ಸುಮಾರು ಒಂದು ಲಕ್ಷ ಚದರ ಅಡಿ ಪ್ರದೇಶದಲ್ಲಿ ಅತಿದೊಡ್ಡ ವಿಂಬಲ್ಡನ್ ಲೋಗೋವನ್ನು ಮಹಾರಾಷ್ಟ್ರದ ಕಲಾವಿದರು ರಚಿಸಿ, ಗಮನ ಸೆಳೆದಿದ್ದಾರೆ.
ಈ ಬಗ್ಗೆ ವಿಡಿಯೋವೊಂದನ್ನು ಟ್ವೀಟ್ ಮಾಡಿರುವ ಪ್ರತಿಷ್ಠಿತ ವಿಂಬಲ್ಡನ್, “ಎರಡು ವಾರಗಳ ಕಾಲ ಶ್ರಮಪಟ್ಟು ಮಹಾರಾಷ್ಟ್ರದ ಹುಲ್ಲಿನ ಕಲಾವಿದರು 1,00,000 ಚದರ ಅಡಿ ಪ್ರದೇಶದಲ್ಲಿ ಅತಿದೊಡ್ಡ ವಿಂಬಲ್ಡನ್ ಲೋಗೋವನ್ನು ರಚಿಸಿದ್ದಾರೆ” ಎಂದು ತಿಳಿಸುವ ಮೂಲಕ ಕಲಾವಿದರ ಶ್ರಮವನ್ನು ಗುರುತಿಸಿದೆ.
ಈ 57 ಸೆಕೆಂಡುಗಳ ವಿಡಿಯೋವೊಂದಲ್ಲಿ ಕಲಾವಿದರು ಯಾರು? ಮಹಾರಾಷ್ಟ್ರದಲ್ಲಿ ಎಲ್ಲಿ ಇದನ್ನು ರಚಿಸಲಾಗಿದೆ ಎಂಬ ವಿವರವನ್ನು ನೀಡಲಾಗಿಲ್ಲ. ಈಗಾಗಲೇ ಈ ವಿಡಿಯೋವನ್ನು ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಈ ವಿಡಿಯೋಗೆ ಕಮೆಂಟ್ ಮಾಡಿರುವ ಕೆಲವು ನೆಟ್ಟಿಗರು, ‘ಇದೊಂದು ಖುಷಿಯ ವಿಚಾರ’ ಎಂದರೆ, ಮತ್ತೆ ಕೆಲವರು ಕೇವಲ ಲೋಗೋ ರಚಿಸಲು ಇಷ್ಟೊಂದು ಶ್ರಮ ಹಾಕುವ ಬದಲು ಒಂದು ಟೆನಿಸ್ ಅಂಗಳವನ್ನು ರಚಿಸಿದ್ದಿದ್ದರೆ ಪ್ರಯೋಜನವಾದರೂ ಆಗುತ್ತಿತ್ತು ಎಂದು ಅಭಿಪ್ರಾಯಿಸಿದ್ದಾರೆ.
ಇತ್ತೀಚೆಗೆ ವಿಂಬಲ್ಡನ್ ಪುರುಷರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕ ಮೂಲದ ಭಾರತೀಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ವೇಳೆ ಅಭಿನಂದನೆ ಸಲ್ಲಿಸುವ ಸಲುವಾಗಿ ಕನ್ನಡದಲ್ಲೇ, ʼಭಾರತದ ಸೂಪರ್ ಸ್ಟಾರ್ʼ ಎಂದು ಟ್ವೀಟ್ ಮಾಡುವ ಮೂಲಕ ಗೌರವಿಸಿತ್ತು. ಇದು ಕನ್ನಡಿಗರ ಗಮನವನ್ನು ಕೂಡ ಸೆಳೆದಿತ್ತು.
ಈ ಟ್ವೀಟ್ಗೆ ರೋಹನ್ ಬೋಪಣ್ಣ ಕೂಡ, ಕನ್ನಡದಲ್ಲೇ ‘ಧನ್ಯವಾದ’ ತಿಳಿಸಿದ್ದರು.