನ್ ಜನಸಂಖ್ಯೆಯು AfD ಯನ್ನು ತಕ್ಷಣವೇ ನಿಷೇಧಿಸುವಂತೆ ಆಗ್ರಹಿಸಿದೆ.

ತಕ್ಷಣದ ನಿಷೇಧಕ್ಕೆ ಒತ್ತಾಯಿಸಿ ದೇಶಾದ್ಯಂತ ಹಲವಾರು ನಗರಗಳಲ್ಲಿ ಸಾವಿರಾರು ನಾಗರಿಕರು ಪ್ರದರ್ಶನ ನಡೆಸಿದ್ದಾರೆ. ತೀವ್ರ ಬಲಪಂಥೀಯರೇ ಆಗಿದ್ದರೂ ನಿಷೇಧ ಹೇರುವುದು ಜನತಂತ್ರ ವಿರೋಧಿ ಕ್ರಮವೆಂಬ ನಿರೀಕ್ಷಿತ ಪ್ರತಿಕ್ರಿಯೆಗಳು ಅಮೆರಿಕೆಯಿಂದ ವ್ಯಕ್ತವಾಗಿವೆ.
‘AfD ಜರ್ಮನಿಯ ಅತ್ಯಂತ ಜನಪ್ರಿಯ ರಾಜಕೀಯ ಪಕ್ಷ’ ಎಂದು ಅಮೆರಿಕೆಯ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಹೇಳಿದ್ದು, ‘ತೀವ್ರಗಾಮಿ’ ಎಂಬುದಾಗಿ ಈ ಪಕ್ಷವನ್ನು ವರ್ಗೀಕರಿಸುವುದನ್ನು ಖಂಡಿಸಿದ್ದಾರೆ.
‘ಇದು (ತೀವ್ರಗಾಮಿ ಎಂಬ ವರ್ಗೀಕರಣ) ಜನತಂತ್ರವಲ್ಲ, ವೇಷ ಬದಲಿಸಿರುವ ಸರ್ವಾಧಿಕಾರ’ ಎಂಬುದಾಗಿ ಅಮೆರಿಕೆಯ ಸಚಿವ ಮಾರ್ಕೋ ರುಬಿಯೋ ಹೇಳಿದ್ದಾರೆ. ಸುಂಕ ಸಮರ ಸಾರಿರುವುದೇ ಅಲ್ಲದೆ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಮತ್ತೆ ಮತ್ತೆ ಮೂಗು ತೂರಿಸುವ ಟ್ರಂಪ್ ಸರ್ಕಾರದ ಜೊತೆಗೆ ಹೇಗೆ ವ್ಯವಹರಿಸಬೇಕೆಂಬುದು ಐರೋಪ್ಯ ದೇಶಗಳ ಒಕ್ಕೂಟಕ್ಕೆ ತಲೆನೋವಾಗಿ ಪರಿಣಮಿಸಿದೆ.
‘ಇದು ಜನತಂತ್ರವೇ ಹೌದು ಮತ್ತು ಬಲಪಂಥೀಯ ತೀವ್ರವಾದವನ್ನು ತಡೆದು ನಿಲ್ಲಿಸಬೇಕೆಂಬ ಪಾಠವನ್ನು ನಾವು ನಮ್ಮ ಇತಿಹಾಸದಿಂದ ಕಲಿತಿದ್ದೇವೆ’ ಎಂದು ಅಮೆರಿಕೆಗೆ ತಿರುಗೇಟು ನೀಡಿದೆ ಜರ್ಮನಿ. ಅಮೆರಿಕೆಯೊಂದಿಗೆ ತಾನು ಹಂಚಿಕೊಂಡಿದ್ದ ಮೂಲಭೂತ ಮೌಲ್ಯಗಳಿಂದ ಹಿಂದೆ ಸರಿಯುತ್ತಿದೆಯೆಂದು ಜೆ.ಡಿ.ವಾನ್ಸ್ ಈ ಹಿಂದೆ ಯೂರೋಪನ್ನು ತರಾಟೆಗೆ ತೆಗೆದುಕೊಂಡಿದ್ದರು. AfDಯಂತಹ ಬಲಪಂಥೀಯ ಪಕ್ಷಗಳನ್ನು ದೂರ ಮಾಡುತ್ತಿರುವುದು ಸರಿಯಲ್ಲ ಎಂಬುದು ವಾನ್ಸ್ ಮಾತಿನ ಅರ್ಥವಾಗಿತ್ತು. ತೀವ್ರವಾದಿ ಎಂದು ವರ್ಗೀಕರಿಸಬೇಕೆಂದು ಬೇಹುಗಾರಿಕೆ ದಳ ನೀಡಿರುವ ಶಿಫಾರಸಿನ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಸಮರ ಮುಂದುವರೆಸುವುದಾಗಿ AfDಯ ನಾಯಕರಾದ ಆಲಿಸ್ ವೈಡೆಲ್, ಟಿನೋ ಕ್ರುಪ್ಪಲಾ ಈ ನಡುವೆ ಘೋಷಿಸಿದ್ದಾರೆ.
ಇದನ್ನೂ ಓದಿ ವಿಷಮ ಭಾರತ | ಹೊರಗೆ ಗಾಂಧೀ ವೇಷ- ಒಳಗೆ ಮುಸ್ಲಿಮ್ ದ್ವೇಷ!
ಈಗಾಗಲೆ ನಿಷೇಧಗೊಂಡಿರುವ ‘ರೈಕ್ಸ್‌ಬರ್ಗರ್ಸ್’ ಸಂಘಟನೆ ವಲಸೆ ವಿರೋಧಿ, ಮುಸ್ಲಿಮ್ ವಿರೋಧಿ ಹಾಗೂ ಯಹೂದಿ ವಿರೋಧಿ ಸಿದ್ಧಾಂತವನ್ನು ಹೊಂದಿದೆ. AfD ಪಕ್ಷವೂ ಇದೇ ಸಿದ್ಧಾಂತಗಳನ್ನು ಪ್ರತಿಪಾದಿಸಿದೆ. ಜರ್ಮನಿಯಲ್ಲಿ ‘ಜರ್ಮನೀಯತೆ’ಯ ಬೆನ್ನಟ್ಟಿದೆ. ಅತ್ಯಂತ ಉದಾರವಾದಿಯೆಂದು ಕರೆಯಲಾಗುವ ಪಶ್ಚಿಮದ ಜಗತ್ತಿನಲ್ಲೂ ತಲೆಯೆತ್ತಿರುವ ಬಲಪಂಥೀಯ ತೀವ್ರವಾದವು ಅಲ್ಪಸಂಖ್ಯಾತರಿಗೆ, ಕಡೆಗಣಿಸಲ್ಪಟ್ಟವರಿಗೆ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಪಾಲಿಗೆ ಬಹುದೊಡ್ಡ ಅಪಾಯವಾಗಿ ಹೊರ ಹೊಮ್ಮತೊಡಗಿದೆ. ‘ಈ ಹೊಸ ತೀವ್ರ ಬಲಪಂಥೀಯ ಯುವಜನ ಗುಂಪುಗಳು ಗಂಭೀರ ಅಪಾಯ ಒಡ್ಡುತ್ತಿವೆ’ ಎಂದು ಬರ್ಲಿನ್ ನ ಚಿಂತಕರ ಚಾವಡಿ (ಸೆಂಟರ್ ಫಾರ್ ಮಾನಿಟರಿಂಗ್, ಅನ್ಯಾಲಿಸಿಸ್ ಅಂಡ್ ಸ್ಟ್ರ್ಯಾಟೆಜಿ) ಇತ್ತೀಚೆಗೆ ಎಚ್ಚರಿಸಿತ್ತು.
ತೀವ್ರ ಬಲಪಂಥದ ಬೆಂಕಿಗೆ ಎಣ್ಣೆ ಸುರಿದಿರುವ ಅಕ್ರಮ ವಲಸೆಯಂತಹ ಗಂಭೀರ ವಿಷಯಗಳನ್ನು ಸರ್ಕಾರ ನಿಯಂತ್ರಿಸಬೇಕು ಹೌದು. ಆದರೆ ತನ್ನದೇ ನೆಲದಲ್ಲಿ ಬೆಳೆಯುತ್ತಿರುವ ಎಲ್ಲ ಬಗೆಯ ತೀವ್ರವಾದವನ್ನು ಕುಡಿಯಲ್ಲೇ ಚಿವುಟುವುದೂ ಅತ್ಯವಶ್ಯ.

ಕೆ ಎಂ ರಾಕೇಶ್
ಹಿರಿಯ ಪತ್ರಕರ್ತ. ʼದಿ ಟೆಲಿಗ್ರಾಫ್ʼ ಪತ್ರಿಕೆಯ ಮಾಜಿ ಸಹಾಯಕ ಸಂಪಾದಕ. ಬೆಂಗಳೂರಿನವರು, ಸದ್ಯ ಜರ್ಮನಿಯ ನಿವಾಸಿ.